ಆ ಇನ್ನೊಬ್ಬ ಹೆಂಗಸು

( ಶೆರ್ ವುಡ್ ಆಂಡರ್ಸನ್ ರ `The other woman’ ಕತೆಯ ಭಾವಾನುವಾದ)

“ನಾನು ನನ್ನ ಹೆಂಡತಿಯನ್ನು ಪ್ರೀತಿಸುತ್ತೇನೆ.” ಅನವಶ್ಯಕವಾಗಿ ಆತ ಹೇಳಿದ.  ನಾನೇನು  ಹೆಂಡತಿ ಕುರಿತ ಆತನ ನಿಷ್ಠೆಯನ್ನು ಪ್ರಶ್ನಿಸಿರಲಿಲ್ಲ. ನಾವು ಹತ್ತು ನಿಮಿಷಗಳ ಕಾಲ ಒಟ್ಟಿಗೆ ನಡೆಯುವಾಗ ಆತ ಮತ್ತೆ ಇದನ್ನೇ ಹೇಳಿದ. ನಾನು ಅವನತ್ತ ನೋಡಿದೆ. ಆತ ಮಾತನಾಡಲು ಶುರುಮಾಡಿದ. ಆತ ಹೇಳಿದ ತನ್ನ ಕತೆಯನ್ನೇ ನಾನೀಗ ಬರೆಯುತ್ತಿರುವುದು.

ಈ ಘಟನೆ ಜರುಗಿದ್ದು ಆತ ತನ್ನ ಬದುಕಿನ ಅತ್ಯಂತ ಸಂಭ್ರಮದ ದಿನಗಳನ್ನು ಕಳೆಯುತ್ತಿದ್ದಾಗ.ಆ ಶುಕ್ರವಾರದ ಮಧ್ಯಾನ ಆತ ಮದುವೆಯಾಗಲಿದ್ದ. ಸರಿಯಾಗಿ ಒಂದು ವಾರದ ಹಿಂದೆ, ಇನ್ನೊಂದು ಶುಕ್ರವಾರದಂದು ಆತನಿಗೊಂದು ಟೆಲಿಗ್ರಾಂ ಬಂದಿತ್ತು. ಆತ ಸರಕಾರದ ಹುದ್ದೆಯೊಂದಕ್ಕೆ  ನೇಮಕಗೊಂಡಿದ್ದ. ಇದಲ್ಲದೆ ಆತ ಹೆಮ್ಮೆ ಪಡುವಂತಹ ಮತ್ತೊಂದು ಸಂಗತಿ ನಡೆದಿತ್ತು. ಗುಟ್ಟಾಗಿ ಆತ ಪದ್ಯಗಳನ್ನು ಬರೆಯುತ್ತಿದ್ದ. ಕಳೆದ ವರ್ಷ ಹಲವು  ಪ್ರಕಟವಾಗಿದ್ದವು. ವರ್ಷದ ಅತ್ಯುತ್ತಮ ಕವಿತೆಗೆ ಸಂಸ್ಥೆಯೊಂದು ಕೊಡುತ್ತಿದ್ದ ಬಹುಮಾನ ಆತನಿಗೆ ಬಂದಿತ್ತು. ಈ ಸಾಧನೆಯನ್ನು ಹೊಗಳಿ ನರಗದ ಪತ್ರಿಕೆಗಳಲ್ಲಿ ವರದಿಯೂ ಪ್ರಕಟವಾಗಿತ್ತು. ಒಂದು ಪತ್ರಿಕೆ ಆತನ ಫೊಟೋ ಸಹ ಮುದ್ರಿಸಿತ್ತು.

ನಿರೀಕ್ಷಿಸಿದಂತೆಯೇ ಆ ವಾರವಿಡೀ ಆತ ಸಡಗರದ ಕಂಪನದಲ್ಲೇ ಕಳೆದ. ಪ್ರತಿ ಸಂಜೆ ಆತ ತನ್ನ ಭಾವಿ ಹೆಂಡತಿ – ನ್ಯಾಯಾಧೀಶರ ಮಗಳು- ಯನ್ನು ನೋಡಲು ಹೋಗುತ್ತಿದ್ದ. ಆ ಸಮಯದಲ್ಲಿ ಅಲ್ಲಿ ನೆರೆದಿರುತ್ತಿದ್ದ ಜನರೆಲ್ಲ ಆತನನ್ನು ಮುತ್ತಿಕೊಂಡು  ಸರಕಾರಿ ಹುದ್ದೆ ಸಿಕ್ಕಿದ್ದಕ್ಕಾಗಿ ಹಾಗೂ ಮನ್ನಣೆ ಪಡೆದ ಪದ್ಯಗಳಿಗಾಗಿ ಅಭಿನಂದಿಸುತ್ತಿದ್ದರು. ಈ ಹೊಗಳಿಕೆಗಳ ಸುರಿಮಳೆಯಲ್ಲಿ ಆತನ ತಲೆ ಸುತ್ತಿದ ಅನುಭವಾಗುತ್ತಿತ್ತು ಹಾಸಿಗೆಗೆ ಬಿದ್ದರೂ ನಿದ್ದೆ ಹತ್ತುತ್ತಿರಲಿಲ್ಲ. ಬುಧವಾರ ಸಂಜೆ ಆತ ನಾಟಕ ಮಂದಿರವೊಂದಕ್ಕೆ ಹೋಗಿದ್ದ. ಅಲ್ಲಿ ಸೇರಿದ್ದ ಜನರೆಲ್ಲ ಆತನನ್ನು ಗುರುತು ಹಿಡಿದು ಮುಗುಳ್ನಕ್ಕರು. ಮೊದಲ ಅಂಕ ಮುಗಿದ ನಂತರ ಆರು ಮಂದಿ ಗಂಡಸರು, ಇಬ್ಬರು ಹೆಂಗಸರು ತಮ್ಮ ಸೀಟುಗಳಿಂದ ಎದ್ದು ಬಂದು ಆತನ ಸುತ್ತ ಕಲೆತರು. ಹಿಂದು ಮುಂದಿನ ಸಾಲುಗಳ ಅಪರಿಚಿತರು ಕೂಡ ಕತ್ತೆತ್ತಿ ನನ್ನನ್ನು ನೋಡುತ್ತಿದ್ದರು. ಹಿಂದೆಂದೂ ಇಷ್ಟು ಮಂದಿಯ ದೃಷ್ಟಿಯನ್ನು ಎದುರಿಸಿರದ ಆತನಿಗೆ ಜ್ವರವೇರಿದ ಅನುಭವವಾಯ್ತು.

ಮಾತನಾಡುವಾಗ ಆತ ನನಗೆ ವಿವರಿಸಿದ ಪ್ರಕಾರ, ಅದು ಆತನಿಗೆ ಸಂಪೂರ್ಣ ಅಸಹಜವಾದ ಅನುಭವವಾಗಿತ್ತು. ಆ ಸಮಯದಲ್ಲಿ ಆತನಿಗೆ ಗಾಳಿಯಲ್ಲಿ ತೇಲಿದಂತಾಗಿತ್ತು. ಇಷ್ಟೆಲ್ಲಾ ಮಂದಿಯನ್ನು  ಕಂಡು, ಹೊಗಳಿಕೆಯ ಮಾತುಗಳನ್ನು ಕೇಳಿ ಆತನಿಗೆ ತಲೆ ಗಿರ್ರನೆ ತಿರುಗಿದಂತೆ ಭಾಸವಾಯ್ತು. ಕಣ್ಮುಚ್ಚಿದರೆ ಜನರ ಗುಂಪು ಕೋಣೆಯೊಳಗೆ ನುಗ್ಗಿದಂತೆ, ನಗರದ ಜನರೆಲ್ಲರ ದೃಷ್ಟಿ ತನ್ನ ಮೇಲೇ ನಟ್ಟಂತೆ, ತಾನೊಂದು ಗಾಡಿಯನ್ನೇರಿ ರಸ್ತೆಯ ಮೇಲೆ ಹೋಗುವಾಗ ಜನರು ಕಿಟಕಿಗಳನ್ನು ತೆರೆದು ಇಣುಕಿ ನನ್ನ ಕಡೆಗೆ ಬೆರಳು ಮಾಡುತ್ತ “ಅದೋ, ಅವನೇ.. ಅವನೇ..” ಅಂತ ಕೂಗುತ್ತಿದ್ದಂತೆ, ರಸ್ತೆಯಲ್ಲಿ ನೆರೆದಿದ್ದ ಜನರೆಲ್ಲರ ಕಣ್ಣುಗಳು “ಬಂದೆಯಾ? ಎಷ್ಟು ದೊಡ್ಡ ಸಾಧನೆ ಮಾಡಿದ್ದೀಯಾ!” ಎಂದು ಹೇಳುವಂತೆ ಕನಸು ಕಂಡ.

ಜನರ ಸಂಭ್ರಮಕ್ಕೆ ಆತ ಸರಕಾರಿ ಹುದ್ದೆಗೆ ನೇಮಕವಾಗಿದ್ದು ಕಾರಣವೋ ಅಥವಾ ಆತನ ಪದ್ಯಗಳು ಮನ್ನಣೆ ಪಡೆದದ್ದೋ ಎಂಬುದನ್ನು ಆತ ಸ್ಪಷ್ಟಪಡಿಸಲಿಲ್ಲ. ಆತ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನಗರದ ಹೊರವಲಯದಲ್ಲಿನ ಎತ್ತರದ ದಿನ್ನೆಯ ಮೇಲಿತ್ತು. ಕಿಟಕಿಯಿಂದ ನಿರುಕಿಸಿದರೆ  ಮರಗಳ ನೆತ್ತಿಯನ್ನು, ಕಾರ್ಖಾನೆಗಳ ಮೇಲ್ಛಾವಣಿಗಳನ್ನೂ  ನದಿಯನ್ನೂ ಕಾಣಬಹುದಾಗಿತ್ತು. ತಲೆಯನ್ನು ಹೊಕ್ಕಿದ್ದ ಭ್ರಾಂತಿನಿಂದ ನಿದ್ದೆ ದೂರವಾಗಿತ್ತು. ಹಾಸಿಗೆಯಿಂದೆದ್ದು ಆತ ಆಲೋಚನೆ ಮಾಡಲು ತೊಡಗಿದ. ಇಂತಹ ಸಂದರ್ಭಗಳಲ್ಲಿ ಆತ ಸಾಮಾನ್ಯವಾಗಿ ತನ್ನ ಆಲೋಚನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾನೆ. ಆತ ಕಿಟಕಿಯ ಬಳಿ ಕೂತು ಎಚ್ಚರದಿಂದ ಆಲೋಚಿಸಲು ತೊಡಗಿದಾಗ ತೀರಾ ಅನಿರೀಕ್ಷಿತವಾದ ಹಾಗೂ ಅವಮಾನಿಸುವ ವಿದ್ಯಮಾನ ಜರುಗಿತು. ನಿಚ್ಚಳವಾದ ರಾತ್ರಿಯ ಆಗಸದಲ್ಲಿ ಚಂದ್ರ ಮೂಡಿ ನಿಂತಿದ್ದ. ಆತ ಮಡದಿಯಾಗಲಿರುವ ಹುಡುಗಿಯ ಬಗ್ಗೆ ಕನಸು ಕಾಣಲು, ಉತ್ತಮವಾದ ಪದ್ಯವೊಂದರ ರೂಪುರೇಷೆ ಧ್ಯಾನಿಸಲು, ತನ್ನ ವೃತ್ತಿ ಜೀವನದ ದಿಕ್ಕು ಬದಲಿಸುವ ಹಂಚಿಕೆ ಹಾಕಲು ಪ್ರಯತ್ನಿಸಿದ. ಆದರೆ  ಆತ ಚಕಿತಗೊಳ್ಳುವಂತೆ ಆತನ ಮನಸ್ಸು ಇದ್ಯಾವುದಕ್ಕೂ ಆಸ್ಪದಕೊಡಲಿಲ್ಲ.

ಆತ ವಾಸಿಸುತ್ತಿದ್ದ ರಸ್ತೆಯ ತಿರುವಿನಲ್ಲಿ ಒಂದು ಸಿಗರೇಟ್, ದಿನಪತ್ರಿಕೆ ಮಾರುವ ಅಂಗಡಿಯಿತ್ತು. ನಲವತ್ತರ ವಯಸ್ಸಿನ ದಢೂತಿ ಗಂಡಸು ಹಾಗೂ ಆತನ  ಚುರುಕು ಬೂದಿ ಕಂಗಳ ಹೆಂಡತಿ ಅಂಗಡಿಯನ್ನು ನಡೆಸುತ್ತಿದ್ದರು. ಬೆಳಿಗ್ಗೆ ನಗರಕ್ಕೆ ಹೊರಡುವಾಗ ಆತ ದಿನಪತ್ರಿಕೆ ಕೊಳ್ಳುತ್ತಿದ್ದ. ಬಹುತೇಕ ಅಂಗಡಿಯಲ್ಲಿ ಗಂಡನೇ ಇರುತ್ತಿದ್ದ. ಆತ ಹೊರಗೆ ಹೋದಾಗ ಆ ಹೆಂಗಸು ಅಂಗಡಿ ನೋಡಿಕೊಳ್ಳುತ್ತಿರುತ್ತಿದ್ದಳು. ಆಕೆ  ಅಂಥ ವಿಶೇಷವಾದ ಹೆಣ್ಣೇನಲ್ಲ, ಸಾಧಾರಣ ರೂಪಿನವಳು ಎಂದು ಆತ ನನ್ನೊಂದಿಗೆ ಮಾತನಾಡುವಾಗ  ಇಪ್ಪತ್ತು ಬಾರಿಯಾದರೂ ಹೇಳಿರಬೇಕು. ಆದರೆ  ಹೇಳಲಾಗದ ಯಾವುದೋ ಕಾರಣಕ್ಕೆ ಆತ ಅವಳ ಇದಿರು ತತ್ತರಿಸಿಹೋಗುತ್ತಿದ್ದ. ಆ ವಾರವಿಡೀ ಕವಿದಿದ್ದ ಮಂಕಿನಲ್ಲಿ ಆತನ ಮನಸ್ಸಿನಲ್ಲಿ ಸ್ಫುಟವಾಗಿ ನಿಲ್ಲಬಲ್ಲ ವ್ಯಕ್ತಿ ಅವಳೊಬ್ಬಳೇ ಆಗಿದ್ದಳು. ಆತ ಒಳ್ಳೆಯ ಯೋಚನೆ ಮಾಡಬೇಕು ಎಂದಾಗಲೆಲ್ಲಾ ಅವಳೇ ನೆನಪಾಗುತ್ತಿದ್ದಳು. ಏನಾಗುತ್ತಿದೆಯೆಂದು ಗ್ರಹಿಸುವಷ್ಟರಲ್ಲಿ ತಾನು ಆಕೆಯನ್ನು ಪ್ರೀತಿಸುತ್ತಿರಬಹುದು ಎನ್ನುವ ಸಂಶಯ ಆತನಿಗೆ ಬಂತು.

ನನ್ನೊಂದಿಗೆ ಮಾತನಾಡುವಾಗ  ಆತ ಹೇಳಿದ, “ನನ್ನನ್ನು ನಾನೇ ಅರ್ಥ ಮಾಡಿಕೊಳ್ಳಲಾಗಲಿಲ್ಲ. ಆ ರಾತ್ರಿ ಇಡೀ ನಗರ ಶಾಂತವಾಗಿತ್ತು, ನಾನು ಆ ಹೊತ್ತಿಗಾಗಲೇ ನಿದ್ದೆ ಮಾಡುತ್ತಿರಬೇಕಿತ್ತು.ನಾನು ಅವಳ  ಯೋಚನೆಯಲ್ಲೇ ಇದ್ದೆ. ಎರಡು ಮೂರು ರಾತ್ರಿ  ಹೀಗೇ ಇರುವಾಗ ಆಕೆಯ ಕುರಿತ ಯೋಚನೆ ನನ್ನ ಹಗಲಿನ ಕೆಲಸಗಳ ನಡುವೆಯೂ ನುಸುಳಿತು. ನಾನು ವಿಪರೀತ ಗಲಿಬಿಲಿಗೊಂಡಿದ್ದೆ. ಈಗ ನನ್ನ ಹೆಂಡತಿಯಾಗಿರುವ ಹೆಂಗಸನ್ನು ಕಾಣಲು ಹೋದಾಗ  ನನ್ನ ಈ ಅಲೆಮಾರಿ ಆಲೋಚನೆಗಳಿಂದ ಆಕೆಯ ಮೇಲಿನ ಪ್ರೀತಿಯಲ್ಲಿ ಬದಲಾವಣೆಯಾಗಿಲ್ಲದ್ದನ್ನು ಗುರುತಿಸಿದೆ. ನಾನು ನನ್ನ ಬಾಳನ್ನು ಕಳೆಯಬೇಕೆಂದುಕೊಂಡದ್ದು, ಆಕೆಯ ಒಡನಾಟದಲ್ಲಿ ನನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕೆಂದಿದ್ದು ಒಬ್ಬಳೇ ಹೆಣ್ಣಿನೊಂದಿಗೆ, ಆದರೆ ಆ ಕ್ಷಣದಲ್ಲಿ ನನಗೆ ಆ ಮತ್ತೊಬ್ಬ ಹೆಂಗಸು ನನ್ನ ತೋಳುಗಳಲ್ಲಿರಬೇಕು ಎನ್ನಿಸಿತ್ತು. ಆಕೆ ನನ್ನೆದೆಯೊಳಕ್ಕೆ ಸೇರಿ ಹೋಗಿದ್ದಳು. ನನ್ನ ಸುತ್ತ ಜನರು ನಾನೆಷ್ಟು ದೊಡ್ಡ ಮನುಷ್ಯ, ಏನೇನೆಲ್ಲಾ ಮಾಡಿದ್ದೇನೆ ಎನ್ನುತ್ತಿದ್ದರು. ನಾನು ನೋಡಿದರೆ ಹೀಗೆ! ಅಂದು ರಾತ್ರಿಯೂ ನಾಟಕಕ್ಕೆ ಹೋದೆ, ನಿದ್ದೆ ಸುಳಿಯುವುದಿಲ್ಲ ಎಂದು ಗೊತ್ತಿತ್ತು. ಮನೆಗೆ ಹಿಂದಿರುಗುವಾಗ ನಡೆದೇ ಬಂದೆ.  ಕಾಲುದಾರಿಯಲ್ಲಿ ನಡೆದು ಬಂದು ತಂಬಾಕು ಅಂಗಡಿಯ ಎದುರು ನಿಂತೆ. ಅದು ಎರಡು ಮಹಡಿಗಳ ಕಟ್ಟಡ. ಈ ಸಮಯದಲ್ಲಿ ಆಕೆ ತನ್ನ ಗಂಡನೊಂದಿಗೆ ಮೇಲಿನ ಮಹಡಿಯಲ್ಲಿ ಮಲಗಿರುತ್ತಾಳೆ ಎಂಬುದು ಗೊತ್ತು.ಅದನ್ನೆ ನೆನೆದು ನನ್ನ ರಕ್ತ ಕುದಿಯಿತು.

“ಕೋಪದಿಂದ ಕಂಪಿಸುತ್ತ ನನ್ನ ಕೊಠಡಿಯನ್ನು ತಲುಪಿದೆ. ಕೆಲವು ಪದ್ಯಗಳು, ಕೆಲವು ಗದ್ಯದ ಪುಸ್ತಕಗಳು ಸದಾ ನನ್ನನ್ನು ಆಳಕ್ಕೆ ಪ್ರಭಾವಿಸಬಲ್ಲವಾಗಿದ್ದವು. ಅಂಥವನ್ನು ತಂದು ಹಾಸಿಗೆಯ ಬದಿಯ ಟೇಬಲ್ ಮೇಲಿಟ್ಟುಕೊಂಡೆ. ಆ ಪುಸ್ತಕದ ಮಾತುಗಳು ಸತ್ತವರ ಮಾತುಗಳಂತಿದ್ದವು. ಮುದ್ರಿತವಾದ ಅಕ್ಷರಗಳು ನನ್ನ ಪ್ರಜ್ಞೆಯನ್ನು ಪ್ರವೇಶಿಸುವಲ್ಲಿ ಸೋಲುತ್ತಿದ್ದವು. ನಾನು ಪ್ರೀತಿಸಿದ ಹುಡುಗಿಯನ್ನು ನೆನೆಯಲು ಪ್ರಯತ್ನಿಸಿದೆ, ಆದರೆ ಆಕೆಯ ಆಕಾರವೂ ದೂರದಲ್ಲೆಲ್ಲೋ ಮಸುಕಾಗಿ ಕಂಡಂತಾಯಿತು. ಹಾಸಿಗೆಯ ಮೇಲೆ ಬಿದ್ದು  ಹೊರಳಾಡಿದೆ. ಅದೊಂದು ಅತಿ ಸಂಕಟದ ಅನುಭವ.

“ಗುರುವಾರ ಬೆಳಗ್ಗೆ ನಾನು ಅಂಗಡಿಗೆ ಹೋದೆ. ಆಕೆ ಒಬ್ಬಳೇ ಇದ್ದಳು. ನನ್ನ ತಳಮಳ ಆಕೆಗೆ ತಿಳಿದಂತೆ ಭಾಸವಾಯ್ತು. ಬಹುಶಃ ಅವಳೂ ನನ್ನ ಬಗ್ಗೆ  ಹೀಗೇ ಯೋಚಿಸುತ್ತ ಇರಬಹುದು ಅಂದುಕೊಂಡೆ. ಹಿಂಜರಿಕೆಯಿಂದ ಕೂಡಿದ ನಗುವೊಂದು ಆಕೆಯ ತುಟಿಗಳ ಮೇಲೆ ಸುಳಿಯಿತು.ಆಕೆ ಅಗ್ಗದ ಬಟ್ಟೆಯನ್ನು ತೊಟ್ಟಿದ್ದಳು, ಭುಜದ ಮೇಲೆ ಒಂದು ಕಡೆ ಅದು ಹರಿದಿತ್ತು. ಆಕೆ ನನಗಿಂತ ಹತ್ತುವರ್ಷಕ್ಕೆ ದೊಡ್ಡವಳಂತೆ ಕಂಡಳು. ಗಾಜಿನ ಗಲ್ಲಾದ ಹಿಂದೆ ನಿಂತು ನಾಣ್ಯಗಳನ್ನು ಇಡುವಾಗ ನನ್ನ ಕೈಗಳು ನಡುಗುತ್ತಿದ್ದವು. ನಾಣ್ಯಗಳು ಸದ್ದು ಮಾಡುತ್ತ ಬಿದ್ದವು. ನಾನು ಮಾತನಾಡಿದಾಗ ಧ್ವನಿ ಗಂಟಲಲ್ಲೇ ಹೂತು ಹೋದಂತಾಗಿತ್ತು. ಪಿಸುಮಾತಿನಂತೆ ಕೇಳಿದ ಧ್ವನಿಯಲ್ಲಿ ನಾನು ಆಕೆಗೆ ಹೇಳಿದ, `ನನಗೆ ನೀನು ಬೇಕು. ನಾನು ನಿನ್ನ ತುಂಬಾ ಇಷ್ಟ ಪಡ್ತೀನಿ, ನಿನ್ನ ಗಂಡನಿಂದ ಓಡಿಬರುವೆಯಾ? ಇವತ್ತು ರಾತ್ರಿ ಏಳಕ್ಕೆ ನನ್ನ  ಅಪಾರ್ಟ್ ಮೆಂಟಿಗೆ ಬಾ.’

“ಆ ರಾತ್ರಿ ಆಕೆ ನನ್ನ ಅಪಾರ್ಟ್ ಮೆಂಟಿಗೆ ಬಂದಳು. ಬೆಳಿಗ್ಗೆ ಆಕೆ ಏನನ್ನೂ ಹೇಳಲಿಲ್ಲ. ಅರೆಘಳಿಗೆ ನಾವು ಒಬ್ಬರನ್ನೊಬ್ಬರು ನೋಡುತ್ತ ನಿಂತಿದ್ದೆವು. ನಾನು ಆಕೆಯನ್ನು ಹೊರತು ಉಳಿದ ಜಗತ್ತನ್ನು ಮರೆತುಬಿಟ್ಟಿದ್ದೆ. ಆಕೆ ತಲೆಯಾಡಿಸಿದಳು, ನಾನು ಹೊರಟೆ. ಈಗ ಯೋಚಿಸಿದರೆ ಆಕೆ ಒಂದೂ ಮಾತನಾಡಿದ ನೆನಪಾಗುತ್ತಿಲ್ಲ. ಆಕೆ ನನ್ನ ಅಪಾರ್ಟ್ ಮೆಂಟಿಗೆ ಬಂದಾಗ ಗಂಟೆ ಏಳಾಗಿತ್ತು. ಹೊರಗೆ ಕತ್ತಲಿತ್ತು, ಅದು ಅಕ್ಟೋಬರ್ ತಿಂಗಳು ನೋಡಿ. ನಾನು ಲೈಟು ಹೊತ್ತಿಸಿರಲಿಲ್ಲ, ಆಳನ್ನು ಹೊರಗೆ ಕಳಿಸಿದ್ದೆ.

“ಆ ಹಗಲಿಡೀ ನಾನು ನೆಮ್ಮದಿಯಿಂದಿರಲಿಲ್ಲ. ಅಂದು ಕಾಣಲು ಬಂದವರೊಂದಿಗೆ ನಾನು ಗಲಿಬಿಲಿಯಲ್ಲಿ ಮಾತನಾಡಿದೆ. ಅವರು ಈ ನನ್ನ ಅವಸ್ಥೆಗೆ ಹತ್ತಿರವಾಗುತ್ತಿರುವ ಮದುವೆ ದಿನಾಂಕ ಕಾರಣವೆಂದು ಭಾವಿಸಿ ನಗುತ್ತಾ ಹೋದರು.

“ಅಂದು ಬೆಳಿಗ್ಗೆ, ನನ್ನ ಮದುವೆಯ ಮುನ್ನಾ ದಿನ, ನನ್ನ ಭಾವಿ ಮಡದಿ ಸುಂದರವಾದ ಪತ್ರ ಬರೆದಿದ್ದಳು. ಹಿಂದಿನ ರಾತ್ರಿ ಆಕೆಯೂ ನಿದ್ದೆಬಾರದೆ ಆಕೆ  ಪತ್ರ ಬರೆಯಲು ಹಾಸಿಗೆಯಿಂದೆದ್ದಳು. ಆಕೆ ಹೇಳಿದ್ದೆಲ್ಲಾ ಪ್ರಖರವಾಗಿ, ನೈಜವಾಗಿ ಎದುರಿಗಿದ್ದಂತೆ ಕಾಣಿಸಿತು. ಆದರೆ ಆಕೆ ಮಾತ್ರ  ಹಾರುತ್ತಾ ದೂರ ಹೋಗುವ ಹಕ್ಕಿಯ ಹಾಗೆ  ಕ್ಷೀಣಿಸುತ್ತಿದ್ದಳು. ನಾನೇನು ಹೇಳ್ತಿದೀನಿ ಅಂತ ಅರ್ಥ ಆಯ್ತಾ?

“ಪತ್ರದ ವಿಷಯಕ್ಕೆ ಬರೋಣ. ಅರಳುತ್ತಿರುವ ಹೆಂಗಸಾದ ಆಕೆ ತನ್ನ ಹೃದಯವನ್ನೇ ಆ ಪತ್ರದಲ್ಲಿ ಸುರಿದಿದ್ದಳು. ಆಕೆಗೆ ಬದುಕಿನ ಬಗ್ಗೆ ಹೆಚ್ಚು ಗೊತ್ತಿಲ್ಲ. ಅವಳು ಮುಗ್ಧೆ. ತಳಮಳದಲ್ಲಿ ಹಾಸಿಗೆಯಲ್ಲಿ ಹೊರಳಾಡುವಾಗ ಆಕೆಗೆ ತನ್ನ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯಾಗಲಿದೆ ಎಂದನ್ನಿಸಿದೆ. ಇದರಿಂದ ಆಕೆಗೆ ಸಂತೋಷವೂ ಗಾಬರಿಯೂ ಒಟ್ಟೊಟ್ಟಿಗೇ ಆಗಿದೆ. ಅದನ್ನೆಲ್ಲಾ ಯೋಚಿಸಿ ಆಕೆ ಕಾಗದದ ಮೇಲೆ ನನ್ನೊಂದಿಗೆ ಮಾತಿಗೆ ತೊಡಗಿದಳು. ತಾನೆಷ್ಟು ಖುಶಿಯಾಗಿದ್ದೇನೆ ಹಾಗೂ ಗಾಬರಿಯಾಗಿದ್ದೇನೆ ಎಂದು ಬರೆದಿದ್ದಳು. ಉಳಿದ ತರುಣಿಯರ ಹಾಗೆ ಆಕೆಯೂ ಪಿಸುಮಾತುಗಳನ್ನು ಕೇಳಿಸಿಕೊಂಡಿದ್ದಳು. `ನಾವು ಮದುವೆಯಾಗಿ ತುಂಬಾ ವರ್ಷ ಆದ ನಂತರ ನಾವಿಬ್ಬರೂ ಹೆಣ್ಣು, ಗಂಡು ಎನ್ನುವುದನ್ನು ಮರೆತು ಇಬ್ಬರು ಮನುಷ್ಯರಾಗುತ್ತೀವಿ. ನಾನು ಮುಗ್ಧೆ , ಕೆಲವೊಮ್ಮೆ ಪೆದ್ದಿ ಕೂಡ ಎನ್ನುವುದನ್ನು ನೀನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀನು ಸಹನೆಯಿಂದ, ಸೌಮ್ಯವಾಗಿ ನನ್ನನ್ನು  ಪ್ರೀತಿಸಬೇಕು, ಆಯ್ತಾ? ಮುಂದೆ ಎಷ್ಟೋ ವರ್ಷಗಳಾದ ಮೇಲೆ, ನೀನು ನನಗೆ ಏನೆನೆಲ್ಲಾ ಕಲಿಸಿರುತ್ತೀಯಲ್ಲ, ಆಗ ನಾನು ನಿನಗೆ  ಅವನ್ನೆಲ್ಲ ಹಿಂದಿರುಗಿಸ್ತೀನಿ. ನಾನು ನಿನ್ನನ್ನು  ಕೋಮಲವಾಗಿ, ಗಾಢವಾಗಿ ಪ್ರೀತಿಸುತ್ತೀನಿ. ಅದು ನನ್ನಿಂದ ಸಾಧ್ಯವಾಗದೆ ಇದ್ದಿದ್ದರೆ ನಾನು ನಿನ್ನನ್ನು ಮದುವೆಯೇ ಆಗುತ್ತಿರಲಿಲ್ಲ. ನಾನು ಗಾಬರಿಯಾಗಿರುವೆ ಆದರೆ ಖುಶಿಯಾಗಿರುವೆ. ಓ! ನಮ್ಮ ಮದುವೆಯ ದಿನ ಎಷ್ಟೂ ಸಮೀಪ ಬರ್ತಿದೆ!’

“ನಾನು ಅದೆಂಥಾ ಗೊಂದಲದಲ್ಲಿದ್ದೆ ಎಂಬುದು ಈಗ ನಿನಗೆ ಅರ್ಥವಾಗಬಹುದು. ಆಕೆಯ ಪತ್ರವನ್ನು ಓದಿದ ನಂತರ ನಾನು ನಿರ್ಧಾರ ಮಾಡಿದವನಂತೆ ಎದ್ದು ನಿಂತೆ. ನಾನು ದುರ್ಬಲನಲ್ಲ, ಶಕ್ತಿವಂತ ಎಂದು ಹೇಳಿಕೊಂಡೆ. ಇಂತಹ ಶ್ರೇಷ್ಠ ಹೆಣ್ಣಿನ ಗಂಡನಾಗುತ್ತಿರುವ ನಾನು ಭಾಗ್ಯವಂತ ಎನ್ನಿಸಿತು. ಆ ರಾತ್ರಿ ಒಂಭತ್ತಕ್ಕೆ ಆಕೆಯನ್ನು ಭೇಟಿ ಮಾಡುವ ನಿರ್ಧಾರ ಮಾಡಿದೆ. `ಆಕೆಯ ವ್ಯಕ್ತಿತ್ವದ ಸೌಂದರ್ಯ ನನ್ನನ್ನು ಉಳಿಸಿತು. ಈಗಲೇ ಮನೆಗೆ ಹೋಗಿ ಆ ಇನ್ನೊಬ್ಬ ಹೆಂಗಸನ್ನು ಕಳಿಸಿಬಿಡುವೆ.’ ಅಂದುಕೊಂಡೆ. ಆಳಿಗೆ ರಾತ್ರಿ ಮನೆಯಲ್ಲಿರುವುದು ಬೇಡ ಎಂದು ಹೇಳಿದ್ದು ನೆನಪಾಯ್ತು. ಫೋನ್ ಮಾಡಿ ಇರಲು ಹೇಳಲು ಎದ್ದೆ.

“ಕೂಡಲೆ ಹೊಳೆಯಿತು. `ಯಾವುದಕ್ಕೂ ಆತ ಅಲ್ಲಿರುವುದು ಬೇಡ. ಮದುವೆಯ ಹಿಂದಿನ ದಿನ ಆ ಹೆಂಗಸು ಮನೆಗೆ ಬಂದದ್ದನ್ನು ಕಂಡು ಆತ ಏನೆಂದುಕೊಳ್ಳುವುದಿಲ್ಲ?’ ಫೋನ್ ಕೆಳಗಿಟ್ಟೆ. ` ಆ ಹೆಂಗಸು ಮನೆಗೆ ಬಂದಾಗ ಆತ ಅಲ್ಲಿರುವುದು ಬೇಡ. ನಾನು ಆಕೆಯೊಂದಿಗೆ ಒರಟಾಗಿಯೇನು ವರ್ತಿಸಲಾಗದು. ಆದರೂ ಏನಾದರೂ ಸಮಜಾಯಿಷಿ  ಹುಡುಕಿಕೊಳ್ಳಬೇಕು.’

“ಆಕೆ ಏಳು ಗಂಟೆಗೆ ಬಂದಳು, ನಾನು ನನ್ನ ನಿರ್ಧಾರವನ್ನು ಮರೆತು ಆಕೆಯನ್ನು ಒಳಗೆ ಸೇರಿಸಿಕೊಂಡೆ ಎನ್ನುವುದನ್ನು  ನೀನು ಊಹಿಸಿರಬಹುದು. ಬೆಲ್ ಇದ್ದರೂ ಆಕೆ ಮೃದುವಾಗಿ  ಬಾಗಿಲನ್ನು ಬಡಿದಳು. ಆ ಸಂಜೆ ಆಕೆ ಮಾಡಿದ್ದೆಲ್ಲವೂ ಮೃದುವಾಗಿ, ಚುರುಕಾಗಿ ಆದರೆ ನಿರ್ಧಾರಯುತವಾಗಿ ಕಂಡಿತು. ಅರ್ಥವಾಯ್ತಾ? ಆಕೆ ಬಂದಾಗ ನಾನು ಬಾಗಿಲ ಹಿಂದೆಯೇ ಇದ್ದೆ. ಅರ್ಧ ಗಂಟೆಯಿಂದ ಆಕೆಗಾಗಿ ಕಾಯುತ್ತ ಅಲ್ಲೇ ನಿಂತಿದ್ದೆ. ಬೆಳಿಗ್ಗೆ ಆಕೆಯನ್ನು ನೋಡುವಾಗ, ನಾಣ್ಯಗಳನ್ನು ಇಡುವಾಗ ನಡುಗಿದಂತೆಯೇ  ಕೈಗಳು ನಡುಗುತ್ತಿದ್ದವು. ಬಾಗಿಲು ತೆರೆದಾಗ ಆಕೆ ಒಳಗೆ ಬಂದಳು, ಆಕೆಯನ್ನು ನನ್ನ ತೋಳುಗಳಲ್ಲಿ ಹಿಡಿದೆ, ಇಬ್ಬರೂ ಕತ್ತಲಲ್ಲಿ ನಿಂತಿದ್ದೆವು. ನನ್ನ ಕೈಗಳ ನಡುಕ ನಿಂತು ಹೋಗಿತ್ತು. ನಾನು ಖುಶಿಯಾಗಿದ್ದೆ, ದೃಢವಾಗಿದ್ದೆ.

“ಎಲ್ಲವನ್ನೂ ಸ್ಪಷ್ಟಪಡಿಸಲು ನಾನು ಪ್ರಯತ್ನಿಸಿದರೂ ನನ್ನ ಹೆಂಡತಿ ಹೇಗಿದ್ದಾಳೆಂದು ನಿನಗೆ ಹೇಳಿಲ್ಲ. ನಾನು ಆ ಇನ್ನೊಬ್ಬ ಹೆಂಗಸಿಗೆ ಹೆಚ್ಚು ಒತ್ತು ಕೊಟ್ಟೆ. ನಾನು ಸುಮ್ಮನೆ ಕುರುಡಾಗಿ ನನ್ನ ಹೆಂಡತಿಯನ್ನು ಪ್ರೀತಿಸುತ್ತೇನೆ ಅಂತಂದೆ, ನಿನ್ನಂತಹ ಸೂಕ್ಷ್ಮಮತಿಗೆ  ಹಾಗೆಂದರೇನು ಎಂದು ಗೊತ್ತು. ನಿಜ ಹೇಳಬೇಕೆಂದರೆ, ಈ ವಿಷಯ ಶುರುಮಾಡದೇ ಇದ್ದಿದ್ದರೆ ನಾನು ನೆಮ್ಮದಿಯಿಂದಿರುತ್ತಿದ್ದೆ. ನನ್ನ ಮಾತಿನಿಂದ ನಾನು ಆ ತಂಬಾಕು ಮಾರುವವನ ಹೆಂಡತಿಯನ್ನು ಪ್ರೀತಿಸುತ್ತಿದ್ದೇನೆ ಎಂದು ನಿನಗೆ ಅನ್ನಿಸಬಹುದು. ಅದು ನಿಜವಲ್ಲ. ಸರಿಯಾಗಿ ಹೇಳಬೇಕು ಅಂದರೆ ಮದುವೆಗೆ ಮುನ್ನ ಒಂದು ವಾರ ನಾನು ಆಕೆಯ ಬಗ್ಗೆ  ಯೋಚಿಸುತ್ತಿದ್ದೆ. ಆದರೆ ಆಕೆ ನನ್ನ ಅಪಾರ್ಟ್ ಮೆಂಟಿಗೆ ಬಂದು ಹೋದ ಮೇಲೆ  ನನ್ನ ಮನಸ್ಸಿನಿಂದ ಆಕೆ ಸಂಪೂರ್ಣವಾಗಿ ಮರೆಯಾದಳು.

“ನಾನು ನಿಜ ಹೇಳ್ತಿದೀನಾ? ನನಗೇನಾಯ್ತು ಅನ್ನೋದನ್ನ ಹೇಳೋಕೆ ನಾನು ಪ್ರಯಾಸ ಪಡ್ತಾ ಇದೀನಿ. ಆ ಭೇಟಿಯ ನಂತರ ಆ ಇನ್ನೊಬ್ಬ ಹೆಂಗಸಿನ ಬಗ್ಗೆ ಯೋಚಿಸಿಲ್ಲ ಅಂತ ಹೇಳ್ತಿದೀನಿ. ವಾಸ್ತವ ಏನೆಂದರೆ, ಅದು ನಿಜವಲ್ಲ. ಆ ರಾತ್ರಿ ಒಂಬತ್ತಕ್ಕೆ ನನ್ನ ಭಾವಿ ಮಡದಿಯ ಮನೆಗೆ ಹೋದೆ. ವಿವರಿಸಲಾಗದ ಒಂದು ರೀತಿಯಲ್ಲಿ ಆ ಇನ್ನೊಬ್ಬ ಹೆಂಗಸು ನನ್ನೊಂದಿಗೆ ಬಂದಳು. ನಾನೇನು ಹೇಳ್ತಿದೀನಂದ್ರೆ, ನನ್ನ ಹಾಗೂ ತಂಬಾಕಿನವನ ಹೆಂಡತಿಯ ನಡೆವೆ ಏನಾದರೂ ನಡೆದಿದ್ದರೆ ನಾನು ಈ ಮದುವೆಗೆ ಒಳಪಡಲು ಸಾಧ್ಯವಾಗುತ್ತಿರಲಿಲ್ಲ.

“ನಿಜಕ್ಕೂ ನಾನು ಅಂದು ಸಂಜೆ ನನ್ನ ಭಾವಿ ಮಡದಿಯನ್ನು ಕಾಣುವಾಗ ನಮ್ಮಿಬ್ಬರ ದಾಂಪತ್ಯ ಕೊಡಬಹುದಾದ ಸುಖದ ಬಗ್ಗೆ ಹೊಸದಾದ ನಂಬಿಕೆ ಹೊಂದಿದ್ದೆ. ಇದನ್ನು ವಿವರಿಸುವಲ್ಲಿ ನಾನು ಗಲಿಬಿಲಿ ಮಾಡಿಕೊಳ್ತೀನೇನೋ ಅನ್ನೋ ಭಯವಾಗುತ್ತೆ. ಕೆಲವು ಕ್ಷಣದ ಹಿಂದೆ ಆ ಇನ್ನೊಬ್ಬ ಹೆಂಗಸು ನನ್ನೊಂದಿಗೆ ಬಂದಳು ಎಂದೆ. ನಿಜವಾಗಿಯೂ ಆಕೆ ಬಂದಳು ಎಂದಲ್ಲ. ತನ್ನ ಆಸೆಗಳಲ್ಲಿ ಆಕೆಗಿದ್ದ ವಿಶ್ವಾಸ ಹಾಗೂ ನಡೆಯುವುದನ್ನು ನೇರವಾಗಿ ನೋಡುವ ದಿಟ್ಟತನ ನನ್ನೊಂದಿಗೆ ಬಂದಿತು. ಸ್ಪಷ್ಟವಾಯ್ತಾ? ನಾನು ಆಕೆಯ ಮನೆಗೆ ಹೋದಾಗ ಅವಳ ಸಂಬಂಧಿಕರು ನೆರೆದಿದ್ದರು. ನನ್ನ ಕಂಡೊಡನೆ ಆಕೆ ಚಿಕ್ಕ ಹುಡುಗಿಯ ಹಾಗೆ ಉಲ್ಲಸಿತಳಾದಳು. ತನ್ನ ಪತ್ರದ ಪ್ರಭಾವ ನನ್ನ ಮುಖದಲ್ಲಿ ಆಗಿರುವುದನ್ನು ಗುರುತಿಸಿದವಳಂತೆ ಹತ್ತಿರ ಬಂದು, `ಓ,ನನಗೆ ತುಂಬಾ ಖುಶಿಯಾಗಿದೆ. ನಾವಿಬ್ಬರು ಗಂಡ ಹೆಂಡತಿಯರಂತಲ್ಲ, ಇಬ್ಬರು ಮನುಷ್ಯರ ಹಾಗಿರುತ್ತೇವೆ ಅನ್ನೋದನ್ನ ನೀನು ಅರ್ಥ ಮಾಡಿಕೊಂಡೆ.’ ಎಂದಳು.

“ನೀನಂದುಕೊಳ್ಳಬಹುದು,  ಆಕೆಯ ಮಾತನ್ನು ಕೇಳಿ ಅಲ್ಲಿರುವವರೆಲ್ಲ ನಕ್ಕರು ಎಂದು. ನಾನು ನಗಲಿಲ್ಲ. ನನ್ನ ಕಣ್ಣುಗಳು ಹನಿಗೂಡಿದವು. ಆಫೀಸಿನಲ್ಲಿ ಆಕೆಯ ಪತ್ರವನ್ನು ಓದಿದಾಗ ನಾನಂದುಕೊಂಡಿದ್ದೆ, `ಈ ಪುಟ್ಟ ಮುದ್ದು ಹೆಂಗಸನ್ನು ನಾನು ಮುತುವರ್ಜಿಯಿಂದ ನೋಡಿಕೊಳ್ಳುವೆ’ ಎಂದು . ಆದರೆ ಅಲ್ಲಿ ನಗುತ್ತಿದ್ದ ಜನರ ಆ ಸಂತುಷ್ಟ ವಾತಾವರಣದಲ್ಲಿ ಅಂದುಕೊಂಡೆ, `ನಾವಿಬ್ಬರು ನಮ್ಮಿಬ್ಬರ ಕಾಳಜಿ ಮಾಡೋಣ’ ಅದನ್ನೇ ಆಕೆಯ ಕಿವಿಯಲ್ಲಿ ಉಸುರಿದೆ. ನಿಜ ಹೇಳಲಾ, ಆ ಇನ್ನೊಬ್ಬ ಹೆಂಗಸಿನ ಚೇತನ ನನ್ನಿಂದ ಹಾಗೆ ಮಾಡಿಸಿತು. ಆಕೆಯನ್ನು ನಾನು ಚುಂಬಿಸಿದೆ. ನೆರೆದ ಜನರು ನಮ್ಮ ಪ್ರೀತಿಯ ಉತ್ಕಟಯನ್ನು ಮೆಚ್ಚಿದಂತೆ ಕಂಡರು, ನನ್ನ ಬಗ್ಗೆ ಅಸಲು ವಿಷಯ  ತಿಳಿದಿದ್ದರೆ ಏನೆನ್ನುತ್ತಿದ್ದರೋ ದೇವರೇ ಬಲ್ಲ!

“ ಆ ರಾತ್ರಿಯ ನಂತರ ಆ ಇನ್ನೊಬ್ಬ ಹೆಂಗಸನ್ನು ನಾನು ಮತ್ತೆ ನೆನೆಸಿಕೊಂಡಿಲ್ಲ ಎಂದು ಎರಡು ಬಾರಿ ಹೇಳಿದೆ. ನನ್ನ ಮದುವೆಯ ನನಗೆ ಖುಷಿಕೊಟ್ಟಿದೆ. ನನ್ನ ಸಂಸಾರದಲ್ಲಿ ಸುಖವಿಲ್ಲ ಎಂದು ಯಾರಾದರೂ ಹೇಳಿದರೆ ಅದನ್ನು ಸುಳ್ಳು ಎನ್ನುವೆ. ನಾನು ನಿನಗೆ ಆ ಇನ್ನೊಬ್ಬ ಹೆಂಗಸಿನ ಕುರಿತು ಹೇಳಿದೆ. ಆಕೆಯ ಬಗ್ಗೆ ಮಾತನಾಡಿದರೆ ಏನೋ ನೆಮ್ಮದಿ ಸಿಕ್ಕುತ್ತದೆ. ನಾನು ಆಕೆಯ ಬಗ್ಗೆ ಮಾತನಾಡಿದರೆ ಎಲ್ಲಿ ನಾನು ಹೆಂಡೆತಿಯನ್ನು ಪ್ರೀತಿಸುತ್ತಿಲ್ಲವೆಂದು ನೀನು ಅಂದುಕೊಳ್ಳುತೀಯೋ ಎಂದು ಹೆದರಿದ್ದೆ. ಅದನ್ನು ನೆನೆದರೆ ನನಗೆ ನಾಚಿಕೆಯಾಗುತ್ತೆ. ನಿನ್ನ ತಿಳುವಳಿಕೆಯನ್ನು ನಂಬದಿದ್ದರೆ ನಾನು ಈ ಕತೆಯನ್ನು ಹೇಳುತ್ತಲೇ ಇರಲಿಲ್ಲ.

“ಇವತ್ತು ರಾತ್ರಿ ನಾನು ಆ ಇನ್ನೊಬ್ಬ ಹೆಣ್ಣಿನ ಬಗ್ಗೆ ಯೋಚಿಸುತ್ತೇನೆ. ಈ ಬಾರಿ ಮದುವೆಯ ಮುನ್ನಾ ವಾರದಲ್ಲಿ ಆಕೆಯ ಕುರಿತು ನನ್ನ ಆಲೋಚನೆಗಳು  ಹರಿದಂತೆ ಹರಿಯುವುದಿಲ್ಲ. ಅರೆಕ್ಷಣ, ಅವಳಿಗೇನಾಯಿತು, ಅವಳೀಗ ಹೇಗಿದ್ದಾಳೆ ಎಂದು ಯೋಚಿಸುತ್ತೇನೆ. ಆಕೆಯನ್ನು ತೋಳಲ್ಲಿ ಬಳಸಿ ಹಿಡಿದಂತೆ ಕಲ್ಪಿಸಿಕೊಳ್ಳುತ್ತೇನೆ. ಆ ಒಂದು ತಾಸಿನಲ್ಲಿ ನಾನು ಅವಳಿಗೆ ಹತ್ತಿರವಾದಂತೆ ಎಂದೂ ಯಾರಿಗೂ ಹತ್ತಿರವಾಗಿಲ್ಲ ಅಂದುಕೊಳ್ಳುತ್ತೇನೆ. ಅನಂತರ ನನ್ನ ಹೆಂಡತಿಯ ಬಗ್ಗೆ ಯೋಚಿಸುತ್ತೇನೆ, ಆಕೆಯಿನ್ನೂ ಅರಳುತ್ತಿರುವ ಹೆಂಗಸು. ಒಂದು ಕ್ಷಣಕ್ಕೆ ನನ್ನ ಕಣ್ಣುಗಳನ್ನು ಮುಚ್ಚುತ್ತೇನೆ. ಆ ಇನ್ನೊಬ್ಬ ಹೆಂಗಸಿನ ಚುರುಕಾದ, ದೃಢವಾದ, ಚಾಣಾಕ್ಷ ಕಣ್ಣುಗಳು ನನ್ನನ್ನು ದಿಟ್ಟಿಸುತ್ತವೆ. ನನ್ನ ತಲೆ ಗಿಮ್ಮೆನ್ನುತ್ತದೆ. ಕಣ್ತೆರೆದು ಪಕ್ಕದಲ್ಲಿರುವ ಪ್ರೀತಿಯ ಮಡದಿಯನ್ನು ನೋಡುತ್ತೇನೆ. ಅನಂತರ ಮಲಗುತ್ತೇನೆ. ಎದ್ದಾಗ ಬೆಳಗು ಆ ರಾತ್ರಿ ನನ್ನ ಜೀವನದ ಮರೆಯಲಾಗದ ಅನುಭವ ಪಡೆದು ಕತ್ತಲೆಯ ಅಪಾರ್ಟ್ ಮೆಂಟಿನಿಂದ ಹೊರಟಾಗ ಆದಂತೆ ಆಗುತ್ತದೆ. ನಾನೇನು ಹೇಳ್ತಿದೀನಿ ಅಂದ್ರೆ, ನೀನೇನು ಅರ್ಥ ಮಾಡಿಕೊಳ್ತಿದೀಯ ಅಂದ್ರೆ, ನಾನು ಎದ್ದಾಗ ಆ ಇನ್ನೊಬ್ಬ ಹೆಂಗಸು ಸಂಪೂರ್ಣವಾಗಿ ಹೊರಟುಹೋಗಿರುತ್ತಾಳೆ.”

Advertisements

5 thoughts on “ಆ ಇನ್ನೊಬ್ಬ ಹೆಂಗಸು

 1. ಸುಪ್ರೀತ್, ಮೊದಲು ಓದಿದಾಗ ಒಮ್ಮೆ ಅಯೋಮಯ ಆಯ್ತು! ಆದರೆ ಓದಿದ ನ೦ತರ ಹತ್ತು ನಿಮಿಷ ಮನಸ್ಸಿನಲ್ಲೇ ಮತ್ತೊಮ್ಮೆ ಕಥೆಯನ್ನು ಉರು ಹಾಕಿದೆ! ಅದ್ಬುತವಾದ,ಮಾರ್ಮಿಕವಾದ ಸ೦ದೇಶವುಳ್ಳ ಕಥೆ ಎನ್ನಿಸಿತು!. ನಿಮ್ಮ ಅನುವಾದ ಶೈಲಿ ಎಲ್ಲಿಯೂ ಬೇಸರ ತರಿಸದೆ, ಕಥೆಯನ್ನು ತು೦ಬಾ ಚೆನ್ನಾಗಿ ಓದಿಸಿಕೊ೦ಡು ಹೋಯ್ತು! ನಿಧಾನವಾಗಿ ಅರ್ಥ ಮಾಡಿಕೊಳ್ಳಬೇಕಷ್ಟೆ!
  ಹ್ಯಾಟ್ಸಾಫ್!!!

  • ಹೌದು ತುಂಬಾ ಸೂಕ್ಷ್ಮವಾದ ಕತೆ ಇದು. ಅನುವಾದಿಸುವಾಗ ನನಗೂ ನಾಲ್ಕೈದು ಬಾರಿ ಓದಬೇಕಾಯಿತು… ಪ್ರತಿಕ್ರಿಯೆಗೆ ಸಹೃದಯತೆಗೆ ಧನ್ಯವಾದಗಳು ಸರ್.

 2. ಕಥೆ ಚೆನ್ನಾಗಿದೆ ಸುಪ್ರೀತ್
  ಮೂಲ ಕಥೆಯೊಳಗ ಅದನ್ನ ಬರೋಬ್ಬರಿ ನಿರೂಪಣೆ ಮಾಡಿಲ್ಲ ಅನಸ್ತು
  ವಿಮರ್ಶೆ ಮಾಡೂದಿಲ್ಲ,,ಆದ್ರ ಮೂಲ ಲೇಖಕ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚುವುದರಲ್ಲಿ ಎರಡು ಹೆಂಗಸರ ಬಗೆಗಿನ ಭಾವನೆಗಳನ್ನ ತಾಳೆ ಮಾಡುವುದರಲ್ಲಿ
  ಗೊಂದಲದಲ್ಲಿ ಸಿಕ್ಕಾನ ಅನಸ್ತು ಅದು ನಮ್ಮನ್ನೂ ಗೊಂದಲದಲ್ಲಿ ಸಿಗಿಷ್ಕೋತ ಹೋತು.
  ನಿಮ್ಮ ಅನುವಾದ ದಾಗ ಮೂಲ ಕಥೆಗೆ ಹೆಚ್ಗೀ ಜೀವ ಕೊಟ್ಟೀರಿ , ಮತ್ತ ಅನುವಾದ ನಮ್ಮ ಮಾತೃಭಾಷೆ ಆಗಿರೋದ್ರಿಂದ ಅವನ ಭಾವನೆಗಳ ಇನ್ನ ಹತ್ತಿರಕ್ಕ ತೊಗೊಂಡ್ ಹೋತು…
  ಶ್ರಮ ಪಟ್ಟೀರಿ ಅನ್ನೋದು ಕಾಣಸ್ತದ..ಕಥೆಯನ್ನ ೨ ಭಾಗದಾಗ ಪ್ರಕಟಿಸಿದರ ಚೊಲೋ ಇತ್ತು ಅಂತ ನನ್ನ ಅಭಿಪ್ರಾಯ..

  • ಶ್ರೀಕಾಂತ್,
   ಈ ಕತೆಯಲ್ಲಿ ನಾಯಕನೇ ನಿರೂಪಕನಲ್ಲ. ಆತ ನಿರೂಪಕನಲ್ಲಿ ನಿವೇದಿಸಿಕೊಂಡದ್ದನ್ನು ಕತೆಯಾಗಿ ನಿರೂಪಕ ನಮ್ಮೆದುರು ಇಟ್ಟಿದ್ದಾನೆ. ಬಹುಶಃ ನಾಯಕನ ಮನಸ್ಸಿನಲ್ಲಿ ಮತ್ತೊಬ್ಬ ಹೆಂಗಸಿನ ಕುರಿತು ಇರಬಹುದಾದ ಗೊಂದಲವನ್ನು ಇಡಿಯಾಗಿ ತೆರೆದಿಡುವುದಕ್ಕೆಂದೇ ಕ್ಲಿಷ್ಟಕರವಾಗಿ ನಿರೂಪಣೆ ಮಾಡಿರಲಿಕ್ಕೂ ಸಾಕು.
   ಅನುವಾದ ಕೊಂಚ ತಿಣುಕಿಯೇ ಮಾಡಿದ್ದು. ಕೆಲವು ಸಾಲುಗಳಲ್ಲಿ ಅದಕ್ಕೆ ಸಾಕ್ಷಿ ಸಿಕ್ಕುತ್ತದೆ. ಹೌದು, ತುಂಬಾ ಉದ್ದವಾದರೆ ಆನ್ ಲೈನ್ ಓದುವುದು ಕಷ್ಟವಾಗುತ್ತದೆ, ನೆನಪಿಟ್ಟುಕೊಳ್ಳುವೆ.
   ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

 3. ನಿರೂಪಣೆ ಚೆನ್ನಾಗಿದೆ. ಈ ಸುಂದರ ದಾಂಪತ್ಯದ ಅನುಭಾವದ ರಸಪಾಕವನ್ನಿಲ್ಲಿ ಇಳಿಸಲು ನೀವು ಹೆಣಗಿದ್ದು ಕಾಣುತ್ತಿದೆ. ಆದರೆ ನಿಮ್ಮ ಪ್ರಯತ್ನ ಮುಂದುವರೆಯಲಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s