ಜಗದ ಮೋಹಕೆ ಮರುಗುತ್ತ…

ಕೆನ್ನಾಲಿಗೆಯ ಚಾಚಿ

ನಿನ್ನನೇ ನೀ ನುಂಗುತ್ತ

ಸುತ್ತಲೂ ಹಬ್ಬುತ್ತ

ಎತ್ತರಕ್ಕೆ ನೆಗೆಯುತ್ತ

ಕಾವೇರುತ್ತ, ಹಗುರಾಗುತ್ತ

ನಿನ್ನನೇ ನೀ ಕಳೆದುಕೊಳ್ಳುತ್ತ

ನೀ ಉರಿಯುವಾಗ

ನೋಡುವುದೊಂದು ಸುಖ

 

ನೀ ಉರಿಯುತ್ತ ಉರಿಯುತ್ತ

ಕುಣಿಯುತ್ತ, ಮೇಲ್ಮೇಲಕೆ ಜಿಗಿಯುತ್ತ

ದಹಿಸಿದ ಮಹಲು ಗುಡಿಸಲುಗಳೆಷ್ಟೋ

ಬೂದಿಗೈದ ದೇಹದುರುವಲುಗಳೆಷ್ಟೋ

ನಿನ್ನ ಹುಂಬ ಹುಮ್ಮಸ್ಸಿಗೆ

ಅದೆಂಥಾ ನಿಷ್ಪಕ್ಷಪಾತ,

ಅದೆಂಥಾ ನಿರ್ಭಾವುಕತೆ?

ಕಿಚ್ಚು ಹಚ್ಚಿದ ಮಯನ ಜೊತೆಗೆ

ಜಗಲಿಯಲಿ ಮಲಗಿದ್ದ ಮಕ್ಕಳನ್ನೂ

ಬಿಡದೆ ನುಂಗಿದೆ

ಸಾವಿರ ರೋಗದ ಕ್ರಿಮಿಗಳ ಜೊತೆಗೆ

ರೋಗಿಯನ್ನೂ ಅಳಿಸಿದೆ.

 

ನೀ ನಿನ್ನನ್ನೇ ದಹಿಸಿಕೊಂಡು

ಇಲ್ಲವಾಗುವ ತಂತ್ರಕ್ಕೆ ಅದೆಷ್ಟು

ಮಂದಿ ಮೋಹಿತರೋ ನೋಡು

ದೇವದೇವತೆಗಳಿಗೆಂದು ತೆಗೆದಿರಿಸಿದ

ಧನ ಧಾನ್ಯ ದ್ರವ್ಯಗಳು

ಘಮಘಮಿಸುವ ತುಪ್ಪವು ನಿನ್ನದೇ ಸುಪರ್ದಿಗೆ

ಪುರುಷೋತ್ತಮನ ಮಡದಿಯ

ಪರಿಶುದ್ಧತೆಗೆ ಬೇಕಾಯಿತು

ನಿನ್ನದೇ ಮೊಹರು

ಅದೇನು ನಂಬಿಕೆಯೋ ನಿನ್ನ ಮೇಲೆ

ಬದುಕೇ ಕೈಬಿಟ್ಟವರೆಲ್ಲ

ಬಯಸಿ ಅಪ್ಪುವರು ನಿನ್ನ ಮೈಯ.

 

‘ಇರಬಹುದು ನೂರ್ಕಾಲ ನೀವು

ಕಾಲನ ಕೈಲೂ ಕೂದಲು ಅಲುಗದ ಹಾಗೆ,

ದಂಡು ದಾಳಿಗೆ ಹಿಮ್ಮೆಟ್ಟದೆ ಅಚಲ

ಹಿಮಾಲಯದ ಹಾಗೆ,

ನನಗೆ ಅಮರತ್ವದ ಮೋಹವಿಲ್ಲ

ಭಕ್ತನ ಅಂಗೈಯ ಬಿರುಸಿನ ಮೇಲೆ,

ನಡುಗುವ ಮುದ್ದೆ ದೇಹದ ಮುಂದೆ,

ಹಸಿವು, ಬಯಕೆಗಳ ಕಾವಲಿಯ ಕೆಳಗೆ

ಒಂದಾಗಲು ಬಯಸಿದ ಜೀವದ ಒಳಗೆ

ಹತ್ತೇ ಕ್ಷಣ ಉರಿದುರಿದು,

ಬೆಳೆಯುತ್ತ, ಕುಣಿಯುತ್ತ

ಎತ್ತರೆತ್ತರಕ್ಕೆ ಉನ್ಮಾದದಲ್ಲಿ

ನೆಗೆಯುತ್ತ ನನ್ನ ನಾನೇ

ನುಂಗಿಹಾಕುವೆ ಜಗದ

ಮೋಹಕೆ ಮರುಗುತ್ತ…’

 

((photo: http://pictures.directnews.co.uk/liveimages/fire_901_18347392_0_0_7006845_300.jpg ))

Advertisements

2 thoughts on “ಜಗದ ಮೋಹಕೆ ಮರುಗುತ್ತ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s