ಸ್ಪೋರ್ಟ್ಸ್ ಡೇ ನೆನಪು ಹಾಗೂ ಶಾರುಖ್ ಸಿನೆಮಾ

ಬ್ಲಾಗ್ ಎಂಬ ವಿಲಕ್ಷಣ ಹೆಸರಿನ್ನು ಪರಿಚಯ ಮಾಡಿಕೊಳ್ಳುತ್ತಾ ಮೆಲ್ಲ ಮೆಲ್ಲಗೆ ಮ್ಯಾನುಯಲ್ ಓದಿ ವಾಷಿಂಗ್ ಮಶೀನು ಶುರು ಮಾಡುವ ಹಾಗೆ ಹಂತ ಹಂತವಾಗಿ ಬ್ಲಾಗಿನ ಅಂಗಳವನ್ನು ಪರಿಚಯಿಸಿಕೊಂಡು ನನ್ನದೇ ಒಂದು ಬ್ಲಾಗನ್ನು ತೆರೆದುಕೊಂಡು ಹೊಸ ಆಟಿಕೆ ಕಂಡ ಮಗುವಿನಂತೆ ಸಂಭ್ರಮಿಸುತ್ತಾ ಹತ್ತಾರು ಆಟಿಕೆಗಳನ್ನು ಸುತ್ತಲೂ ಹರಡಿಕೊಂಡು ಕಡೆಗೆ ಎಲ್ಲದರಲ್ಲೂ ಆಸಕ್ತಿ ಬತ್ತಿ ಹೋಗಿ ಎಲ್ಲವನ್ನೂ ಒದ್ದು ಹೊರಟು ಹೋಗಿದ್ದೆ. ಆದರೆ ಅದ್ಯಾವುದೋ ಮೋಹ ನನ್ನನ್ನು ಮತ್ತೆ ಬ್ಲಾಗಿಂಗಿಗೆ ಎಳೆದು ತಂದಿತು. ಈ ಸರಳವಾದ ಅನೂಹ್ಯವಾದ ಮೋಹವನ್ನು ಪಾಶ್ಚಾತ್ಯ ಸಂಶೋಧಕರು, ಮನೋವಿಜ್ಞಾನಿಗಳು ದೊಡ್ಡ ದೊಡ್ಡ ಹೆಸರುಗಳನ್ನಿಟ್ಟು ಕರೆಯುತ್ತಾರೆ. ಪುಟಗಟ್ಟಲೆ ವ್ಯಾಖ್ಯಾನಗಳನ್ನು ಕೊಡುತ್ತಾರೆ! ನನ್ನ ಪಾಲಿಗಿದು ಅಪ್ಪಟ ಮಾಯಾವಿ ಮೋಹವಷ್ಟೇ.


ಬೆಳಿಗ್ಗೆ ಸೂರ್ಯನಿಗಿಂತ ಮೊದಲೇ ಏಳುವ ಅಭ್ಯಾಸ ನನಗೆ ಮೊದಲಿನಿಂದಲೂ ಇಲ್ಲ. ಸುಮ್ಮನೆ ಸೂರ್ಯನೊಂದಿಗೆ ಪೈಪೋಟಿಗೆ ಬಿದ್ದು ಆತನಿಗಿಂತ ಮೊದಲೇ ಏಳಬೇಕೆಂದು ಪ್ರಯತ್ನಿಸುವುದರ ಮೂಲಕ ಆತನಿಗೆ ಪೈಪೋಟಿ ನೀಡಿ ಏಕೆ ಟೆನ್ಷನ್ ಮಾಡುವುದು ಎನ್ನುವ ಕೆಟಗರಿಯವನು ನಾನು. ಇವತ್ತು ಪ್ರ್ಯಾಕ್ಟಿಕಲ್ ಪರೀಕ್ಷೆ ಇದ್ದುದರಿಂದ, ಅದೂ ಬೆಳಿಗ್ಗೆ ಎಂಟಕ್ಕೇ ಇದ್ದುದರಿಂದ ಆರಕ್ಕೇ ಒಲ್ಲದ ಮನಸ್ಸಿನಿಂದ ಏಳಬೇಕಾಯ್ತು. ಚಳಿಗಾಲದಲ್ಲಿ ಎಂದೂ ಏಳಕ್ಕೆ ಮುಂಚೆ ಎದ್ದು ಅಭ್ಯಾಸವಿಲ್ಲದುದರಿಂದ ಕತ್ತಲೆ ಕವಿದ ಆಕಾಶವನ್ನು ನೋಡಿ ಆಗ ಆಗಲೇ ಆರುಗಂಟೆಯಾಗಿತ್ತು ಎಂಬುದನ್ನು ನಂಬಲು ಕಷ್ಟವಾಯಿತು. ಎರಡು ಮೂರು ವಾಚುಗಳನ್ನು, ಲ್ಯಾಪ್ ಟಾಪಿನ ಗಡಿಯಾರವನ್ನೂ ನೋಡಿ ಖಾತರಿ ಪಡಿಸಿಕೊಂಡ ಮೇಲೆಯೇ ಸಮಾಧಾನವಾದದ್ದು. ಏಕೆಂದರೆ ಗಡಿಯಾರದ ತಪ್ಪಿನಿಂದಾಗಿ, ಬ್ಯಾಟರಿಯ ಕಾರ್ಯಕ್ಷಮತೆಯ ಲೋಪದಿಂದಾಗಿ ನಾನು ನನ್ನ ಅಮೂಲ್ಯವಾದ ನಿದ್ದೆಯ ಸಮಯವನ್ನು ಕಳೆದುಕೊಳ್ಳಲು ತಯಾರಿರಲಿಲ್ಲ. ಆರಕ್ಕೆ ಎದ್ದು ರೂಮಿನಿಂದ ಹೊರಗೆ ಕಾಲಿಟ್ಟರೆ ಮೂಳೆಯವರೆಗೆ ತಲುಪುವಷ್ಟು ಥಂಡಿ! ದಭದಭನೆ ಬಿಸಿನೀರು ಸುರಿದುಕೊಂಡು ರೂಮಿಗೆ ಬಂದು ಬೆಚ್ಚಗೆ ಕುಳಿತರೂ ಹೊರಗಿನ ಛಳಿ ಕೆಟ್ಟ ಕನಸಿನ ಹಾಗೆ ನೆನಪಾಗುತ್ತಿತ್ತು.


ಪರೀಕ್ಷೆ ಮುಗಿಸಿಕೊಂಡು ಅದಕ್ಕಾಗಿ ಎರಡು ದಿನ ಪಟ್ಟ ಕಷ್ಟವನ್ನು ನೆನೆಸಿಕೊಂಡು ಸೇಡು ತೀರಿಸಿಕೊಳ್ಳುವವನ ಹಾಗೆ ಯಾವ್ಯಾವ ಸಿನೆಮಾ ನೋಡಬೇಕು, ಏನೇನೆಲ್ಲಾ ತಿನ್ನಬೇಕು ಎಂದು ಮನಸ್ಸಿನಲ್ಲಿಯೇ ಪಟ್ಟಿ ಮಾಡಿಕೊಂಡು ಹಾಸ್ಟೆಲಿಗೆ ಧಾವಿಸುತ್ತಿರುವಾಗ ಕೋಟೆ ಹೈಸ್ಕೂಲಿನ ಬಯಲಿನಲ್ಲಿ ಹುಡುಗರು ಹುಡುಗಿಯರು ಜಮಾಯಿಸಿದ್ದು ಕಾಣಿಸಿತು. ಇಂದು ಅವರಿಗೆ ಸ್ಪೋರ್ಟ್ಸ್ ಡೇ ಇದ್ದಿರಬಹುದು ಬಯಲಿನಲ್ಲಿ ಓಟಕ್ಕಾಗಿ ಟ್ರ್ಯಾಕುಗಳನ್ನು ಬರೆದಿದ್ದರು. ವಾಲಿಬಾಲ್ ಕೋರ್ಟಿಗೆ ಗಡಿಗಳನ್ನು ಕೊರೆದು ನೆಟ್ ಕಟ್ಟಿದ್ದರು. ಅಲ್ಲಲ್ಲಿ ಹುಡುಗರು ಆಟದ ಉಡುಪು ಧರಿಸಿ ಕಸರತ್ತು ನಡೆಸುತ್ತಿದ್ದರು. ಕೆಲವರು ಮೈದಾನದ ಅಂಚಿನಲ್ಲಿ ನಿಂತಿದ್ದ ಪಾನಿಪೂರಿ, ಹಣ್ಣಿನ ಗಾಡಿಗಳಿಗೆ ಲಗ್ಗೆಯಿಟ್ಟಿದ್ದರು. ಇನ್ನೂ ಕೆಲವರು ತಂಪಾದ ನೆರಳಿರುವ ಜಾಗವನ್ನು ಆಯ್ದುಕೊಂಡು ಕುಳಿತು ಪಂದ್ಯಾವಳಿಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಒಡನೆಯೇ ಮನಸ್ಸು ನನ್ನ ಹೈಸ್ಕೂಲು ದಿನಗಳ ಆಟ ಓಟದ ನೆನಪಿನ ಕೋಣೆಗೆ ಜಿಗಿಯಿತು. ಮೂರ್ನಾಲ್ಕು ವರ್ಷಗಳಲ್ಲಿ ಅಥ್ಲೆಟಿಕ್ಸ್‌ನಲ್ಲಿ ಒಂದು ತಗಡಿನ ಹಾಳೆಯನ್ನೂ ಗೆಲ್ಲದಿದ್ದರೂ ಆ ಕ್ರೀಡಾಕೂಟಗಳ, ಅವುಗಳಲ್ಲಿ ಭಾಗವಹಿಸಿದ ಅನುಭವದ ಸರಕು ನನ್ನಲ್ಲಿ ಹೇರಳವಾಗಿದೆ. ನಾಲ್ಕು ಮಂದಿಯ ರಿಲೇ ಓಟದಲ್ಲಿ ನಮ್ಮ ಶಾಲೆಯ ಮೂರು ಮಂದಿ ವೇಗದೂತ ಓಟಗಾರರ ಪರಿಶ್ರಮವನ್ನೂ, ಕೌಶಲ್ಯವನ್ನೂ, ಹೋರಾಟವನ್ನು ಯಶಸ್ವಿಯಾಗಿ ಹಾಳು ಮಾಡಿದ ಕೀರ್ತಿ ನಾಲ್ಕನೆಯವನಾದ ನನಗೆ ಸಂದಿತ್ತು. ರನ್ನಿಂಗ್ ರೇಸಿನಲ್ಲಿ ಕಣ್ಣು ಕತ್ತಲೆ ಬರುವಷ್ಟು ಜೋರಾಗಿ ಓಡಿದರೂ ಕೊನೆಯಿಂದ ಎರಡನೆಯವನಾಗಿ ಗುರಿ ತಲುಪಿದ ಹಿರಿಮೆ ನನ್ನದು. ಖೊ ಖೊ ಎಂಬ ಗುಂಪು ಆಟದಲ್ಲಿ ಗುಂಪಲ್ಲಿ ಗೋವಿಂದ ಎನ್ನೋಣವೆಂದರೆ ನಮ್ಮ ಶಾಲೆಯ ಇಡೀ ಗುಂಪಿನಲ್ಲಿದ್ದವರೆಲ್ಲಾ ನನ್ನಂತೆಯೇ ಗೋವಿಂದ ಎನ್ನಲು ಬಂದವರು! ಈ ಆಟ ಓಟ, ಬೆವರು, ಮೈಕೈ ನೋವು, ಗಾಯಗಳೆಲ್ಲಾ ನನಗೆ ಹೇಳಿ ಮಾಡಿಸಿದ್ದು ಅಲ್ಲ ಅಂದುಕೊಂಡು ಕ್ರೀಡಾಂಗಣದಲ್ಲಿ ಪಡೆದ ಅದ್ಭುತ ವೈಫಲ್ಯದ ಕಹಿ ನೆನಪನ್ನು ಡಿಬೇಟು, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೃಂಭಿಸಿ ನಿವಾರಿಸಿಕೊಳ್ಳುತ್ತಿದ್ದೆ.


ಅಂದುಕೊಂಡ ಕೆಲಸವನ್ನು ಮಾಡಿಮುಗಿಸುವುದಕ್ಕೆ ನನಗೇಕೆ ಸಾಧ್ಯವಾಗುವುದಿಲ್ಲ ಎಂದು ಡೈರಿಯ ಅಸಂಖ್ಯಾತ ಪುಟಗಳಲ್ಲಿ ಕೊರೆದಿಟ್ಟ ಸಾಲುಗಳನ್ನು ಸುಳ್ಳು ಮಾಡುವ ಹಾಗೆ ಪಟ್ಟಾಗಿ ಕುಳಿತು ರಬ್ ನೇ ಬನಾ ದೀ ಜೋಡಿನೋಡಿ ಮುಗಿಸಿದೆ. ನನ್ನ ಬಗ್ಗೆ ನನಗೆ ಅಪಾರ ಹೆಮ್ಮೆಯೆನಿಸಿತು. ಹೀಗೇ ಸಣ್ಣ ಸಣ್ಣ ಯಶಸ್ಸುಗಳನ್ನು ನನ್ನದಾಗಿಸುತ್ತಾ ಹೋದರೆ ಮುಂದೊಂದು ದಿನ ಯಶಸ್ಸಿಗೆ ಇಷ್ಟೇ ಮೆಟ್ಟಿಲುಎಂಬ ಟಾಪ್ ಸೆಲ್ಲಿಂಗ್ ಪುಸ್ತಕವನ್ನು ಬರೆಯುವಷ್ಟು ಯಶಸ್ವಿಯಾಗಬಹುದು ಅನ್ನಿಸಿತು. ಈ ಸಿನೆಮಾದ ಸ್ಕ್ರಿಪ್ಟು ಆಸ್ಕರ್‌ಗೆ ನಾಮಿನೇಟ್ ಆಗಿದೆ ಎಂದು ಗೆಳೆಯ ಹೇಳಿದಾಗ ಆತನ ಮಾತನ್ನು ಸಂಶಯಿಸಿ ಗೂಗಲಿಸಿದರೆ ಅವನ ಸ್ನೇಹಕ್ಕೆ ದ್ರೋಹ ಬಗೆದಂತಾಗುವುದೆಂದು ಯೋಚಿಸಿ ಸುಮ್ಮನಾದೆ. ಸಿನೆಮಾದ ಬಗ್ಗೆ ಏನಾದರೂ ಬರೆಯಬೇಕು ಎಂದುಕೊಂಡೆನಾದರೂ ಅದು ಥಿಯೇಟರುಗಳಿಂದ ಎತ್ತಂಗಡಿಯಾದ ಮೇಲೆ ನೋಡೋಣ ಎಂದುಕೊಂಡು ತಣ್ಣಗಾದೆ.

…………………………………………………………….

ಶೇಷ ವಿಶೇಷ: ತುಂಬಾ ಚಿಕ್ಕಂದಿನಿಂದಲೂ ಪ್ರಜಾವಾಣಿ ಪತ್ರಿಕೆಯನ್ನು ಓದುತ್ತಿದ್ದೆನಾದರೂ ತೀರಾ ಮೆಚ್ಚುವಂಥದ್ದು ಏನೂ ನನಗೆ ಆಗ ಕಂಡಿರಲಿಲ್ಲ. ಭಾನುವಾರ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗುತ್ತಿದ್ದ ರಾಮನ್ ಪ್ರಾಣ್ ಕಾರ್ಟೂನನ್ನೂ, ವಿಜ್ಞಾನ ವಿಸ್ಮಯಗಳನ್ನು ಓದುವುದಕ್ಕೆ ನನ್ನ ಆಸಕ್ತಿ ಸೀಮಿತವಾಗಿತ್ತು. ವಿಜಯ ಕರ್ನಾಟಕ ಬಿರುಗಾಳಿಯಂತೆ ಮುನ್ನುಗ್ಗುವ ಕಾಲಕ್ಕೆ ಸರಿಯಾಗಿ ಪತ್ರಿಕೆಯನ್ನು ಆಸಕ್ತಿಗಾಗಿ ಓದುವ ಅಭ್ಯಾಸವು ಬೆಳೆದಿತ್ತು. ಅಂಕಣ ಬರಹಗಳಿಂದಲೇ ಪತ್ರಿಕೆಯ ಓದು ಶುರು ಮಾಡುವ ನನಗೆ ಪ್ರಜಾವಾಣಿಯ ನಾಗೇಶ್ ಹೆಗಡೆಯವರ ಅಂಕಣ ಅಚ್ಚುಮೆಚ್ಚಿನದಾಗಿತ್ತು. ಉಳಿದವು ಅಷ್ಟು ಅರ್ಥವಾಗುತ್ತಿರಲಿಲ್ಲವಾದ್ದರಿಂದ ರುಚಿಸುತ್ತಿರಲಿಲ್ಲ.


ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಬಗ್ಗೆ ತುಂಬಾ ನೇರವಾಗಿ ಏಕಮುಖಿ ಅಭಿಪ್ರಾಯವನ್ನು ಬೆಂಬಲಿಸಿ ಬರೆಯುವ ಪ್ರತಾಪ್ ಸಿಂಹರ ಅಂಕಣ ಆಗ ಎಲ್ಲರಂತೆ ನನಗೆ ಇಷ್ಟವಾಗಿತ್ತು. ಭಾವನೆಗಳು ಉದ್ದೀಪನವಾಗುವಂತೆ, ಅಂಕಣ ಓದಿದ ನಂತರ ಕೆಚ್ಚು ಹುಟ್ಟುವಂತೆ ಮಾಡುವ ಶೈಲಿ ಆಗ ಪ್ರಿಯವಾಗಿತ್ತು.


ಆದರೆ ಇತ್ತೀಚೆಗೆ ಆಳವಾದ ಅಧ್ಯಯನವಿರುವ, ಸೂಕ್ಷ್ಮ ಒಳನೋಟಗಳಿರುವ, ಶಾಂತ ಮನಸ್ಸಿನಿಂದ ಬರೆದ ಲೇಖನಗಳು ನನ್ನ ಪ್ರಭಾವಿಸುತ್ತಿವೆ. ಈ ಪ್ರಕ್ರಿಯೆಯಲ್ಲಿ ನಾನು ಆಸಕ್ತಿಯಿಂದ ಓದಲು ಶುರು ಮಾಡಿರುವುದು ಕುಲ್ ದೀಪ್ ನಾಯರ್‌ರ ಅಂಕಣ ಬರಹ. ಇತ್ತೀಚಿನ ಅಂಕಣದಲ್ಲಿ ಅವರು ಪಾಕಿಸ್ತಾನದ ಸಮಸ್ಯೆಯನ್ನು ವಿಶ್ಲೇಷಿಸಿರುವ ಪರಿ ನೋಡಿ ಹೇಗಿದೆ

Advertisements

2 thoughts on “ಸ್ಪೋರ್ಟ್ಸ್ ಡೇ ನೆನಪು ಹಾಗೂ ಶಾರುಖ್ ಸಿನೆಮಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s