ನಿಮಗಾಗಿ ಹಾಡಿ ದಣಿವಾಗಿದೆ!

ಇದೆಂಥಾ ವೈರುಧ್ಯ ಎಂದು ನೀವು ಭಾವಿಸಿಕೊಳ್ಳಬೇಕಿಲ್ಲ. ಈ ರೀತಿ ಆಲಾಪಿಸುವುದರ ನಿರರ್ಥಕತೆ, ಇಂತಹ ರೋಧನೆಯ ವೈರುಧ್ಯವನ್ನು ನೆನೆದೂ, ಅದರ ರೂಪುರೇಷೆಯ ಅರಿವಿಟ್ಟುಕೊಂಡೇ ಇದನ್ನು ಬರೆಯುತ್ತಿದ್ದೇನೆ. ಬರೆಯುತ್ತ, ಕುತೂಹಲದಿಂದ ನಾನೂ ಓದುತ್ತಿದ್ದೇನೆ.

ಒಂದು ಕಾಲದಲ್ಲಿ ದೇಹದ ಯಾವುದೋ ಭಾಗದಲ್ಲಿ ಯಾವದೋ ಹಾರ್ಮೋನು ಸ್ರಾವ ಅಧಿಕವಾಗಿ ಏನನ್ನಾದರೂ ಬರೆಯಬೇಕೆಂಬ ಉತ್ಸಾಹ ಹುಟ್ಟಿಕೊಂಡಿತು. ಹಾಗೆ ಹುರುಪು ಹುಟ್ಟಿದಾಗ ಬರೆಯುವ ಅಕ್ಷರಗಳನ್ನು  ಶಾಲೆಯ ನೋಟ್ ಪುಸ್ತಕದಲ್ಲಿ ಇಳಿಸಲು ಮನಸ್ಸಾಗಲಿಲ್ಲ. ದಿನನಿತ್ಯ ಯಾರದೋ ಒತ್ತಾಯಕ್ಕಾಗಿ, ಯಾವುದೋ ಸಾಧನೆಯ ಮೆಟ್ಟಿಲಿನ ಮೇಲೆ ಸುರಿಸಿದ ಬೆವರಾಗಿ ಬರೆಯುವ ಅಕ್ಷರಗಳ ಸಾಲಿನಲ್ಲಿ ಅವನ್ನು ನಿಲ್ಲಿಸಲಿಕ್ಕೆ ಮನಸ್ಸಾಗಲಿಲ್ಲ. ಹಳೆಯ ನೋಟ್ ಬುಕ್ಕಿನಿಂದ ಹರಿದ ಹಾಳೆಗಳನ್ನು ಒಟ್ಟು ಮಾಡಿ ಪಿನ್ ಮಾಡಲು ಸ್ಟೆಪ್ಲರ್ ಗತಿಯಿಲ್ಲದೆ ಹಾಳೆಯ ಒಂದು ಅಂಚಿನಲ್ಲಿ  ಅರ್ಧರ್ಧ ಇಂಚು ಸಮಾನಾಂತರವಾಗಿ ಹರಿದು, ಒಂದು ಚೂರನ್ನು ಹಿಂದಕ್ಕೂ ಮತ್ತೊಂದನ್ನು ಮುಂದಕ್ಕೂ ಒತ್ತಿ ಜಡೆ ಹಾಕಿದಂತೆ ಒಪ್ಪ ಮಾಡಿ ನೋಟ್ ಬುಕ್ ಸಿದ್ಧ ಪಡಿಸಿಕೊಂಡು ಕವಿತೆ ಗೀಚಿದ್ದಾಗಿತ್ತು.

`ನನ್ನ ಕವಿತೆಗಳ ಪುಸ್ತಕ’ ಎಂಬ ಹೆಡ್ಡಿಂಗು, ಅದರ ಕೆಳಗೆ ಅಮ್ಮನ ರಂಗೋಲಿಯಿಂದ ಕದ್ದ ಒಂದು ಸುಲಭದ ಡಿಸೈನ್ ಇದ್ದ ಚಿತ್ತಾರ, ನಾಲ್ಕೈದು ಬಣ್ಣದ ಪೆನ್ನುಗಳಲ್ಲಿ. ಆ ಕವಿತೆಯ ಪುಸ್ತಕ ನೆನೆಸಿಕೊಂಡರೆ , ಕವಿತೆ ಹುಡುಕಿ ಹುಡುಕಿ ತೆಗೆದ ಪ್ರಾಸ ಪದಗಳಲ್ಲಿ ಮೂಡಿದ್ದ ಅಕ್ಷರಗಳಲ್ಲಿ ಮಾತ್ರ ಇದ್ದಂತೆ ಈಗ ತೋರುವುದಿಲ್ಲ. ಹಾಗೆ ಬರೆದಿಟ್ಟ ಕವಿತೆಗಳ ಗುಣಮಟ್ಟದ ಪರೀಕ್ಷೆ ಬೇಕಿರಲಿಲ್ಲ, ಬೆಂಬಲ, ಬೆನ್ತಟ್ಟುವಿಕೆ, ಪ್ರೋತ್ಸಾಹ ಯಾವುದರ ಗರಜೂ ಇರಲಿಲ್ಲ. ಪುಣ್ಯಕ್ಕೆ ಆ ಪುಸ್ತಕ ಯಾರ ಕೈಗೂ ಸಿಕ್ಕದಿದ್ದರೆ ಸಾಕು ಎನ್ನುವಂತಿತ್ತು.

***

ಇತ್ತೀಚೆಗೆ ಯಾಕೋ  ಅಕ್ಷರಗಳು ತೀರಾ ಸದರವಾದಂತೆ ತೋರುತ್ತಿದೆ. ವಿಪರೀತವಾಗಿ ಬಳಸಿ, ಅವುಗಳ ಪವಾಡ ಶಕ್ತಿಯನ್ನು ನಂಬುವ ಮುಗ್ಧತೆಯೇ ಕಳೆದುಹೋದಂತೆ ಭಾಸವಾಗುತ್ತಿದೆ. ಬಳಕೆಗೆ ಸುಲಭವಾಗಿ ಸಿಕ್ಕುವ ವಿದ್ಯುತ್ ಅಲೆಗಳು ಸುಭದ್ರವಾಗಿ ಇನ್ಸುಲೇಟೆಡ್ ವೈರುಗಳೊಳಗೆ ಹರಿಯುವಂತೆ ಶಬ್ಧಗಳು, ವಾಕ್ಯಗಳು, ವಿಚಾರಗಳು ಅಡೆತಡೆಯಿಲ್ಲದೆ ಹಾಯುತ್ತಿವೆ. ಆದರೆ ಮುಟ್ಟಿದರೆ  ಜೀವದ ಆಳಕ್ಕೆ  ಇಳಿದು ಅಲುಗಾಡಿಸುವ, ಅಸ್ತಿತ್ವದ ಆಸರೆಗಳನ್ನೆಲ್ಲಾ ನಡುಗಿಸಿ ಹಾಕುವ, ಜುಮ್ಮೆನ್ನುವ ಶಾಕ್ ನೀಡುವ ಶಕ್ತಿಯೇ ಇಲ್ಲದಾಗಿದೆ- ಅನ್ನಿಸುತ್ತಿದೆ.

ಎಲ್ಲೋ ಕಾಡಿನ ಒಂಟಿ ಮರವೊಂದರ ಮೇಲೆ ಕುಳಿತು, ಎಲೆಯ ಮರೆಯಲ್ಲಿ ಸಣ್ಣಗೆ ಹಾಡಿಕೊಂಡಿದ್ದ ಹಕ್ಕಿಗೆ ಹತ್ತಾರು ಬಹುಪರಾಕುಗಳು ತಗುಲಿಕೊಂಡು, ನೂರೆಂಟು ಕೇಳುಗರು ಹುಟ್ಟಿಕೊಂಡು. ಗುನುಗಿದ್ದೆಲ್ಲಾ ಮಧುರ ಗೀತೆಯಾಗಿ, ಮಧುರ ಗೀತೆಯಾಗಿಸುವ ಹಂಬಲದಲ್ಲೇ ಗುನುಗಲು ಶುರುಮಾಡಿ, ಗುನುಗಿದ್ದೆಲ್ಲವನ್ನೂ ಮಧುರಗೀತೆಯಾಗಿಸುವ ಛಲದಲ್ಲಿ  ಗದ್ದಲವೆಬ್ಬಿಸಿ , ಈ ಗದ್ದಲದ ಮಧ್ಯದಲ್ಲಿ ಮತ್ತೆ ಒಂಟಿ ಮರದ, ಎಲೆಯ ಮರೆಯ ಸಾನಿಧ್ಯದ ನೆನಪು ಕಾಡತೊಡಗಿದೆ….

Advertisements

3 thoughts on “ನಿಮಗಾಗಿ ಹಾಡಿ ದಣಿವಾಗಿದೆ!

  1. ಬರೆಯೋದಕ್ಕೆ ನೆವಗಳು ಬೇಕು,
    ಬರೆಯದೆ ಇರುವುದಕ್ಕೂ…
    ಅಲ್ವಾ?
    ಏನಿಲ್ಲದಿದ್ರೂ, ನಮ್ಮ ಥರದವರೊಂದಷ್ಟು ಮಂದಿ ಇದ್ದಾರೆ ಅನ್ನೋದು ನಿಜ ನೋಡು!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s