ಜಾಹಿರ್‌ನ ಅನ್ವೇಷಣೆಯಲ್ಲಿ…

ಕಾಲೇಜು ಇದ್ದಾಗಲೇ ಚೆನ್ನ ಎನ್ನಿಸುತ್ತದೆ. ಎಲೆಕ್ಷನ್ ಕೌಂಟಿಂಗಿಗಾಗಿ ನಮ್ಮ ಕಾಲೇಜು ತೆಗೆದುಕೊಂಡಿರುವ ಕಾರಣಕ್ಕೆ ಒಂದು ತಿಂಗಳು ರಜೆ ಸಿಕ್ಕಿರುವಾಗ, ಪ್ರತಿದಿನದ ಅಂತ್ಯದಲ್ಲಿ ಮೂಡುವ ಭಾವನೆಯಿದು. ದಿನವಿಡೀ ಬಿಡುವಿದ್ದರೂ ಇಷ್ಟ ಪಡುವ ಕೆಲಸವನ್ನು ಮಾಡಲು ಸಾಧ್ಯವೇ ಆಗುವುದಿಲ್ಲ. ಕಳೆದ ಹದಿನೈದು ಇಪ್ಪತ್ತು ದಿನಗಳಲ್ಲಿ ನನಗೆ ಒಂದೇ ಒಂದು ಪುಸ್ತಕವನ್ನೂ ಓದಿ ಮುಗಿಸಲಾಗಲಿಲ್ಲ. ಕಾಲೇಜು ಇದ್ದಾಗಲೇ ಎಷ್ಟೋ ವಾಸಿ. ಪ್ರತಿದಿನ ಒಂದು ತಾಸಿನಂತೆ ಸೆಂಟ್ರಲ್ ಲೈಬ್ರರಿಯಲ್ಲಿ ಕೂತು ಎ.ಎನ್.ಮೂರ್ತಿರಾಯರ ಆತ್ಮಕತೆ ‘ಸಂಜೆಗಣ್ಣಿನ ಹಿನ್ನೋಟ’, ಅಗ್ನಿ ಶ್ರೀಧರ್‌ರ ‘ದಾದಾಗಿರಿಯ ದಿನಗಳು’ ಓದಿ ಮುಗಿಸಿದ್ದೆ. ಆದರೆ ಇಪ್ಪತ್ತು ದಿನದ ರಜೆಯಲ್ಲಿ ಹಿಡಿದ ಪುಸ್ತಕಗಳ್ಯಾವೂ ಮುಗಿದಿಲ್ಲ.

ಭೈರಪ್ಪನವರ ಕಾದಂಬರಿಯೊಂದನ್ನು ಓದಲು ತೊಡಗುವ ಮುನ್ನ ನಾಲ್ಕು ಬಾರಿ ದೀರ್ಘವಾಗಿ ಉಸಿರೆಳೆದುಕೊಂಡು ಕೂರುತ್ತೇನೆ. ಅವರ ಬರಹದ, ಆಲೋಚನೆಯ ಗಾಂಭೀರ್ಯಕ್ಕೆ ಸಾಟಿಯಾಗುವ ಗಾಂಭೀರ್ಯ ನನ್ನೊಳಗೂ ನೆಲೆಗೊಳಿಸಲು ಪ್ರಯತ್ನಿಸುತ್ತೇನೆ. ಮೊದಲ ಮಾತು, ಮುನ್ನುಡಿಗಳಲ್ಲಿ ಸಿಕ್ಕುವ ಒಳನೋಟ, ವಿಷಯ ವಸ್ತುವಿನ ಬಗೆಗಿನ ವಿವರಣೆಯ ಬಗ್ಗೆ ಕೊಂಚ ತಲೆ ಕೆಡಿಸಿಕೊಳ್ಳದಿದ್ದರೆ, ಅವರ ತಂತ್ರಗಾರಿಕೆ, ಭಾಷಾ ಶೈಲಿಯ ಬಗ್ಗೆ ಸ್ವಲ್ಪ ಮಟ್ಟಿಗೆ ಪರಿಚಯ ಸಿಕ್ಕದಿದ್ದರೆ ಓದಿನ ಪೂರ್ತಿ ಸುಖ ಸಿಕ್ಕುವುದಿಲ್ಲ.

ಈ ಬಾರಿ ಅವರ ‘ಅನ್ವೇಷಣೆ’ ಕಾದಂಬರಿಯನ್ನು ಓದಲು ತೊಡಗುವ ಮುನ್ನವೂ ಅದೇ ರೀತಿ ತಯಾರಾಗಿದ್ದೆ. ಈ ಕಾದಂಬರಿಯ ಕಥಾವಸ್ತು ಯಾವುದು ಎಂಬುದು ಲೇಖಕರೂ ಸ್ಪಷ್ಟ ಪಡಿಸಿರಲಿಲ್ಲವಾದ್ದರಿಂದ ಮುಕ್ಕಾಲು ಪಾಲು ಮುಗಿಯುತ್ತ ಬಂದರೂ ನನಗೆ ಅದು ತಿಳಿಯಲಿಲ್ಲ. ಆದರೆ ಕಥನ ಕ್ರಿಯೆಯಲ್ಲಿ ಅವರು ದುಡಿಸಿಕೊಂಡಿರುವ ತಂತ್ರಗಾರಿಕೆ ಅದ್ಭುತವಾಗಿದೆ. ಕಾದಂಬರಿಯ ಕೇಂದ್ರ ಪಾತ್ರವಾದ ವಿಶ್ವನಾಥನ ಜೀವನದ ಹೆಜ್ಜೆ ಗುರುತುಗಳನ್ನು ಹಿಂಬಾಲಿಸುತ್ತಾ ಕಥೆ ಸಾಗುತ್ತದೆ. ಕಾದಂಬರಿಯ ಯಾವ ಭಾಗದಲ್ಲೂ ಆ ವಿಶ್ವನಾಥ ಧುತ್ತೆಂದು ಓದುಗನಿಗೆ ಎದುರುಗೊಳ್ಳುವುದಿಲ್ಲ. ಆತ ಬಿಟ್ಟು ಹೋದ ಹೆಜ್ಜೆ ಗುರುತುಗಳನ್ನು, ಆತನೊಂದಿಗೆ ಒಡನಾಡಿದವರ ನೆನಪಿನ ನೇವರಿಕೆಯನ್ನು ಮಾತ್ರ ನಮಗೆ ಒದಗಿಸಲಾಗುತ್ತದೆ. ಬೇರೆ ಬೇರೆ ನಿರೂಪಕರು ಒದಗಿಸುವ ಮಾಹಿತಿಯ ಮೂಲಕ ನಾವು ವಿಶ್ವನಾಥನನ್ನು ನಮ್ಮ ಕಲ್ಪನೆಯಲ್ಲಿ ಸೃಷ್ಟಿಸಿಕೊಂಡು ಆತನ ಬೆನ್ನಟ್ಟಿ ಹೊರಡಬೇಕು. ಈ ತಂತ್ರಗಾರಿಕೆ ನನಗೆ ಮೆಚ್ಚುಗೆಯಾಯಿತು. ಜೊತೆಗೆ ಭೈರಪ್ಪನವರ – ಅತಿ ಜನಪ್ರಿಯವಾದ – ಭಾಷಾ ಕುಸುರಿ ಕೆಲಸದ ಬಗೆಗೂ ಉತ್ತಮವಾದ ಪರಿಚಯ ಸಿಕ್ಕಿತು. ಭಿನ್ನವಾದ ಪ್ರದೇಶಗಳ ಜನರ ಭಾಷಾ ಬಳಕೆಯ ಸೂಕ್ಷ್ಮಗಳು, ಭಿನ್ನ ಹಿನ್ನೆಲೆಯ, ಸಂಸ್ಕಾರದ ಜನರ ಪದ ಬಳಕೆಯಲ್ಲಿನ ಭಿನ್ನತೆ, ವಿಶಿಷ್ಟತೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ಅದನ್ನು ಕಾದಂಬರಿಯಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ಅಳವಡಿಸಿರುವುದು ಗಮನಕ್ಕೆ ಬಂದಿತು.

ಕಾದಂಬರಿ ಪೂರ್ತಿಯಾಗುವುದಕ್ಕೆ ಇನ್ನು ಮುವತ್ತು ಚಿಲ್ಲರೆ ಪುಟಗಳಿರುವುದರಿಂದ ನನಗೆ ಅದರ ಸತ್ವ ಸಂಪೂರ್ಣವಾಗಿ ದಕ್ಕಿದೆಯೋ ಇಲ್ಲವೋ ಹೇಳಲಾರೆ. ಅದರ ಕಥೆಯ ತಿರುಳನ್ನೂ ನೀಡಲಾರೆ. ಓದಲು ಯೋಗ್ಯವೋ ಇಲ್ಲವೋ ಎಂಬುದರ ಬಗ್ಗೆ ನನ್ನ ಅಭಿಪ್ರಾಯವನ್ನೂ ಕೊಡಲಾರೆ. ಆದರೆ ಇದುವರೆಗಿನ ಓದು ತುಸು ಬೋರಿಂಗ್ ಅನ್ನಿಸಿತು. ಅಂದ ಹಾಗೆ ಓದಬೇಕು ಎನ್ನುವ ಆಸಕ್ತಿಯಿರುವವರಿಗೆ ಮಾಹಿತಿ : ಈ ಕಾದಂಬರಿ ಡಿ.ಎಲ್.ಐ ತಾಣದಿಂದ ಇಳಿಸಿಕೊಂಡದ್ದು.

ಇದರ ಜೊತೆಗೆ ಕಳೆದ ಹತ್ತು ಹದಿನೈದು ದಿನಗಳಿಂದ ಇನ್ನೊಂದು ಪುಸ್ತಕ ಓದಲು ಶುರುಮಾಡಿದ್ದೆ. ಇದು ಪಾಲೋ ಕೊಯ್ಲೊ ಬರೆದ ‘ದಿ ಜಾಹಿರ್’ ಎನ್ನುವ ಪುಸ್ತಕ. ಪ್ರಸಿದ್ಧವಾದ ‘ಆಲ್ಕೆಮಿಸ್ಟ್’ನ ಲೇಖಕ ಆತ. ಆತನ ಕಾದಂಬರಿಗಳಲ್ಲಿ ಅತಿಯೆನಿಸುವ ಸ್ಪಿರಿಚ್ಯುಯಾಲಿಟಿ ಕಂಡು ಬಂದರೂ ಒಳ್ಳೆಯ ಓದಿನ ಅನುಭವನ್ನು ನೀಡುವಲ್ಲಿ ಆತನ ಕೃತಿಗಳ್ಯಾವೂ ವಿಫಲವಾಗಿಲ್ಲ. ಈತನ ‘ಆಲ್ಕೆಮಿಸ್ಟ್’ ನಾನು ಮೊದಲು ಓದಿದ್ದೆ. ಅನಂತರ ಆಲ್ಕೆಮಿಸ್ಟ್‌ಗಿಂತ ತೀರಾ ಭಿನ್ನವಾದ ಕಥಾವಸ್ತುವಿರುವ ‘ಇಲೆವೆನ್ ಮಿನಿಟ್ಸ್’ ಓದಿದ್ದೆ. ಈಗ ಈ ಜಾಹಿರ್ ನನ್ನೊಳಗೆ ಇಳಿಯುತ್ತಿದೆ.

ದಂಪತಿಗಳ ನಡುವೆ ಇರುವ ಪ್ರೀತಿ ಈ ಕಾದಂಬರಿಯ ವಸ್ತು. ಜಾಹಿರ್ ಎಂದರೆ ಎರಡು ಪರಸ್ಪರ ವಿರುದ್ಧ ಭಾವಗಳು, ಗುಣಗಳು. ಗಂಡ ಹೆಂಡಿರಲ್ಲಿ ಈ ವೈರುಧ್ಯ ಹೆಚ್ಚಾದಷ್ಟೂ ಅವರ ನಡುವಿನ ಸೆಳೆತ ಹೆಚ್ಚುತ್ತದೆ ಎನ್ನುವ ಹಳೆಯ ನಂಬಿಕೆಯ ಸುತ್ತ ಕಾದಂಬರಿ ಹಬ್ಬಿಕೊಂಡಿದೆ. ಇದರ ನಿರೂಪಕ ಒಬ್ಬ ಜನಪ್ರಿಯ ಲೇಖಕ ಆತನ ಬಗೆಗಿನ ವಿವರಣೆಗಳನ್ನು, ಆತನ ಜೀವನಾನುಭವವನ್ನು, ಆತನ ಆಲೋಚನೆಯ ಸ್ಥರವನ್ನು ಗಮನಿಸಿದರೆ ಆತ ಲೇಖಕ ಪಾಲೋ ಕೊಯ್ಲೊವಿನ ಪ್ರತಿಬಿಂಬದಂತೆ ಕಾಣುವುದರಲ್ಲಿ ಆಶ್ಚರ್ಯವೇನಿಲ್ಲ. ನಿರೂಪಕ ಜನಪ್ರಿಯತೆಯ ಉತ್ತುಂಗದಲ್ಲಿರುತ್ತಾನೆ. ಆತನ ಪುಸ್ತಕಗಳು ಬೆಸ್ಟ್ ಸೆಲ್ಲರ್ ಪಟ್ಟಿಯ ಅಗ್ರಸ್ಥಾನವನ್ನು ಆಕ್ರಮಿಸಿಕೊಂಡಿರುತ್ತವೆ. ಹೀಗಿರುವಾಗ ಒಂದು ದಿನ ಆತನ ಹೆಂಡತಿ ಹೇಳದೆ ಕೇಳದೆ ಆತನನ್ನು ಬಿಟ್ಟು ಹೋಗುತ್ತಾಳೆ. ಯಾವ ಕಾರಣವನ್ನೂ ನೀಡದೆ ಆತನಿಂದ ದೂರವಾಗುತ್ತಾಳೆ. ಅಲ್ಲಿಂದ ನಿರೂಪಕನ ಆತ್ಮಾವಲೋಕನ ಶುರುವಾಗುತ್ತದೆ. ಈಗ ನಾನು ತಲುಪಿರುವ ಪುಟದಲ್ಲಿ ಆತನ ಹೆಂಡತಿಯನ್ನು ಆತ ಮತ್ತೆ ಭೇಟಿಯಾಗುವ ಸನ್ನಿವೇಶ ಸೃಷ್ಟಿಯಾಗಿದೆ.

ಕಥೆಯ ತಿರುಳು ಇನ್ನೂ ಗ್ರಹಿಸಲಾಗಿಲ್ಲವಾದರೂ ಇದುವರೆಗಿನ ಓದಿನಲ್ಲಿ ಎಲ್ಲೂ ಬೇಸರ ಬಂದಿಲ್ಲ. ಬರಹಗಾರನೊಬ್ಬನ ಬದುಕಿನ ಅತಿ ಹತ್ತಿರದ ನೋಟವನ್ನು ಈ ಕಾದಂಬರಿ ಓದುಗನಿಗೆ ಒದಗಿಸುತ್ತದೆ. ತೀರಾ ಖಾಸಗಿಯಾಗಿ ಬರಹಗಾರನಲ್ಲಿ ಹುಟ್ಟಿ ಅರಳಿಕೊಳ್ಳುವ ಭಾವ ಬರವಣಿಗೆಗೆ ಇಳಿಯುವ ಪ್ರಯಾಸದಾಯಕ ಪ್ರಕ್ರಿಯೆಯ ವಿವಿಧ ಹಂತಗಳು, ಒಮ್ಮೆ ಅದು ಬರಹಗಾರನಿಂದ ಹೊರಬಂದ ಮೇಲೆ ಆತನಿಗೆ ಸಿಗುವ ನಿರಾಳತೆ, ತನ್ನ ಸೃಷ್ಟಿಯೊಂದಿಗೆ ಲೇಖಕ ಬೆಳೆಸಿಕೊಳ್ಳುವ ಸಂಬಂಧ, ಬರು ಬರುತ್ತಾ ಕೃತಿ ಕರ್ತೃವಿಗೇ ಅಪರಿಚಿತವಾಗುತ್ತಾ ಹೋಗುವ ವೈಚಿತ್ರ್ಯ, ಜನಪ್ರಿಯತೆ ಬರಹಗಾರನಿಗೆ ಒಡ್ಡುವ ಸವಾಲುಗಳು ಇವೆಲ್ಲವನ್ನು ಪಾಲೋ ಆತ್ಮಚರಿತ್ರೆಯ ಮಾದರಿಯಲ್ಲಿ ವಿವರಿಸುತ್ತಾ ಹೋಗಿದ್ದಾನೆ.

ಜಾಹಿರ್ ಓದುವಾಗ ಇದೇ ರೀತಿಯ ಕಥಾ ವಸ್ತುವಿರುವ ಜೋಗಿಯವರ ‘ಯಾಮಿನಿ’ ಕಾದಂಬರಿ ನೆನಪಾಯಿತು. ಅವೆರಡನ್ನೂ ಹೋಲಿಸಿದಾಗ ಪತ್ರಕರ್ತರಾದ ಜೋಗಿಯವರಲ್ಲಿ ಕಂಡ ಕೊರತೆ ಯಾವುದು ಎಂಬುದು ತಿಳಿಯಿತು. ಜೋಗಿ ಬರೆದದ್ದು ಏಕೆ ಜಾಹಿರ್ ನಷ್ಟು ಆಳಕ್ಕೆ ಇಳಿಯುವುದಿಲ್ಲ ಎಂಬುದು ಕಂಡಿತು.

ಇವೆರಡು ಪುಸ್ತಕಗಳಲ್ಲಿ ಕೈ ಮುಳುಗಿಸಿದ್ದೇನೆ. ಯಶವಂತ ಚಿತ್ತಾಲರ ‘ಕೇಂದ್ರ ವೃತ್ತಾಂತ’ದಲ್ಲಿ ಮೂಗು ತೂರಿಸಿರುವೆ.

ಬೆಳಗಿನ ಬೇಸರದಲ್ಲಿ ಈ ಓದಿನ ಅನುಭವವನ್ನು ಹಂಚಿಕೊಳ್ಳೋಣ ಅನ್ನಿಸಿತು. ಇದರಿಂದ ಓದಿನ ದಾಹ ಹೆಚ್ಚಬಹುದು ಎಂಬ ಸಣ್ಣ ಸ್ವಾರ್ಥವೂ ಸೇರಿ ಈ ಬ್ಲಾಗ್ ನೋಟು ಸಿದ್ಧವಾಯಿತು!

Advertisements

5 thoughts on “ಜಾಹಿರ್‌ನ ಅನ್ವೇಷಣೆಯಲ್ಲಿ…

 1. ಹೆಲೊ ಸುಪ್ರೀತ್,
  ಜಾಹಿರ್ ನನ್ನ ಪ್ರೀತಿಯ ಪುಸ್ತಕ ಕೂಡಾ, ಆದರೆ ಅಲ್ಕೆಮಿಸ್ಟ್ ಬಗ್ಗೆ ಇನ್ನೂ ಹೆಚ್ಚಿನ ಪ್ರೇಮ ನನಗೆ. ನೀವು ಹೇಳುವ ಹಾಗೆ ಪಾಲೋನ ಪುಸ್ತಕಗಳು ಆಳವಿದ್ದರು ಬಹಳ ಸರಳ. ಒಮ್ದೊಂದು ಸಾರಿ ಹೆಮಿಂಗ್ವೆಯ ನೆನಪಾಗುತ್ತದೆ ಪಾಲೋನನ್ನ ಓದುವಾಗ. ಎಲ್ಲಿಯು ಅತಿಯಾದ ವೈಭವ ಇಲ್ಲ, ಬೇಡವಾದ ಮಾತುಗಳಿಲ್ಲ. ಚಂದ. ಒಳ್ಳೊಳ್ಳೆ ಪುಸ್ತಕ ಓದುತ್ತ ಇದೀರಿ. ಬೇಗ ಮುಗಿಸಿ ಸಮಗ್ರ ಅನಿಸಿಕೆ ಬರೆಯಿರಿ.
  ಟೀನಾ.

  • ಆಲ್ಕೆಮಿಸ್ಟ್ ನನಗೂ ಪ್ರಿಯವಾದದ್ದು.
   ಇಲೆವೆನ್ ಮಿನುಟ್ಸ್ ಅದಕ್ಕಿಂತ ಹೆಚ್ಚು ಪ್ರಬುದ್ಧ ಚಿಂತನೆ ಹೊಂದಿದೆ ಅನ್ನಿಸಿತು. ಜಾಹಿರ್ ಇನ್ನೂ ಓದಿಲ್ಲ. ವೆರೋನಿಕಾ ಡಿಸೈಡ್ಸ್ ಟು ಡೈ ಓದುವ ಹಂಬಲವಿದೆ.

   ( ಇದೇನು ನನ್ನ ‘ನೀವು’ ಎಂದು ಕರೆಯುವ ಅಭ್ಯಾಸ? ಅದಿಲ್ಲದಿದ್ದರೆ ನಂಗೆ ಸರಾಗ…)

 2. ಸುಪ್ರೀತ್,
  ವೆರೋನಿಕಾ ಡಿಸೈಡ್ಸ್ ಟು ಡೈ ಒಂದು ಥರ ಅಥವ ಥರಾವರಿಯಾಗಿ ಇದೆ ಅನ್ನಿಸಿತು ನನಗೆ. ಹೀಗೇ ಒಂದು ಪಕ್ಕಾ ಅಭಿಪ್ರಾಯ ಹುಟ್ಟಿಬರಲಿಲ್ಲ!! ಪುನಹ ಓದಿದರೆ ಏನಾದರು ಅನ್ನಿಸಬಹುದೇನೊ, ಗೊತ್ತಿಲ್ಲ. ಓದಿ ಏನನ್ನಿಸಿತು ತಿಳಿಸು. ನೀನು ಅಂತ ಕರಿತಿದೀನಿ, ಸರಿಯಾ? 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s