ಕೃಷ್ಣ ನನಗ್ಯಾಕೆ ಇಷ್ಟ

 

ಅಳಿಕೆಯ ಕಾಲೇಜಿನಲ್ಲಿ ಪಿಯು ಓದುವ ದಿನಗಳಲ್ಲಿ ನಡೆದ ಘಟನೆಯಿದು. ಅಲ್ಲಿ ಮುಂಜಾನೆ ಐದಕ್ಕೆ ದೊಡ್ಡ ಧ್ವನಿಯ krishna_0 ಮೈಕಿನಿಂದ ಹೊರಡುವ ಸುಪ್ರಭಾತದ ಧ್ವನಿಗೆ ಎಲ್ಲರೂ ಎಚ್ಚರವಾಗುತ್ತಿದ್ದೆವು. ಇರುವ ಹದಿನೈದು ನಿಮಿಷ ಸಮಯದಲ್ಲಿ ಹಲ್ಲು ತಿಕ್ಕಿ, ಮುಖ ತೊಳೆದು ನಿದ್ದೆಯ ಜೋಂಪನ್ನು ಹೋಗಲಾಡಿಸಿಕೊಂಡು ನೀಲಿ ನಿಕ್ಕರು, ಪೂರ್ಣ ತೋಳಿನ ಬನಿಯನ್ನು ತೊಟ್ಟುಕೊಂಡು ಹಾಸಿ ಕುಳಿತುಕೊಳ್ಳಲು ದಪ್ಪನೆಯದೊಂದು ಪುಟ್ಟ ಜಮಖಾನ ತೆಗೆದುಕೊಂಡು ಪ್ರಾರ್ಥನಾ ಮಂದಿರಕ್ಕೆ ಸಾಲಿನಲ್ಲಿ ಹೋಗುತ್ತಿದ್ದೆವು. ತೂಕಡಿಸುತ್ತಲೇ ಇಪ್ಪತ್ತೊಂದು ಓಂಕಾರ ಹೇಳಿ, ಶವಾಸನ ಬರುವುದು ಯಾವಾಗ ಎನ್ನುವ ನಿರೀಕ್ಷೆಯಲ್ಲಿ ಯೋಗಾಸನವನ್ನು ಪೂರೈಸುತ್ತಿದ್ದೆವು.  ಇದೆಲ್ಲ ಮುಗಿದ ನಂತರ ಓದಿನ ಕೋಣೆಗೆ ರವಾನೆಯಾಗುತ್ತಿದ್ದೆವು. ಆಮೇಲೆ ಸ್ನಾನವನ್ನು, ತಿಂಡಿಯನ್ನೂ ಮುಗಿಸಿದ ನಂತರ ಮತ್ತೊಮ್ಮೆ ಪ್ರಾರ್ಥನೆಗೆ ಮಂದಿರದಲ್ಲಿ ಜಮಾಣೆಯಾಗಬೇಕಿತ್ತು. ಪ್ರಾರ್ಥನೆ ಮುಗಿದ ನಂತರ ನಮ್ಮ ಸಂಸ್ಥೆಯ ಹಿರಿಯರಲ್ಲಿ ಯಾರಾದರೂ ಒಂದಿಷ್ಟು ಹಿತವಚನಗಳನ್ನು ಹೇಳುತ್ತಿದ್ದರು.

ಅಂದು ಕೃಷ್ಣ ಜನ್ಮಾಷ್ಟಮಿ. ಕಾಲೇಜಿಗೆ ರಜೆಯಿತ್ತು. ಹೀಗಾಗಿ ಪ್ರಾರ್ಥನೆ ಮುಗಿದ ನಂತರ ಕಾಲೇಜಿಗೆ ಓಡಬೇಕೆಂಬ ಧಾವಂತವಿರಲಿಲ್ಲ. ಕೃಷ್ಣನ ಬಗ್ಗೆ ಮಾತನಾಡಲು ಹಿರಿಯರೊಬ್ಬರು ಶುರು ಮಾಡಿದರು. ಅವರು ಒಳ್ಳೆಯ ವಾಗ್ಮಿಗಳು. ಸಂಸ್ಥೆಯ ಮೌತ್ ಪೀಸ್ ಎಂಬಂತಿದ್ದರು.

ಭಾಷಣದ ಮೊದಲು ಒಂದು ಘಟನೆಯನ್ನು ವಿವರಿಸಿದರು. “ನಾನು ಹೀಗೆ ಮಂಗಳೂರಿನ ಕಾಲೇಜೊಂದರಲ್ಲಿ ಕೃಷ್ಣನ ಬಗ್ಗೆ ಮಾತನಾಡುತ್ತಿದ್ದಾಗ ಒಬ್ಬ ಹುಡುಗ ಎದ್ದು ನಿಂತು ಪ್ರಶ್ನೆ ಕೇಳಿದ. ಕೃಷ್ಣ ನಮಗೆ ಆದರ್ಶವಾಗಬೇಕು ಅನ್ನುತ್ತೀರಿ ಹಾಗಾದರೆ ನಾವೂ ಬೆಣ್ಣೆ ಕದಿಯುವುದು, ಗೋಪಿಕೆಯರ ವಸ್ತ್ರ ಅಪಹರಿಸುವುದು, ಸುಳ್ಳು ಹೇಳುವುದು ಮಾಡಬೇಕೆ ಎಂದು ಕೇಳಿದ. ನಾನು ಹೇಳಿದೆ ‘ಹು ಮಾಡಬಹುದು. ಆದರೆ ಅದಕ್ಕೆ ಮುನ್ನ ಆತನಂತೆ ಪೂತನಿಯ ವಿಷವನ್ನು ತಿಂದು, ಕಾಳಿಂಗ ಸರ್ಪವನ್ನು ಕೊಂದು, ಗೋವರ್ಧನ ಗಿರಿಯನ್ನು ಎತ್ತಿ ತೋರಿಸು’ ಎಂದು ಹೇಳಿದ. ಆ ಹುಡುಗ ಪಾಪ ಉತ್ತರ ತೋಚದೆ ಸುಮ್ಮನಾದ”

ನಾವೆಲ್ಲರೂ ‘ಅಬ್ಬ ! ಎಂಥಾ ಉತ್ತರ’ ಅಂತಂದುಕೊಂಡು ಬೆರಗಾದೆವು. ಅವರು ಕೃಷ್ಣನ ಬಾಲ ಲೀಲೆಗಳ ಬಗ್ಗೆ, ಅವನ್ನು ತಪ್ಪಾಗಿ ಅರ್ಥೈಸಿರುವ ಬಗ್ಗೆ ಒಂದು ಗಂಟೆ ಮಾತನಾಡಿದರು.

ಅವರ ಮಾತು ಕೇಳಿ ರೂಮಿಗೆ ಹಿಂದಿರುಗುವಾಗ ಒಂದು ತರ್ಲೆ ಪ್ರಶ್ನೆ ತಲೆಯಲ್ಲಿ ಮೊಳೆಯಿತು. “ಕೃಷ್ಣ ಲೀಲೆಗಳನ್ನು ಮಾಡುವುದಕ್ಕೆ ಆತನ ಹಾಗೆ ಶೌರ್ಯ ಸಾಹಸ ಪ್ರದರ್ಶನ ಮಾಡಿರಬೇಕು ಎನ್ನುವುದಾದರೆ ಆತನ ಒಳ್ಳೆಯ ಗುಣಗಳನ್ನು ಅನುಕರಿಸುವ ಮುನ್ನವೂ ಅಂತಹ ಸಾಹಸಗಳನ್ನು ಮಾಡಿರಬೇಕು ಅಲ್ಲವೇ?” ಪ್ರಶ್ನಿಸುವ ಧೈರ್ಯ ಸಾಲದೆ ಸುಮ್ಮನಾಗಿದ್ದೆ.

ಕೃಷ್ಣ ಎಂದರೆ ನನಗೆ ಈ ಕಾರಣಕ್ಕೇ ಇಷ್ಟವಾಗುವುದು. ಆತನನ್ನು ಈ ಧಾರ್ಮಿಕರು ಅದೆಷ್ಟೇ ಕಷ್ಟ ಪಟ್ಟು ವಿವರಣೆಗಳ, ಸ್ಪಷ್ಟನೆಗಳ ನೆರವನ್ನು ಪಡೆದು, ಅತಿರೇಕದ ತರ್ಕಗಳನ್ನು ಬಳಸಿ ಏನೇ ಪ್ರಯತ್ನ ಪಟ್ಟರೂ ದೇವರ ಸ್ಥಾನಕ್ಕೆ ಏರಿಸಲಾಗದು. ಆತ ಎಂದಿಗೂ ಆಪ್ತ ಸಖನೇ ಆಗಿ ಉಳಿಯುತ್ತಾನೆ.

ಮೊದಲೇ ಸ್ಪಷ್ಟ ಪಡಿಸುವೆ. ನಾನು ಕೃಷ್ಣನನ್ನು ಇಷ್ಟ ಪಡುವುದು, ಮಹಾಭಾರತದ ಒಂದು ಪಾತ್ರವಾಗಿ. ‘ನಾಗರ ಹಾವು’ ಸಿನೆಮಾದ ರಾಮಾಚಾರಿ ಪಾತ್ರವನ್ನು ಮೆಚ್ಚಿಕೊಂಡಂತೆ.

‘ಮುಖ ಊದಿಸಿಕೊಂಡಿರುವುದು ಅಧ್ಯಾತ್ಮವಲ್ಲ ಹೊಟ್ಟೆ ಕೆಟ್ಟಿರುವುದರ ಲಕ್ಷಣ’ ಎಂದು ವಿವೇಕಾನಂದರು ಹೇಳಿದ್ದರು. ಅಧ್ಯಾತ್ಮ, ಅಲೌಕಿಕ, ದೇವರು, ಧರ್ಮಗಳ ಪ್ರಸ್ತಾಪವಾದೊಡನೆ ಜನರು ಮಾಡುವ ಮುಖಭಾವವನ್ನು ನೆನೆದರೇ ಗಾಬರಿಯಾಗುತ್ತದೆ. ದೇವಸ್ಥಾನದಲ್ಲಿ ನಗುವ ಹಾಗಿಲ್ಲ, ಜೋಕ್ ಹೇಳುವುದು ನಿಷಿದ್ಧ ಎಂಬಂಥ ಕಟ್ಟಳೆಗಳು ಹುಟ್ಟಿದ್ದಾದರೂ ಏತಕ್ಕೆ? ಇಂತಹ ಗಾಂಭೀರ್ಯದ ಹರಳೆಣ್ಣೆ ಮುಖಗಳಿಂದಾಗಿ ಅಧ್ಯಾತ್ಮವೆಂಬುದು ಎಲ್ಲಾ ಸಂತಸವನ್ನು, ಜೀವನಾಸಕ್ತಿಯನ್ನು, ಜೀವರಸವನ್ನು, ತುಂಟತನವನ್ನು ಕೊಂದುಕೊಂಡ ನಂತರ ಹುಟ್ಟುವ ಸಂಗತಿ ಎಂಬಂತಾಗಿ ಹೋಗಿದೆ.

ಕೃಷ್ಣ ಯೋಗಿಯೂ ಹೌದು, ರಸಿಕನೂ ಹೌದು. ಆತ ಗೀತಾಚಾರ್ಯನೂ ಹೌದು, ಗೋಪಿಕೆಯರ ಮನದರಸನೂ ಹೌದು. ಆತ ದ್ರೌಪದಿಯ ಆಪ್ತ ಸಖನೂ ಹೌದು ಪ್ರಖರ ರಾಜತಾಂತ್ರಿಕನೂ ಹೌದು. ನಮ್ಮ ಧರ್ಮಗಳಲ್ಲಿ ವಿಪರೀತ ಕೊರತೆಯಿರುವ ಹುಡುಗಾಟಿಕೆ (playfulness) ಭರಿಸುವ ಪಾತ್ರ ಆತನದು.

ಈಗ ಆತನ ಮತ್ತೊಂದು ಜನ್ಮದಿನ ಬಂದಿದೆ. ಜನರು ಅವವೇ ಸ್ಪಷ್ಟನೆಗಳನ್ನು, ತರ್ಕಗಳನ್ನು ಮುಂದಿಟ್ಟು ಆತನ ಹುಡುಗಾಟಿಕೆಯನ್ನು ಕೊಲ್ಲುವ ಪ್ರಯತ್ನ ಮಾಡುತ್ತಾರೆ. ‘ಆತ ಬೆಣ್ಣೆ ಕದ್ದದ್ದು ಏಕೆಂದರೆ, ಆತನಿಗೆ ಹದಿನಾರು ಸಾವಿರದ ಎಂಟು ಮಂದಿ ಮಡದಿಯರು ಏಕೆಂದರೆ, ಆತ ಕುಟಿಲ ತಂತ್ರಗಳನ್ನು ಬಳಸಿ ಯುದ್ಧಕ್ಕೆ ಪ್ರೋತ್ಸಾಹ ಕೊಟ್ಟಿದ್ದು ಏಕೆಂದರೆ’ ಎಂದು ಪಂಡಿತರು ಆತನ ಜೀವಂತಿಕೆಯ ಸುತ್ತ ಅತಿ ಗಾಂಭೀರ್ಯದ, ದೈವತ್ವದ ಹಗ್ಗ ಹೊಸೆಯುತ್ತಲೇ ಹೋಗುತ್ತಾರೆ. ಆತ ಅವೆಲ್ಲವನ್ನೂ ಕ್ಷಣ ಮಾತ್ರದಲ್ಲಿ ನಿವಾರಿಸಿಕೊಂಡು ಕೊಳಲೂದುತ ಮುಗುಳ್ನಗುತ್ತಾ ಕೂರುತ್ತಾನೆ.

ಅದಕ್ಕೇ ನನಗೆ ಕೃಷ್ಣನೆಂದರೆ ಇಷ್ಟ.

Advertisements

1 thought on “ಕೃಷ್ಣ ನನಗ್ಯಾಕೆ ಇಷ್ಟ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s