ಒಳ್ಳೆಯ ವ್ಯಕ್ತಿಯ ಕೈಲಿ ಕೆಟ್ಟದ್ದು ಮಾಡಿಸುವುದಕ್ಕೆ ಶ್ರದ್ಧೆ ಬೇಕು!

ರುಜುವಾತು ಪಡಿಸಲು ಸಾಕಷ್ಟು ಸಾಕ್ಷಿಗಳು ಇಲ್ಲದ ಸಂದರ್ಭದಲ್ಲಿಯೂ ಒಂದು ಸಂಗತಿಯನ್ನು ಗಾಢವಾಗಿ ನಂಬುವುದಕ್ಕೆ ಶ್ರದ್ಧೆ ಎನ್ನುವರು.

ಕೃಷ್ಣ ಎನ್ನುವ ಹತ್ತು ವರ್ಷದೊಳಗಿನ ಬಾಲಕ ತನ್ನ ಕಿರು ಬೆರಳಿನಲ್ಲಿ ಗೋವರ್ಧನ ಎನ್ನುವ ಹೆಸರಿನ ಬೆಟ್ಟವನ್ನು ಎತ್ತಿದ. ಅದರಡಿಯಲ್ಲಿ ಇಡೀ ಯಾದವರ ಊರು ಆಶ್ರಯವನ್ನು ಪಡೆದಿತ್ತು. ಈ ಪುರಾಣದ ಕತೆಯನ್ನು ಮನುಷ್ಯನ ಅದ್ಭುತ ಕಲ್ಪನೆಯ ಸೃಷ್ಟಿಯಾಗಿ, ಒಂದು ಪ್ರತಿಮೆಯಾಗಿ, ಸಂಕೇತವಾಗಿ ಒಪ್ಪಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಇದನ್ನು ಅಕ್ಷರಶಃ ಸತ್ಯವೆಂದು ಯಾವ ಸಾಕ್ಷಿಯೂ ಇಲ್ಲದೆ ನಂಬುವುದು ಶ್ರದ್ಧೆ ಎನ್ನಿಸಿಕೊಳ್ಳುತ್ತದೆ.

ನಮ್ಮ ಬಹುಪಾಲು ಧಾರ್ಮಿಕ ನಂಬಿಕೆಗಳು ಇಂಥವೇ.

ಧರ್ಮ, ದೇವರ ಬಗೆಗೆ ‘ಗಾಡ್ ಈಸ್ ನಾಟ್ ಗ್ರೇಟ್’ ಎಂಬ ಪುಸ್ತಕ ಬರೆದಿರುವ ಕ್ರಿಸ್ಟೋಫರ್ ಹಿಚಿನ್ಸ್ ಒಂದು ಕಡೆ ಹೀಗನ್ನುತ್ತಾನೆ. “ಒಳ್ಳೆಯ ಜನರು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಕೆಟ್ಟವರು ಕೆಟ್ಟ ಕೆಲಸಗಳನ್ನು ಮಾಡುತ್ತಾರೆ. ಆದರೆ ಒಳ್ಳೆಯವ ಜನರ ಕೈಲಿ ಕೆಟ್ಟ ಕೆಲಸವನ್ನು ಮಾಡಿಸಲಿಕ್ಕೆ ಧರ್ಮ ಬೇಕು”.

ಈ ವಿಷಯ ನೆನಪಿಸಿಕೊಳ್ಳಲಿಕ್ಕೆ ಕಾರಣವಾದದ್ದು ನಾನು ಇತ್ತೀಚೆಗೆ ಓದುತ್ತಿರುವ ಬಿಚಿಯವರ ಆತ್ಮಕತೆ ‘ನನ್ನ ಭಯಾಗ್ರಫಿ’ಯಲ್ಲಿನ ಒಂದು ಘಟನೆ.

ಬೀಚಿಯವರ ಹೆಂಡತಿ ಸಂಪ್ರದಾಯಬದ್ಧವಾದ ಮಾಧ್ವ ಬ್ರಾಹ್ಮಣರ ಮನೆಯ ಹೆಣ್ಣು. ಬೀಚಿ ತುಂಬಾ ಚಿಕ್ಕ ವಯಸ್ಸಿನಲ್ಲೇ ದೇವರು, ದಿಂಡಿರು, ಜಾತಿಗಳ ಗೊಡವೆಯನ್ನು ತೊರೆದವರು.

ಬೀಚಿಯವರ ಮನೆಗೆ ವಾರನ್ನಕ್ಕಾಗಿ ಒಬ್ಬ ಹುಡುಗ ಬರುತ್ತಿರುತ್ತಾನೆ. ಒಮ್ಮೆ ಆತ ಮನೆಗೆ ಬಂದಾಗ ಜ್ವರವಿರುವುದನ್ನು ಕಂಡು ಆತನನ್ನು ತಮ್ಮ ಮನೆಯಲ್ಲಿ ಹದಿನೈದು ದಿನಗಳ ಕಾಲ ಇಟ್ಟುಕೊಂಡು ಆರೈಕೆ ಮಾಡುತ್ತಾರೆ. ಆತ ಬ್ರಾಹ್ಮಣರಲ್ಲೇ ಸ್ಮಾರ್ತ ಪಂಗಡದ ಹುಡುಗ ಎಂದು ತಿಳಿದಾಗ ಅದುವರೆಗೆ ಅತಿ ಮಮತಾಮಯಿಯಾಗಿದ್ದ ಬೀಚಿಯವರ ಹೆಂಡತಿ ಸಿಡಿಮಿಡಿಗುಟ್ಟುತ್ತಾರೆ.

ಆ ಹುಡುಗನ ತಂದೆ ತೀರಿಕೊಂಡಾಗ ಆತ ಬೀಚಿಯವರಿಗೆ ಪತ್ರವೊಂದನ್ನು ಬರೆದು ‘ಇನ್ನು ತನಗೆ ನೀವೇ ತಂದೆ’ ಎಂದು ಹೇಳಿದ್ದನ್ನು ಓದಿದಾಗ ಬೀಚಿ ಹಾಗೂ ಅವರ ಮಡದಿ ಇಬ್ಬರೂ ಕಣ್ಣೀರು ಸುರಿಸುತ್ತಾರೆ.

ಆದರೆ ಮರುಘಳಿಗೆಯೇ ಬೀಚಿಯವರ ಮಡದಿ, “ಆ ಹುಡುಗ ಕರ್ಮ ಮಾಡಿ ಸೀದ ನಮ್ಮ ಮನೆಗೆ ಬಂದರೆ ಹ್ಯಾಗ್ರೀ? ಉತ್ತರಕ್ರಿಯೆ ಮಾಡಿದವರು ವರ್ಷದ ತನಕ ಬರಬಾರದು” ಎನ್ನುತ್ತಾರೆ.

ಬೀಚಿ: “ಬಂದರೇನಾಗ್ತದೆ?”

“ಬಂದರೇನಾಗ್ತದೆ! ಮಕ್ಕಳೂ, ಮರಿ ಇರೋ ಮನಿ, ನಮಗೆ ಅರಿಷ್ಟ ಬಡೀತದೆ”

“ನಿನಗೆ ಬುದ್ಧಿ ಇದೆಯೇ? ನೀನು ಮನುಷ್ಯಳೇನೆ? ತಂದೆ ಸತ್ತ ಹುಡುಗ, ಮೇಲೆ ನಿರ್ಗತಿಕ, ನೀವೇ ತಂದೆ ಎಂದು ಬರೆದಾನೆ, ನಾನವನ್ನ ಹೋಗೂ ಅನ್ನಲಾ? ಅವನು ಎಲ್ಲಿಗೆ ಹೋಗಬೇಕು?”

“ಬ್ಯಾರೆ ಇನ್ಯಾರ ಮನಿಗಾದರೂ ಹೋಗಲಿ. ನಮಗೇನು ಬಂಧು ಅಲ್ಲ, ಬಳಗ ಅಲ್ಲ. ನಮಗೂ ಎರಡು ಮಕ್ಕಳಿವೆ. ಅವಕ್ಕೇನಾದರೂ ಕಂಣೇ ನೋಯಲಿ, ಮೂಗೇ ನೋಯಲಿ…”

ಈ ಘಟನೆಯನ್ನು ಅವಲೋಕಿಸಿದರೆ ಬೀಚಿಯವರ ಮಡದಿ, ತಾಯಿಯೊಬ್ಬಳಿಗೆ ಸಹಜವಾದ  ಮುತುವರ್ಜಿಯನ್ನು ತೋರಿದ್ದು ಕಾಣುತ್ತದೆ. ತನ್ನ ಮಕ್ಕಳ ನೆಮ್ಮದಿಯನ್ನು, ರಕ್ಷಣೆಯನ್ನು ಆಕೆ ಪ್ರಥಮ ಆದ್ಯತೆಯಾಗಿ ಕಂಡಿದ್ದು ಕಾಣುತ್ತದೆ. ಆದರೆ, ಸಾಮಾನ್ಯವಾಗಿ ಮಮತಾಮಯಿಯಾದ, ಪರರ ಕಷ್ಟಕ್ಕೆ ಕಣ್ಣೀರುಗರೆಯುವ, ತನ್ನ ಕೈಲಾದ ನೆರವನ್ನು ನೀಡಲು ಸಿದ್ಧಳಾದ ಹೆಣ್ಣು ತನ್ನ ಶ್ರದ್ಧೆಯಿಂದಾಗಿ ಹಠಮಾರಿಯಾಗುವುದು, ಕೆಲವು ಅತಿರೇಕದ ಘಟನೆಗಳಲ್ಲಿ ಸ್ಕೀಝೋಫ್ರೇನಿಕ್ ಆಗಿ ವರ್ತಿಸುವುದು – ಇವಕ್ಕೆಲ್ಲಾ ಧಾರ್ಮಿಕ ಶ್ರದ್ಧೆಯೇ ಕಾರಣ.

ಇದೇ ಘಟನೆಯ ಮುಂದುವರೆದ ಭಾಗದಲ್ಲಿ ಒಂದು ಸಣ್ಣ ತಿರುವು ಎದುರಾಗುತ್ತದೆ. ತಂದೆಯಿಲ್ಲದ ಮಗನನ್ನು ಮನೆಯವರೆಲ್ಲರ ವಿರೋಧದ ನಡುವೆಯೂ ತಮ್ಮ ಜೊತೆ ಇಟ್ಟುಕೊಂಡು ಬೀಚಿ ಸಾಕುತ್ತಾರೆ. ಒಮ್ಮೆ ಆ ಹುಡುಗ ಮನೆಗೆ ಹೋಗುವ ಹಿಂದಿನ ದಿನ ರೇಷನ್ ಅಂಗಡಿಯಿಂದ ತನ್ನ ಊರಿಗೆ ಒಯ್ಯುವುದಕ್ಕಾಗಿ ಕೆಲವು ಸಾಮಾನುಗಳನ್ನು ತಂದಿಟ್ಟುಕೊಂಡಿರುತ್ತಾನೆ, ಬೀಚಿಯವರ ಪೆನ್ನು, ಪುಸ್ತಕಗಳು, ಅವರ ಮ್ಮಕಳ ಶೂಗಳನ್ನೆಲ್ಲ ಕದ್ದು ತನ್ನ ಬ್ಯಾಗಿನಲ್ಲಿ ತುಂಬಿಸಿಕೊಂಡಿರುತ್ತಾನೆ. ಆ ಹುಡುಗನ ಕಳ್ಳತನ ಬೆಳಕಿಗೆ ಬಂದಾಗ ಬೀಚಿಯವರು ನಿರ್ದಾಕ್ಷಿಣ್ಯವಾಗಿ ಆತನನ್ನು ಮನೆಯಿಂದ ಹೊರಗೆ ಹಾಕುತ್ತಾರೆ. “ಮಗನಂತೆ ನಿನ್ನನ್ನು ನೋಡಿಕೊಂಡು ಈಗ ಮಗನನ್ನು ಮನೆಯಿಂದ ಹೊರಗೆ ಹಾಕಿದಂತೆಯೇ ಹಾಕುತ್ತಿರುವೆ” ಎಂದು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಾರೆ. ಆದರೆ ಆಗ ಅವರ ಮಡದಿ ಹುಡುಗನ ಅಪರಾಧವನ್ನು ಕ್ಷಮಿಸುವಂತೆ ಬೀಚಿಯವರಿಗೆ ವಿನಂತಿಸುತ್ತಾರೆ. ಸಣ್ಣ ಹುಡುಗ ಮಾಡಿದ ತಪ್ಪು, ಮರೆತು ಬಿಡಿ, ಅವನನ್ನು ಮನೆಯಿಂದ ಹೊರಗೆ ಹಾಕಿದರೆ ಆತ ಎಲ್ಲಿಗೆ ಹೋದಾನು ಎಂದು ಕನಿಕರಿಸುತ್ತಾರೆ! ಅವರ ತಾಯಿ ಹೃದಯ ಸಹಜವಾಗಿ ಆ ಹುಡುಗನಿಗಾಗಿ ಮಿಡಿಯುತ್ತದೆ. 

ನಿಜ, ಹಿಚಿನ್ಸ್ ಗಮನಿಸಿದ್ದು ಸರಿ ಎನ್ನಿಸುತ್ತದೆ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s