ಗಾಂಧಿ ಬಜಾರು

ತಣ್ಣಗೆ ಕಲ್ಲಾಗಿ
ನಿಂತ ಗಾಂಧಿ
ತನ್ನುಸಿರಿನ ಹಬೆಗೆ
ಕರಗಿ ಕಾಲಬಳಿ
ಹರಿದಂತೆ ಭಾಸವಾದ
ಕ್ಷಣದಲ್ಲಿ ಆಕೆಗೆ
ಇಡೀ ಗಾಂಧಿ ಬಜಾರು
ಒಡಲಲ್ಲಿ ಉಗಿ ಇಟ್ಟುಕೊಂಡ
ಅನ್ನದ ಹೆಂಟೆಯಾಗಿ ಕಂಡಿತ್ತು

ಕಲ್ಲು ಮೆಟ್ಟಿಲಿನ ಅಂಚಿಗೆ
ತೊಡೆಯನ್ನು ಅಮುಕಿ
ಸುಡುವ ಫ್ರೈಡ್ ರೈಸಿನ
ಮುದ್ದೆ ಕೆದರಿ, ಹರಡಿ
ಏನನ್ನೋ ಹುಡುಕುವಾಗ
ಫೋರ್ಕಿನ ಕಿಂಡಿಯಿಂದ
ನುಗ್ಗಿದ ಹಬೆಯು ಆಕೆಗೆ
ಅವನ ಒಲವಿನ
ಉನ್ಮಾದವಾಗಿಯೇ ಕಂಡಿತ್ತು

ಸಮಯಕಾದು ಅವಸರಿಸಿ
ಒಳಗೆ ನುಗ್ಗಲು
ಹೊರಟ ಸದ್ದಿನ ಮೂಟೆಯನ್ನು
ಕಿವಿಯ ಬಾಗಿಲಲ್ಲೇ ಕೆಡವಿದಳು
ಕಿರುಬೆರಳ ಉಗುರಲ್ಲಿ
ನಿರ್ದಯವಾಗಿ ಸಿಗಿದಳು
ಹಾರ್ನು, ಮೈಕು ಸೆಟ್ಟು, ಇಂಜಿನ್ನು,
ಪೊಲೀಸ್ ಸೀಟಿ ಸದ್ದುಗಳೆಲ್ಲ
ಫ್ರೈಡ್ ರೈಸಿನ ಉದುರುದುರು
ಅಗುಳಿನ ಹಾಗೆ ಹರಡಿ ಹೋದಲ್ಲಿ
ಆತ ಸ್ಮಿತಾ ಎಂದಂತೆ ಕೇಳಿತ್ತು

ಹುರಿದ ಅನ್ನಕ್ಕೆ ಸಾಸ್ ಮುಟ್ಟಿಸಿ
ಇಷ್ಟಿಷ್ಟೇ ಒಳಕ್ಕಿಳಿಸಿದಳು
ಹಬೆ ಮುತ್ತಿ ಮಂಜಾದ
ಕನ್ನಡಕದ ಹಿಂದಿನ ಕಣ್ಣುಗಳಿಗೆ
ಮುತ್ತಿಗೆ ಹಾಕಿವೆ
ನೂರೆಂಟು ಬಣ್ಣಗಳು
ಸೀರೆ, ಸಲ್ವಾರ್, ಚಿನ್ನದ ಬಳೆ
ಜಾರಿದ ಜೀನ್ಸು ಹತ್ತಿರ ದೂರ
ದಪ್ಪ, ಆಳಗಳನ್ನು ಕಳೆದುಕೊಂಡು
ಎಲ್ಲವೂ ಕ್ಯಾನ್ವಾಸಿಗೆ ಅಂಟಿದ
ವರ್ಣಗಳಾಗಿರುವಾಗ ಆತ
ನಡೆದುಬಂದಂತೆ ಆಕೆಗೆ ಕಂಡಿತ್ತು

ಭುಜದಿಂದ ವೇಲು ಜಾರಿದ
ವರ್ತಮಾನ ಜಾಹೀರು ಮಾಡಲು
ಬಂದ ತಂಗಾಳಿ
ತಟ್ಟೆ ಅನ್ನವನ್ನು ಕೊಂದಂತಿತ್ತು,
ಹಬೆಯುಸಿರು ನಿಲ್ಲಿಸಿದ
ಫ್ರೈಡ್ ರೈಸಿಗಾಗಿ
ತಟ್ಟೆ ಕಂಬನಿ ಸುರಿಸಿತ್ತು
ಮೆತ್ತಗೆ ಶವ ಹೂಳಿ
ಕೈತೊಳೆದು ಕರವಸ್ತ್ರ ತೆಗೆದಾಗ
ಅನಾಯಾಸ ಹನಿ ಕಣ್ಣಿಂದ
ಉರುಳಿತ್ತು
ಅವನಿದ್ದಿದ್ದರೆ ಇಂದಿಗೆ ಮುವತ್ತು
ತುಂಬಿರುತ್ತಿತ್ತು!

Advertisements

2 thoughts on “ಗಾಂಧಿ ಬಜಾರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s