ಅನಂತಮೂರ್ತಿಯವರ ‘ಸಂಸ್ಕಾರ’

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಅನಂತಮೂರ್ತಿಯವರ ಹೆಸರಾಂತ ಕಾದಂಬರಿ ‘ಸಂಸ್ಕಾರ’ ಗಾತ್ರದಲ್ಲಿ samskara0001 ಚಿಕ್ಕದಾದರೂ ನಿರೂಪಣೆಯಲ್ಲಿನ ಹಿಡಿತ, ಕಥನದಲ್ಲಿನ ತಲ್ಲೀನತೆ ಹಾಗೂ ಅದು ರಚಿತವಾದ ಕಾಲಘಟ್ಟದ  ಸಮಾಜದಲ್ಲಿನ ಸ್ಥಾಪಿತ ಹಿತಾಸಕ್ತಿಗಳನ್ನು ಪ್ರಶ್ನಿಸುವಲ್ಲಿ ಅದು ತೋರಿದ ಎದೆಗಾರಿಕೆಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ದೊಡ್ಡ ಸ್ಥಾನವನ್ನು ಪಡೆದಿದೆ.

ಆ ಕಾದಂಬರಿಯನ್ನು ಓದುವಾಗ ಅಡಿಗೆರೆ ಹಾಕಿಟ್ಟ ಸಾಲುಗಳನ್ನು ಸಂಗ್ರಹಿಸಿ ಇಲ್ಲಿ ನೀಡಿರುವೆ. ಸಂದರ್ಭದದಿಂದ ಹೊರತೆಗೆದ ಈ ಸಾಲುಗಳು ಮೇಲ್ನೋಟಕ್ಕೆ ಅಸಂಬದ್ಧವಾಗಿ, ಅಪ್ರಸ್ತುತವಾಗಿ ಕಾಣಬಹುದಾದರೂ ಇವುಗಳಲ್ಲೆಲ್ಲೋ ನೀವು ಹುಡುಕುತ್ತಿದ್ದದ್ದು ಇಣುಕಿದಂತಾಗಿ ಮೂಲ ಕೃತಿಯನ್ನು ಓದುವ ಬಯಕೆಯಾಗಬಹುದೇನೋ ಎಂಬ ಆಶಯ ನನ್ನದು.

Ø ಯಾವತ್ತಿನಿಂದಲೂ ಈ ನಾರಣಪ್ಪ ತನಗೆ ಸಮಸ್ಯೆಯಾಗಿಯೇ ಉಳಿದ. ಅಗ್ರಹಾರದಲ್ಲಿ ಕೊನೆಗೆ ಗೆಲ್ಲುವುದು ಸನಾತನ ಧರ್ಮವನ್ನು ಹಿಡಿದ ತನ್ನ ತಪಸ್ಸೋ ಅಥವಾ ಅವನ ರಾಕ್ಷಸ ಸ್ವಭಾವವೋ ಎಂದು ಅವರ ಹಟ.

Ø ಅವನ ಸ್ವಭಾವ ಚಕ್ರವ್ಯೂಹದಂತೆಂದು, ಅದರೊಳಕ್ಕೆ ತನಗೆ ಹೋಗಲು ಪ್ರಾಯಶಃ ಎಡೆಯಿಲ್ಲವೆಂದು ಪರಿತಪಿಸುತ್ತಿದ್ದ ಆಚಾರ್ಯರಿಗೆ, ಅವನ ಗರ್ವದ ರಾವಣತ್ವದಲ್ಲಿ ತನ್ನನ್ನು ಕಂಡು ಅಂಜುವಷ್ಟಾದರೂ ಬಿರುಕು ಬಿಟ್ಟುದನ್ನು ನೋಡಿ, ಒಳಗಿನಿಂದ ಸಾತ್ವಿಕ ಶಕ್ತಿ ನುಗ್ಗಿದಂತಾಗಿ ಆಶೋದಯವಾಯಿತು.
ಈಗ ಮಾತು ವ್ಯರ್ಥವೆಂದು ಅವರಿಗೆ ಗೊತ್ತು.ತನ್ನೊಳಗಿನ ಸಾತ್ವಿಕ ಗಂಗಾಜಲ ಅವನೊಳಕ್ಕೆ ಮೌನವಾಗಿ ನುಗ್ಗದ ಹೊರ್ತು ಅವನು ಅರಳುವವನಲ್ಲವೆಂದು ಅವರಿಗೆ ಗೊತ್ತು. ಗರುಡನಂತೆರಗಿ ಅವನನ್ನು ಜರ್ಜರಗೊಳಿಸಿ ಒಳಗಿನ ಅತವನ್ನು ಪುಟಿಸಬೇಕೆಂದು ಕಾಮದಂತಹ ಆಸೆಯೆದ್ದಿತು.

Ø ‘ನೀವು ರಸಭರಿತವಾದ ಪುರಾಣ ಓದುತ್ತೀರಿ: ಆದರೆ ಗೊಡ್ಡಾಗಿ ಬಾಳೂಂತ ಬೋಧಿಸ್ತೀರಿ. ಆದರೆ ನನ್ನ ಮಾತಿಗೆ ಒಂದೇ ಅರ್ಥ: ಹೆಣ್ಣಿನ ಜೊತೆ ಮಲಗು ಎಂದರೆ ಹೆಣ್ಣಿನ ಜೊತೆ ಮಲಗು; ಮೀನು ತಿನ್ನು ಎಂದರೆ ಮೀನು ತಿನ್ನು. ನಿಮಗೆಲ್ಲ ಒಂದು ಬುದ್ಧಿವಾದದ ಮಾತು ಹೇಳಲಾ, ಆಚಾರ್ಯರೇ? ಮೊದಲು ನಿಮ್ಮಗಳ ಆ ರೋಗಗ್ರಸ್ತ ಹೆಂಡಿರನ್ನ ಹೊಳೆಗೆ ನೂಕಿ. ಪುರಾಣದ ಋಷಿಗಳಂತೆ ಒಳ್ಳೆ ಮೀನುಸಾರು ಮಾಡಬಲ್ಲ ಒಬ್ಬ ಮತ್ಸ್ಯಗಂಧೀನ್ನ ತಬ್ಬಿಕೊಂಡು ಮಲಗಿ. ಕಣ್ಣು ಬಿಟ್ಟು ನೋಡಿದಾಗ ನಿಮಗೆ ಪರಮಾತ್ಮನ ಅನುಭವ ಆಗದಿದ್ದರೆ ನನ್ನ ಹೆಸರು ನಾರಣಪ್ಪನಲ್ಲ’ ಎಂದು ತೇಗಿದ.

Ø ಆಂತರ್ಯದಲ್ಲಿ ಏನಿತ್ತೋ- ನಾನು ತಿಳಿಯೆ. ಎಷ್ಟೇ ಕುಣಿಯಲಿ, ತನ್ನ ಜೊತೆ ಪ್ರಾಣೇಶಾಚಾರ್ಯರೊಬ್ಬರನ್ನು ಅವನು ನೀಚ ಮಾತಲ್ಲಿ ಹಳಿದದ್ದಿಲ್ಲ. ದುಡುಕಿ ಅವತ್ತು ಮಾತಾಡಿದ್ದು ನಿಜ. ಆದರೆ ಒಳಗೊಳಗೇ ನಡುಗಿದ್ದ. ಈಗ ಜಗಳವಾಡಿ ಆಮೇಲೆ ಮರೆತುಬಿಡುವ, ಅಸೂಯೆಯೊಂದೇ ಗಟ್ಟಿಯಾದ ಭಾವವಾದ ತನ್ನಂತಹ ಹೆಂಗಸಿಗೆ ಈ ದ್ವೇಷದ ಆಳ ಯಾವ ಗರುಡಪಾತಾಳಿಗೂ ಸಿಗುವಂಥದಲ್ಲ.

Ø ವಿಚಿತ್ರವೆಂದರೆ, ತನ್ನನ್ನೀಗ ಕೊರೆಯುತ್ತಿರೋ ವಿಷಯವೆಂದರೆ, ಒಂದು ದಿನ ಸಹಿತ ಒಂದು ದೇವರಿಗೂ ಕೈಮುಗಿಯದ ನಾರಣಪ್ಪ ಜ್ವರ ನೆತ್ತಿಗೆ ಏರಿದ್ದೇ ಹೇಗೆ ಹಲುಬಲು ಪ್ರಾರಂಭಿಸಿದ! ಜ್ಞಾನ ತಪ್ಪುವತನಕ ‘ಅಮ್ಮ ಭಗವಂತ ರಾಮಚಂದ್ರ ನಾರಾಯಣ’ ಎನ್ನುತ್ತಿದ್ದ…. ಅವನ ಒಳಗೆ ಗುಪ್ತವಾಗಿ ಏನು ಇತ್ತೋ ಏನು ಕತೆಯೋ ನನ್ನ ಆಳಕ್ಕೆ ತಿಳಿಯಲಿಲ್ಲ.

Ø ಅದು ನಿಷ್ಕಲ್ಮಶ ಮರುಕವಲ್ಲ. ಅದರ ಹಿಂದೆ ಭಯಂಕರವಾದ ಹಟವೂ ಇತ್ತು. ನಾರಣಪ್ಪನ ಹಟಕ್ಕೇನೂ ಬಿಟ್ಟುಕೊಡುವಂತಹ ಹಟವಲ್ಲ ತನ್ನದು: ಅವನನ್ನು ದಾರಿಗೆ ತಂದೇ ತರುತ್ತೇನೆ- ನನ್ನ ಪುಣ್ಯಶಕ್ತಿಯಿಂದ, ತಪಃಶಕ್ತಿಯಿಂದ, ವಾರದಲ್ಲಿ ಮಾಡುವ ಎರಡು ದಿನಗಳ ಒಪ್ಪತ್ತುಗಳಿಂದ, ಅವನನ್ನು ವಿವೇಕಕ್ಕೆಳೆದೇ ಎಳೆಯುತ್ತೇನೆ ಎನ್ನುವ ನನ್ನ ಅದಮ್ಯ ಹಟ.

Ø ಈ ದೇಹ ಜರಾಜೀರ್ಣವಾದ ಬಳಿಕ ಕಾಮ ಇದನ್ನು ಬಿಟ್ಟುಹೋಗುತ್ತದೆ. ಆದರೆ ಮರುಕ ಬಿಡುವುದಿಲ್ಲ. ಆದರೆ ಮರುಕ ಬಿಡುವುದಿಲ್ಲ. ಆದುದರಿಂದ ಮರುಕ ಮಾನವನಿಗೆ ಕಾಮಕ್ಕಿಂತಲೂ ಪ್ರಜ್ವಲವಾದ ಬೇರು ಬಿಟ್ಟ ಪ್ರವೃತ್ತಿ.

Ø ಚಂದ್ರಿ ಮಾತನ್ನಾಡದೆ ಬೀದಿಗೆ ಬಂದು ನಿಂತಳು. ಏನು ಮಾಡಲಿ? ಒಂದೇ ಒಂದು ಯೋಚನೆ ಅವಳಿಗೆ ಸ್ಪಷ್ಟವಾಯಿತು: ಅಲ್ಲಿ ಅದು ಕೊಳೆಯುತ್ತಿದೆ.ನಾರುತ್ತಿದೆ. ಬಾತುಕೊಂಡಿದೆ. ಅದು ತಾನು ಒಲಿದ ನಾರಣಪ್ಪನಲ್ಲ. ಬ್ರಾಹ್ಮಣನೂ ಅಲ್ಲ. ಶೂದ್ರನೂ ಅಲ್ಲ. ಹೆಣ. ಕೊಳೆಯುವ ನಾರುವ ಹೆಣ.

Ø ಅವಚಿಕೊಂಡಿದ್ದ ತಾಯಿಯ ಹೊಟ್ಟೆಯಿಂದ ಟೊಂಗೆಯಿಂದ ಟೊಂಗೆಗೆ ಹಾರುವಾಗ ಕೈ ತಪ್ಪಿದ ಮಂಗನ ಮರಿಯಂತೆ- ತಾನು ಇಷ್ಟರವರೆಗೆ ಅವಚಿಕೊಂಡಿದ್ದ ಸಂಸ್ಕಾರ ಕರ್ಮಗಳಿಂದ ಕಳಚಿಬಿದ್ದೆ ಎನ್ನಿಸಿತು. ನಿರ್ಜೀವಿಯಾಗಿ, ದೈನ್ಯದ ಭಿಕ್ಷುಕಿಯಾಗಿ ಅಲ್ಲಿ ಹಾಸಿಗೆ ಹಿಡಿದು ಮಲಗಿದ ಹೆಂಡತಿಯನ್ನು ರಕ್ಷಿಸುವುದಕ್ಕೆಂದು ಧರ್ಮವನ್ನು ನಾನಾಗಿ ಅವಚಿಕೊಂಡೆನೋ ಅಥವಾ ಸಂಸ್ಕಾರದಿಂದ ಕರ್ಮದಿಂದ ಬಂದ ಧರ್ಮ ಕೈಹಿಡಿದು ನನ್ನನ್ನು ಈ ದಾರಿಯಲ್ಲಿ ನಡೆಸಿತೋ ಎಂದು ಅನುಮಾನವಾಯಿತು.

Ø ಸುಗಂಧವೆಲ್ಲ ದೇವರ ಮುಡಿಯನ್ನು ಸೇರುವ ಹೂವಿನದ್ದು, ಸ್ತ್ರೀಸೌಂದರ್ಯವೆಲ್ಲ ನಾರಾಯಣನ ಪಾದಸೇವೆಯನ್ನು ಮಾಡುವ ಲಕ್ಷ್ಮಿಯದ್ದು, ರತಿಯೆಲ್ಲ ವಸ್ತ್ರಾಪಹರಣದ ಕ್ರುಷ್ಣನದ್ದು ಎಂದುಕೊಂದಿದ್ದರು. ಅವೆಲ್ಲದರಲ್ಲಿ ಒಂದು ಪಾಲು ಈಗ ತನಗೂ ಬೇಕನ್ನಿಸುತ್ತಿದೆ.

Ø ಆಗ ತಾನು ಅವಳನ್ನು ಮುಟ್ಟಿದ್ದು ಪಶ್ಚಾತಾಪದಿಂದಲೋ?- ಅನುಮಾನವಾಯಿತು. ಪಶ್ಚಾತಾಪದ, ಮರುಕದ ರೂಪತಾಳಿ ನನ್ನನ್ನು ಇಷ್ಟು ದಿನ ನಡೆಸಿಕೊಂಡು ಬಂದಿದ್ದ ಧರ್ಮ, ಪಳಗಿಸಿಟ್ಟಿದ್ದ ಹುಲಿಯಂತಹ ಕಾಮ ಇದ್ದಿರಬೇಕು – ಅಷ್ಟೆ. ಚಂದ್ರಿಯ ಮೊಲೆ ತಾಗಿದಾಕ್ಷಣ ಚಂಗನೆ ಸ್ವಧರ್ಮಕ್ಕೆ ನೆಗೆದು ಹಲ್ಲು ತೋರಿಸಿಬಿಟ್ಟಿತು.

Ø ನನಗೆ ಹೆಣ್ಣಿನ ಸ್ಪರ್ಶವಾದಂತೆ ನಾರಣಪ್ಪನಿಗೆ ಕತ್ತಲಿನಲ್ಲಿ ನಿರಪೇಕ್ಷಿತವಾಗಿ ಪರಮಾತ್ಮ ಸ್ಪರ್ಶವಾಗಿದ್ದರೆ- ಬಿದ್ದ ಮಳೆಗೆ ದುವಾಗಿ, ಒತ್ತಿದ ಮಣ್ಣಿಗೆ ಪುಳಕಿತವಾಗಿ ಓಟೆ ಒಡೆದು ಸಸಿಯಾಗುತ್ತದೆ: ಹಟ ಮಾಡಿದರೆ ಗೊರಟವಾಗಿ ಒಣಗುತ್ತದೆ.

Ø ಹೀಗೆ ಮರದ ನೆರಳಿನಲ್ಲಿ ತಂಪಾಗಿ ಕೂತಿರುವುದೇ ಒಂದು ಪುರುಷಾರ್ಥವೆನಿಸಿತು. ಇದ್ದು ಬಿಡುವುದು. ಹುಲ್ಲಿಗೆ, ಹಸಿರಿಗೆ,ಹೂವಿಗೆ, ನೋವಿಗೆ, ಬಿಸಿಲಿಗೆ, ತಂಪಿಗೆ ಚುರುಕಾಗಿ ಇದ್ದುಬಿಡುವುದು. ಕಾಮ ಪುರುಷಾರ್ಥಗಳೆರಡನ್ನೂ ಸರಿಸಿಬಿಟ್ಟು – ಉದ್ಭಾಹುವಿನಂತೆ ನೆಗೆಯುತ್ತಿರದೆ – ಬರಿದೇ ಇದ್ದುಬಿಡುವುದು. ‘ಇಕೋ’ ಎಂದು ಅವ್ಯಕ್ತದಿಂದ ಬಂದದ್ದನ್ನ ಕ್ರುತಜ್ಞತೆಯಿಂದ ಸ್ವೀಕರಿಸುವುದು .

Ø ತನ್ನ ತಪೋಭೂಮಿಯಾಗಿದ್ದ ಒಂದು ಹಿಡಿಜೀವದ ಹೆಂಡತಿ ಧಗಧಗನೆ ಉರಿಯುವುದನ್ನು ನೋಡುತ್ತ, ಬಂದ ಕಣ್ಣೀರನ್ನು ತಡೆದುಕೊಳ್ಳಲು ಪ್ರಯತ್ನಿಸದೆ, ಆಯಾಸವೆಲ್ಲ ಪರಿಹಾರವಾಗುವಷ್ಟು ಅತ್ತುಬಿಟ್ಟರು.

Ø ನಾಮಸ್ಮರಣೆಯ ನೆಮ್ಮದಿಯನ್ನೂ ವರ್ಜಿಸಿ ನಿಲ್ಲು ಎಂದು ಎಚ್ಚರ ಹೇಳಿಕೊಂಡರು. ಮರಗಳ ಕೊಂಬೆಗಳು ಕೊಟ್ಟ ರೂಪಕ್ಕೆ ಬಿಸಿಲು ಪಡೆಯುವ ರಂಗವಲ್ಲಿಯಂತೆಯೇ ಸದ್ಯಕ್ಕೆ ಇರಲಿ ಮನಸ್ಸು, ನಿರಂಬಳ ತೆರೆದು ಬಿಡಲಿ. ಗಗನದಲ್ಲಿ ಬೆಳಕು, ಮರದ ಕೆಳಗೆ ನೆರಳು, ನೆಲದ ಮೇಲೆ ರಂಗವಲ್ಲಿ. ಭಾಗ್ಯವಿದ್ದು ತುಂತುರಿನ ಸ್ಪರ್ಶವಾದರೆ ಕಾಮನಬಿಲ್ಲು. ಜೀವ ಬಿಸಿಲಿನಂತಿದ್ದುಬಿಡಬೇಕು. ಬರಿಯ ಒಂದು ಎಚ್ಚರವಾಗಿ, ಬರಿಯ ಒಂದು ಅಚ್ಚರಿಯಾಗಿ. ಆಕಾಶದಲ್ಲಿ ರೆಕ್ಕೆಗಳನ್ನು ಹರಡಿ ಸ್ತಬ್ಧ, ತ್ರುಪ್ತ ತೇಲುವ ಗರುಡನಂತೆ. ಕಾಲು ನಡೆಯುತ್ತಿದೆ, ಕಣ್ಣು ನೋಡುತ್ತಿದೆ, ಕಿವಿ ಆಲಿಸುತ್ತಿದೆ – ಅಪೇಕ್ಷೆಯಿಲ್ಲದೆ ಇದ್ದುಬಿಡಬೇಕು. ಆಗ ಜೀವ ಸ್ವೀಕರಿಸುವ ಸ್ಥಿತಿಯನ್ನು ಮುಟ್ಟುತ್ತದೆ. ಇಲ್ಲದಿದ್ದರೆ ಅಪೇಕ್ಷೆಯಲ್ಲಿ ಗೊರಟವಾಗುತ್ತದೆ, ಮುರುಟುತ್ತದೆ, ಕಲಿತ ಮಗ್ಗಿಯಾಗಿಬಿಡುತ್ತದೆ. ಕನಕನ ಮನಸ್ಸು ಬರಿಯ ಒಂದು ಎಚ್ಚರ, ಅಚ್ಚರಿಯಾದ್ದರಿಂದ ಗುರುಗಳ ಎದುರು ಬಂದು ಹೇಳಿದ: ಗುಟ್ಟಾಗಿ ಎಲ್ಲೆಂದು ತಿನ್ನಲಿ ಈ ಬಾಳೆಹಣ್ಣನ್ನ? ದೇವರು ಎಲ್ಲ ಕಡೆಗೂ ಇದ್ದಾನಲ್ಲ! ದೇವರು ನನಗೆ ಬಾಯಿಗೆ ಕಲಿತ ಮಗ್ಗಿಯಾಗಿಬಿಟ್ಟ; ಕನಕನಿಗಿದ್ದಂತೆ ಅಚ್ಚರಿ, ಎಚ್ಚರವಾಗಲಿಲ್ಲ – ಆದ್ದರಿಂದ ಈ ಮುಂದೆ ದೇವರು ವರ್ಜ್ಯ ನನಗೆ.

Ø ಪ್ರಾಣೇಶಾಚಾರ್ಯರ ಗೆಳೆಯ- ಕಾಶಿಯಲ್ಲಿನ ವಿದ್ಯಾಭ್ಯಾಸ – ತರ್ಕ ಮೀಮಾಂಸಕ್ಕಿಂತ ಅವನಿಗೆ ಪ್ರಿಯವಾದದ್ದು ಸಂಗೀತ.

Ø ಯಾವುದರ ವಿರುದ್ಧ ಹೋರಾಡುತ್ತ ಬಂದೆನೋ ಅದೇ ನಾನಾಗಿ ಬಿಟ್ಟೆ.

Ø ಅಂದರೆ ನನ್ನ ನಿಶ್ಚಯದ ಪ್ರಶ್ನೆ ಬರಿ ನನ್ನ ನಿಶ್ಚಯದ ಪ್ರಶ್ನೆಯಲ್ಲ- ನನ್ನ ಅಗ್ರಹಾರವನ್ನೂ ಒಳಪಡಿಸಿಬಿಟ್ಟ ಪ್ರಶ್ನೆ, ಇದೇ ಸಂದಿಗ್ಧದ, ಆತಂಕದ, ಧರ್ಮ ಸಂಕಟದ ಮೂಲ. ನಾರಣಪ್ಪನ ಶವಸಂಸ್ಕಾರದ ಪ್ರಶ್ನೆ ಬಂದಾಗ ನಾನು ನನ್ನ ವೈಯಕ್ತಿಕ ಷ್ಟಿಯಿಂದ ಅದನ್ನು ಪರಿಹರಿಸುವ ಪ್ರಯತ್ನ ಮಾಡಲಿಲ್ಲ. ಧರ್ಮಶಾಸ್ತ್ರಕ್ಕೆ ದೇವರಿಗೆ ಗಂಟು ಬಿದ್ದೆ. ಧರ್ಮಶಾಸ್ತ್ರವನ್ನು ನಾವು ಸ್ರುಷ್ಟಿಸಿರಲೂ ಇದೇ ಕಾರಣ ತಾನೆ?  ನಮ್ಮ ವೈಯಕ್ತಿಕ ನಿಶ್ಚಯಗಳಿಗೂ ಸಮಾಜಕ್ಕೂ  ಇಷ್ಟೋಂದು ಗಾಢವಾದ ಸಂಬಂಧವಿರುವುದರಿಂದ ತಾನೇ?

Ø ನಿಶ್ಚಯವೆಂದರೆ ಪೂರ್ಣ ನಿಶ್ಚಯವಾಗಬೇಕು. ಕಟ್ಟಿಕೊಂಡರೆ ಪೂರ್ಣ ಕಟ್ಟಿಕೋ. ಬಿಟ್ಟರೆ ಪೂರ್ಣ ಬಿಡು. ದ್ವಂದ್ವಾತೀತನಾಗುವ ದಾರಿ ಅದು. ಭೀತಿಯಿಂದ ಪಾರಾಗುವ ದಾರಿ ಅದು. ಮಹಾಬಲ ಹೇಗೆ ನಿಶ್ಚಯಿಸಿಬಿಟ್ಟ…

Ø ನನ್ನ ನಿಶ್ಚಯ ಇದು ಎಂದು ನಾನು ನಿಶ್ಚಯ ಮಾಡಲಾರೆ, ನನ್ನ ನಿಶ್ಚಯದಲ್ಲಿ ಉಳಿದವರೂ ಭಾಗಿಯಾಗಿಬಿಡುತ್ತಾರೆ.

Ø ನನ್ನ ಬ್ರಾಹ್ಮಣ್ಯ ಸೃಷ್ಟಿಯಾದ ಕಣ್ಣುಗಳ ಎದುರು ಸತ್ಯವನ್ನು ಬಿಚ್ಚಿ ತೋರಿಸಿದಲ್ಲಿ ಅವರ ಬದುಕೂ ಇದರಿಂದ ಪರಿಭ್ರಮಿತವಾಗಬಹುದೆಂಬ ಸಂಕಟ; ಇನ್ನೊಂದು ಬಾಳನ್ನು ನನ್ನ ನಿಶ್ಚಯಕ್ಕೆ ಒಳಪಡಿಸುವ ಅಧಿಕಾರ ನನಗಿದೆಯೇ ಎಂಬ ಸಂಗಟ. ಅಧೈರ್ಯ, ದೇವರೇ ನಿಶ್ಚಯ ಮಾಡುವ ಜವಾಬ್ದಾರಿಯನ್ನು ತಪ್ಪಿಸಿಬಿಡು. ಕಾಡಿನಲ್ಲಿ ಕತ್ತಲಿನಲ್ಲಿ ಆವಾಕ್ಕಾಗಿ ಆಗಿಬಿಟ್ಟಂತೆ ಈ ನಿಶ್ಚಯವೂ ಆಗಿಬಿಡಲಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s