ಕನ್ನಡಿಯಲ್ಲಿ ಕಂಡ ಮುಖ ನನ್ನದಲ್ಲ!

ನಮ್ಮ ದಿನನಿತ್ಯದ ವರ್ತನೆ, ಕ್ರಿಯೆಗಳಲ್ಲಿ; ಅನುಭವಗಳನ್ನು ಗ್ರಹಿಸುವ ವಿಧಾನದಲ್ಲಿ ಬಾಹ್ಯ ಪ್ರಭಾವಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತವೆ ಎನ್ನುವುದನ್ನು ಅವಲೋಕಿಸುವುದು ಸೋಜಿಗದ ಸಂಗತಿ. ನಾವು ಅದೆಷ್ಟೇ ಪ್ರಜ್ಞಾಪೂರ್ವಕವಾಗಿ ವರ್ತಿಸುತ್ತಿದ್ದೇವೆ ಎಂದು ಭಾವಿಸಿದರೂ ಸಹ ಅಗೋಚರವಾದ ಸಾವಿರಾರು ಸಂಗತಿಗಳು ನಮ್ಮ ನಿರ್ಧಾರಗಳು, ಆಲೋಚನೆಗಳನ್ನು ಪ್ರಭಾವಿಸುತ್ತಿರುತ್ತವೆ.

ಹಾಗೆ ನೋಡಿದರೆ ಪ್ರಜ್ಞಾವಂತ, ಪ್ರಯತ್ನಪೂರ್ವಕ ಚರ್ಯೆ ಎನ್ನುವುದೇ ತೊಡಕಿನ ಸಂಗತಿ..  ನಾವು ಎಲ್ಲವನ್ನೂ ಕಲಿಯಲು ಪ್ರಾರಂಭಿಸಿದ್ದೇ ಅನುಕರಣೆಯಿಂದ. ತೊದಲನ್ನಾಡುತ್ತ ನಾಲಿಗೆ ಹೊರಳಿಸುವುದರಿಂದ ಹಿಡಿದು ನಡೆಯುವುದರವರೆಗೆ ಎಲ್ಲವನ್ನೂ ನಾವು ನಮ್ಮ ಸುತ್ತಮುತ್ತಲಿನ ಪರಿಸರದ ಅನುಕರಣೆಯಿಂದಲೇ ಕಲಿಯುವುದು. ಹೀಗಿರುವಾಗ ನಮ್ಮ ಸುತ್ತಲಿನ ಪರಿಸರ, ನಾವು ಓದುವ ಪತ್ರಿಕೆ, ಕಾದಂಬರಿ, ಪುಸ್ತಕಗಳು, ಕೇಳುವ ಹಾಡುಗಳು, ಮಾತುಗಳು, ಸಾಕ್ಷಿಯಾದ ಘಟನೆಗಳು, ನೋಡುವ ಸಿನೆಮಾ, ಧಾರಾವಾಹಿ, ಟಿವಿ  ಕಾರ್ಯಕ್ರಮಗಳು ನಮ್ಮ ಮೇಲೆ ಪ್ರಭಾವ ಬೀರದಿರಲು ಸಾಧ್ಯವೇ?

ಇವೆಲ್ಲವೂ ತುಂಬಾ ವ್ಯಾಪಕವಾದ ಹರವನ್ನು ಹೊಂದಿರುವ ವಿಷಯವಾದ `ಮನುಷ್ಯ ಪ್ರಜ್ಞೆ’ಯನ್ನು ಸಂಬಂಧಿಸಿದವಾದರೂ ಸಣ್ಣದಾಗಿ ನಾನು ಒಂದು ಪ್ರಭಾವದ ಬಗ್ಗೆ ಹೇಳಬಯಸುವೆ: ಅದು ಸಿನೆಮಾ.

ದೃಶ್ಯಾವಳಿಗಳು (ವಿಶ್ಯುಯಲ್ಸ್) ನಮ್ಮ ದಿನ ನಿತ್ಯದ ಅಂತರಂಗದ ಚಟುವಟಿಕೆಗಳಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ನಾವು ಬಹುತೇಕ ಗ್ರಹಿಸುವುದು ಕಣ್ಣುಗಳ ಮೂಲಕವೇ. ಆ ಕಾರಣಕ್ಕೇ ನಾವು ಏನನ್ನಾದರೂ ಕೇಳುವಾಗ, ಕಲ್ಪಿಸಿಕೊಳ್ಳುವಾಗ, ಕನಸುವಾಗ ಅವೆಲ್ಲ ನಮ್ಮ `ಅಂತಃಚಕ್ಷು’ವಿನ ಎದುರಿನ ಪರದೆಯ ಮೇಲೆ ಚಿತ್ರಿತವಾಗುತ್ತಾ ಹೋಗುವಂತೆ ಭಾಸವಾಗುತ್ತದೆ. ಗಾಳಿಗೆ ಓಲಾಡುವ ಸುಂದರವಾದ ಹುಡುಗಿಯ ಮುಂಗುರುಳು ಎಂದೊಡನೆ ನಮ್ಮ ಮನಸ್ಸಿನ ಕಣ್ಣೆದುರು ಆ ದೃಶ್ಯ ಮೂಡಿ ನಿಂತಿರುತ್ತದೆ. ಹೀಗೆ ನಮ್ಮ ಅನುಭವಗಳಿಗೆ, ನಮ್ಮ ಗ್ರಹಿಕೆಗೆ ಬೇಕಾಗುವ ದೃಶ್ಯಗಳನ್ನು ಮನಸ್ಸು ಸುಪ್ತವಾಗಿ ಅಡಗಿದ ದೃಶ್ಯಾವಳಿಗಳನ್ನು ಆಕರವಾಗಿ ಬಳಸಿ ಕಟ್ಟಿಕೊಡುತ್ತದೆ.

ಯಶವಂತ ಚಿತ್ತಾಲರ `ಸಾಹಿತ್ಯ, ಸೃಜನಶೀಲತೆ ಮತ್ತು ನಾನು’ ಕೃತಿಯಲ್ಲಿನ ಪ್ರಬಂಧವೊಂದರಲ್ಲಿ ಅವರು ಒಂದು ಉದಾಹರಣೆ ನೀಡುತ್ತಾರೆ. ನಿಮ್ಮ ಮನೆಯ ಎದುರಿನ ತುಳಸಿಕಟ್ಟೆಯ ಬಳಿ ನಾಗರ ಹಾವೊಂದನ್ನು ನೋಡಿದಿರಿ ಎಂದಿಟ್ಟುಕೊಳ್ಳಿ. ಅದು ವಾಸ್ತವ. ಅಲ್ಲಿ ಹಾವು ಇದೆ ಅದನ್ನು ನೀವು ನೋಡಿದಿರಿ. ಆದರೆ ರಾತ್ರಿ ನಿಮ್ಮ ಕನಸಿನಲ್ಲಿನಾಗರಹಾವೊಂದು ಕಾಣಿಸಿಕೊಂಡಿತೆಂದರೆ ಅದಕ್ಕೆ ಸುಪ್ತವಾದ ಮನಃಶಾಸ್ತ್ರೀಯ ಕಾರಣವಿರುತ್ತದೆ. ಯಾವುದೋ ಭಾವಕ್ಕೆ, ಅನುಭವಕ್ಕೆ, ಆಲೋಚನೆಗೆ, ಅಡಗಿದ ಕಾಮನೆಗೆ, ತಪ್ತತೆಗೆ ಪ್ರತಿಮೆಯಾಗಿ ಆ ನಾಗರಹಾವು ಕನಸಿನಲ್ಲಿ ಕಂಡಿರುತ್ತದೆ. ಸುಪ್ತವಾದ ಭಾವನೆಯೊಂದಕ್ಕೆ ಸಂವಾದಿಯಾಗಿ ಮನಸ್ಸು ಈ ದೃಶ್ಯಾವಳಿಯನ್ನು ಕಟ್ಟಿಕೊಟ್ಟಿರುತ್ತದೆ.

ಈಗ ನಮಗೆ ದೃಶ್ಯಾವಳಿಗಳು ಅಥವಾ ವಿಶ್ಯುಯಲ್ಸ್ ಪಾತ್ರ ನಮ್ಮ ದಿನ ನಿತ್ಯದ ಆಲೋಚನೆ, ಗ್ರಹಿಕೆ, ಅಭಿವ್ಯಕ್ತಿಗಳಲ್ಲಿ ಎಷ್ಟಿದೆ ಎಂಬುದರ ಅರಿವಾಯಿತು ಎಂದುಕೊಳ್ಳುವೆ. ಮುಂದುವರೆದು ನಮ್ಮ ಮುಖ್ಯ ಪ್ರಶ್ನೆಗೆ ಬರೋಣ. ನಮ್ಮ ಒಳಮನಸ್ಸಿನ ಕರೆನ್ಸಿ ಎನ್ನಬಹುದಾದ ಈ ದೃಶ್ನಯಾವಳಿಗಳನ್ನು ಗಾಢವಾಗಿ ಪ್ರಭಾವಿಸುವ ಏಕೈಕ ಸಂಗತಿಯೆಂದರೆ ನಮ್ಮ ಕಣ್ಣ ಮುಂದಿರುವ ಈ ವಾಸ್ತವ ಜಗತ್ತು. ಇಲ್ಲಿ ನಾವು ಏರುವ ರೈಲು ಬಂಡಿ ಹೊಗೆಯುಗುಳುತ್ತ ಧಡಧಡ ಸದ್ದು ಮಾಡುತ್ತ ಹತ್ತಿರ ಬರುವುದು; ನಿರ್ಜನವಾದ ಪರ್ವತದ ಹೆಗಲ ಮೇಲೆ ಸೂರ್ಯ ಏರಿ ಬರುವುದು; ಜನನಿಬಿಡ ರಸ್ತೆಯ ಪಕ್ಕದ ಫುಟ್ ಪಾತಿನಲ್ಲಿ ಕುಡುಕನೊಬ್ಬ ಮೈಮರೆತು ಬಿದ್ದಿರುವುದು; ಆಸ್ಪತ್ರೆಯ ಬಿಳೀ ಟೈಲ್ಸ್ ಹೊದ್ದ ನೆಲ, ಬಿಳಿ ಬೆಡ್ ಶೀಟು; ಬಿಳಿ ಏಪ್ರನ್ ತೊಟ್ಟ ಬಿಳಿ ಗಡ್ಡದ ವಿಜ್ಞಾನಿ; ಶುಭ್ರ ಬಿಳುಪಿನ ಹಿಮಾಲಯ; ಬಿಳಿ ಬೆಳಕು ಹೀಗೆ ದೃಶ್ಯಾವಳಿಗಳ ಸರಣಿಯನ್ನೇ ಮನಸ್ಸು ಪೋಣಿಸಿಕೊಳ್ಳಲು ನಮ್ಮ ಭೌತಿಕ ಜಗತ್ತು ಒದಗಿಸುವ ಕಚ್ಚಾವಸ್ತು ತುಂಬಾ ಮುಖ್ಯ.

ಈ ಭೌತಿಕ ಜಗತ್ತಿನ ಕಚ್ಚಾವಸ್ತು ಸರಬರಾಜಿಗೆ ಪರ್ಯಾಯವಾಗಿ ಸಿನೆಮಾ ದೃಶ್ಯಾವಳಿಗಳನ್ನು ಕಟ್ಟಿಕೊಡ ತೊಡಗಿದೆ. ಭೌತಿಕ ಜಗತ್ತಿಗೆ ಪೂರಕವಾದ, ಅದರ ಹಂಗಿನಲ್ಲೇ ಅರಳಿದ, ಅದಕ್ಕೆ ಸವಾಲಾದ, ಹೊರ ಜಗತ್ತನ್ನು ನಿರಾಕರಿಸುವ ಅನೇಕ ಮಾದರಿಯ ಸೆಲ್ಯುಲಾಯ್ಡ್ ಜಗತ್ತುಗಳು ದಿನೇ ದಿನೇ ಸೃಷ್ಟಿಯಾಗುತ್ತಿವೆ. ರಿಚರ್ಡ್ ಅಟೆನ್ ಬರೋ ನ ಗಾಂಧಿ ಸಿನೆಮಾ ನೋಡಿದವರಿಗೆ ಮಹಾತ್ಮ ಗಾಂಧಿ ಎಂದು ನೆನೆದ ಕೂಡಲೆ ನೆನಪಾಗುವ ಮುಖ ಬೆನ್ ಕಿಂನ್ಸ್ಲೆಯದೇ. ಸ್ವಾತಂತ್ರ್ಯ ಹೋರಾಟ ಎಂದೊಡನೆ ಕಣ್ಣ ಮುಂದೆ ಬರುವುದು ಆಗಿನ ಕಪ್ಪು ಬಿಳುಪು ವಿಡಿಯೋ ಕೆಮರಾದಲ್ಲಿ ಸೆರೆಹಿಡಿದ ವೇಗವಾಗಿ ಓಡುವ, ಕಾರ್ಟೂನುಗಳಂತೆ ಕಾಣುವ ಜನರಿರುವ ದೃಶ್ಯಾವಳಿಗಳೇ.

ಸಿನೆಮಾಗಳು ದೃಶ್ಯಾವಳಿಗಳನ್ನು ಒದಗಿಸುವ ಪ್ರಭಾವಕಾರಿ ಮಾಧ್ಯಮ ಎನ್ನುವುದನ್ನಂತೂ ಕಂಡುಕೊಂಡೆವು. ಇನ್ನು ಈ ಶಕ್ತಿಶಾಲಿ ಮಾಧ್ಯಮದಿಂದ ಉಪಯೋಗವಿದೆಯೇ ಅಥವಾ ಅಪಾಯಗಳಿವೆಯೇ ಎನ್ನುವುದನ್ನು ಗಮನಿಸೋಣ.

ಹಾಗೆ ನೋಡಿದರೆ ಸಿನೆಮಾಗಳಿಂದ ನಮ್ಮ ದೃಶ್ಯಭಂಡಾರಕ್ಕೆ ಲಾಭವೇ ಹೆಚ್ಚು. ನಾವು ಎಂದೂ ನೋಡಿರದ, ನೋಡಲಿಕ್ಕೆ ಸಾಧ್ಯವೂ ಇಲ್ಲದ ಪ್ರದೇಶಗಳ, ಜನಗಳ, ವಸ್ತುಗಳ, ಅನುಭಗಳ ಕುರಿತ ದೃಶ್ಯಾವಳಿಗಳು ನಮ್ಮಲ್ಲಿ ಶೇಖರವಾಗುತ್ತವೆ. ಹಾಗೂ ನಮ್ಮ ಅನುಭವ ಪ್ರಪಂಚಕ್ಕೆ, ನಮ್ಮ ಕಲ್ಪನಾ ಲೋಕದ ಚಟುವಟಿಕೆಗಳಿಗೆ ಅವು ಪೂರಕವಾಗಿ ಒದಗಿಬರುತ್ತವೆ. ನಮ್ಮ ಭೂಮಿ ಎಂದೊಡನೆಯೇ ನಮಗೆ ಅಯಾಚಿತವಾಗಿ ಗುಂಡಗಿನ, ಬಹುಪಾಲು ನೀರಿನಿಂದ ಆವೃತವಾಗಿ ನೀಲಿ ಗೋಳವಾಗಿ ಕಾಣುವ ಗ್ರಹದ ದೃಶ್ಯ ಕಣ್ಣ ಮುಂದೆ ಸುಳಿಯುತ್ತದೆ.  ಇಬ್ಭಾಗವಾಗಿ ನೀರಿನಲ್ಲಿ ಮುಳುಗಿದ ದೈತ್ಯ ಹಡಗು ಎಂದರೆ ಜೇಮ್ಸ್ ಕೆಮರೂನ್ ನಿರ್ದೇಶನದ ಟೈಟಾನಿಕ್ ಸಿನೆಮಾ ನೋಡಿದವರಿಗೆ ಅದರಲ್ಲಿನ ದೃಶ್ಯಾವಳಿಗಳೇ ಮುನ್ನೆಲೆಗೆ ಧಾವಿಸಿಬರುತ್ತವೆ. ಗಮನಿಸಿ ನೋಡಿ, ಈ ದೃಶ್ಯಾವಳಿಗಳೆಲ್ಲಾ ಅಯಾಚಿತವಾಗಿ, ನಮ್ಮ ಪ್ರಜ್ಞಾಪೂರ್ವಕವಾದ ಪ್ರಯತ್ನವಿಲ್ಲದೆ ಹೊಂದಿ ಬರುವಂಥವು. ತುಂಬಾ ನಾಜೂಕಾಗಿ ಕಣ್ಣ ಮುಂದೆ ಕಟ್ಟಿಕೊಳ್ಳುವವು. ಸ್ವಲ್ಪ ಪ್ರಯತ್ನಿಸಿದರೆ ನಾವು ಅವನ್ನು ಬದಿಗೆ ಸರಿಸಿ ನಮಗೆ ಬೇಕಾದ ದೃಶ್ಯಾವಳಿಗಳನ್ನು ಕಟ್ಟಿಕೊಳ್ಳಬಹುದು.

ಸಿನೆಮಾ, ದೂರದರ್ಶನದ ಅತಿಯಾದ ದೃಶ್ಯಾವಳಿಗೆಳ ಆಕ್ರಮಣದಿಂದ ನಾವು ಯಾವುದೋ ಸಿದ್ಧ ಮಾದರಿಗೆ, ಯಾವುದೋ ಸುಪ್ತ ಹಿತಾಸಕ್ತಿಗೆ ಗುಲಾಮರಾಗುತ್ತಿದ್ದೇವಾ ಎನ್ನುವ ಆತಂಕವೂ ಆಗುತ್ತದೆ. ನಿಮ್ಮ ತಾಯಿಯ ಮಡಿಲಲ್ಲಿ ತಲೆಯಿರಿಸಿ ನೀವು ಮಲಗಿದ ಅನುಭವವನ್ನು ನೆನೆಸಿಕೊಳ್ಳುತ್ತೀರೆಂದಿಟ್ಟುಕೊಳ್ಳಿ. ಆಗ ಒದಗಿಬರುವ ದೃಶ್ಯಾವಳಿ ಹೇಗಿರುತ್ತದೆ? ನೀವಾಗಿ ನಿಮ್ಮ ತಾಯಿಯ ಮಡಲಲ್ಲಿ ತಲೆ ಇಟ್ಟುಮಲಗಿದ್ದನ್ನು ನೋಡಿರಲಾರಿರಿ. ಮಲಗಿದ ನಿಮಗೆ ತಾಯಿಯ ಸೀರೆಯ ಸೆರಗು, ಆಕೆಯ ಮುಖ, ಮುದುರಿಕೊಂಡಿರುವ ನಿಮ್ಮ ಕಾಲುಗಳು, ಮೇಲೆ ತಿರುಗುವ ಸೀಲಿಂಗ್ ಫ್ಯಾನು ಇವಿಷ್ಟು ಕಂಡಿರುತ್ತವೆ. ಇಂತಹ ದೃಶ್ಯಾವಳಿಗಳೇ ಒದಗಿಬಂದರೆ ನೀವು ನಿಮ್ಮ first hand ಅನುಭವವನ್ನು ಮೆಲುಕು ಹಾಕುತ್ತಿದ್ದೀರೆಂದು ಅರ್ಥ. ಬದಲಾಗಿ ನಿಮಗೆ ಯಾವುದೋ ಸಿನೆಮಾದಲ್ಲಿ ರಾಜ್ ಕುಮಾರ್ ಪಂಡರಿಭಾಯಿಯವರ ತೊಡೆಯ ಮೇಲೆ ಮಲಗಿ ಅಳುವ ದೃಶ್ಯಾವಳಿ ಕಾಣಿಸಿಕೊಂಡಿತೆಂದರೆ ಸೆಲ್ಯುಲಾಯ್ಡ್ ಜಗತ್ತಿನ ಪ್ರಭಾವ ದಾಢವಾಗಿ ಆಗಿದೆಯೆಂದೇ ಅರ್ಥ. ನೀವು ಅತಿಯಾಗಿ ನೋಡುವ ಸಿನೆಮಾಗಳು, ಜಾಹೀರಾತುಗಳು, ಟವಿ ಕಾರ್ಯಕ್ರಮಗಳನ್ನು ಅವಲೋಕಿಸಿ. ಅವು ನಮ್ಮ ಬದುಕಿನ ಯಾವ ಸಂಗತಿಯನ್ನು ಸಂಬಂಧಿಸಿದ್ದಾಗಿರುತ್ತವೆ ಎಂದು ಗುರುತಿಸಿ. ಆ ಸಂಗತಿಯ ಕುರಿತು ನಿಮ್ಮ ಅನುಭವನ್ನು ನೆನಪಿಸಿಕೊಳ್ಳುವಾಗ ಒದಗಿ ಬರುವ ಸುಪ್ತ ದೃಶ್ಯಾವಳಿಗೆ ಸಾಕ್ಷಿಯಾಗಿ.

ವಿಪರೀತವಾಗಿ ಅವಮಾನವಾದಾಗ, ಪ್ರಚಂಡವಾದ ಪ್ರಚೋದನೆಯಿಂದ ಏನನ್ನೋ ಮಾಡುವ ಹುರುಪು ಹುಟ್ಟಿದಾಗ, ವಿರಹದಲ್ಲಿ ಕುದಿಯುವಾಗ, ಬಸ್ ಸ್ಟಾಪಿನಲ್ಲಿ ಯಾರನ್ನೋ ಕಾಯುವಾಗ, ಶಾಪಿಂಗ್ ಮಳಿಗೆಯ ಸಾಲು ಸ್ಟ್ಯಾಂಡುಗಳ ಮಧ್ಯೆ ಹರಿದಾಡುವಾಗ- ಇಷ್ಟೇ ಅಲ್ಲದೆ ಮಲಗುವ ಕೋಣೆಯ ಅತಿ ಖಾಸಗಿ ಸಂಗತಿಗಳನ್ನು ನೆನೆಸಿಕೊಳ್ಳುವಾಗ ಸಹ ಈ ಸೆಲ್ಯುಲಾಯ್ಡ್ ಜಗತ್ತಿನ ದೃಶ್ಯಾವಳಿಗಳು ನುಗ್ಗಿ ಬಂದಿರುತ್ತವೆ.

ಯಾವುದೋ ಸ್ಥಾಪಿತ ಹಿತಾಸಕ್ತಿಯ ಗುಲಾಮರಾಗಿ ನಮ್ಮ ಅಂತರಂಗದ ಲೋಕವನ್ನು ಕಟ್ಟಿಕೊಳ್ಳಬೇಕೆ ನಾವು? ಹಾಗಿದ್ದರೆ ಏನು ಮಾಡಬೇಕು?‌ ಸಿನೆಮಾಗಳನ್ನು ನೋಡಲೇ ಬಾರದು, ಮಿತಿಯಲ್ಲಿ ನೋಡಬೇಕು ಎನ್ನುವ ತುಕ್ಕು ಹಿಡಿದ ವಿವೇಕದಿಂದ ಉಪಯೋಗವಿಲ್ಲ. ಆದಷ್ಟು ಎಚ್ಚರವಾಗಿ ಬದುಕುವುದನ್ನು ನಾವು ಅಭ್ಯಸಿಸಬೇಕು. ನಮ್ಮಲ್ಲಿ, ನಮ್ಮ ಹೊರಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಎಚ್ಚರವನ್ನು ಬೆಳೆಸಿಕೊಳ್ಳಬೇಕು. ಸುಪ್ತವಾಗಿಯೇ ಶೇಖರಗೊಳ್ಳುತ್ತ ಹೋಗುವ ಇಂತಹ ಸಂಗತಿಗಳನ್ನು ಬಾಹ್ಯವಾಗಿ ಅಬ್ಬರದಿಂದ ಎದುರಿಸಲು ಸಾಧ್ಯವಿಲ್ಲ. ಸೂಕ್ಷ್ಮವಾಗಿ ಕಂಡೂ ಕಾಣದಂತೆ ಅವನ್ನು ಗಮನಿಸುತ್ತಿರಬೇಕು. ಅವುಗಳ ಇರುವಿಕೆಯ ಬಗ್ಗೆ ನಮಗೆ ಅರಿವು ಸ್ಪಷ್ಟವಾದರೂ ಸಾಕು ಅವುಗಳ ಪ್ರಭಾವದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s