ವೀರ ಕಲ್ಲುಕುಟಿಕ

ಮೂಕಾಸುರನನ್ನು ಕೊಂದು ಆತನ ಕೋರಿಕೆಯಂತೆ ಮೂಕಾಂಬಿಕೆಯಾದ ದೇವಿಯ ಸ್ಥಳವಾದ ಕೊಲ್ಲೂರಿನಿಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿ ಶಂಕರ ನಾರಾಯಣ ಎನ್ನುವ ಊರಿದೆ. ಹೆಸರೇ ಹೇಳುವಂತೆ ಇದು ಶಿವ ಹಾಗೂ ವಿಷ್ಣು ಇಬ್ಬರನ್ನೂ ಒಂದೇ ಸೂರಿನಡಿ ಆರಾಧಿಸುವ ದೇವಾಲಯವಿರುವ ಜಾಗ. ಈ ದೇವಾಲಯದಲ್ಲಿ ಶಂಕರ ಹಾಗೂ ನಾರಾಯಣರ ವಿಗ್ರಹಗಳು ಅಕ್ಕ ಪಕ್ಕದಲ್ಲಿವೆ. ಕರ್ನಾಟಕದಲ್ಲಿ ವಿಷ್ಣುವಿನ ಆರಾಧಕರು ಹಾಗೂ ಶಿವನ ಆರಾಧಕರ ನಡುವಿದ್ದ ವೈಷಮ್ಯವನ್ನು ಗಮನಿಸಿದರೆ ಈ ದೇವಾಲಯದ ಹಿನ್ನೆಲೆ ಮಹತ್ವದ್ದೇ ಇರಬೇಕು ಅನ್ನಿಸಿತು.

ಇಪ್ಪತ್ತು ರುಪಾಯಿ ನೀಡಿದರೆ ಕನ್ನಡಿಯಲ್ಲಿ ಏನನ್ನೋ ತೋರಿಸುತ್ತೇವೆ ಎಂದರು ದೇವಾಲಯದ ಗುಮಾಸ್ತ. ರಸೀದಿಯನ್ನು ನೀಡಿದಾಗ ನಿಲುವುಗನ್ನಡಿಯೊಂದನ್ನು ಅಡ್ಡಡ್ಡ ಹಿಡಿದು ಏನನ್ನೋ ತೋರಿಸಿದರು. ಒಂದು ಬದಿಯಲ್ಲಿ ಎದ್ದಿದ್ದ ಕಲ್ಲು ಗುಂಡನ್ನು ಶಿವಲಿಂಗವೆಂದೂ, ಮತ್ತೊಂದು ಬದಿಯಲ್ಲಿದ್ದ ಕಲ್ಲಿನ ಉಬ್ಬುತಗ್ಗುಗಳನ್ನು ಗೋ ಪಾದವೆಂದೂ, ನಾರಾಯಣನೆಂದೂ ಈ ಕಲ್ಲುಗಳ ಬಳಿ ಸದಾಕಾಲವೂ ನೀರು ಒಸರುತ್ತಿರುತ್ತದೆಂದೂ ತಿಳಿಸಿದರು. ಕನ್ನಡಿಯಲ್ಲಿ ಕಂಡ ದೈವಕ್ಕೆ ಕೈಮುಗಿದು ಮುಂದೆ ಹೊರಟೆವು.

ದೇವಸ್ಥಾನದ ಎದುರು ಹಸಿರುಗಟ್ಟಿದ ಕೊಳದಲ್ಲಿದ್ದ ಮೀನುಗಳಿಗೆ ಮಂಡಕ್ಕಿಯನ್ನು ಎಸೆದು ಹೊರಟಿದ್ದು ಶಂಕರ ನಾರಾಯಣದಿಂದ ಕೊಂಚ ದೂರಕ್ಕೆ ನಗರದ ಒಳ ಭಾಗದಲ್ಲಿರುವ ವೀರ ಕಲ್ಲುಕುಟಿಕ ದೇವಾಲಯಕ್ಕೆ.

ಗ್ರಾನೈಟ್ ಕಲ್ಲುಗಳ, ಕಾಂಕ್ರೀಟ್ ಚಿತ್ತಾರದ ಗೋಡೆಗಳ ದೇವಸ್ಥಾನ ಕಲ್ಲುಕುಟಿಕ ಎನ್ನುವ ಭೂತದ ಆವಾಸ ಸ್ಥಾನವಂತೆ. ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಭೂತಾರಾಧನೆ ಸಾಂಸ್ಕೃತಿಕವಾಗಿ ಶ್ರೀಮಂತವಾದದ್ದು. ದೇವರು ಸಾಮಾನ್ಯವಾಗಿ ಮನುಷ್ಯನ ಪಾರಮಾರ್ಥಿಕ ಅಗತ್ಯಗಳನ್ನು ಪೂರೈಸುವ ಶ್ರದ್ಧಾ ಕೇಂದ್ರವಾದರೆ ಈ ಭೂತಗಳು ದಿನನಿತ್ಯದ ವ್ಯಾವಹಾರಿಕ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡುವಂಥವು. ಈ ಕಲ್ಲುಕುಟಿಕ ಭೂತವು ಜಗಳಗಳ ಪಂಚಾಯಿತಿ ನಡೆಸಿ ನ್ಯಾಯ ತೀರ್ಮಾನ ಮಾಡುತ್ತದೆ. ಸಾಲ ಪಡೆದು ಹಿಂದಿರುಗಿಸದಿದ್ದರೆ ದಂಡಿಸುತ್ತದೆ ಎನ್ನುವ ಪ್ರತೀತಿ ಇದೆ.

ನಮ್ಮ ಅಲ್ಪ ಕಾಲದ ಭೇಟಿಯಲ್ಲಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಭೂತಗಳು ಪ್ರಾದೇಶಿಕವಾಗಿ ಪ್ರಭಾವಶಾಲಿಗಳು.ದೇವ-ದೇವತೆಗಳು ಸಾರ್ವತ್ರಿಕವಾಗಿ ಮಾನ್ಯವಾಗಿ, ಇಡೀ ವಿಶ್ವವನ್ನೇ ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡಿದ್ದರೆ ಭೂತದ ನಿಯಂತ್ರಣವಿರುವುದು ಪ್ರದೇಶವಾರು. ಜಾಗದ ಭೂತಗಳೆಂದು ಕರೆಯಲ್ಪಡುವ ಭೂತಗಳು ಆ ಪ್ರದೇಶದ ಜನರ ಜೀವ-ಜೀವನದ ಮೇಲೆ ಪ್ರಭಾವ ಉಳಿಸಿಕೊಂಡಿರುತ್ತವೆ. ಕೋಲದ ಸಂದರ್ಭದಲ್ಲಿ ಪಾತ್ರಿಯ ಮೈಮೇಲೆ ಬರುವ ಭೂತಗಳು ಆ ಜಾಗದ ಜನರ ಬದುಕಿನ ಓರೆ ಕೋರೆಗಳನ್ನು ಎತ್ತಿ ತೋರಿಸುತ್ತವೆ. ಅನ್ಯಾಯ ಆದವರ ಬೆಂಬಲಕ್ಕೆ ನಿಲ್ಲುತ್ತವೆ. ವ್ಯಾಜ್ಯಗಳನ್ನು ಪರಿಹರಿಸುತ್ತವೆ. ಅಭಯಗಳನ್ನು ನೀಡುತ್ತವೆ. ಬೆದರಿಕೆಗಳನ್ನು ಹಾಕುತ್ತವೆ. ಕುತೂಹಲದ ಸಂಗತಿಯೆಂದರೆ ಈ ಭೂತಗಳು ಆ ಪ್ರದೇಶದಲ್ಲಿ ಯಾವುದೇ ದೈವಕ್ಕಿಂತಲೂ ಹೆಚ್ಚು

ವೀರ ಕಲ್ಲುಕುಟಿಕ

ಪ್ರಭಾವಶಾಲಿಯಾಗಿರುತ್ತವೆ.

ನಾವು ಭೇಟಿ ನೀಡಿದ್ದ ವೀರ ಕಲ್ಲುಕುಟಿಕ ಭೂತದ ಕುರಿತೂ ಕುತೂಹಲಕರವಾದ, ಭಯಂಕರವಾದ ಕಥೆಗಳಿವೆ. ಸಾಲ ಕೊಟ್ಟು ಅದರ ಪರುಪಾವತಿಯಾಗದೆ ಬೇಸತ್ತ ವ್ಯಕ್ತಿಯೊಬ್ಬ ಈ ಜಾಗಕ್ಕೆ ಬಂದು ಸಾಲ ಪಡೆದವನ ಮೇಲೆ ದೂರನ್ನು ನೀಡಿದನಂತೆ. ಈ ರೀತಿ ದೂರು ನೀಡುವುದಕ್ಕೆ ಹೇಳಿಕೆ ಎಂದು ಕರೆಯುತ್ತಾರೆ. ಶಂಕರ ನಾರಾಯಣದ ‘ಭೂತಾಲಯ’ದಲ್ಲಿ ಸಂಜೆ ನಾಲ್ಕರ ಮೇಲೆ ಹೇಳಿಕೆಗಳನ್ನು ಪಡೆಯುತ್ತಾರೆ. ಹೀಗೆ ದೂರು ದಾಖಲಿಸಿಕೊಂಡ ಭೂತಾಲಯದ ಕಛೇರಿಯ ಸಿಬ್ಬಂದಿ ಆರೋಪಿಗೆ ನೋಟೀಸ್ ಕಳಿಸುತ್ತಾರಂತೆ. ನೋಟೀಸು ತಲುಪಿದ ಇಂತಿಷ್ಟು ದಿನದೊಳಗೆ ಬಂದು ಆತ ಸ್ಪಷ್ಟನೆ ಕೊಡ ಬೇಕು ಇಲ್ಲವಾದರೆ ಆತನಿಗೆ ದಂಡನೆಯಾಗುತ್ತದೆ ಎನ್ನುವುದು ನಂಬಿಕೆ. ಹೀಗೆ ತಲುಪಿದ ನೋಟೀಸನ್ನು ನಿರ್ಲಕ್ಷಿಸಿದ ಸಾಲಗಾರನ ಹೆಂಡತಿ ಇದ್ದಕ್ಕಿದ್ದಂತೆ ಸತ್ತು ಹೋದಳಂತೆ. ಭಯಭೀತನಾದ ಸಾಲಗಾರ ಇಲ್ಲಿಗೆ ಓಡಿ ಬಂದು ಸಾಲ ತೀರಿಸುವುದಾಗಿ ಹೇಳಿ ತಪ್ಪೊಪ್ಪಿಕೊಂಡನಂತೆ. ಆದರೆ

ತ್ರಿಶೂಲಕ್ಕೆ ಸಿಕ್ಕಿಸಿದ ಚಲನುಗಳು

ಅದಾಗಲೇ ಸಮಯ ಮಿಂಚಿ ಹೋಗಿತ್ತು. ಕಛೇರಿಯ ಸಿಬ್ಬಂದಿ ಇನ್ನು ತಾವೇನು ಮಾಡಲಾಗದು ಎಂದರಂತೆ.

ಇಂತಹ ಕೆಲವು ಘಟನೆಗಳನ್ನು ಅಲ್ಲಿಗೆ ಬಂದಿದ್ದ ಶ್ರದ್ಧಾಳುವೊಬ್ಬ ನಮಗೆ ಹೇಳಿದ. ಭೂತಕ್ಕೆ ನಿರ್ಮಿಸಿದ್ದ ದೇವಸ್ಥಾನದ ಕಟ್ಟಡದ ಎದುರಿದ್ದ ಭೂತದ ಕಲ್ಲಿನ ಬಳಿಯ ತ್ರಿಶೂಲಕ್ಕೆ ಸಿಕ್ಕಿಸಿದ್ದ ಬ್ಯಾಂಕ್ ಚಲನುಗಳು, ಪಕ್ಕದಲ್ಲಿ ಬಿದಿರಿನ ತಟ್ಟೆಯಲ್ಲಿದ್ದ ನಿಂಬೆಹಣ್ಣುಗಳು, ಹೇಳಿಕೆಗಳ ಚೀಟಿಗಳು ಗಮನ ಸೆಳೆದವು.

ಹಿಂದೆ ತುಂಬಾ ಶಕ್ತಿಶಾಲಿಯೂ, ಪ್ರಭಾವಶಾಲಿಯೂ ಆಗಿದ್ದ ಕಲ್ಲುಕುಟಿಕದ ಪ್ರಭಾವ ಇತ್ತೀಚೆಗೆ ಕಡಿಮೆಯಾಗುತ್ತಿದೆ ಎಂದು ಆ ಶ್ರದ್ಧಾಳು ತಿಳಿಸಿದ. ಆದರೂ ದೂರದ ಊರುಗಳಿಂದ ಹೇಳಿಕೆಗಳನ್ನು ನಡೆಸುವುದಕ್ಕೆ ಜನರು ಬರುತ್ತಾರಂತೆ.

Advertisements

4 thoughts on “ವೀರ ಕಲ್ಲುಕುಟಿಕ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s