ಸ್ವಘಟ್ಟಿಗೆ ಮರುಜೀವ…

ಕೆಲವು ವರ್ಷಗಳ ಹಿಂದಿನ ನನ್ನ ಸಂಪದದಲ್ಲಿನ ಚಟುವಟಿಕೆಯನ್ನು ಅವಲೋಕಿಸಿದರೆ ನನಗೇ ನಗು ಬರುತ್ತದೆ, ಮರುಕ ಹುಟ್ಟುತ್ತದೆ. ಯಾರಿಗೂ ಚರ್ಮದ ಆಳಕ್ಕೆ ಸಂಬಂಧಿಸಿರದ ದೇವರು ದಿಂಡರ ಬಗೆಗಿನ ವಾದ ವಿವಾದಗಳಲ್ಲಿ ಅದೆಷ್ಟು ಸಮಯ ಕಳೆದು ಹೋಯಿತು ಎಂದು ವಿಷಾದವಾಗುತ್ತದೆ. ಬರೆದ ಸಾಲುಗಳಲ್ಲಿದ್ದ ವಸ್ತುನಿಷ್ಠತೆಯ ಹೆಸರಿನ ಭಾವುಕತೆ, ಉನ್ಮಾದಗಳು ಅಂದು ಸುಳಿವೂ ಕೊಡದಂಥವು ಇಂದು ಥಟ್ಟನೆ ಕಣ್ಣೆದುರು ರಾಚುವಷ್ಟು ಸ್ಪಷ್ಟವಾಗಿ ಕಾಣುತ್ತವೆ. ಸಿದ್ಧಾಂತಗಳನ್ನು, ಹೇಳಿಕೆಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಅಸಂಗತವಾಗಿಸುತ್ತಿದ್ದ ಜಾಣ್ಮೆ, ಸೂಚಿತವಾದ, ಸಾಂಕೇತಿಕವಾದ ಮಾತು, ಆಚರಣೆಗಳನ್ನು ಅಕ್ಷರಶಃ ಅರ್ಥೈಸಿ ಅಪಾರ್ಥಗಳನ್ನು ಹುಟ್ಟಿಸುತ್ತಿದ್ದ ಕೌಶಲ್ಯದ ಬಗ್ಗೆ ನನಗೇ ಮುಜುಗರವಾಗುತ್ತದೆ.

 

ಆದರೆ ಒಂದು ಮಾತಂತೂ ಸತ್ಯ. ಈಗ ಈ ರೀತಿಯೆಲ್ಲ ಅನ್ನಿಸುವುದಕ್ಕೆ ನನಗೆ ಹಿಂದೆ ವಿರೋಧಿಸುತ್ತಿದ್ದ ವಿಚಾರಗಳಲ್ಲಿ ಶ್ರದ್ಧೆ ಮೂಡಿದೆ ಎಂದರ್ಥವಲ್ಲ. ನಾನು ಯಾವುದೋ ನಡೆದಾಡುವ ದೈವದ  ಕೃಪೆಗೆ ಪಾತ್ರವಾಗಿ ದೈವ ಭಕ್ತನಾಗಿಲ್ಲ. ಆದರೆ ಹಿಂದೆ ಇದ್ದ ನಿರಾಕರಣೆ, ವಿರೋಧ, ದಂಗೆಯ ಉನ್ಮಾದದ ಮನಸ್ಥಿತಿಯ ಅಗತ್ಯವಿಲ್ಲ ಎನ್ನುವುದು ಅರಿವಾಗಿದೆ. ಬೌದ್ಧಿಕವಾಗಿ ದಣಿವಾಗಿದೆ ಎಂತಲೂ ಅರ್ಥಮಾಡಿಕೊಳ್ಳಬಹುದು. ಮೂಢನಂಬಿಕೆಗಳು, ದೈವ ಶ್ರದ್ಧೆ, ಅರ್ಥಹೀನ ಆಚರಣೆಗಳು ಹಿಂದೆ ನನ್ನನ್ನು ಕೆರಳಿಸುತ್ತಿದ್ದವು. ಆದರೆ ಈಗ ತಣ್ಣಗೆ ನೋಡುವ ಸಂಯಮ ರೂಢಿಯಾಗಿದೆ. ಹುಚ್ಚೆದ್ದು ಕುಣಿದ ತರುವಾಯ ತಾನಾಗಿ ಆವರಿಸಿಕೊಳ್ಳುವ ನಿದ್ದೆಯ ಹಾಗೆ. ದೇವರು, ಧರ್ಮ, ನಂಬಿಕೆ, ಶ್ರದ್ಧೆ ಕುರಿತಾದ ವಿಷಯಗಳಿಗೆ ನಾನು ಪ್ರತಿಕ್ರಿಯಿಸುವ ಧಾಟಿಯಲ್ಲಿ ಆಗಿರುವ ಬದಲಾವಣೆಗಿಂತ ನನಗೆ ಮುಖ್ಯ ಎನ್ನಿಸುವ ಬದಲಾವಣೆಯೊಂದನ್ನು ನಾನು ಗುರುತಿಸುತ್ತಿದ್ದೇನೆ. ಅವೈಜ್ಞಾನಿಕ, ಅತಾರ್ಕಿಕ ನಂಬಿಕೆಗಳ ಕುರಿತು ನನಗಿದ್ದ ಅನಾದರ ಯಾವುದೋ ದುರಂತದ ಘಳಿಗೆಯಲ್ಲಿ ಆ ನಂಬಿಕೆಗಳನ್ನು ಪೋಷಿಸಿಕೊಂಡು ಬಂದ ವ್ಯಕ್ತಿಗಳ ಕಡೆಗೆ ತಿರುಗಿಬಿಟ್ಟಿತ್ತು. ನಾನು ಗೌರವಿಸಲಾಗದ ನಂಬಿಕೆಯನ್ನು ಹೊಂದಿದ ವ್ಯಕ್ತಿಯ ಮೇಲೂ ನನಗೆ ಗೌರವ ಹುಟ್ಟುತ್ತಿರಲಿಲ್ಲ. ನನ್ನದೇ ನಂಬಿಕೆಯ ಕುರುಡು ನನ್ನನ್ನು ಕವಿದಿತ್ತು ಎನ್ನಬಹುದು.

 

ದೇವರ ಅಸ್ತಿತ್ವ, ಧರ್ಮ, ಧರ್ಮಾಚರಣೆಗಳ ಕುರಿತಾದ ನನ್ನ ನಿಲುವಿನಲ್ಲಿ ಗುರುತರವಾದ ಬದಲಾವಣೆಯೇನು ಸಂಭವಿಸಿಲ್ಲವಾದರೂ ಈ ಸಂಗತಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವುದರಲ್ಲಿ ಅವಶ್ಯಕವಾಗಿ ಬದಲಾವಣೆಯಾಗಿದೆ. ನಂಬಿಕೆ ಶ್ರದ್ಧೆಗಳು ಯಾವ ಮಟ್ಟದಲ್ಲಿರುವವರೆಗೆ ಸಹಿಸಬೇಕು, ಬೆಂಬಲಿಸಬೇಕು; ಯಾವ ಹಂತವನ್ನು ಮುಟ್ಟಿದಾಗ ನಿರ್ಲಕ್ಷಿಸಬೇಕು; ಎಂತಹ ಪ್ರಭಾವವನ್ನು ಪಡೆದುಕೊಂಡಾಗ ವಿರೋಧಿಸಬೇಕು ಎನ್ನುವ ದಿಕ್ಕಿನಲ್ಲಿ ಸ್ವಲ್ಪ ಪ್ರಮಾಣದ ಸ್ಪಷ್ಟತೆ ನೆಲೆ ನಿಂತಿರುವುದರಿಂದ ವೃಥಾ ಶಕ್ತಿಸಂಚಯವಾಗುವುದಿಲ್ಲ ಎನ್ನುವುದು ನೆಮ್ಮದಿಯ ಸಂಗತಿ.

 

ಇಷ್ಟೆಲ್ಲ ಗಮನಿಸುವಿಕೆಗಳನ್ನು ದಾಖಲಿಸುವುದಕ್ಕೆ ನೆಪವಾಗಿ ಒದಗಿದ್ದು ಗೆಳೆಯರೊಬ್ಬರ ಕೋರಿಕೆ. ಹಿಂದೆ ಸಂಪದದಲ್ಲಿ ಸರಣಿಯಾಗಿ ಪ್ರಾರಂಭಿಸಿದ ‘ಸ್ವಘಟ್ಟಿ ಚರಿತಾಮೃತ’ವನ್ನು ತಮ್ಮ ಸಾಮುದಾಯಿಕ ಬ್ಲಾಗಿನಲ್ಲಿ ಮರುಪ್ರಕಟಿಸಲು ಒಪ್ಪಿಗೆ ಕೇಳಿದಾಗ ನಾನು ‘ಹು’ ಎಂದುಬಿಟ್ಟೆ. ಇಂದು ಅವುಗಳಲ್ಲಿ ಕೆಲವನ್ನು ತೆರೆದು ಪುನಃ ಓದುವಾಗ ನನ್ನಲ್ಲಿ ಆಗಿರುವ ಬದಲಾವಣೆ ಬಗ್ಗೆ ಆಶ್ಚರ್ಯವಾಯಿತು. ಮನುಷ್ಯ ತನ್ನಲ್ಲಿನ ಅಜ್ಞಾನ, ಅಪನಂಬಿಕೆ, ಬಲಹೀನತೆಗಳ ಭಯದಲ್ಲಿ ಸೃಷ್ಟಿಸಿಕೊಂಡ ಊರುಗೋಲು ದೇವರು. ಈ ದೇವರೇ ಆತನ ಅಜ್ಞಾನ, ಅಪನಂಬಿಕೆ, ಬಲಹೀನತೆಗಳಲ್ಲಿ ಆತನನ್ನು ಬಂಧಿಸಿಡುವ ಸೆರೆಮನೆಯಾಗಿ ಪರಿವರ್ತಿತವಾದಾಗ ಏನು ಮಾಡಬೇಕು? ಸೆರೆಮನೆಯ ಸರಳುಗಳನ್ನು ಧ್ವಂಸ ಮಾಡಿದರೆ ಅದನ್ನು ಆಸರೆಗೋಲಾಗಿ ಹಿಡಿದ ಮಂದಿಯ ಜಂಘಾಬಲವೇ ಉಡುಗಿ ಹೋಗುತ್ತದೆ. ಹೀಗಾಗಿ ಸೆರೆಮನೆಯಾದರೂ ಅವರು ಆ ನಂಬಿಕೆಗಳ ರಕ್ಷಣೆಗೆ ನಿಲ್ಲುತ್ತಾರೆ. ಸಣ್ಣ ದಾಳಿಗೂ ತೀವ್ರತರವಾಗಿ ಪ್ರತಿರೋಧವನ್ನೊಡ್ಡುತ್ತಾರೆ. ಈ ವ್ಯಂಗ್ಯವನ್ನು ನಿರೂಪಿಸುವುದಕ್ಕಾಗಿ ಸೃಷ್ಟಿಯಾದದ್ದು ಸ್ವಘಟ್ಟಿ ಪರಮಾತ್ಮನ ಚರಿತ್ರೆ.

 

ಈ ಸ್ವಘಟ್ಟಿಯ ಉಗಮಕ್ಕೆ ಫ್ಲೈಯಿಂಗ್ ಸ್ಫೆಘಟಿ ಮಾನ್ಸ್ಟರ್, ಟೂಥ್ ಫೇಯರಿ, ಬರ್ಟ್ರಂಡ್ ರಸ್ಸೆಲ್ ರ ಟೀ ಪಾಟ್ ಮೊದಲಾದ ಹಲವು ಪ್ರೇರಣೆಗಳು ಇವೆಯಾದರೂ ಇದರ ಹುಟ್ಟಿಗೆ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಿರುವುದು ಸಂಪದದಲ್ಲಿ ಆಗಿದ್ದ ಸದಸ್ಯರು ಹಾಗೂ ಅವರು ಸೃಷ್ಟಿಸಿದ್ದ ಆನ್ ಲೈನ್ ಸನ್ನಿವೇಶಕ್ಕೆ. ಆ ಮಟ್ಟಿಗಿನ ಟ್ರ್ಯಾಕ್ಷನ್ ಒದಗಿಸುವ ಓದುಗರು ಇರದಿದ್ದರೆ, ಆ ಬಗೆಯ ಪ್ರತಿಕ್ರಿಯೆಗಳು ಇರದಿದ್ದರೆ ಅಂತಹ ಶಾರ್ಪ್ ಆದ ಸಾಲುಗಳು, ಹರಿತವಾದ ತರ್ಕಗಳು ಜನ್ಮ ತಾಳುತ್ತಿರಲಿಲ್ಲ. ಆಗಿನ ಆಲೋಚನಾ ಲಹರಿಯ ಓಘದಲ್ಲಿ ಸ್ವಘಟ್ಟಿ ಚರಿತಾಮೃತವನ್ನು ದೊಡ್ಡದೊಂದು ಸರಣಿಯಾಗಿ ಬೆಳೆಸಬೇಕೆಂಬ ಹಂಬಲವಿತ್ತು. ಸ್ವಘಟ್ಟಿಯ ನಾನಾ ಗುಣಲಕ್ಷಣಗಳ ಬಗ್ಗೆ ಬರಹಗಳು ಪ್ರಕಟವಾಗಿದ್ದವು. ಧಾರ್ಮಿಕ ಗ್ರಂಥವೊಂದರ ವ್ಯಾಕರಣವನ್ನು ಬಳಸಿಕೊಂಡು ವಿಡಂಬನಾತ್ಮಕವಾಗಿ ಧಾರ್ಮಿಕ claimಗಳ ಅಸಂಬದ್ಧತೆ ಹಾಗೂ ಅತಾರ್ಕಿಕತೆಗಳನ್ನು ಬಿಂಬಿಸುವುದು ಈ ಬರಹಗಳ ಉದ್ದೇಶವಾಗಿತ್ತು.

 

ಪ್ರಭಾವ ಪ್ರೇರಣೆಗಳು ಹೆಚ್ಚಾಗಿದ್ದುದರಿಂದಲೋ ಅಥವಾ ಈ ಬರಹಗಳಿಗೊಂದು ಸ್ವತಂತ್ರ ಚೌಕಟ್ಟನ್ನು ಒದಗಿಸಿ ಮುಂದುವರೆಸುವ ಆಲೋಚನೆಯನ್ನು ಮಾಡುವ ತಣ್ಣಗಿನ ತಲೆ ಇಲ್ಲದ ಕಾರಣಕ್ಕೋ ಸ್ವಘಟ್ಟಿ ಮುಂದುವರಿಯಲಿಲ್ಲ. ಗೆಳೆಯರೊಬ್ಬರು ಅವುಗಳನ್ನು ಒಟ್ಟುಗೂಡಿಸಿ ಪುನಃ ಪ್ರಕಟಿಸುವ ಮಾತಾಡಿದಾಗ ಆ ಬರಹಗಳನ್ನು ತಿದ್ದಿ ತೀಡಿ ಒಂದು ಚೌಕಟ್ಟು ನೀಡುವ ಮನಸ್ಸಾಯಿತು. ಹಿಂದಿನ ಬರಹಗಳಲ್ಲಿ ತೀರಾ ಕ್ರಿಯೇಟಿವ್ ಆದ ಹಲವು ಅಂಶಗಳಿವೆ. ಮೊನಚಾದ ವಿಡಂಬನೆಯನ್ನು ಹೊಂದಿರುವ ಸಾಲುಗಳಿವೆ. ಮಧ್ಯೆ ಮಧ್ಯೆ ನಿರ್ದಿಷ್ಟ ಧರ್ಮ, ಮತಾಚರಣೆಗಳನ್ನು ಗುರಿಯಾಗಿರಿಸಿಕೊಂಡು ಮಾಡಿದ ವ್ಯಂಗ್ಯವಿದೆ. ಆದರೆ ಒಟ್ಟಾರೆಯಾಗಿ ಅವುಗಳಲ್ಲಿ ಒಂದು ಕೊರತೆ ಕಾಣುತ್ತದೆ. ಅದು: ದಿಕ್ಕು. ಈ ಬರಹಗಳು ನಿರ್ದಿಷ್ಟವಾದ ದಿಕ್ಕಿನೆಡೆಗೆ ಓರಿಯಂಟ್ ಆಗಿಲ್ಲ. ಎಲ್ಲವೂ ಚದುರಿಕೊಂಡಂತೆ ಕಾಣುತ್ತವೆ.

 

ಹೀಗಾಗಿ ಹೊಸ ಓದಿನ, ತಿಳುವಳಿಕೆಯ ಬೆಳಕಿನಲ್ಲಿ ಸ್ವಘಟ್ಟಿಗೆ ಮರುಜೀವ ಕೊಡುವುದೆಂದು ಯೋಚಿಸುತ್ತಿದ್ದೇನೆ. ಕೆಲವು ತಿಂಗಳುಗಳ ಕಾಲಾವಧಿಯಲ್ಲಿ ಅವಕಾಶ ಸಿಕ್ಕಾಗ ಸ್ವಘಟ್ಟಿ ಚರಿತಾಮೃತವನ್ನು ಸಂಪದದಲ್ಲಿ ಮುಂದುವರೆಸುವುದೆಂದು ತೀರ್ಮಾನಿಸಿದ್ದೇನೆ. ನಿಮ್ಮ ಸಲಹೆ, ಅಭಿಪ್ರಾಯಗಳನ್ನು ದಯವಿಟ್ಟು ತಿಳಿಸಿ.

Advertisements

6 thoughts on “ಸ್ವಘಟ್ಟಿಗೆ ಮರುಜೀವ…

 1. ನನ್ನದೇ ನಂಬಿಕೆಯ ಕುರುಡು ನನ್ನನ್ನು ಕವಿದಿತ್ತು ಎನ್ನಬಹುದು.

  ॑ ಇಂತಹ ಒಂದು ಆತ್ಮ ವಿಮರ್ಶೆ ಅಗತ್ಯವಿತ್ತು॑ ನಿಮ್ಮ ಬರಹಗಳನ್ನು ಸಂಪದದಲ್ಲಿ ನೋಡಿದಾಗ ನೀವು ಇಲ್ಲಿಗೆ ತಲುಪುವ ದಿನ ದೂರವಿಲ್ಲವೆನಿಸಿತ್ತು ಆದರೂ ಇಷ್ಟು ಬೇಗ……… ಕಾರಣ ಸಿನೆಮಾ ಪ್ರಭಾವ ಬೀರುವುದನ್ನು ವ್ಯಂಗ್ಯವಾಡಿದ್ದೀರಿ ಮತ್ತೀಗ ಅದೆ ಸಿನೆಮಾದ ಪ್ರಭಾವದ ನಗ್ಗೆ ಲೇಖನ ಬರೆಯುತ್ತೀರಿ.

  ದೈವದಲ್ಲಿ ನಂಬಿಕೆಯಿಲ್ಲದಿರುವುದು ಸರಿ ಆದರೆ ನಂಬಿದವರನ್ನು ಅವಹೇಳನ ಮಾಡುವುದು ಸೂಕ್ತವೆ? ನಿಮಗೆ ನಿಮ್ಮ ತಂದೆ ತಾಯಿಯ ಬಗೆಗೆ ನಂಬಿಕೆಯಿದೆ ಅವರೆ ನಿಮ್ಮ ತಾಯಿತಂದೆ ಎನ್ನುವುದಕ್ಕೆ ನೀವು ಯಾವುದಾದರೂ ವೈಜ್ಞಾನಿಕ ಸತ್ಯದ ಮೊರೆ ಹೋಗಿದ್ದೀರೆ? ಹಾಗೆಯೆ ನಂಬಿಕೆಯೂ ಕೂಡ ಅಲ್ಲವೆ?

  ನಿಮ್ಮ ವಯಸ್ಸಿನಲ್ಲಿ ನಿಮ್ಮ ಅಭಿಪ್ರಾಯ ಮೆಚ್ಚದವರ ಮೇಲೆ ತಿರುಗಿ ಬೀಳುವುದು ವ್ಯಂಗ್ಯ ಕುಹಕವಾಡುವುದು ಸಹಜ. ಯೂನಿಕ್ (ಅದೂ ಅಹಮಿಕೆಯ ಭಾವವೆ)ಎಂದು ಹೆಸರಾದ ತಕ್ಷಣಕ್ಕೆ ಸಹಜತೆ ಬದಲಾಗುವುದಿಲ್ಲ ಅಲ್ಲವೆ?

  ಇಂದು ಸತ್ಯವಾಗಿ ಕಂಡ ಎಷ್ಟೋ ವೈಜ್ಞಾನಿಕ ಸತ್ಯಗಳು ನಾಳೆ ಸುಳ್ಳೆನಿಸುತ್ತವೆ.

  ದೇವರಿಲ್ಲ ಎನ್ನುವುದು ಕಟು ಸತ್ಯ. ಆದರೆ ಇಲ್ಲ ಎಂಬ ಡಂಗುರ ಈ ಸಮಾಜದಲ್ಲಿ ಘಾತುಕ ಶಕ್ತಿ ತರಬಹುದು. ತುಂಬಾ ಜಾಳು ಎನಿಸುತ್ತಿದೆ ಆದರೂ ನೀವು ಅರ್ಥ ಮಾಡಿಕೊಳ್ಳಲು ಶಕ್ತರು.

 2. ಸಚಿದಾನಂದರೆ ನಿಮ್ಮ ಪ್ರತಿಕ್ರಿಯೆಗ ಧನ್ಯವಾದಗಳು.

  ಹು ಒಂದು ರೀತಿಯಲ್ಲಿ ಇದು ಆತ್ಮವಿಮರ್ಶೆಯೇ. ಆದರೆ ಈ ವಿಮರ್ಶೆಯಿಂದ ನಾನು ಹೊರತೆಗೆದಿರುವ ನಿರ್ಧಾರಗಳು ಬಹುಶಃ ನಿಮ್ಮ ಊಹೆಗಿಂತ ಭಿನ್ನವಾದುವಾಗಿವೆ. ಹಿಂದೆ ಸಂಪದದಲ್ಲಿ ಪ್ರತಿಕ್ರಿಯಿಸುವಾಗಲೂ ನನಗೆ ವ್ಯಕ್ತಿಯ ನಂಬಿಕೆಗಳಿಗೆ ಆತನೇ ಜವಾಬ್ದಾರಿ ಎಂಬ ನಿಲುವಿತ್ತು. ಆದರೆ ಆಗ ನಾನು ಪ್ರತಿಕ್ರಿಯಿಸಲು ಆಯ್ದುಕೊಳ್ಳುತ್ತಿದ್ದ ಧಾಟಿಯನ್ನು ಪರಿಶೀಲಿಸಿದಾಗ ಅವುಗಳಲ್ಲಿ ಸಮಯ ಪೋಲಾದದ್ದು ಕಂಡು ಬಂತು. ದಿಕ್ಕು ಇಲ್ಲದ ಬರಹಗಳು ದಿಕ್ಕು ತಪ್ಪಿಸುವ ಪ್ರತಿಕ್ರಿಯೆಗಳನ್ನು ಆಕರ್ಷಿಸಿದ್ದಾಗಿ ಕಂಡಿತ್ತು.

  ಇನ್ನು ಧಾರ್ಮಿಕ ನಂಬಿಕೆಯನ್ನು ಪ್ರಶ್ನಿಸಿದ ಸಂದರ್ಭದಲ್ಲೆಲ್ಲ ಈಗಿರುವ ತಂದೆ ತಾಯಿಯೇ ನಿನ್ನನ್ನು ಹೆತ್ತವರು ಎನ್ನುವುದಕ್ಕೆ ಸಾಕ್ಷಿಯನ್ನು ನೋಡಿದ್ದೀಯ ಎಂದು ಪ್ರಶ್ನಿಸುವುದು ಸಾಮಾನ್ಯ. ಈ ಹೇಳಿಕೆಯಲ್ಲಿ ತಮ್ಮ ವಾದದ ಪುಷ್ಟಿಗಾಗಿ ಬಳಸುವ ತರ್ಕಕ್ಕಿಂತ ತಂದೆ ತಾಯಿಯ ಪ್ರಸ್ತಾಪ ಮಾಡಿ ಎದುರಾಳಿಯನ್ನು ಮುಜುಗರಕ್ಕೆ ಈಡು ಮಾಡುವುದು ಪ್ರಮುಖವಾದ ಅಂಶವಾಗಿರುತ್ತದೆ. ಈ ಬಗೆಯ ವಾದಕ್ಕೆ ಉತ್ತರ ಕೊಡುವುದೂ ಸಾಧ್ಯವಿದೆ. ನೀವು ನಿಮ್ಮ ತಂದೆ ತಾಯಿ ನಿಮ್ಮವರೇ ಹೌದೋ ಅಲ್ಲವೋ ಎನ್ನುವುದಕ್ಕೆ ಆಧಾರ ಕೇಳುವುದಿಲ್ಲ. ಅವರಿಬ್ಬರೂ ಭಾರತೀಯರು. ಆದರೆ ನಿಮಗೊಬ್ಬ ಅಣ್ಣನಿದ್ದಾನೆ ಎಂದುಕೊಳ್ಳಿ, ಆತ ಅಪ್ಪಟ ಮಂಗೋಲಿಯನ್ ಲಕ್ಷಣ ಹೊಂದಿರುತ್ತಾನೆ. ಆಗ ನಿಮಗೆ ಆತ ನಿಮ್ಮ ತಂದೆ ತಾಯಿಯ ಮಗನೇನಾ ಅಥವಾ ದತ್ತು ಪಡೆದವನಾ ಎಂಬ ಸಂಶಯದ ನೆರಳೂ ಇಲ್ಲದೆ ನಂಬಿಕೆ ಹುಟ್ಟುವುದೇ? ಗಮನಿಸಿ ಇಲ್ಲಿನ ನಂಬಿಕೆಯು ಸಹ ಹಲವು ತಥ್ಯ, ತರ್ಕ ಹಾಗೂ ಸಂಗತಿಯೊಂದರ ಸಾಧ್ಯಾಸಾಧ್ಯತೆಯ ಕುರಿತ ಸಾಮಾನ್ಯ ತಿಳುವಳಿಕೆಯನ್ನು ಅವಲಂಬಿಸಿರುತ್ತವೆ.

  ನಾನು ಎಂದೂ ಆ ಬಗೆಯ ತಥ್ಯಗಳನ್ನು ಆಧರಿಸಿದ ನಂಬಿಕೆಗಳ ಬಗ್ಗೆ ಮಾತನಾಡುತ್ತಿರಲಿಲ್ಲ. ‘ಕುರುಡು’ ನಂಬಿಕೆಗಳನ್ನು ಲೇವಡಿ ಮಾಡುತ್ತಿದ್ದದು. ಅಂತಹ ಕುರುಡು ನಂಬಿಕೆಗಳು ಲೇವಡಿಯಲ್ಲದೆ ಬೇರಾವುದಕ್ಕೂ ಅರ್ಹವಲ್ಲ.

  ದೇವರು ಇಲ್ಲ ಎನ್ನುವುದು ಕಟು ಸತ್ಯ ಎಂಬುದು ನಿಮ್ಮ ಅಭಿಪ್ರಾಯವಾಗಿರುವಂತಿದೆ. ಸತ್ಯ ತಿಳಿದಿದ್ದೂ ನೀವು ಉಳಿದವರ ಸುಳ್ಳನ್ನು ಪೋಷಿಸಬೇಕು ಎಂದು ನಿರೀಕ್ಷಿಸುವುದು ಸರಿಯೇ?

  ಅಂದಹಾಗೆ ವಿಜ್ಞಾನದ ಸತ್ಯಾನ್ವೇಷಣೆಯ ಬಗ್ಗೆ ಹಿಂದೆ ಸಂಪದದಲ್ಲಿ ಬರೆದಿರುವೆ. ಅಲ್ಲಿನ ಸತ್ಯ ವಸ್ತುನಿಷ್ಠವಾದುದರಿಂದ ಇಲ್ಲಿಯವರೆಗೆ ಸತ್ಯವೆಂದು ಕೊಂಡದ್ದು ಸತ್ಯ ಅಲ್ಲ ಎಂದು ಸಾಬೀತು ಪಡಿಸುವ ತಥ್ಯಗಳು ಲಭ್ಯವಾದಾಗ ಮೋಹವಿಲ್ಲದೆ ಅಲ್ಲಿಯವರೆಗೆ ನಂಬಿದ್ದನ್ನು ಕೈಬಿಡಲಾಗುತ್ತದೆ. ಅಲ್ಲಿ ತಥ್ಯಗಳು ಸಾಬೀತು ಮಾಡುವ ಸತ್ಯ ಮುಖ್ಯವೇ ಹೊರತು ನಂಬಿಕೊಂಡು “ಸತ್ಯ”ವನ್ನು ಸಾಬೀತು ಪಡಿಸುವ ತಥ್ಯಗಳನ್ನು ಹುಡುಕುವ ಸಾಹಸವಲ್ಲ.

 3. #ಆದರೆ ಈ ವಿಮರ್ಶೆಯಿಂದ ನಾನು ಹೊರತೆಗೆದಿರುವ ನಿರ್ಧಾರಗಳು ಬಹುಶಃ ನಿಮ್ಮ ಊಹೆಗಿಂತ ಭಿನ್ನವಾದುವಾಗಿವೆ.#
  ನನಗಿಂತ ಬೇರೆಯವರು ಕೀಳು ಎನ್ನುವ ಅಹಂ ಅಥವ ನಾನು ಎಲ್ಲರಿಗಿಂತ ತಿಳಿದವ ಎನ್ನುವ ಅಹಂ ನಿಂದ ಹೊರಬರಲು ಇನ್ನೂ ತಮಗೆ ಸಾಧ್ಯವಾಗಿಲ್ಲವೆಂಬೆದು ವೇದ್ಯವಾಗುತ್ತಿದೆ. ಅದೂ ಕೂಡ ಈಗ ನೀವಿರುವ ಸ್ಥಿತಿಯಂತೆ ಹೊರಗೆ ಬರುತ್ತದೆ ಬಿಡಿ.

  ನಿಮ್ಮನ್ನು ಮುಜುಗರಕ್ಕೀಡುಮಾಡಲು ನಾನು ತಂದೆ ತಾಯಿಯ ಬಗ್ಗೆ ಕೇಳಲಿಲ್ಲ. ಹಾಗೇಯೆ ನಿಮ್ಮ ಕುಹಕಗಳು ನಿಮ್ಮ ವಿರೋಧಿಗಳನ್ನು ಮುಜುಗರಕ್ಕೀಡು ಮಾಡಿ ಅವರನ್ನು ಸೋಲಿಸುವುದೇ ನಿಮ್ಮ ಮುಖ್ಯ ಗುರಿಯಾಗಿ ಏಕೆ ಕಾಣಿಸಿರಬಾರದು? ಎಂಬ ದಿಕ್ಕಿನಲ್ಲಿ ಎಂದಾದರೂ ಯೋಚಿಸಿದ್ದಿದೆಯೆ?
  ಅಣ್ಣನ ಬಗ್ಗೆ ಕೇಳುತ್ತಾ ತಾರ್ಕಿಕವಾಗಿ ಬೇರೆ ದಿಕ್ಕಿನಲ್ಲಿ ಹೋಗುತ್ತಿದ್ದೀರಲ್ಲವೆ? ಇದೆ ಮುಜುಗರವೆಂದು ಭಾವಿಸಿದ ನಿಮ್ಮ ಮನದಾಳ ನನ್ನನ್ನು ಮುಜುಗರಕ್ಕೀಡು ಮಾಡಲು ನೋಡುತ್ತಿರುವುದು. ಪರವಾಗಿಲ್ಲ. ಅಣ್ಣನ ಬಗೆಗಿರುವ ಭಾವನೆಗೂ ತಂದೆ ತಾಯಿಯ ಸಂಭಂದವೆಂಬ ಭಾವಕ್ಕೂ ಬಹಳವೇ ವ್ಯತ್ಯಾಸವಿರುತ್ತದೆ. ಇಲ್ಲಿ ನೀವೇ ಗಮನಿಸಿ ನಿಮ್ಮ ತಂದೆ ತಾಯಿಗಳ ಬಗೆಗಿನ ಮಾತನ್ನು ನೀವು ದೂರ ತೆಗೆದುಕೊಂಡು ಹೋಗಲು ಪ್ರಯತ್ನಿಸಿದಂತೆಯೆ ಆಸ್ತಿಕರು ಅವರ ನಂಬಿಕೆಗಳಿಗೆ ಘಾಸಿಯಾದಾಗ ನಡೆದುಕೊಳ್ಳುವಂತೆ ನಡೆದುಕೊಳ್ಳುತ್ತೀದ್ದೀರಿ ಅಂದರೆ ನಿಮ್ಮ ಭಾವನೆ ಮಾತ್ರ ಸರಿ ಭೇರೆಯವರದ್ದು ಅದೆ ತೆರನಾದರೂ ಸರಿಯಲ್ಲ ಎಂಬ ವರ್ತುಲದಿಂದ ಹೊರಬರಲು ಬಹುಶಃ ಸಮಯ ತೆಗೆದು ಕೊಳ್ಳುತ್ತದೆ

  ಸತ್ಯಾನ್ವೇಷಣೆಯಲ್ಲಿ ಹಿಂದೂ ಧರ್ಮ ತನ್ನನ್ನು ತಾನು ಬದಲಾವಣೆಗೆ ಒಗ್ಗಿಕೊಂಡಷ್ಟು ಬೇರೆ ಧರ್ಮಗಳು ಒಡ್ಡಿಕೊಂಡಿಲ್ಲ. ನೀವು ಒಬ್ಬ ಅಥ ಒಂದು ಸಮೂಹದ ವ್ಯಕ್ತಿಯ ಮಾತುಗಳನ್ನಾಧರಿಸಿ ಇಡೀ ಸಮುದಾಯವನ್ನೆ ಹಳಿಯಲು ಹೊರಟಿದ್ದೀರಿ ಮತ್ತೆ ಹಿಂದೂ ವಿರೋಧಿ ಹೇಳಿಕೆ ಕೊಡುವುದು ಪ್ರಗತಿಪರ ವೈಚಾರಿಕತೆ, ಬೇರೆ ಧರ್ಮಗಳೆದುರು ಹಿಂದೂಗಳನ್ನು ಹೀಗಳೆಯುವುದೇ ಅವರನ್ನು ದಾರಿಗೆ ತರುವ ಮಾರ್ಗ ಎಂದು ಕೊಂಡಿದ್ದೀರಿ. ಆ ಕಾಲಕ್ಕೆ ಸತ್ಯವಾದದ್ದನು ನಡೆದುಕೊಂಡು ಅದರ ಅರಿವಿಗೆ ಬಂದಾಗ ಅದನ್ನು ದೂರ ಇಟ್ಟು ನಡೆಯುತ್ತಿದೆ. ಅದಕ್ಕೆ ನಿಮಗೆ ಅರಿವಾದಂತೆ ಅರಿವಾಗಲು ಕಾಲ ಬೇಕಾಗುತ್ತದೆ, ಅದನ್ನು ನೀವು ಎಷ್ಟೆ ಕೂಗಿ ಹೇಳಿದರೂ ಕೇಳುವುದಿಲ್ಲ. ಅದಕ್ಕೆ ಸರಿಯಾದ ಉದಾಹರಣೆ ತಾವೇ ಆಗಿದ್ದೀರಿ.

 4. ಅಣ್ಣನೆಂಬ ನಂಬಿಕೆ ತಾಯಿಂದ ಬಂದಂತ ಮಾತು ಅಂದರೆ ನಿಮ್ಮ ಅರ್ಥದಲ್ಲಿ ತಂದೆ ತಾಯಿಯನ್ನು ದೇವರೆಂದು ಅಥವ ಆ ಗೌರವದಿಂದ ಭಾವಿಸಿದವರಿಂದ ಬಂದಂತ ಮಾತು. ಅಣ್ಣನ ಮಾತೇ ಅಪ್ರಸ್ತುತ. ಏಕೆಂದರೆ ಯಾವ ಅಣ್ಣನ ಬಗೆಗೂ ಈ ಮಾತು ಅನ್ವಯಿಸುವುದೇ ಇಲ್ಲ. ದೇವರಂತಹ ಎನ್ನಬಹುದೇ ಪರಂತು ದೇವರೇ ಎನ್ನುವುದಿಲ್ಲ. ತಾಯಿ ತೋರಿಸಿದವನನ್ನು ತಂದೆ ಎನ್ನುವುದು ನಂಬಿಕೆ ಅಷ್ಟೆ. ಅವನಿಗೂ ತಾಯಿಗೂ ಮದುವೆಯಾಗಿತ್ತ ಎಂದು ಕೇಳುತ್ತೀರಾ?

 5. ನನ್ನ ನಿರ್ಧಾರಗಳು ನಿಮ್ಮ ಊಹೆಗಿಂತ ಭಿನ್ನವಾದುವಾಗಿವೆ ಎಂದದ್ದು ಅದು ಹೇಗೆ ಅಹಮಿಕೆಯಾಗಿದೆಯೋ ನನಗೆ ತಿಳಿಯಲಿಲ್ಲ. ನನ್ನ ಈ ಬರಹವನ್ನು ಅಪಾಲಜಿ ಎಂದು ನೀವು ಭಾವಿಸಿಕೊಂಡಂತೆ ಕಂಡಿತು ಹೀಗಾಗಿ ಸ್ಪಷ್ಟ ಪಡಿಸಿದೆ.

  ತಂದೆ ತಾಯಿ ಮೊದಲಾದ, ನಾವು ಭಾವುಕ ಸಂಗತಿಗಳು, ಶ್ರದ್ಧೆಯ ವಿಷಯಗಳು ಎಂದು ಭಾವಿಸುವ ಸಂಗತಿಗಳು ಸಹ ಸೂಕ್ಷ್ಮವಾದ ತರ್ಕ, ತಥ್ಯಾಧಾರಿತ ತಿಳುವಳಿಕೆಯಿಂದ ರೂಪುಗೊಂಡಿರುತ್ತದೆ ಎನ್ನುವುದನ್ನು ವಿಷದ ಪಡಿಸುವುದಕ್ಕೆ ನೀವು ಮೊದಲು ಪ್ರಸ್ತಾಪಿಸಿದ ಆ ವಿಷಯವನ್ನು ವಿಸ್ತರಿಸಿ ಹೇಳಿದ್ದು. ನಮ್ಮ ಕಮೆಂಟ್ ಓದಿದವರಿಗೆ ಮೊದಲು ತಾಯ್ತಂದೆಯ ಮಾತು ಎತ್ತಿದ್ದು ಯಾರು ಎನ್ನುವುದು ತಿಳಿಯುತ್ತದೆ.

  ಹಿಂದೂ ಎನ್ನುವುದು ಒಂದು ರಿಲೀಜನ್ ಆಗಿ ಭಾರತದಲ್ಲಿ ಎಂದಿಗೂ ಅಸ್ತಿತ್ವದಲ್ಲಿರಲಿಲ್ಲ. ನಿಮ್ಮ ‘ಸತ್ಯಾನ್ವೇಷಣೆಯಲ್ಲಿ ಹಿಂದೂ ಧರ್ಮ ತನ್ನನ್ನು ತಾನು ಬದಲಾವಣೆಗೆ ಒಗ್ಗಿಕೊಂಡಷ್ಟು ಬೇರೆ ಧರ್ಮಗಳು ಒಡ್ಡಿಕೊಂಡಿಲ್ಲ.’ ಎನ್ನುವ ಮಾತು ಹೆಮ್ಮೆಯಿಂದ ಹುಟ್ಟಿರುವಂಥದ್ದು. ಇಲ್ಲವಾದರೆ ಉದಾಹರಣೆ ಹಾಗೂ ಹೆಚ್ಚಿನ ಮಾಹಿತಿಯ ಮೂಲಕ ವಿವರಿಸಿ. ಎಲ್ಲಾ ಧರ್ಮಗಳು ಸಹ ತಾವು ಶ್ರೇಷ್ಠ ಎಂದು ಕರೆದುಕೊಳ್ಳುತ್ತವೆ.

  ಉಳಿದಂತೆ ನನ್ನ ಬಗೆಗಿನ ನಿಮ್ಮ ವಿಮರ್ಶೆ ಅನಿಸಿಕೆಗಳಿಗೆ ನಾನು ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ.

 6. “ಹಿಂದೂ ಎನ್ನುವುದು ಒಂದು ರಿಲೀಜನ್ ಆಗಿ ಭಾರತದಲ್ಲಿ ಎಂದಿಗೂ ಅಸ್ತಿತ್ವದಲ್ಲಿರಲಿಲ್ಲ. ”

  ಈಗಲೂ ಇಲ್ಲ

  ನಿಮ್ಮ ಬಗೆಗಿನ ವಿಮರ್ಶೆ ಹೂಂ ಒಬ್ಬೊಬ್ಬರಿಂದಲೆ ಸಮಾಜ ರಾಜ್ಯ ದೇಶ ನಿರ್ಮಾಣ. ಜಿಜ್ಞಾಸೆ ಚಿಂತನ ಮಂಥನ ನಡೆಯುತ್ತಿರಲಿ. ನಿಮ್ಮ ತಂದೆ ತಾಯಿಯ ಬಗ್ಗೆ ತಿಳಿಯದೆಯೂ ಅಭಿಮಾನ ಬೆಳೆದಂತೆ ನಿಮ್ಮಷ್ಟು ಬುದ್ದಿಯಿಲ್ಲದವರು ದೇವರ ಬಗ್ಗೆ ಗೊತ್ತಿಲ್ಲದೆ ಮೊರೆಹೋದರು ಅದನ್ನು ಹೀಯಾಳಿಸುವುದೆಷ್ಟು ಸರಿ ಎಂದು ಕೇಳಿದೆ ಅದೊಂದನ್ನು ಬಿಟ್ಟು ಮಿಕ್ಕೆಲ್ಲವು ಮಾತನಾಡಿದಿರಿ.
  ಶುಭವಾಗಲಿ, ಸೆಕ್ಯೂಲರ್ ಸೋಗಿನಲ್ಲಿರುವ ಯಾವು ಅಪ್ಪಟ ಎಡಪಂಥೀಯ ಚಿಂತನೆಗಳಿಂದ ಹೊರಬಂದ ಮೇಲೆ ಮಾತು ಮುಂದುವರೆಸುವ. ಪ್ರತಿಕ್ರಿಯೆ ನೀಡಿದ್ದಕ್ಕೆ ಮತ್ತು ನಿಮ್ಮ ಸಮಯ ಪೋಲು ಮಾಡಿದ್ದಕ್ಕೆ ಕ್ಷಮೆಯಿರಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s