ಒಂದು ಬೆಳಗು

 

ಎಚ್ಚರವಾಯ್ತು. ರೆಕ್ಕೆಗಳಲ್ಲಿ ಹಿಂದಿನ ರಾತ್ರಿಯ ದಣಿವಿನ ಗೋರಿ. ನಿನ್ನೆಯ ಸ್ಮರಣೆಯ ನಾಜೂಕಾದ ಎಳೆ. ಗುಡ್ಡದ ತುದಿಯಿಂದ ಉರುಳಲು ಸಿದ್ಧವಾದ ಬಂಡೆಯಂಥ ಶಕ್ತಿ. ರೆಕ್ಕೆ ಫಡಫಡಿಸಿ ಕಣ್ಣು ನಿಚ್ಚಳವಾದರೂ ಬೆಳಕು ಹರಿದಿಲ್ಲ. ಅಲರಾಂ ಬಡಿದಿಲ್ಲ ಎನ್ನುವುದು ಸ್ಪಷ್ಟ. ರೂಮಿನ ಏಕೈಕ ಬೆಳಕಿನ ಕಿಂಡಿಯಾದ ಕಿಟಕಿಯ ಗಾಜಿನ ಮೇಲಿನ ಇಬ್ಬನಿ ಬೀದಿ ಟ್ಯೂಬ್ ಲೈಟಿನ ಬೆಳಕನ್ನು ಮಬ್ಬು ಮಬ್ಬಾಗಿಸಿ ಒಳಕ್ಕೆ ತಳ್ಳುತ್ತಿದೆ. ನಿದ್ರಾ ದೇವಿಯ ಅಮಲನ್ನು ಹೆಚ್ಚಾಗಿಸುವ ಹುನ್ನಾರದಂತೆ!

ಪಕ್ಕದಲ್ಲಿನ ರೂಂ ಮೇಟ್‌ಗೆ ಯಾವುದೋ ಸಿಹಿಗನಸು, ಅರಿವಿಲ್ಲದೆ ತುಟಿಯರಳಿದೆ. ಆತನ ಸಿಹಿಗನಸಿನ ವಿಳಾಸ ಹುಡುಕಹೊರಟು ನಾನೇಕೆ ಸಂಕಟಪಡಲಿ ಎಂದು ಕೊಂಡು ಕಾಲು ಜಾಡಿಸಿದೆ. ಅಸ್ತವ್ಯಸ್ತವಾದ ತಲೆಗೂದಲು, ಹಾಸಿಗೆ, ಬೆಡ್ ಶೀಟಿನಲ್ಲಿ ತಣ್ಣಗೆ ಯಾರೋ ಕುಳಿತಂತೆ ಕಾಣಿಸಿದ್ದು ಕನಸಲ್ಲ. ಕಣ್ಣಿನ ಪಿಸುರನ್ನು ಉಜ್ಜಿಕೊಳ್ಳುತ್ತಾ, ಲೈಟು ಹಚ್ಚಿ ಮಬ್ಬುಗತ್ತಲೆಯ ಧ್ಯಾನವನ್ನು ಭಂಗ ಪಡಿಸುವ ಮನಸ್ಸಾಗದೆ ತಡಕಾಡುತ್ತಾ ಕೈಗೆ ಸಿಕ್ಕ ಬ್ರಶಿಗೆ ಪೇಸ್ಟು ಮೆತ್ತಿ ಬಾಗಿಲು ತೆರೆಯುತ್ತಿದ್ದಂತೆಯೇ ಶೀತಲವಾದ ಗಾಳಿ ಪ್ರಿಯತಮೆಯನ್ನಪ್ಪುವ ಪ್ರೇಮಿಯ ಹಾಗೆ ಮುತ್ತಿಕೊಂಡದ್ದು ಆಹ್ಲಾದವೆನಿಸಿತು. ಕೊರೆಯುವ ನಲ್ಲಿ ನೀರಿನೆದುರು ಭಕ್ತನ ಹಾಗೆ ನಿಂತು ಪೂಜಾ ವಿಧಿ ಪೂರೈಸುವಾಗಲೂ ಮನಸ್ಸಿಗೆ ಶಾಂತಿ ಇಲ್ಲ. ಬಹುದೊಡ್ಡ ಕಾಯಕ ಯೋಗಿಯ ಹಾಗೆ ಇಡೀ ದಿನ ಪೂರೈಸಬೇಕಾದ ಕೆಲಸಗಳ ಪಟ್ಟಿ ತಯಾರಿಸುವಲ್ಲಿ ಮಗ್ನವಾಗಿದೆ. ಕೆಲಸಗಳ ನೆನಪಾಗುತ್ತಿದ್ದಂತೆಯೇ ರೆಕ್ಕೆಗಳಲ್ಲಿ, ಕಾಲುಗಳಲ್ಲಿ, ಪಿಸುರು ಕಳೆದ ಕಣ್ಣಿನಲ್ಲಿ ಮಾಂಸ ಖಂಡಗಳು ಬಿಗಿಯಾಗುತ್ತಿವೆ, ಮೆಲ್ಲಗೆ ಅಗೋಚರವಾದ ಕಾವು ಮೈಯನ್ನೆಲ್ಲಾ ವ್ಯಾಪಿಸಿ ಚಳಿಯನ್ನು ಹಿತವಾಗಿಸುತ್ತಿದೆ. ಕಣ್ಣಿನ ಪಿಸುರು ಕಳೆಯುತ್ತಿದ್ದ ಹಾಗೆ ಕಿವಿಯೂ ಬಾಗಿಲು ತೆರೆದಂತೆ ಕಾಣುತ್ತದೆ. ಆಗಲೇ ರಸ್ತೆಗಿಳಿದಿರುವ ಕೆಲವು ವಾಹನಗಳ ಇಂಜಿನ್ನಿನ ಸದ್ದು ಬಿಟ್ಟರೆ ಸುತ್ತಲೂ ನಮ್ಮದೇ ಕಲರವ. ಕಾಗೆ, ಕಾಜಾಣ, ಕೋಗಿಲೆ, ಗುಬ್ಬಿಗಳೆನ್ನದೆ ಎಲ್ಲವೂ ಚಿಲಿಪಿಲಿ ಗುಟ್ಟುತ್ತಿವೆ. ಇದ್ಯಾವುದೋ ಪ್ರಾತಃ ಕಾಲದ ಪ್ರಾರ್ಥನೆಯನ್ನು ನಾನು ಮರೆತುಬಿಟ್ಟೆನಾ ಎಂಬ ಆತಂಕದಲ್ಲಿ ಆಗಸ ದಿಟ್ಟಿಸುತ್ತೇನೆ, ರಾತ್ರಿಯ ರಕ್ಷಣೆಯ ಕರ್ತವ್ಯವನ್ನು ಮುಗಿಸಿದ ಸಂತೃಪ್ತಿಯಲ್ಲಿ ಚಂದಿರ ನಗುತ್ತಿದ್ದಾನೆ, ಮೆಲ್ಲಗೆ ಅಕ್ಬರನ ಸೈನ್ಯದ ಆಗಮನವನ್ನು ಸಾರುವ ಧೂಳಿನ ಹಾಗೆ ಚಿನ್ನದ ಕಿರಣಗಳು ದಾಳಿಯಿಡುತ್ತಿವೆ.

ಕನ್ನಡಿಯಲ್ಲಿ ಪ್ರತಿದಿನ ಕಾಣುವ ಮುಖದಲ್ಲೇನಾದರೂ ಬದಲಾವಣೆಯಾಗಿದೆಯಾ ಎಂದು ನೋಡಿಕೊಂಡದಾಯ್ತು. ಅಕಸ್ಮಾತ್ ಒಂದು ದಿನ ಕನ್ನಡಿ ನನ್ನ ಮುಖದ ಬದಲು ಬೇರೇನನ್ನೋ ತೋರಿಸಿಬಿಟ್ಟರೆ ಎಂಬ ಅನವಶ್ಯಕ ದುಗುಡವನ್ನು ಹತ್ತಿಕ್ಕಿ ಕನ್ನಡಿಯ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸಿಕೊಂಡೆ. ಕೆದರಿದ ಕೂದಲಿಗೊಂದು ನಿಯಮ ಹಾಕಿಕೊಟ್ಟು ಚಪ್ಪಲಿ ಮೆಟ್ಟಿಕೊಂಡು ಹೊರಗೆ ಕಾಲಿಟ್ಟೆ.

ಮುಖಕ್ಕೆ ರಾಚುವಂಥ ಶೀತಲ ಗಾಳಿಯನ್ನು ಆಸ್ವಾದಿಸಲೇ ಇಲ್ಲ, ಪಕ್ಷಿಗಳ ಬಳಗದ ವೇದ ಘೋಷಕ್ಕೆ ಕಿವಿಯಾಗಲೇ ಎಂದು ಗೊಂದದಲ್ಲಿ ಹೆಜ್ಜೆ ಹಾಕುತ್ತಿರುವಾಗ ಹೊರಟಿದ್ದು ಎಲ್ಲಿಗೆ ಎಂಬ ಅತಿ ಮಹತ್ವದ, ಅಪಾರ ಆಧ್ಯಾತ್ಮಿಕ ಮೌಲ್ಯದ ಪ್ರಶ್ನೆಯನ್ನು ಮನಸ್ಸು ಎಸೆಯಿತು. ಬೆಳ್‌ಬೆಳೆಗ್ಗೆ ಇಂಥ ಕಬ್ಬಿಣದ ಕಡಲೆಯಂಥ ಆಧ್ಯಾತ್ಮದ ಪ್ರಶ್ನೆಯೊಂದಿಗೆ ಮುಖಾಮುಖಿಯಾಗುವ ಧೈರ್ಯ ಸಾಲದೆ ಕಾಫಿ ಹೀರಿ ಬರಲು ಎಂದು ಉತ್ತರಿಸಿದೆ. ಕಾಫಿಯ ಆಮಿಷಕ್ಕೆ ಬಲಿಯಾಗಿ ಮನಸ್ಸು ಆ ಪ್ರಶ್ನೆಯನ್ನು ಆಚೆಗೆಸೆಯಿತು. ಅದು ಅನಾಥ ಪ್ಲಾಸ್ಟಿಕ್ ಕವರಿನ ಹಾಗೆ ಮಂಜು ಅಪ್ಪಿಕೊಂಡ ಟಾರ್ ರೋಡಿನ ಮೇಲೆ ತೇಲುತ್ತಾ ಹೋಯಿತು.

ಮೆಲ್ಲಗೆ ಕಣ್ಣು, ಕಿವಿ, ಚರ್ಮಗಳು ಕೆಲಸ ಚಾಲು ಮಾಡುವ ಹಾಗೆ ಹೊರಗಿನ ಜಗತ್ತಿನ ಗಿರಾಕಿಗಳನ್ನು ವಿಚಾರಿಸಿಕೊಳ್ಳಲು ಶುರುಮಾಡಿದವು. ಕಿವಿಗೆ ಮೌನದಲ್ಲಿ ಸದ್ದನ್ನು ಹುಡುಕುವ ಹಂಬಲ. ಅಪರಿಚಿತವೆನಿಸುವ ಹಕ್ಕಿಗಳ್ ಚಿಲಿಪಿಲಿಯದೇ ಸಾಮ್ರಾಜ್ಯವಾದರೂ ಬಜಾಜ್ ಆಟೋ ಇಂಜಿನ್ನು ಎಂಬ ಬಂಡಾಯಗಾರನನ್ನು ಕಡೆಗಣಿಸಲಾಗದು ಅದೆಷ್ಟೇ ದೂರವಿದ್ದರೂ ತನ್ನ ಇರುವನ್ನು ನೆನಪಿಸುವ ಸಾಲಕೊಟ್ಟ ಸಾಹುಕಾರನ ಹಾಗೆ ಗುಟುರು ಹಾಕುತ್ತದೆ. ‘ಇರು, ಒಮ್ಮೆ ನಮ್ಮ ದೊಡ್ಡ ಬಸ್ಸುಗಳು ರಸ್ತೆಗಿಳಿಯಲಿ ನಿನ್ನ ಗುಟುರು ಎಲ್ಲಿ ಹೋಗುತ್ತದೆ ನೋಡೋಣ’ ಎಂದು ರಸ್ತೆ ಹಂಗಿಸುತ್ತಿದೆ. ರಸ್ತೆ ಬದಿಯಲ್ಲಿ ನಿಂತ ಕಾರುಗಳ ಗಾಜಿನ ಮೇಲೆ ಇಬ್ಬನಿಯ ಪರದೆ. ರಾತ್ರಿಯಿಡೀ ಪರಿಶ್ರಮದಿಂದ ಕಟ್ಟಿಕೊಂಡ ಸಾಮ್ರಾಜ್ಯವನ್ನು ಸೂರ್ಯನ ರಶ್ಮಿಗಳು ಕುಟ್ಟಿ ಕೆಡವಲು ಕ್ಷಣ ಗಣನೆ ಶುರುವಾಗಿದೆ. ರಸ್ತೆಗಳೆಲ್ಲಾ ಮೈಮರೆತು ಮಲಗಿರುವ ಗಂಡಸಿನ ತೆರೆದ ಎದೆಯಂತೆ ಕಾಣುತ್ತಿವೆ. ಆಗೊಮ್ಮೆ ಈಗೊಮ್ಮೆ ಬಜಾಜ್, ಟಿವಿಸ್ ಇಂಜಿನ್ನುಗಳು ಸದ್ದು ಮಾಡುತ್ತವೆ.

ಹಾಸ್ಟೆಲಿನ ಸಾಮಾನ್ಯ ರೋಡನ್ನು ದಾಟಿ ಮುಖ್ಯ ರಸ್ತೆಗ ತಲುಪಿಕೊಳ್ಳುವಷ್ಟರಲ್ಲಿ ಸೂರ್ಯನ ಆಗಮನದ ಮುನ್ಸೂಚನೆಗಳು ಗಾಢವಾಗತೊಡಗಿವೆ. ಮುಖ್ಯ ರಸ್ತೆಯೂ ಗತ್ತಿನಲ್ಲಿ ಮಲಗಿದೆ. ಅದರ ಬೈತಲೆಗೆ ಬಳಿದ ಲೇನ್ ಲೈನುಗಳು, ಫುಟ್ ಪಾತಿನ ಹಳದಿ, ಕಪ್ಪು ಜೀಬ್ರಾ ಪಟ್ಟಿ ಇಬ್ಬನಿಯಲ್ಲಿ ನೆಂದು ಹೊಳೆಯುತ್ತಿವೆ. ಶಟರ್ ಎಳೆದ ಮಳಿಗೆಗಳ ಎದುರು ಪೇಪರ್ ಬಂಡಲುಗಳನ್ನು ಕಟ್ಟಿಕೊಳ್ಳುವ ಹುಡುಗರ ಮೇಳ. ಸೈಕಲ್ ಸ್ಟ್ಯಾಂಡುಗಳ ಸದ್ದು. ಪೇಪರುಗಳಿಗೆ ಪುರವಣಿಗಳನ್ನು ತೂರಿಸುತ್ತಾ, ಎಣಿಸಿ ಎಣಿಸಿಕೊಂಡು ಬಂಡಲು ಕಟ್ಟುವ ಕೆಲಸದಲ್ಲಿ ಇವರು ತಲ್ಲೀನರಾಗಿದ್ದರೂ ಕಿವಿಗೆ ಸಿಕ್ಕಿಸಿಕೊಂಡ ರೇಡಿಯೋ ಭಕ್ತಿ ಗೀತೆಗಳನ್ನೋ, ಭಾವಗೀತೆಗಳನ್ನೇ, ಭೀತ ಗೀತೆಗಳನ್ನೋ ಬಿತ್ತರಿಸುತ್ತಿದೆ. ರೇಡಿಯೋಗೆ ತನ್ನ ಕೇಳುತ್ತಿರುವವರಲ್ಲಿ ಎಷ್ಟು ಮಂದಿಗೆ ಒಂದೇ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಕೆಲಸವನ್ನು ಮಾಡುವ ಹುಮ್ಮಸ್ಸಿದೆಯೋ, ಎಷ್ಟು ಮಂದಿಗೆ ಕೆಲಸ ಮಾಡುವಾಗ ಯೋಚನೆಗಳು ಮೆರೆಯಬಾರದೆಂಬುದಕ್ಕಾಗಿ ರೇಡಿಯೋ ಸದ್ದು ಬೇಕೋ ಎಂಬುದು ತಿಳಿದಿಲ್ಲ. ಪೇಪರುಗಳಲ್ಲಿ ಹಿಂದಿನ ರಾತ್ರಿಯೇ ಅಂತರ್ಜಾಲದಲ್ಲಿ ಕುಪ್ಪಳಿಸಿ ಕುಳಿತ ಸುದ್ದಿಗಳ ನೆನಪು.

ಕಾಫಿ ಬಾರಿನ ಎದುರಿನ ಕಟ್ಟಡದ ಕಟ್ಟೆಯನ್ನು ಆವರಿಸಿರುವ ಮುತ್ಸದ್ಧಿಗಳಲ್ಲಿ ಆಗಲೇ ದೇಶದ ಭವಿಷ್ಯದ ಚಿಂತನೆ. ರಾಜಕೀಯ ವಿದ್ಯಮಾನಗಳ ಚರ್ಚೆಯ ಕಾರ್ಯಾಗಾರ. ಕಾಫಿ ತಂದುಕೊಡುವ, ಖಾಲಿ ಗಾಜು ತೆಗೆದುಕೊಂಡು ಹೋಗುವ ಹುಡುಗನಿಗೆ ಅರ್ಥವಾಗುತ್ತಿರುವ ನಿರರ್ಥಕತೆ ಈ ಪಂಡಿತರಿಗೆ ಪವಾಡ, ಉಡಾಫೆ. ‘ಏನಿದು ಪುನೀತ್ ರಾಜ್ ಕುಮಾರ್ ಸಂಗತಿ…?’ ‘ರಾಧಿಕಾ ಬಗ್ಗೆ ಗೊತ್ತಾಯ್ತಾ…’ ಎಂಬ ಜಾಹೀರಾತಿನಂತಹ ಸಾಲುಗಳಿಂದ ಕಾರ್ಯಾಗಾರದತ್ತ ಚಿತ್ತ ಹರಿದರೂ ಮನಸ್ಸಿಗೆ ಕಾಫಿಯ ಚಪಲ. ಕಾಫಿ ಹೀರಿ ವಾಪಸ್ಸಾಗುವಾಗ ಹಾಲು, ತರಕಾರಿ ಗಾಡಿಗಳ ವೇಗ, ರಾತ್ರಿಯಿಡಿ ಬಳಲಿ ಬಸವಳಿದ ಟೆಕ್ಕಿಗಳನ್ನು ಹೊತ್ತು ನುಗ್ಗುವ ಫೋರ್ಸ್ ಮಿನಿ  ಬಸ್ಸುಗಳ(ಹಿಂದಿದ್ದ ಇಂಡಿಕಾಗಳನ್ನು ಇವು ರಿಪ್ಲೇಸ್ ಮಾಡಿರುವುದು ನೆನಪಾದರೆ ಜಗತ್ತಿನ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಾಮಾನ್ಯ ಅರಿವಿದೇ ಎಂದೇ ಅರ್ಥ) ಆವೇಗದಿಂದ ಪಾರಾಗಿ ರೂಮು ಸೇರಿಕೊಂಡದ್ದಾಯ್ತು.

ಕನ್ನಡಿಯಲ್ಲಿ ಮತ್ತೆ ಮುಖ ಕಾಣುವ ಹಂಬಲ.  ಮರೆತುಹೋದ ಅಸೈನ್ ಮೆಂಟ್ ನೆನಪಾಗುತ್ತದೆ. ರೆಕ್ಕೆಗಳೆಲ್ಲೋ ಮಾಯವಾಗಿ ಬಿಟ್ಟಿವೆ.  

………………………..

ಶೇಷ ವಿಶೇಷ: ಜಾಗತೀಕರಣದ ಕೆಡುಕುಗಳ ಬಗ್ಗೆ, ಅದರ ಕರಾಳ ಮುಖದ ಬಗ್ಗೆ ಒಂದು ಕಾಲದಲ್ಲಿ ನಮ್ಮೆಲ್ಲಾ ಚಿಂತಕರು ತಲೆಕೆಡಿಸಿಕೊಂಡಿದ್ದರು. ಬಹಳ ಆಸ್ಥೆಯಿಂದ ಅದನ್ನು ಎದುರಿಸುವ ವಿಧಾನಗಳನ್ನು ಚರ್ಚಿಸುತ್ತಿದ್ದರು. ಪುಂಖಾನುಪುಂಖವಾಗಿ ಲೇಖನಗಳು ಮೂಡಿ ಬರುತ್ತಿದ್ದವು. ಆದರೆ ಇತ್ತೀಚೆಗೆ ಈಕೋ ಈ ಧ್ವನಿ ಅಷ್ಟಾಗಿ ಕೇಳುತ್ತಲೇ ಇಲ್ಲ. ಬಹುಶಃ ಜಾಗತೀಕರಣ ಎಂಬುದು ಮುಖ್ಯವಾಹಿನಿಯಾಗಿ ಹೋಗಿದೆಯೇನೋ! ಇಲ್ಲವೇ ಅದರ ವಿರುದ್ಧ ಮಾತಾಡುವವರು ಸಹ ಅದರ ಫಲಗಳ ಮೇಲೆ ಅವಲಂಬಿತರಾಗಿ ಭ್ರಷ್ಠರಾದ ಗಿಲ್ಟಿನಲ್ಲಿದ್ದಾರೇನೋ…
ಇತ್ತೀಚೆಗೆ ‘ಅಗ್ನಿ’ ಪತ್ರಿಕೆಯ ಅಂಕಣವೊಂದರಲ್ಲಿ ಜಯಂತ್ ಕಾಯ್ಕಿಣಿಯವರ ಪ್ರತಿಕ್ರಿಯೆಯೊಂದು ನನ್ನ ಗಮನ ಸೆಳೆಯಿತು. ಜಾಗತೀಕರಣದ ಬಗ್ಗೆ ಅತ್ಯಂತ ವಾಸ್ತವವಾದ ನೆಲೆಯಲ್ಲಿ ನಿಂತು ವಿಶ್ಲೇಷಿಸಿರುವ ರೀತಿ ನನಗೆ ಇಷ್ಟವಾಯಿತು. ನಿಮಗೂ ಇದು ಚಿಂತನೆಗೆ ಹಚ್ಚಬಹುದು ಎಂಬ ಉದ್ದೇಶದಿಂದ ಅದನ್ನಿಲ್ಲಿ ಕೊಟ್ಟಿರುವೆ:
“ ಯಾವುದನ್ನು ಹಳ್ಳಿ ಅಂತ ಬ್ರಾಕೆಟ್ ಹಾಕಿ ಕರೀತೇವಲ್ಲ. ಇದು ನಮ್ಮದು ಹೀಗಾಗಿ ಈ ಎಲ್ಲ ಗುಣಗಳು; ಅದು ಮುಗ್ಧತೆ ಇರಬಹುದು. ಕೌಟುಂಬಿಕ ವಿನೋದ ಇರಬಹುದು. ಕುಟುಂಬ ವತ್ಸಲಗುಣ ಇರಬಹುದು. ಈಗೆಲ್ಲ ಏನಾಗಿದೆ; ಜಾಗತಿಕರಣದ ಬಗ್ಗೆ ಮಾತಾಡಬೇಕಾದರೆ, ಇದನ್ನೆಲ್ಲ ಬಿಟ್ಟು ಉಳಿದದ್ದೇನನ್ನೋ ಮಾತಾಡುತ್ತೇನೆ. ಮಾತು, ಭಾಷಣ, ಮೋರ್ಚಾಗಳಿಂದ ಆಗುವಂಥದ್ದಲ್ಲ. ನಮ್ಮ ನೆಲೆಗಳಲ್ಲಿ ನಮ್ಮ ನಮ್ಮ ಕೆಲಸಗಳನ್ನು ತನ್ಮಯತೆಯಿಂದ ಮಾಡುವುದೇ ಎಂಥ ಜಾಗತೀಕರಣಕ್ಕೂ ಕೊಡುವಂಥ ಉತ್ತರ.”

Advertisements

2 thoughts on “ಒಂದು ಬೆಳಗು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s