ಕನಸುಗಳ ಲೋಕದಲ್ಲಿ…

ಕ್ರಿಸ್ಟೋಫರ್ ನೋಲನ್ ಕನಸುಗಳ ಜಗತ್ತಿಗೆ ಕೈ ಹಾಕಿ ಈ ಎಚ್ಚರದ ಜಗತ್ತಿನ ಕನಸುಗಳಲ್ಲಿ ಬಿತ್ತಿದ ಚಿತ್ರ ‘ಇನ್ಸೆಪ್ಷನ್’. ಇದನ್ನು ನೋಡಲು ಶುರು ಮಾಡಿದಂದಿನಿಂದ ಕನಸು, ಎಚ್ಚರಗಳ ನಡುವಿನ ವ್ಯತ್ಯಾಸದ ಗೆರೆ ಅಸ್ಪಷ್ಟವಾದಂತೆ ಭಾಸವಾಗಿ ಅದು ಕನಸೋ ನನಸೋ ಎಂದು ಗೊಂದಲವಾಗಿಬಿಡುತ್ತದೆ.

ಕನಸುಗಳ ಲೋಕ ವಿಚಿತ್ರವಾದದ್ದು. ಅದು ಒಂಥರಾ ನಮ್ಮ ಸಿನೆಮಾಗಳಲ್ಲಿ ‘ನಟಿಸುವ’ ದೆವ್ವಗಳಿದ್ದ ಹಾಗೆ. ಈ ದೆವ್ವಗಳು ಎಲ್ಲರಿಗೂ ಕಾಣಿಸುವುದಿಲ್ಲ. ತಮ್ಮ ಪ್ರಿಯಕರನೋ, ಪ್ರಿಯತಮೆಯೋ ಏಕಾಂಗಿಯಾಗಿದ್ದಗಲಷ್ಟೇ ಕಾಣಿಸಿಕೊಂಡು ರಮಿಸುವಂಥವು. ಮೂರನೆಯ ವ್ಯಕ್ತಿಯನ್ನು ಕರೆದು ತೋರಿಸಿದಾಕ್ಷಣ ಅದು ಮಾಯವಾಗಿಬಿಟ್ಟಿರುತ್ತದೆ.

ಕನಸುಗಳ ಸಂಚು ಇನ್ನೂ ಸೂಕ್ಷ್ಮವಾದದ್ದು. ಅವು ನಮ್ಮ ಕಣ್ಣಿಗೂ ಕಾಣಿಸುವುದಿಲ್ಲ. ಏಕಾಂತವನ್ನೂ ಮೀರಿದ ಸ್ಥಿತಿಗೆ ಹೋದಾಗಲೇ ಅವುಗಳ ಆಟ ಶುರುವಾಗುವುದು. ನಮ್ಮನ್ನೇ ನಾವು ಮರೆಯುವ ಪ್ರಜ್ಞಾಹೀನ ಸ್ಥಿತಿಯಲ್ಲಿ ಕನಸುಗಳ ಜಗತ್ತು ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಮಧ್ಯೆ ಯಾವುದೇ ಸಮಯದಲ್ಲಿ ‘ನಾವು’ ಕನಸಿನ ಲೋಕವನ್ನು ನಮ್ಮ ‘ಕಣ್ಣು’ಗಳಿಂದ ಕಂಡುಬಿಟ್ಟರೂ ಅದು ಒಡೆದು ಛಿದ್ರವಾಗಿಬಿಡುತ್ತದೆ.

ಕನಸುಗಳ ಬಗ್ಗೆ ಜಗತ್ತಿನ ಬುದ್ಧಿವಂತರೆಲ್ಲಾ ಅತೀವ ಎಚ್ಚರದಿಂದ ಯೋಚಿಸಿದ್ದಾರೆ. ಮುಂಜಾನೆ ಕಂಡ ಕನಸು ಭವಿಷ್ಯದ ದಿಕ್ಸೂಚಿಯಾಗುತ್ತದೆ ಎನ್ನುವ ನಂಬಿಕೆಯನ್ನು ಲೇವಡಿ ಮಾಡಿದ ಯುವಕ ಕನಸಿನಲ್ಲಿ ಕಂಡ ಕುದುರೆ ಮಗನಿಗೆ ತಾಯಿಯ ಮೇಲಿರುವ ಲೈಂಗಿಕ ಮೋಹವನ್ನು ಹೇಗೆ ರೆಪ್ರೆಸೆಂಟ್ ಮಾಡುತ್ತದೆ ಎನ್ನುವ ಸಿಗ್ಮಂಡ್ ಫ್ರಾಯ್ಡನ ಥಿಯರಿಯನ್ನು ಗಂಭೀರವಾಗಿ ಓದುತ್ತಿರುತ್ತಾನೆ.

ಇಂಗ್ಮರ್ ಬರ್ಗ್ ಮನ್ ನಂತಹ ಸಿನೆಮಾ ನಿರ್ದೇಶಕ ಕೂಡ ಕನಸುಗಳನ್ನು ಯಥಾವತ್ತಾಗಿ ತೆರೆಯ ಮೇಲೆ ನಿರ್ಮಿಸಲು ಯತ್ನಿಸಿ ಸೋತ ಎನ್ನಲಾಗುತ್ತದೆ. ಕನಸುಗಳೆಲ್ಲಾ ಬ್ಲ್ಯಾಕ್ ಅಂಡ್ ವೈಟ್ ನಲ್ಲೇ ಏಕೆ ಇರುತ್ತವೆ ಎನ್ನುವ ಥಿಯರಿಯ ಬಗ್ಗೆ ಚರ್ಚೆಗಳಾಗುತ್ತವೆ. ಕನಸಿನಲ್ಲಿ ಬರುವ ಪಾತ್ರಗಳೆಲ್ಲಾ ಬೇರೆ ಬೇರೆ ವ್ಯಕ್ತಿಗಳ ಕುರಿತ ನಮ್ಮ ಅನಿಸಿಕೆಗಳೇ ಆಗಿರುತ್ತವೆ ಎನ್ನಲಾಗುತ್ತದೆ. ಕನಸಿನಲ್ಲಿ ಯಾವ ಪಾತ್ರವೂ ನಮ್ಮನ್ನು ದಿಟ್ಟಿಸಿ ನೋಡುವುದಿಲ್ಲ ಯಾಕೆ ಎಂದು ಕೆಲವರು ಅಚ್ಚರಿಗೊಂಡಿದ್ದಾರೆ. ಕನಸಿನಿಂದ ಎಚ್ಚರವಾದ ಮೇಲೆ ಕನಸು ನೆನಪಿದ್ದರೂ ಅದು ಎಲ್ಲಿಂದ ಶುರುವಾಯಿತು ಎನ್ನುವುದು ನೆನಪಾಗುವುದೇ ಇಲ್ಲ ಎಂದು ಕಂಡುಕೊಂಡವರಿದ್ದಾರೆ.

ಕನಸಿನ ಲೋಕದಲ್ಲಿ ಭೌತಶಾಸ್ತ್ರದ, ಗಣಿತದ ನಿಯಮಗಳು ತಿರುಚಲ್ಪಡುವುದು ಏಕೆ? ಒಂದೇ ಸಲಕ್ಕೆ ಅವು ಮಾಯವಾಗಿ ಬಿಡುವುದಿಲ್ಲವೇಕೆ ಎಂದು ಮನಶಾಸ್ತ್ರಜ್ಞರು ತಲೆ ಕೆಡಿಸಿಕೊಂಡರೆ ತತ್ವಜ್ಞಾನಿಗಳು ನಾವು ಎಚ್ಚರದ ಸ್ಥಿತಿ ಎಂದು ಕರೆಯುವುದು ಮತ್ಯಾವುದೋ ಎಚ್ಚರದ ಸ್ಥಿತಿಯ ಕನಸೇ ಆಗಿರಬಹುದಲ್ಲವೇ ಎಂದು ಗುಲ್ಲೆಬ್ಬಿಸಿದ್ದಾರೆ.

ಇದು ಕನಸು ಎಂದು ತಿಳಿಯುವಾಗ ನಾವು ಕನಸು ಕಾಣುತ್ತಿರುವುದಿಲ್ಲ. ನಾವು ಕಾಣುತ್ತಿರುವುದು ಕನಸು ಎಂಬ ಅರಿವಾದರೆ ಕನಸಿನಲ್ಲಿ ಜರುಗುವುದರಿಂದ ನಾವು ಬಾಧಿಸಲ್ಪಡುವುದಿಲ್ಲ ಎನ್ನುವವರ ಮಾತನ್ನೇ ನಂಬಿಕೊಳ್ಳೋಣ. ತಾನು ಎಚ್ಚರವಾಗಿದ್ದೇನೆ ಎಂದು ತನ್ನ ಚಿವುಟಿ ನೋಡಿಕೊಳ್ಳುವವ ಯಾವುದೇ ಕಾರಣಕ್ಕೂ ತಾನು ಕನಸು ಕಾಣುತ್ತಿಲ್ಲ ಎಂದು ಸ್ಪಷ್ಟ ತಿಳುವಳಿಕೆ ಹೊಂದಿರುತ್ತಾನೆ. ಒಂದು ವೇಳೆ ಈ ನಂಬಿಕೆ ಸತ್ಯವೇ ಆದರೆ ಆತ ಬಲು ಗಾಢವಾದ ಕನಸನ್ನು ಕಾಣುತ್ತಿಲ್ಲ ಎಂದು ನಿರೂಪಿಸುವುದಕ್ಕೆ ಹೇಗೆ ಸಾಧ್ಯ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s