ಓದೋದೊಂದು, ಮಾಡೋದೊಂದು

ಆತ ಕಂಪ್ಯೂಟರ್ ಸೈನ್ಸಿನಲ್ಲಿ ಡಿಗ್ರಿ ಪಡೆದಿರುತ್ತಾನೆ ಆದರೆ ಶೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆಕೆ ಟಿಸಿಎಚ್ ಮಾಡಿಕೊಂಡು ಕಾಲ್ ಸೆಂಟರಿನಲ್ಲಿ ದುಡಿಯುತ್ತಿರುತ್ತಾಳೆ. ಈಕೆಯದು ಬಿಕಾಂ ಪದವಿ ಆದರೆ ಕೆಲಸ ಮಾಡುವುದು ಇಂಜಿನಿಯರಿಂಗ್ ಕಂಪೆನಿಯಲ್ಲಿ. ಅವರಿಗೆ ಅರ್ಥಶಾಸ್ತ್ರ, ಸಮಾಜಶಾಸ್ತ್ರಗಳಲ್ಲಿ ಡಾಕ್ಟರೇಟ್ ಇರುತ್ತದೆ, ಜಾಹೀರಾತು ಕಂಪೆನಿಯ ವ್ಯವಸ್ಥಾಪಕರಾಗಿರುತ್ತಾರೆ. ಕೆಲವು ಮಂದಿ ಇಂಜಿನಿಯರಿಂಗ್ ಓದಿರುತ್ತಾರೆ ಪತ್ರಿಕೋದ್ಯಮದ ಗಿರಣಿಗೆ ಬಿದ್ದಿರುತ್ತಾರೆ. ಎಂಬಿಬಿಎಸ್ ಓದಿ ರಾಷ್ಟ್ರ ಜಾಗೃತಿಗಾಗಿ ಸಂಘಟನೆ ಕಟ್ಟಿಕೊಂಡಿರುತ್ತಾರೆ. ಗಮನಿಸುತ್ತಾ ಹೋದರೆ ಹತ್ತರಲ್ಲಿ ಐದು ಮಂದಿ ಓದುವುದೇ ಒಂದು ಮುಂದೆ ಜೀವನದಲ್ಲಿ ಮಾಡುವುದೇ ಮತ್ತೊಂದು!

ಓದಿ ಓದಿ ಮರುಳಾದ!

ಶಿಕ್ಷಣವೆನ್ನುವುದು ಮೂಲಭೂತವಾಗಿ ಶುರುವಾಗಿದ್ದು ಉದ್ಯೋಗ ಹಿಡಿದು ಕಮಾಯಿ ಮಾಡಲಿ ಎನ್ನುವ ಕಾರಣಕ್ಕಲ್ಲ. ಅಕ್ಷರಗಳನ್ನು ಓದಲು, ಬರೆಯಲು ಕಲಿಯುವುದೇ ಶಿಕ್ಷಣದ ಪ್ರಮುಖ ಉದ್ದೇಶವಾಗಿತ್ತು. ಓದು ಬರಹ ಕಲಿತವನಿಗೆ ನಾಗರೀಕತೆಯ ಪರಿಚಯವಾಗಿರುತ್ತದೆ, ಶಿಸ್ತು ರೂಢಿಯಾಗಿರುತ್ತದೆ. ಶಿಕ್ಷಿತ ವ್ಯಕ್ತಿಯು ಮುಂದೆ ಸಮಾಜ ಸತ್ಪ್ರಜೆಯಾಗುತ್ತಾನೆ ಎನ್ನುವುದು ರೂಢಿಗತ ನಂಬಿಕೆಯಾಗಿತ್ತು. ಹೀಗಾಗಿ ಓದಿಗೂ ಹೊಟ್ಟೆ ಪಾಡಿಗಾಗಿ ಹಿಡಿಯುವ ನೌಕರಿಗೂ ಅಂತಹ ಸಂಬಂಧವೇನೂ ಇರಲಿಲ್ಲ. ಅಲ್ಲದೆ, ಇಂದಿನ ಹಾಗೆ ವೃತ್ತಿ ಪರ ಶಿಕ್ಷಣ ಕೋರ್ಸುಗಳ ಹಾವಳಿಯೂ ಇಲ್ಲದ ದಿನಗಳಲ್ಲಿ ಶಿಕ್ಷಣವೆಂದರೆ ದಿನಪತ್ರಿಕೆ ಓದಬಲ್ಲಷ್ಟು, ಪತ್ರ, ಅರ್ಜಿಗಳನ್ನು ಬರೆಯಬಲ್ಲಷ್ಟು, ಕೂಡು, ಕಳೆ, ಗುಣಿಸು ಎನ್ನುವ ಗಣಿತವನ್ನೂ ಕಲಿಯುವುದು ಎಂದೇ ಭಾವಿಸಲಾಗುತ್ತಿತ್ತು.

ಕೈಗಾರಿಕಾ ಕ್ರಾಂತಿಯ ಪೂರ್ವದಲ್ಲಿ ಬಹುತೇಕ ಉದ್ಯೋಗಗಳು ಮನುಷ್ಯನ ದೈಹಿಕ ಶ್ರಮದ ಮೇಲೆ ಅವಲಂಬಿತವಾಗಿರುತ್ತಿದ್ದವು. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಹಿಂದಿನಿಂದಲೂ ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು’ ಎನ್ನುವ ಮನಸ್ಥಿತಿಯೇ ಬೇರು ಬಿಟ್ಟಿತ್ತು. ಹೊಲದಲ್ಲಿ ಬೆವರು ಸುರಿಸಿ ದುಡಿಯುವುದಕ್ಕೆ ಸದೃಢವಾದ ದೇಹ, ಶ್ರಮಕ್ಕೆ ಎದೆಗುಂದದ ಮನಸ್ಸು ಇದ್ದರೆ ಸಾಕು ಬೇರಾವ ಡಿಗ್ರಿಯ ಕಿರೀಟವೂ ಬೇಕಿರಲಿಲ್ಲ. ನೇಗಿಲು ಹೂಡುವುದು, ದನಕರುಗಳ ಸಾಕಣೆ, ಬಿತ್ತನೆ, ನೀರಾವರಿ, ಕೊಯ್ಲು ಮೊದಲಾದ ಕೆಲಸಗಳಿಗೆ ಅಗತ್ಯವಾದ ಪರಿಣಿತಿಯನ್ನು ಕಿರಿಯರು ಬಯಲ ವಿಶ್ವವಿದ್ಯಾಲಯದಲ್ಲಿ ಹಿರಿಯರಿಂದ ಕಲಿಯುತ್ತಿದ್ದರು. ಪರೀಕ್ಷೆಗಳಿಲ್ಲದೆ, ಹೋಂ ವರ್ಕ್ ಇಲ್ಲದೆ, ಇಂಟರ್ನಲ್ ಮಾರ್ಕುಗಳ ಪೀಡನೆಯಿಲ್ಲದೆ ಹೊಸ ತಲೆಮಾರಿನ ನೇಗಿಲ ಯೋಗಿಗಳು ಸಿದ್ಧರಾಗುತ್ತಿದ್ದರು.

ಕಮ್ಮಾರಿಕೆ, ಚಮ್ಮಾರಿಕೆ, ಕುಂಬಾರಿಕೆ, ಶಿಲ್ಪ ಕಲೆ, ಮೀನು ಹಿಡಿಯುವುದು ಮೊದಲಾದ ವೃತ್ತಿಗಳಲ್ಲಿಯೂ ಸಹ ಓದು ಬರಹದ ಆವಶ್ಯಕತೆ ನುಸುಳಿರಲಿಲ್ಲ. ವೃತ್ತಿಗೆ ಬೇಕಾದ ಕೌಶಲ್ಯವನ್ನು ಕೆಲಸ ಮಾಡಿಸುತ್ತಲೇ ಕಲಿಸಲಾಗುತ್ತಿತ್ತು. ಒಬ್ಬ ನುರಿತ ಕುಂಬಾರ ತನ್ನ ಮಕ್ಕಳನ್ನು ಎದುರಲ್ಲೇ ಕೂರಿಸಿಕೊಂಡು ಕುಂಬಾರಿಕೆಯ ಸೂಕ್ಷ್ಮಗಳ, ನಯ ನಾಜೂಕುಗಳ ಪರಿಚಯ ಮಾಡಿಸಿಕೊಡುತ್ತಿದ್ದ. ‘ಇಪ್ಪತ್ತು ದಿನದಲ್ಲಿ ಡಿ.ಟಿ.ಪಿ ಕಲಿಯಿರಿ’ ಎನ್ನುವ ಪುಸ್ತಕಗಳ ಭರಾಟೆಯ ಈ ಕಾಲದಲ್ಲಿ ಪುಸ್ತಕಗಳ, ಅಕ್ಷರಗಳ, ಔಪಚಾರಿಕ ಶಿಕ್ಷಣದ ಹಂಗೇ ಇಲ್ಲದ ಕಲಿಕೆಯ ಪದ್ಧತಿಯೊಂದು ಅಸ್ತಿತ್ವದಲ್ಲಿತ್ತು ಎಂದರೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ನಾಗರೀಕತೆಯ ಗಂಧ ಗಾಳಿಯೂ ತಗುಲದೆ ಕಾಡಿನಲ್ಲಿ ಓಡಾಡಿಕೊಂಡ ಬುಡಕಟ್ಟುಗಳಲ್ಲಿನ ಮಕ್ಕಳಿಗೆ ಯಾವ ಅಧಿಕೃತ ಟ್ರೇನಿಂಗ್ ಇಲ್ಲದೆ ಮರ ಹತ್ತುವುದು, ಈಜುವುದು, ಜೇನು ಸಂಗ್ರಹಿಸುವುದು, ಬೇಟೆಯಾಡುವುದು, ಮದ್ದು ಮಾಡುವುದು ತಿಳಿದಿರುತ್ತಿತ್ತು. ನೂರು ಇನ್ನೂರು ಜಾತಿಯ ಮರಗಳ ಹೆಸರು, ಪ್ರಾಣಿ ಪಕ್ಷಿಗಳ ವರ್ತನೆ, ಆಹಾರ ಪದ್ಧತಿಗಳ ಅರಿವು ಇರುತ್ತಿತ್ತು.

ಯಂತ್ರಗಳ ಭರಾಟೆ

ಹೀಗಿರುವಾಗ ಕೈಗಾರಿಕಾ ಕ್ರಾಂತಿಯ ಯುಗ ಪ್ರಾರಂಭವಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಉಂಟಾದ ಕ್ರಾಂತಿಕಾರಿ ಬೆಳವಣಿಗೆಗಳು, ಜನರ ಆಹಾರ ಪದ್ಧತಿ, ಜೀವನ ಮಟ್ಟದಲ್ಲಿನ ಸುಧಾರಣೆಯಿಂದ ಜನಸಂಖ್ಯೆಯು ಕ್ಷಿಪ್ರಗತಿಯಲ್ಲಿ ಏರಿದಾಗ ಸಾಂಪ್ರದಾಯಿಕ ಮಾದರಿಯ ಉದ್ದಿಮೆಗಳು ಹೊಸ ಬೇಡಿಕೆಯನ್ನು ಈಡೇರಿಸುವುದು ದುಸ್ಸಾಧ್ಯವಾಯಿತು. ಆಗ ಮನುಷ್ಯನ ದೈಹಿಕ ಶ್ರಮಕ್ಕೆ ಪರ್ಯಾಯವಾಗಿ ಯಂತ್ರಗಳ ನಿರ್ಮಾಣ ಪ್ರಾರಂಭವಾಯ್ತು. ಹತ್ತು ಮಂದಿ ಕೃಷಿಕರು ಮಾಡುವ ಕೆಲಸವನ್ನು ಒಂದು ಟ್ರ್ಯಾಕ್ಟರ್ ಮಾಡಲು ಶುರು ಮಾಡಿತು. ನೂರಾರು ಮಂದಿ ನೇಕಾರರ ಕೆಲಸವನ್ನು ಒಂದು ಮಗ್ಗದ ಯಂತ್ರ ಕಸಿದುಕೊಂಡಿತು.

ಯಂತ್ರೋಪಕರಣ ,ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಪ್ರಗತಿಯಾದಂತೆ ಬೃಹತ್ ಕೈಗಾರಿಕಗಳು, ಅತಿ ಸಂಕೀರ್ಣವಾದ ಯಂತ್ರೋಪಕರಣಗಳು ಬಳಕೆಗೆ ಬಂದವು. ಯಂತ್ರಗಳು ಹೆಚ್ಚು ಹೆಚ್ಚು ಸಂಕೀರ್ಣವಾದಂತೆ ಅವುಗಳನ್ನು ನಿಯಂತ್ರಿಸುವ ನೌಕರನಿಗೆ ಅದರ ಬಗ್ಗೆ ಮಾಹಿತಿ ಇರುವುದು ಅತ್ಯವಶ್ಯಕವಾಯಿತು. ಲ್ಯಾಬುಗಳಲ್ಲಿ, ವರ್ಕ್ ಶಾಪುಗಳಲ್ಲಿ, ಇಂಜಿನಿಯರಿಂಗ್ ಕಮ್ಮಟಗಳಲ್ಲಿ ತಯಾರಾಗುವ ಯಂತ್ರಗಳನ್ನು ನಿಯಂತ್ರಿಸುವುದು, ಅವುಗಳಿಂದ ಕೆಲಸ ತೆಗೆಯುವುದು ಹೇಗೆ ಎನ್ನುವುದನ್ನು ವಿವರಿಸುವುದಕ್ಕೆ ಪುಸ್ತಕಗಳ ರಚನೆಯಾಯ್ತು. ಇದು ಪುಸ್ತಕಗಳ, ಕಾಲೇಜುಗಳ ಮೂಲಕ ಕೆಲಸ ಕಲಿಯುವ ಸಂಸ್ಕೃತಿಗೆ ನಾಂದಿ ಹಾಡಿತು.

ವರವೂ ಶಾಪವೂ

ಇಂದಿನ ಅತಿ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಗಳಿಕೆ ಸುಲಭವಲ್ಲ. ಯಾವುದೇ ಕ್ಷೇತ್ರದಲ್ಲಾಗಲಿ ಕೆಲಸ ಮಾಡುವುದಕ್ಕೆ ಸಿದ್ಧರಿರುವ ಅಭ್ಯರ್ಥಿಗಳ ದೊಡ್ಡ ಹಿಂಡೇ ಇರುತ್ತದೆ. ಹೀಗಿರುವಾಗ ಆಯಾ ಕ್ಷೇತ್ರಗಳಲ್ಲಿ ಅತ್ಯುನ್ನತ ವಿದ್ಯಾಭ್ಯಾಸ ಪಡೆದಿರುವ, ಹೆಚ್ಚಿನ ಪರಿಣಿತಿ ಇರುವವರಿಗೇ ಮಣೆ ಹಾಕುವುದು ಸಹಜ. ಹಿಂದೆ ಓದು ಬರಹವಿಲ್ಲದಿದ್ದರೂ, ಕಾಲೇಜು ಡಿಗ್ರಿಯಿಲ್ಲದಿದ್ದರೂ ನಾಟಿ ವೈದ್ಯನೊಬ್ಬನ ಬಳಿ ಕೆಲಸ ಕಲಿತು ವೈದ್ಯನಾಗಿಬಿಡಬಹುದಾಗಿತ್ತು. ಆದರಿಂದು ಪರಿಸ್ಥಿತಿ ಅಷ್ಟು ಸರಳವಾಗಿಲ್ಲ. ಹತ್ತು ವರ್ಷಗಳ ನಂತರ ವೈದ್ಯನಾಗಬೇಕೆಂಬ ಆಕಾಂಕ್ಷೆಯಿದ್ದರೆ ಇಂದಿನಿಂದಲೇ ತಯಾರಿಗೆ ತೊಡಗಬೇಕು. ಎಸ್ಸೆಸೆಲ್ಸಿ ನಂತರ ಪಿಯುಸಿಯಲ್ಲಿ ಸೈನ್ಸನ್ನೇ ತೆಗೆದುಕೊಳ್ಳಬೇಕು. ಪಿಯುಸಿಯಲ್ಲಿ ಬಯಾಲಜಿಯನ್ನು ಚೆನ್ನಾಗಿ ಓದಿ ಸಿಇಟಿಯಲ್ಲಿ ರ್ಯಾಂಕು ಗಿಟ್ಟಿಸಿಕೊಳ್ಳಬೇಕು. ಐದು ವರ್ಷ ಮೆಡಿಸಿನ್ ಅಧ್ಯಯನ ಮಾಡಿದೊಡನೆ ಅವಕಾಶಗಳ ವರ್ಷಧಾರೆಯಾಗುವುದಿಲ್ಲ. ಎಂಡಿಯನ್ನು ಪೂರೈಸಿಕೊಳ್ಳಬೇಕು. ಇಷ್ಟೆಲ್ಲ ಓದಿದವನು ಡಾಕ್ಟರ್ ಆಗದೆ ಬೇರೆ ಏನಾಗಲಿಕ್ಕೆ ಸಾಧ್ಯ? ಅಷ್ಟು ವರ್ಷಗಳ ಅಧ್ಯಯನಕ್ಕೆ ತೊಡಗಿಸಿದ ಸಮಯ, ವಿನಿಯೋಗಿಸಿದ ಹಣ ಸಾರ್ಥಕವಾಗಬೇಕಾದರೆ ಆತ ವೈದ್ಯನಾಗಿಯೇ ಉಳಿದ ಬದುಕನ್ನು ನಡೆಸಬೇಕು.

ಇಂಜಿನಿಯರಿಂಗ್, ಮೆಡಿಸಿನ್, ನರ್ಸಿಂಗ್, ಸಿಎ(ಚಾರ್ಟೆಡ್ ಅಕೌಂಟೆಂಟ್) ಮೊದಲಾದ ವೃತ್ತಿ ಪರ ಕೋರ್ಸುಗಳು ಇಂದಿನ ವಿದ್ಯಾರ್ಥಿಗಳಿಗೆ ವರವೂ ಶಾಪವೂ ಆಗಿರುವ ಸಂಕೀರ್ಣ ಪರಿಸ್ಥಿತಿ ಸೃಷ್ಟಿಯಾಗಿದೆ. ತಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಅಲ್ಪಾವಧಿಯಲ್ಲಿ ಗರಿಷ್ಟ ಮಟ್ಟದ ಪರಿಣಿತಿಯನ್ನು ಸಾಧಿಸಿಕೊಳ್ಳಲು ವೃತ್ತಿ ಪರ ಕೋರ್ಸುಗಳು ವರದಾನವಾಗಿವೆ. ಅಲ್ಲದೆ ನಿರ್ಧಿಷ್ಟ ಉದ್ಯೋಗದ ಭರವಸೆಯೂ ಇರುವುದರಿಂದ ತಾನು ಓದುತ್ತಿರುವುದು ಏತಕ್ಕೆ ಎನ್ನುವ ಸ್ಪಷ್ಟತೆಯೂ ವಿದ್ಯಾರ್ಥಿಗೆ ಇರುತ್ತದೆ. ನಿಗಧಿಯಾದ ಕಾಲಮಾನದ ಕೋರ್ಸಿನ ನಂತರ ಇಂತಿಂಥ ಉದ್ಯೋಗ ಖಾತ್ರಿ ಎನ್ನುವ ಭರವಸೆಯಿದ್ದರೆ ಬ್ಯಾಂಕುಗಳಲ್ಲಿ ಸಾಲವನ್ನಾದರೂ ಮಾಡಿ ಶಿಕ್ಷಣವನ್ನು ಪೂರೈಸಬಹುದು. ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ವೃತ್ತಿ ಪರ ಕೋರ್ಸುಗಳು ಸ್ವರ್ಗವನ್ನು ಅಂಗೈಯಲ್ಲಿಡುವ ದಿವ್ಯ ಮಂತ್ರದಂಡವಾಗಿ ಕಾಣುತ್ತವೆ.

ಈ ವ್ಯವಸ್ಥೆಯ ಕರಾಳ ಮುಖವೂ ಇದೆ. ಶಿಕ್ಷಣವೆನ್ನುವುದು ಮನುಷ್ಯನ ಸರ್ವಾಂಗೀಣ ಬೆಳವಣಿಗೆಯ ಪ್ರಕ್ರಿಯೆ. ವಿದ್ಯಾರ್ಥಿಯೊಳಗೆ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಪೋಷಿಸಿ ಬೆಳೆಸುವ ಜವಾಬ್ದಾರಿ ಶಿಕ್ಷಣದ್ದು ಎಂದೆಲ್ಲಾ ದೊಡ್ಡ ಮಾತುಗಳನ್ನು ಆಡಿದರೂ, ಇಂದು ಶಿಕ್ಷಣ ಎನ್ನುವುದು ನೌಕರಿಯನ್ನು ಗಿಟ್ಟಿಸಿಕೊಳ್ಳುವ ನಿರ್ಲಜ್ಜ ರೇಸ್ ಆಗಿ ಹೋಗಿರುವುದು ವಾಸ್ತವ.ವಿಶ್ವವಿದ್ಯಾಲಯಗಳು ಜ್ಞಾನದೇಗುಲಗಳಾಗದೆ ಮಾರುಕಟ್ಟೆಯಲ್ಲಿ ಯಾವ ಕೆಲಸಕ್ಕೆ ಎಷ್ಟು ಬೇಡಿಕೆಯಿದೆ ಎನ್ನುವ ಆಧಾರದ ಮೇಲೆ ಪದವಿಧರರನ್ನು ನಿರ್ಮಿಸಿ ಕೊಡುವ ಕಾರ್ಖಾನೆಗಳಾಗಿವೆ. ವಿದ್ಯಾರ್ಥಿಗಳೋ ಕಾರ್ಖಾನೆಗಳಿಂದ ಹೊರ ಬೀಳುವ ರೆಡಿ ಮೇಡ್ ಬಟ್ಟೆಗಳಂತಾಗಿದ್ದಾರೆ. ಮಾರುಕಟ್ಟೆಯ ಬೇಡಿಕೆ, ಚಲಾವಣೆಯೇ ಮಾನದಂಡವಾಗಿರುವಾಗ ವಿದ್ಯಾರ್ಥಿಯೊಬ್ಬನಿಗೆ ತನ್ನ ವಯಕ್ತಿಕ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಕ್ಕೆ, ಕೆಲಸ ಮಾಡುವುದಕ್ಕೆ ಈ ಶಿಕ್ಷಣ ಪದ್ಧತಿಯೇ ದೊಡ್ಡ ತೊಡಕಾಗಿರುತ್ತದೆ.

ಸಂಗೀತವನ್ನು ಪ್ರೀತಿಸುವ, ಫೊಟೊಗ್ರಫಿಯಲ್ಲಿ ಕೆರಿಯರ್ ಕಟ್ಟಿಕೊಳ್ಳಬಯಸುವ, ನೃತ್ಯ ಪಟುವಾಗುವ, ಕವಿಯಾಗುವ, ಕುಂಚ ಕಲಾವಿದನಾಗುವ, ನಟನಾಗುವ, ಸಿನೆಮಾ ನಿರ್ದೇಶಕನಾಗುವ ಕನಸುಗಳನ್ನು ಹೊತ್ತ ಯುವಕ ಯುವತಿಯರು ಕುರುಡು ಮಾರುಕಟ್ಟೆ ಸೃಷ್ಟಿಸಿದ ಐಟಿ ಬಿಟಿಯ ಹುಚ್ಚು ಹೊಳೆಯಲ್ಲಿ ತೇಲುತ್ತ ಮುಳುಗುತ್ತ ದಿನೇ ದಿನೇ ಸಂಕಟ ಪಡುತ್ತಾ ಕಾಲ ತಳ್ಳುತ್ತಾರೆ.

ಕುರುಡು ಕಾಂಚಾಣದ ಮಾನದಂಡ

ಅನಿಮೇಶನ್, ಫ್ಯಾಶನ್ ಡಿಸೈನಿಂಗ್, ಟಿವಿ ಜರ್ನಲಿಸಮ್ ಹೀಗೆ ತಮಗೆ ಮನಸ್ಸಿರುವ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸುವುದಕ್ಕೆ ಇಂದಿನ ಇಂಟರ್ನೆಟ್, ಮಾಹಿತಿ ತಂತ್ರಜ್ಞಾನ ತೆರೆದಿರುವ ಅವಕಾಶಗಳ ಜಗತ್ತಿನಲ್ಲಿ ಕಷ್ಟವಿಲ್ಲವಾದರೂ ಸಾಮಾಜಿಕ ಮನ್ನಣೆ, ಸಂಬಳ, ಉದ್ಯೋಗ ಅವಕಾಶ, ತಂದೆ ತಾಯಿಗಳ ಪೂರ್ವಾಗ್ರಹಗಳೆಲ್ಲವೂ ಸಂಗಮಿಸಿದ ಕಾಣದ ಕೈ ಅವರನ್ನು ಹಿಡಿದು ಜಗ್ಗುತ್ತಿರುತ್ತದೆ.

ಸಾಫ್ಟ್ ವೇರಿನ ಅಮೇರಿಕನ್ ಡಾಲರ್ ಮೋಹಕ್ಕೆ ಒಳಗಾಗಿ ಅನಧಿಕೃತವಾಗಿ ಯಶಸ್ಸಿನ ಮಾನದಂಡ ಸಿದ್ಧವಾಗಿರುತ್ತದೆ. ಸ್ವಚ್ಛಂದವಾಗಿ ಹಾರುವ ಹಕ್ಕಿಗೂ, ನಿರಾಳವಾಗಿ ಈಜುವ ಮೀನಿಗೂ, ಸರಾಗವಾಗಿ ಹರಿಯುವ ಹಾವಿಗೂ, ನೆಲದ ಮೇಲೆ ಓಡುವ ಜಿಂಕೆಗೂ ಒಂದೇ ಮಾನದಂಡವನ್ನು ಅನ್ವಯಿಸಿ ನೋಡಲಾಗುತ್ತದೆ. ಆಗ ಹಾರು ಹಕ್ಕಿ ಪ್ರಯಾಸದಿಂದ ನಡಿಗೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ, ಚಂಗನೆ ಜಿಗಿಯುವ ಜಿಂಕೆ ಕಿವಿ ಮೂಗು ಬಾಯಿಗಳಲ್ಲಿ ನೀರು ತುಂಬಿಸಿಕೊಂಡು ಈಜೀ ತೋರಿಸಬೇಕಾಗುತ್ತದೆ. ಮೀನಿಗಾದರೋ ಆಗಸಕ್ಕೆ ಚಿಮ್ಮಿ ರೆಕ್ಕೆ ಬಡಿದು ಹಾರಿದರೇ ಸದ್ಗತಿ! ಜಾಗತೀಕರಣದಿಂದ ಆರ್ಥಿಕವಾಗಿ ಮುಕ್ತವಾದ ಸಮಾಜದಲ್ಲಿ ಒಂದು ಹಂತದವರೆಗೆ ಕುಟುಂಬದ ಜವಾಬ್ದಾರಿ, ಆರ್ಥಿಕ ಸುಭದ್ರತೆ, ಉತ್ತಮ ಜೀವನ ಮಟ್ಟದ ಅಪೇಕ್ಷೆ ಮೊದಲಾದ ಕಟ್ಟು ಪಾಡಿಗೆ ಒಳಗಾಗಿ ಕನಸುಗಳನ್ನು ಕೊಂದುಕೊಂಡು ಬದುಕುವ ಅನಿವಾರ್ಯತೆ ಸೃಷ್ಟಿಯಾಯಿತು.

ಇವು ವಲಸೆ ಹಕ್ಕಿಗಳು

ಜಾಗತೀಕರಣ ಆರ್ಥಿಕತೆಯ ಜೊತೆಗೆ ಕ್ರಮೇಣ ಇನ್ನಿತರ ನೆಲೆಗಳಲ್ಲಿ ಪ್ರಭಾವ ಬೀರತೊಡಗಿದಂತೆ ಯುವಕ ಯುವತಿಯರಿಗೆ ಅಪ್ಪ ಅಮ್ಮರ ಕನಸುಗಳಿಗಿಂತ, ಸಮಾಜದ ಮನ್ನಣೆಯ ಮೊಹರಿಗಿಂತ, ಡಾಲರುಗಳ ಲೆಕ್ಕಾಚಾರಕ್ಕಿಂತ ತಮ್ಮ ವೈಯಕ್ತಿಕ ಆಸಕ್ತಿ, ಕನಸುಗಳೇ ಮುಖ್ಯವಾಗತೊಡಗಿದವು. ಯಾವುದೋ ಕಟ್ಟು ಪಾಡಿಗೆ ಒಳಗಾಗಿ ಯಾರದೋ ಮುಲಾಜಿಗೆ ಬಿದ್ದು ತಮಗಿಷ್ಟವಿಲ್ಲದ ಕ್ಷೇತ್ರವನ್ನು ಆರಿಸಿಕೊಂಡರೆ ಜೀವನವಿಡೀ ನರಳಬೇಕಿರುವುದು ತಾವೇ ಎನ್ನುವ ಎಚ್ಚರದ ಮನಸ್ಥಿತಿ ನೆಲೆಗೊಳ್ಳ ತೊಡಗಿದ ಮೇಲೆ ಈ ಅಭೂತ ಪೂರ್ವ ‘ವಲಸೆ’ಗೆ ಚಾಲನೆ ದೊರೆತದ್ದು.

ಸ್ವತಂತ್ರವಾಗಿ ಆಲೋಚನೆ ಮಾಡುವ ಶಕ್ತಿ ಇಲ್ಲದಿರುವಾಗ ತಾಯ್ತಂದೆಯರ ಒತ್ತಾಯಕ್ಕೆ ಸೇರಿದ ಕೋರ್ಸುಗಳ ಹಂಗಿನಲ್ಲೇ ಬದುಕನ್ನೇಕೆ ಬರಡು ಮಾಡಿಕೊಳ್ಳಬೇಕು ಎನ್ನುವ ಅರಿವು ಜಾಗೃತವಾದಂತೆ ‘ಡೈವೋರ್ಸು’ಗಳು ಸಾಮಾನ್ಯವಾಗತೊಡಗಿದವು. ಓದಿದ ಪದವಿಗೆ ಡೈವೋರ್ಸು ಕೊಟ್ಟು ಮನದನ್ನೆಯಾದ ‘ಕೆಲಸ’ದ ಕೈಹಿಡಿಯುವವರ ದಂಡು ಬೆಳೆಯತೊಡಗಿತು. ಹಾಗೆ ನೋಡಿದರೆ ಓದಿದ್ದೇ ಒಂದು ಮಾಡುವ ಕೆಲಸವೇ ಮತ್ತೊಂದು ಎನ್ನುವ ಪ್ರಕ್ರಿಯೆ ಕಲಾವಿದರಿಗೆ ಹೊಸತೇನಲ್ಲ. ಕಲೆಯೆನ್ನುವುದು ಎಂದಿಗೂ ಉದ್ಯೋಗ ಖಾತ್ರಿಯನ್ನು ಒದಗಿಸುವುದಕ್ಕೆ ಸಾಧ್ಯವಿಲ್ಲದುದರಿಂದ ಅದು ಎಂದಿಗೂ ಶಿಕ್ಷಣದಲ್ಲಿ ಹಾಟ್ ಕೇಕ್ ಆಗಿ ಗುರುತಿಸಲ್ಪಡಲೇ ಇಲ್ಲ. ಹೀಗಾಗಿ ಹಾಡುಗಾರರು, ಸಂಗೀತ ನಿರ್ದೇಶಕರು, ನಟ- ನಟಿಯರು, ನಿರ್ದೇಶಕರು, ಕವಿಗಳು, ಕಾದಂಬರಿಕಾರರು, ಪತ್ರಕರ್ತರು, ನಾಟಕಕಾರರು ಎಲ್ಲರೂ ಒಂದು ಮಟ್ಟದಲ್ಲಿ ವಲಸೆ ಹಕ್ಕಿಗಳೇ. ಹೊಟ್ಟೆಯ ಹಸಿವಿಗೆ ಯಾವುದೋ ನೌಕರಿಯಲ್ಲಿದ್ದರೂ ಆತ್ಮದ ಹಸಿವಿಗೆ ಕಲೆಯನ್ನು ನೆಚ್ಚಿಕೊಳ್ಳುವವರೂ, ಮನಸ್ಸು ಹೇಳಿದ ದಾರಿಯಲ್ಲೇ ಸಾಗಿ ಎದುರಾಗುವ ಸವಾಲುಗಳನ್ನೆಲ್ಲ ಮೆಟ್ಟಿ ನಿಂತವರು ಸೃಜನಶೀಲ ಕ್ಷೇತ್ರಗಳಲ್ಲಿ ಅನೇಕರಿದ್ದಾರೆ.

ಅನಂತ ಆಗಸ

ಗ್ರಹಿಕೆಗಳಲ್ಲಿ, ಜೀವನ ದೃಷ್ಟಿಯಲ್ಲಿ ಎಲ್ಲಾ ನೆಲೆಗಳಲ್ಲಿ ಮುಕ್ತವಾಗುತ್ತಿರುವ ಇಂದಿನ ಸಮಾಜದಲ್ಲಿ ಈ ಬಗೆಯ ‘ವಲಸೆ’ಯೆಂಬುದು ತೀರಾ ಸಹಜ ಎನ್ನುವ ಮಟ್ಟಿಗಿನ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನಾಲ್ಕು ವರ್ಷಗಳ ಕಾಲ ಇಂಜಿನಿಯರಿಂಗ್ ಓದಿದವನು ಎಂಬಿಎ ಮಾಡಿಕೊಂಡು ಹಣಕಾಸು ಸಂಸ್ಥೆಯನ್ನು ಪ್ರವೇಶಿಸಿ ವ್ಯವಸ್ಥಾಪಕನಾಗಲು, ಐ.ಎ.ಎಸ್ ಇಲ್ಲವೇ ಕೆ.ಎ.ಎಸ್ ಪರೀಕ್ಷೆ ಬರೆದು ಸರಕಾರಿ ಆಡಳಿತ ಯಂತ್ರದ ಭಾಗವಾಗಲು, ಮಾನವಿಕ ವಿಷಯಗಳಲ್ಲಿ ಪದವಿಯನ್ನು ಪಡೆಯಲು, ಪೂರ್ಣ ಪ್ರಮಾಣದ ಸಾಹಿತಿಯಾಗಲು, ಪತ್ರಕರ್ತನಾಗಲು, ಟಿವಿ ನಿರೂಪಕನಾಗಲು, ರೇಡಿಯೋ ಜಾಕಿಯಾಗಲು, ಸಂಗೀತ ನಿರ್ದೇಶಕನಾಗಲು, ಇವೆಂಟ್ ಆರ್ಗನೈಸರ್ ಆಗಲು, ಜಾಹೀರಾತು ಏಜನ್ಸಿ ಸೇರಲು, ಸ್ವಂತ ಉದ್ದಿಮೆಯನ್ನು ಬೆಳೆಸಲು ಹೀಗೆ ಏನು ಬೇಕಾದರು ಮಾಡಲು ಅವಕಾಶಗಳಿವೆ.

ವೃತ್ತಿ ಪರ ಕೋರ್ಸುಗಳು ಇಷ್ಟೆಲ್ಲ ವ್ಯಾಪವಾಗಿ ನೆಲೆಗೊಳ್ಳುತ್ತಿದ್ದರೂ ಕಂಪೆನಿಗಳ ವಲಯದಲ್ಲಿ ಹೊಸತೊಂದು ಮಾತು ಕೇಳಿಬರುತ್ತಿದೆ. ದಿನದಿನಕ್ಕೆ ಚಹರೆಯೇ ಬದಲಾಗುವ ಮಟ್ಟಿಗೆ ಬೆಳೆಯುತ್ತಿರುವ ಮಾರುಕಟ್ಟೆಯ ಸ್ಟ್ಯಾಂಡರ್ಡಿಗೆ ತಕ್ಕ ಶಿಕ್ಷಣ ಕೊಡುವುದಕ್ಕೆ ಶಿಕ್ಷಣ ಸಂಸ್ಥೆಗಳಿಂದ ಸಾಧ್ಯವಿಲ್ಲ. ಹೀಗಾಗಿ ದುಡಿಯುವ ಹುಮ್ಮಸ್ಸಿರುವ, ಬುದ್ಧಿವಂತ ಅಭ್ಯರ್ಥಿಗಳಿಗೆ ನಾವೇ ಖುದ್ದಾಗಿ ತರಬೇತಿ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ ಎನ್ನುವ ವಿಶ್ವಾಸ ಕಂಪೆನಿಗಳಿಗೂ ಬಂದಿರುವುದರಿಂದ ಮಾಡುವ ಕೆಲಸಕ್ಕೆ ಓದಿದ ಪದವಿಗಳ ಹಂಗು ಇಲ್ಲದಂತಾಗಿದೆ.

ದಿನ ದಿನಕ್ಕೂ ಬದಲಾಗುವ ಮಾರುಕಟ್ಟೆ, ಧುತ್ತನೆ ಏರಿ ಮತ್ತೆ ಕುಸಿಯುವ ಜಾಗತಿಕ ಆರ್ಥಿಕತೆ, ಹಣವೊಂದೇ ಎಲ್ಲ ಅಲ್ಲ ಎನ್ನುವ ಅರಿವು ಮೆಲ್ಲಗೆ ಮಧ್ಯಮ ವರ್ಗದಲ್ಲಿ ಪಸರಿಸುತ್ತಿರುವುದು ಇವೆಲ್ಲವುಗಳ ನಡುವೆ ಈ ‘ವಲಸೆ’ ಹಕ್ಕಿಗಳು ತಮ್ಮ ಕನಸನ್ನು ಬೆನ್ನಟ್ಟಿ ಹೊರಡುವುದು ಚೇತೋಹಾರಿಯಾದ ಬೆಳವಣಿಗೆಯೇ ಸರಿ… ಏನಂತೀರಿ?

Advertisements

1 thought on “ಓದೋದೊಂದು, ಮಾಡೋದೊಂದು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s