ಡೇವಿಡ್ ಐಕ್ ಎಂಬ ತಿಕ್ಕಲು ಪ್ರವಾದಿ

ಡೇವಿಡ್ ಐಕ್ ಎಂಬ ವಿಚಾರವಾದಿಯ ಡಾಕ್ಯುಮೆಂಟರಿ ಸಿನೆಮಾ ಹಾಗೂ ಕೆಲವು ಲೆಕ್ಚರ್‌ಗಳನ್ನು ನೋಡುತ್ತಿರುವೆ(ಇದು ಆತನ ಅಂತರ್ಜಾಲ ತಾಣ) . ಶಕ್ತಿಶಾಲಿಯಾದ ಕೆಲವೇ ಕೆಲವು ಮಂದಿ ಇಡೀ ಮಾನವ ಕುಲವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ದುಷ್ಟ ಹುನ್ನಾರದ ಬಗ್ಗೆ ಆತ ಕಳೆದ ಇಪ್ಪತ್ತಕ್ಕಿಂತ ಹೆಚ್ಚು ವರ್ಷಗಳಲ್ಲಿ ಮಾತನಾಡುತ್ತಿದ್ದಾನೆ. ಸರಕಾರಗಳು, ಬ್ಯಾಂಕುಗಳು, ದೊಡ್ಡ ದೊಡ್ಡ ಸಂಸ್ಥೆಗಳು, ಸಮೂಹ ಮಾಧ್ಯಮಗಳುickeicke ಹೇಗೆ ಜನ ಸಮೂಹದ ಆಲೋಚನೆಯ ಸಾಮರ್ಥ್ಯವನ್ನೇ ಕುಂಠಿತಗೊಳಿಸುತ್ತಿವೆ, ಪ್ರಜ್ಞಾಪೂರ್ವಕವಾಗಿಯೋ ಇಲ್ಲವೇ ಅಪ್ರಜ್ಞಾಪೂರ್ವಕವಾಗಿಯೋ ಹೇಗೆ ನಾವೆಲ್ಲರೂ ಆ ಬಹುದೊಡ್ಡ ಕಾನ್ಸ್ಪಿರೆಸಿಯ ಪಾಲುದಾರರಾಗಿದ್ದೇವೆ ಅನ್ನೋದನ್ನು ವಿವರವಾದ ಸಂಶೋಧನೆಯ ಆಧಾರದಲ್ಲಿ ನಿರೂಪಿಸುತ್ತಾನೆ.

  ಫುಟ್ಬಾಲ್ ಆಟಗಾರನಾಗಿ, ಬಿಬಿಸಿಗೆ ಕ್ರೀಡೆಗೆ ಸಂಬಂಧಿಸಿದ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದ ಸುದ್ದಿವಾಚಕನಾಗಿದ್ದ ಡೇವಿಡ್ ಒಂದು ದಿನ ತನಗೆ ‘ಜ್ಞಾನೋದಯ’ದ ರೀತಿಯ ಅನುಭವವಾಗಿದೆ. ಈ ಜಗತ್ತಿನ ಪವಿತ್ರಾತ್ಮಗಳು ನನ್ನೊಂದಿಗೆ ಸಂವಾದಿಸುತ್ತಿವೆ. ಅವು ನನಗೆ ಮನುಕುಲವನ್ನು ಮುಂದೊದಗಲಿರುವ ಅವಘಡದಿಂದ ಪಾರು ಮಾಡಲು ನಿರ್ದೇಶಿಸುತ್ತಿವೆ. ಈ ಭೂಮಿಯನ್ನು ಉಳಿಸುವುದಕ್ಕಾಗಿ ನಾನು ‘ಸತ್ಯ’ವನ್ನು ಜನರೆಡೆಗೆ ತೆಗೆದುಕೊಂಡು ಹೋಗಬೇಕು. ನಾನೊಬ್ಬನೇ ಅಲ್ಲ, ಪ್ರತಿಯೊಬ್ಬರೂ ಸಹ ದೇವರ ಮಕ್ಕಳು ಎಂದು ಹೇಳಲು ಶುರು ಮಾಡಿದ. ಪಾಸಿಟಿವ್ ಆಲೋಚನೆ, ಪಾಸಿಟಿವ್ ವರ್ತನೆಗಳಿಂದ ಈ ಭೂಮಿಯಲ್ಲಿರುವ ಪಾಸಿಟಿವಿಟಿಯನ್ನು ಹೆಚ್ಚಿಸುವ ಮೂಲಕ ನಾವು ಭೂಮಿಯನ್ನು ಉಳಿಸಬಹುದು ಎಂದು ಟಿವಿ ಶೋಗಳ ಸಂದರ್ಶನಗಳಲ್ಲಿ ಹೇಳಿಕೊಳ್ಳಲು ಶುರು ಮಾಡಿದ.

‘ತಾನು ದೇವರ ಮಗ’ ಎನ್ನುವ ಈತನನ್ನು ಜನ ಲೇವಡಿ ಮಾಡಿದರು. ಈತ ಹೇಳುವ ಯಾವ ವಿಚಾರವನ್ನೂ ಗಂಭೀರವಾಗಿ ತೆಗೆದುಕೊಳ್ಳಲು ಜನರು ಸಿದ್ಧರಿರಲಿಲ್ಲ. ಪ್ರಖ್ಯಾತ ಟಿವಿ ಶೋ ಒಂದರಲ್ಲಿ ಡೇವಿಡ್‌ನನ್ನು ಅಪಹಾಸ್ಯಕ್ಕೆ ಗುರಿಮಾಡಲಾಯಿತು. ಇಡೀ ರಾಷ್ಟ್ರದೆದುರು ಅಂದು ‘ನಿಮಗೆ ನಾನು ಸತ್ಯವನ್ನು ತಿಳಿಸಬಯಸುತ್ತೇನೆ.’ ಎಂದು ಹೇಳಿದ ಯುವಕನನ್ನು ಅವಮಾನಿಸಲಾಯಿತು. ಅಂದಿನಿಂದ ಡೇವಿಡ್ ಅಪಹಾಸ್ಯ, ಕೊಂಕು, ಲೇವಡಿ, ಅವಮಾನಗಳಿಲ್ಲದೆ ರಸ್ತೆಯಲ್ಲಿ ತಲೆಯೆತ್ತಿ ತಿರುಗಾಡುವುದು ಅಸಾಧ್ಯವಾಯಿತು. 

ಆದರೆ ಆತನಿಗೆ ತಾನು ಕಂಡುಕೊಂಡ ಸಂಗತಿಗಳ ಬಗ್ಗೆ ಸ್ಪಷ್ಟವಾದ ನಂಬಿಕೆಯಿತ್ತು. ತಾನು ನಡೆಯುತ್ತಿರುವ ದಾರಿಯ ಚಿತ್ರಣ ಸ್ಫುಟವಾಗಿ ಆತನೆದುರು ಇತ್ತು. ಜನರ ಅಸಡ್ಡೆ, ಹೀಗಳೆಯುವಿಕೆಯಿಂದ ಆತ ವಿಚಲಿತನಾಗಲಿಲ್ಲ. ಟಿವಿಗಳಿಗೆ ಸಂದರ್ಶನ ಕೊಡುವುದು ಕಡಿಮೆ ಮಾಡಿದ. ಏಕಾಂತದಲ್ಲಿ ತನ್ನ ಅಧ್ಯಯನ, ಸುತ್ತಾಟ, ಪ್ರಯೋಗ, ತನಿಖೆಗಳನ್ನು ಮುಂದುವರೆಸಿದ. ಸಾಲು ಸಾಲಾಗಿ ಪುಸ್ತಕಗಳನ್ನು ಬರೆದ. ತನ್ನ ಸಹಮನಸ್ಕರ, ತನ್ನ ಮಾತನ್ನು ಕೇಳುವ, ಆಲೋಚಿಸುವ ತಾಳ್ಮೆ ಉಳ್ಳವರ ಎದುರು ತನ್ನ ಆಲೋಚನೆಗಳನ್ನು ಹರಿಬಿಟ್ಟ. ದೇಶ ವಿದೇಶದ ವಿದ್ಯಮಾನಗಳ ಬಗ್ಗೆ, ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದವುಗಳಾಗಿ  ಕಾಣುವ ಘಟನೆಗಳ ಹಿಂದಿನ ಸತ್ಯದ ಬಗ್ಗೆ ಸರಳವಾಗಿ ಜನರಿಗೆ ವಿವರಿಸುತ್ತಾ ಹೋದ.

ಮೊದಲ ವಿಶ್ವಯುದ್ಧ, ಎರಡನೆಯ ವಿಶ್ವಯುದ್ಧ, ವಿಯಟ್ನಾಂ, ಇತ್ತೀಚಿನ ಇರಾಕ್ ಯುದ್ಧಗಳಲ್ಲಿ ಅಮೇರಿಕಾ ಮೇಲ್ನೋಟಕ್ಕೆ ಆಕಸ್ಮಿಕವಾಗಿ ಯುದ್ಧರಂಗವನ್ನು ಪ್ರವೇಶಿಸಿದಂತೆ ಕಂಡರೂ ನಾಲ್ಕೂ ಪ್ರಮುಖ ಯುದ್ಧದ ಹಿಂದೆ ಅಮೇರಿಕಾದ ಕೆಲವೇ ಕೆಲವು ‘ಎಲೀಟ್’ ಕುಟುಂಬಗಳು ನಡೆಸಿದ ಕರಾಮತ್ತು, ಅಭಿವೃದ್ಧಿ ಹೊಂದುತ್ತಿರುವ, ಬಡ ದೇಶಗಳ ಆರ್ಥಿಕತೆಯನ್ನು, ಕೃಷಿ ಸ್ವಾವಲಂಬನೆಯನ್ನು ಕಸಿದುಕೊಂಡು ದೊಡ್ಡ ದೊಡ್ಡ ವ್ಯಾಪಾರ ಸಂಸ್ಥೆಗಳ, ಒಪ್ಪಂದಗಳ ಅಡಿಯಾಳಾಗಿಸುವುದರ ಹಿಂದಿನ ಮರ್ಮ, ಇಡೀ ಜಗತ್ತಿಗೆ ಒಂದೇ ಸರಕಾರ, ಒಂದೇ ಸೇನೆ, ಒಂದೇ ಬ್ಯಾಂಕು ಸ್ಥಾಪಿಸಿ ಜನರ ಆರ್ಥಿಕತೆಯನ್ನು, ಅವರ ಆಲೋಚನೆ, ವರ್ತನೆ, ಆಸೆ- ಮಹತ್ವಾಕಾಂಕ್ಷೆ ಒಟ್ಟಿನಲ್ಲಿ ಇಡೀ ಮನುಷ್ಯ ಕುಲದ ಭವಿಷ್ಯವನ್ನು ನಿರ್ಧರಿಸುವ ಅಧಿಕಾರವನ್ನು ಸ್ಥಾಪಿಸುವ ಬೃಹತ್ ಹುನ್ನಾರವನ್ನು ವಿವರಿಸಿದ. ಈ ಪ್ರಕ್ರಿಯೆ ಭಾಗವಾಗಿ ರೂಪುಗೊಂಡ ವಿಶ್ವ ಸಂಸ್ಥೆ, ವಾಣಿಜ್ಯ ಒಪ್ಪಂದಗಳು, ಯುರೋಪಿಯನ್ ರಾಷ್ಟ್ರಗಳ ಒಕ್ಕೂಟ, ಒಂದೇ ಕುಟುಂಬದ ಅಡಿಯಲ್ಲಿರುವ ಸಮೂಹ ಮಾಧ್ಯಮಗಳು, ಬೃಹತ್ ಕಾರ್ಖಾನೆಗಳು, ಬ್ಯಾಂಕುಗಳು, ಬೇಕೆಂದಾಗ ಆರ್ಥಿಕತೆಯನ್ನು ಸುಧಾರಿಸುವ, ಹಿಂಜರಿತ ಉಂಟು ಮಾಡುವ ತಂತ್ರಗಳು, ರಕ್ಷಣೆಗಾಗಿ ಜನರು ಸರಕಾರಗಳನ್ನು ಅನಿವಾರ್ಯವಾಗಿ ಅವಲಂಬಿಸಲು ಆ ಮೂಲಕ ಸರಕಾರ ತನ್ನ ಅಧಿಕಾರವನ್ನು, ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಮಾಡುವ ಹುನ್ನಾರಗಳು ಇವೆಲ್ಲವನ್ನೂ ಸ್ಪಷ್ಟವಾಗಿ ನಿರೂಪಿಸ ತೊಡಗಿದ.

ಆತ ಹೇಳುತ್ತಿರುವುದರಲ್ಲಿ ಎಲ್ಲವೂ ಸತ್ಯ ಎಂದು ನಂಬ ಬೇಕಿಲ್ಲ. ಹಾಗೆ ನಂಬಿ ಎಂದು ಆತನೂ ಕೇಳುವುದಿಲ್ಲ. ನಮ್ಮ ಬುದ್ಧಿಶಕ್ತಿಯನ್ನು, ಆಲೋಚನೆಯ ದಿಕ್ಕನ್ನು, ಆಸೆ-ಆಕಾಂಕ್ಷೆಗಳನ್ನು ನಿಯಂತ್ರಿಸುವ ಶಕ್ತಿಗಳ ಬಗ್ಗೆ ಎಚ್ಚರದಿಂದಿರಿ, ನಿದ್ರಿಸ ಬೇಡಿ ಎಚ್ಚೆತ್ತುಕೊಳ್ಳಿ ಎನ್ನುವುದಷ್ಟೇ ಆತನ ಸಂದೇಶ.

ಆತನ ವಿಚಾರಧಾರೆಯ ಆಳಕ್ಕೆ ಹೋಗಲು ಇನ್ನಷ್ಟು ಪುಸ್ತಕ ಓದಬೇಕಿದೆ. ಅಧ್ಯಯನ ಬೇಕಿದೆ.

[ ಇತ್ತೀಚಿಗೆ ಕಂಡ ವಿಡಿಯೋ ತುಣುಕೊಂದರಲ್ಲಿ ನನ್ನ ಗಮನಸೆಳೆದ ಹೇಳಿಕೆ ಇದು:

Just look at us. Everything is backwards; everything is upside down. Doctors destroy health ; lawyers destroy justice; universities destroy knowledge, governments destroy freedom; the major media destroy information and religions destroy spitituality.
                                                                                            – Mivhael Ellner

ಇತ್ತೀಚೆಗೆ ಓದಿ ಮುಗಿಸಿದ ಮಹಾತ್ಮ ಗಾಂಧಿಯವರ ‘ಹಿಂದ್ ಸ್ವರಾಜ್’ನಲ್ಲೂ ಈ ಹೇಳಿಕೆ ಪ್ಯಾರಲಲ್ ಆದ ಗಾಂಧಯ ವಿಚಾರಗಳು ಕಂಡಿದ್ದವು. ಗಾಂಧಿ ಆಧುನಿಕತೆಯ ಫಲಗಳಾದ ಲಾಯರುಗಳು, ವೈದ್ಯರು, ರೇಲ್ವೆ, ಯಂತ್ರೋಪಕರಣಗಳು, ದೊಡ್ಡ ನಗರಗಳು, ವಿಶ್ವವಿದ್ಯಾಲಯಗಳನ್ನು ಕಟುವಾಗಿ ವಿರೋಧಿಸುತ್ತಾರೆ. ]  

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s