ಬರವಣಿಗೆಯೆಂಬ ಯಾಂತ್ರಿಕ ಕ್ರಿಯೆ

 

ನಾನು ಹೈಸ್ಕೂಲಿನಲ್ಲಿದ್ದಾಗ ಪ್ರತಿಭಾ ಕಾರಂಜಿ ಎಂದೋ ಅಥವಾ ಇನ್ಯಾವುದೋ ಹೆಸರಿನ ಜಿಲ್ಲಾ ಮಟ್ಟದ ಸ್ಪರ್ಧೆಯೊಂದು ನಡೆದಿತ್ತು. ಚಿತ್ರಕಲೆ, ನೃತ್ಯ, ಹಾಡುಗಾರಿಕೆ, ಕವಿತೆ- ಕತೆ ಬರೆಯುವುದು ಹೀಗೆ ಅನೇಕ ವಿಭಾಗಗಳಲ್ಲಿ ಸ್ಪರ್ಧೆಯನ್ನು ನಡೆಸಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಶಾಲಾ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗಾಗಿ ಕಳುಹಿಸಲಾಗುತ್ತಿತ್ತು. ಆ ವರ್ಷ ಜಿಲ್ಲಾ ಮಟ್ಟದ ಸ್ಪರ್ಧೆ ನಮ್ಮ ಶಾಲೆಯಲ್ಲಿ ಏರ್ಪಾಡಾಗಿತ್ತು. ಆಯ್ಕೆಯಾದ ವಿದ್ಯಾರ್ಥಿಗಳನ್ನು ಕೋಲಾರದ ಕೈವಾರದಲ್ಲಿ ನಡೆಯಲಿದ್ದ ಶಿಬಿರ ಹಾಗೂ ಸ್ಪರ್ಧೆಗೆ ಕಳುಹಿಸುವ ಯೋಜನೆಯಿತ್ತು.

ಕವಿತೆ, ಕತೆ ಸೇರಿದಂತೆ ಒಟ್ಟಾರೆ ಸೃಜನಶೀಲ ಬರವಣಿಗೆಯ ವಿಭಾಗದ ಸ್ಪರ್ಧೆಯಲ್ಲಿ ನಾನು ಭಾಗವಹಿಸಿದ್ದೆ. ನಡುಗುವ ಧ್ವನಿಯಲ್ಲಿ ‘ಚೆಂಡು’ ಎನ್ನುವ ವಿಷಯ ಕುರಿತ ಪದ್ಯವನ್ನು ಓದಿ ವೈವಾ ರೀತಿಯ ಸಂದರ್ಶನ ಎದುರಿಸಿದೆ.ಆಗ ಆಯ್ಕೆ ಸಮಿತಿಯಲ್ಲಿದ್ದ ಶಿಕ್ಷಕರೊಬ್ಬರು ಕೇಳಿದ ಪ್ರಶ್ನೆ ಇಷ್ಟು ದಿನಗಳಾದ ನಂತರವೂ ಸ್ಪಷ್ಟವಾಗಿ ನೆನಪಿದೆ. ಸಾಹಿತ್ಯದಲ್ಲಿ ನಾಟಕ, ಕವಿತೆ, ಕತೆ, ಪ್ರಬಂಧ ಎನ್ನುವ ಪ್ರಕಾರಗಳೇಕೆ ಬೇಕು? ಎಲ್ಲವನ್ನೂ ಪ್ರಬಂಧದಲ್ಲಿ ಹೇಳಲು ಸಾಧ್ಯ ಎನ್ನುವುದಾದರೆ ಕತೆ ಏತಕ್ಕೆ ಬೇಕು? ಎನ್ನುವ ಪ್ರಶ್ನೆಗಳಿಗೆ ನಾನು ಅಂದು ನೀಡಿದ ಉತ್ತರವೇನೆಂದು ಸ್ಪಷ್ಟವಿಲ್ಲ. ಆದರೆ ಇತ್ತೀಚೆಗೆ ತುಂಬಾ ಗಂಭೀರವಾಗಿ ಉತ್ತರ ಕಂಡುಕೊಳ್ಳುವ ಯತ್ನ ನಡೆಸಿದ್ದೇನೆ.

ಮನುಷ್ಯನಿಗೆ ಅಭಿವ್ಯಕ್ತಿ ಮಾಧ್ಯಮದ ಆವಶ್ಯಕತೆ ಕಂಡುದರ ಬಗೆಗೇ ನನಗೆ ಅಪಾರವಾದ ಕುತೂಹಲವಿದೆ. ಹಕ್ಕಿಗಳ ಹಾಗೆ ಇಂಪು ದನಿಯಲ್ಲಿ ಧ್ವನಿ ಹೊರಡಿಸುವುದು, ನವಿಲಿನ ಹಾಗೆ ದೇಹವನ್ನು ಒಂದು ಲಯದಲ್ಲಿ ಕುಣಿಸುವುದು ಮೊದಲಾದ ಅನುಕರಣೆಯಿಂದ ಮನುಷ್ಯ ಕಲೆಯನ್ನು ಕಂಡುಕೊಂಡಿರಬಹುದಾದರೂ, ಈ ಎಲ್ಲಾ ಮಾಧ್ಯಮಗಳಲ್ಲಿ ಆತ ಏನನ್ನು ಹೇಳಲು ಬಯಸುತ್ತಾನೆ? ಯಾರಿಗೆ ಹೇಳಲು ಬಯಸುತ್ತಾನೆ?

ಈ ಪ್ರಶ್ನೆಗೆ ಕಲೆಯ ವಿಮರ್ಶಕರಿಂದ ಹಿಡಿದು ವಿಕಾಸವಾದ ಸಿದ್ಧಾಂತಿಗಳವರೆಗೆ ಎಲ್ಲರೂ ಉತ್ತರಿಸಲು ಪ್ರಯತ್ನಿಸಿದ್ದಾರೆ. ಪ್ರಾಣಿ ಪಕ್ಷಿಗಳಲ್ಲಿ ನಾವು ಕಲೆ ಎಂದು ಕರೆಯಬುಹುದಾದ ವರ್ತನೆಯೆಲ್ಲವೂ ಸಂತಾನೋತ್ಪತ್ತಿಗಾಗಿ ವಿರುದ್ಧ ಲಿಂಗದ ಜೀವಿಯನ್ನು ಆಕರ್ಷಿಸುವುದಕ್ಕಾಗಿ ಹೂಡಿದ ಆಟವೇ ಆಗಿರುತ್ತದೆ. ಸುಂದರವಾದ ರೆಕ್ಕೆ ಪುಕ್ಕಗಳನ್ನು ಹೊಂದಿದ, ತನ್ನ ಹಾವ ಭಾವದಿಂದ ಆಕರ್ಷಕವಾಗಿರುವ ಪಕ್ಷಿ ಹೆಣ್ಣಿಗೆ ಹಲವು ಗಂಡುಗಳಲ್ಲಿ ಒಳ್ಳೆಯ ಆಯ್ಕೆಯಾಗಿ ಕಾಣುತ್ತದೆ. ಅದರ ಸಂತತಿ ವೃದ್ಧಿಸುತ್ತದೆ. ಸಂತತಿಯನ್ನು ಮುಂದುವರೆಸುವಲ್ಲಿ ಜೀನ್ ಗಳು ಹೂಡುವ ಸಂಚಿನ ಭಾಗವಾಗಿ ಹಕ್ಕಿಗಳ ಹಾಡು, ಪ್ರಾಣಿಗಳ ವರ್ತನೆ ಕೆಲಸ ಮಾಡುತ್ತವೆ.

ಇನ್ನು ಮನುಷ್ಯನ ಪಾಡೇನು? ತುಂಬಾ ಸಂಕೀರ್ಣವಾ ಬೌದ್ಧಿಕ ರಚನೆಯನ್ನು ಹೊಂದಿರುವ ಮನುಷ್ಯನಿಗೆ ತನ್ನ ಭಾವನೆ, ಕಲ್ಪನೆ, ಆಲೋಚನೆಗಳು ಯಕಶ್ಚಿತ್ ಸಂತಾನೋತ್ಪತ್ತಿಯ ಕಾರಣಕ್ಕೆ ಜೀನ್ ಗಳು ಹೂಡಿದ ಸಂಚು ಎಂದು ನಂಬಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಆತನಿಗೆ ಆತ್ಮ, ಪರಮಾತ್ಮ ಎನ್ನುವ ತನ್ನ ಭಾವಲೋಕದಲ್ಲಿ ಅನುಭವಿಸಲಿಕ್ಕೆ, ಕಲ್ಪಿಸಿಕೊಳ್ಳಲಿಕ್ಕೆ ಸಾಧ್ಯವಾಗುವಷ್ಟು ಉನ್ನತವಾದ ಸಂಗತಿಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಕೈಯಲ್ಲಿ ಹಣತೆ ಹಿಡಿದು ಕತ್ತಲಲ್ಲಿ ನಡೆದಂತೆ. ಎಷ್ಟು ದೂರ ನಡೆದರೂ ಕಣ್ಣೆದುರು ದಾರಿ ಕಾಣುತ್ತಾ ಹೋಗುತ್ತದೆ. ನಮಗೆ ಗೋಚರವಾಗುವ ಪರಿಧಿಯಿಂದಾಚೆ ಶಾಶ್ವತವಾಗಿ ನಾವು ಗುರಿಯನ್ನು ಇರಿಸಿಕೊಂಡು ಬಿಟ್ಟರೆ ಅದನ್ನು ತಲುಪುವ ಸಾಧ್ಯತೆ ಎಂದಿಗೂ ಇರುವುದಿಲ್ಲ.

ಪ್ರಾಣಿ ಪಕ್ಷಿ ಇತ್ಯಾದಿ ‘ಕೆಳವರ್ಗದ’ ಜೀವಿಗಳಿಗೆ ಇಲ್ಲದ ಸಂವೇದನೆ, ಭಾವಾಭಿವ್ಯಕ್ತಿ ತನಗಿದೆ ಎಂದು ಭಾವಿಸುವ ಮನುಷ್ಯ ಆರಂಭದಲ್ಲಿ ಅನುಕರಣೆಯಿಂದಲೇ ಕಲೆಯನ್ನು ರೂಢಿಸಿಕೊಂಡ ಸಾಧ್ಯತೆಗಳಿವೆ. ಎಂದಿಗೂ ಈ ಪ್ರಾರಂಭವನ್ನು ವಿವರಿಸುವುದೇ ತೊಡಕಿನ ಸಂಗತಿ. ಮೊದಲ ಬಾರಿಗೆ ಚಿತ್ರ ಬಿಡಿಸಿದ ಮನುಷ್ಯನ ಮನಸ್ಸಿನಲ್ಲಿದ್ದ ಭಾವವೇನು? ಮೊಟ್ಟ ಮೊದಲ ಹಾಡನ್ನು ಹಾಡಿದಾಕೆಯ ಮನಸ್ಥಿತಿ ಎಂಥದ್ದು ಎಂಬುದೆಲ್ಲಾ ಸರಳ ಉತ್ತರ ಮೀರಿದ ಪ್ರಶ್ನೆಗಳು. ಅವನ್ನು ಕೈಬಿಟ್ಟು ನಾವು ಈ ಬರಹದ ಮೊದಲಲ್ಲಿ ಎತ್ತಿಕೊಂಡ ಪ್ರಶ್ನೆಗೆ ಹಿಂದಿರುಗೋಣ.

ಇತ್ತೀಚೆಗೆ ಪಾಕ್ಷಿಕವೊಂದಕ್ಕೆ ಒಂದೆರಡು ಲೇಖನಗಳನ್ನು ಬರೆದುಕೊಟ್ಟೆ. ಅವುಗಳ ವಸ್ತು ತುಂಬಾ ಮೇಲ್ಪದರದ್ದು. ‘ಓದುವುದು ಏನನ್ನೋ, ಅನಂತರ ಕೆಲಸ ಮಾಡುವುದು ಏನನ್ನೋ’ ಎನ್ನುವುದು ಇಂತಹ ಒಂದು ವಿಷಯ ವಸ್ತು. ನಾನು ಯಾವುದೇ ಪೂರ್ವಭಾವಿಯಾದ ಸಿದ್ಧತೆಯಿಲ್ಲದೆ ನೇಯ್ದ ಲೇಖನವಿದು. ವಿದ್ಯೆ, ಕೆಲಸ ಎನ್ನುವುದು ಹೇಗೆ ಹಿಂದಿನಿಂದಲೂ ಪರಸ್ಪರ ಅವಲಂಬಿಸಿರಲಿಲ್ಲ ಎನ್ನುವುದನ್ನು ವಿವರಿಸಿ ಈಗಿನ ಆಧುನಿಕ, ಜಾಗತೀಕರಣ ಪ್ರಭಾವಿತ ಜಗತ್ತಿನಲ್ಲಿ ಒದಗುವ ಅನಂತ ಆಯ್ಕೆಗಳ ಸಂದರ್ಭದಲ್ಲಿ ಓದಿದ ವಿಷಯಕ್ಕೆ ಸಂಬಂಧಿಸಿದಂತೆಯೇ ಕೆಲಸ ಮಾಡುವುದು ಅವಶ್ಯಕವಲ್ಲ ಎನ್ನುವುದಾಗಿ ಬರೆದಿದ್ದೆ. ಇವೆಲ್ಲವೂ ಸುಮ್ಮನೆ ಐದು ನಿಮಿಷ ಏಕಾಗ್ರವಾಗಿ ಯೋಚಿಸಿ ರೂಪಿಸಿಕೊಂಡ ನಿಲುವು, ಆಲೋಚನೆಗಳು. ಇಡೀ ಶಿಕ್ಷಣ ವ್ಯವಸ್ಥೆ, ಉದ್ಯೋಗ ರಂಗದ ಕುರಿತು ಆ ಬರಹದಲ್ಲಿ ಸಾರರೂಪದಲ್ಲಿ ಬರೆದಿರುವ ಸಾಲುಗಳನ್ನು ಗಮನಿಸಿದರೆ ನನಗೇ ಮುಜುಗರವಾಗುತ್ತದೆ. ಯಾವುದೇ ಆಳವಾದ ಅಧ್ಯಯನ, ದೀರ್ಘ ಅನುಭವದಿಂದ ಕಟ್ಟಿಕೊಡಬಹುದಾದ ಹೇಳಿಕೆಗಳಂತಹ ಸಾಲುಗಳನ್ನು ಐದು ಹತ್ತು ನಿಮಿಷದ ಆಲೋಚನೆಯಿಂದ ಬರೆಯಲು ಸಾಧ್ಯವಾದದ್ದಕ್ಕೆ ಹೆಮ್ಮೆಯಾಗಬೇಕು, ನಾಚಿಕೆಯಾಗಬೇಕೊ ತಿಳಿಯದಂತಾಗುತ್ತದೆ.

ಈ ಬರಹದ ಸಂದರ್ಭದಲ್ಲಿ ಯೋಚಿಸುವಾಗ ಗೋಚರವಾದ ಸತ್ಯವಿದು: ಅಭಿವ್ಯಕ್ತಿಯಲ್ಲಿ ಅನೇಕ ಪದರಗಳಿವೆ. ಒಂದೊಂದು ಪದರವನ್ನು ಹಾಯ್ದು ಒಳಕ್ಕೆ ಹೋದಂತೆ ನಾವು ಬೇರೆಯದೇ ಜಗತ್ತನ್ನು ಕಾಣುತ್ತ ಕಟ್ಟುತ್ತಾ ಹೋಗುತ್ತೇವೆ. ಹೀಗೆ ಸಾಗುವಲ್ಲಿ ನಾವು ಬಳಸುವ ಕತೆ, ಕವಿತೆ, ಪ್ರಬಂಧ, ಕಾದಂಬರಿ, ನಾಟಕ ಮೊದಲಾದ ಮಾರ್ಗಗಳು ಕೆಲವೊಂದು ಪದರಗಳಲ್ಲಿ ಅತಿ ಉಪಯುಕ್ತವಾಗಿಯೂ, ಮಾರ್ಗದರ್ಶಕವಾಗಿಯೂ ಕಂಡರೆ ಇನ್ನು ಕೆಲವು ಪದರಗಳಲ್ಲಿ ಅನುಪಯುಕ್ತವಾಗಿ ಕಾಣುತ್ತವೆ. ಹಲವು ನೆಲೆಗಳಲ್ಲಿ ಇದು ನಾವು ಎಲೆಕ್ಟ್ರಾನಿಕ್ಸ್ ಇಂಜಿನಿಯರುಗಳು ರಚಿಸುವ HDL modelಗಳಾಗಿ ತೋರುತ್ತದೆ. ನಾವು ವಿನ್ಯಾಸಗೊಳಿಸುವ ಸಿಸ್ಟಂನ್ನು ವಿವರಿಸುವುದಕ್ಕೆ ಒಂದೊಂದು ಸ್ಥರದಲ್ಲಿ ಒಂದೊಂದು ಬಗೆಯ modelling ಬಳಸುತ್ತೇವೆ. ಸ್ಥೂಲವಾಗಿ behavioral modellingನಲ್ಲಿ ನಾವು ಕೊಡುವ ಇನ್ ಪುಟ್‌ಗೆ ಸಿಸ್ಟಂನ ಔಟ್ ಪುಟ್ ಏನಾಗಿರುತ್ತದೆ ಎಂಬುದಷ್ಟೇ ದಾಖಲಿಸುತ್ತೇವೆ. ಮುಂದುವರೆದು ಸೂಕ್ಷ್ಮವಾಗಿ ಒಳಗಿನ ಕಾಂಪೊನೆಂಟುಗಳನ್ನು ವಿವರಿಸುತ್ತಾ ಹೋಗುತ್ತೇವೆ. ಒಮ್ಮೆ ಹೀಗೆ ಸಿಸ್ಟಂ ವಿನ್ಯಾಸಗೊಳಿಸಿದ ನಂತರ, ಹಾರ್ಡ್‌ವೇರ್ ನಿರ್ಮಿಸುವಾಗ ಸೂಕ್ಷ್ಮವಾದ ಭಾಗಗಳನ್ನು ಒಂದೊಂದಾಗಿ ಕಟ್ಟುತ್ತಾ ಅವನ್ನು ಪರೀಕ್ಷಿಸುತ್ತಾ ಕಡೆಯ ಸ್ಥೂಲವಾದ ವಿವರಣೆಗೆ ತಕ್ಕನಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸುತ್ತೇವೆ.

ಬರವಣಿಗೆಯಲ್ಲೂ ಇದೇ ಬಗೆಯ ತಂತ್ರಗಾರಿಕೆಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇನೆ. ನಾವು ಅದೆಷ್ಟೇ ಪ್ರತಿಭೆ, ಕಲೆ, ಸ್ಪೂರ್ತಿ, ಕನಸು ಎಂದು ಅಮೂರ್ತದ ನೆಲೆಯಲ್ಲಿ ಮಾತಾಡಿದರೂ ಕೃತಿಯೊಂದು ತೀರಾ ಯಾಂತ್ರಿಕವಾದ ರಚನೆಯ ಪ್ರಕ್ರಿಯೆಯನ್ನು ಒಳಗೊಳ್ಳುತ್ತದೆ. ಒಂದೊಂದೇ ಅಕ್ಷರವನ್ನು ಪೋಣಿಸುತ್ತಾ, ವಾಕ್ಯಗಳ ನಂತರ ವಾಕ್ಯಗಳನ್ನು ಜೋಡಿಸುತ್ತಾ ಹೋಗುವುದು ಬೇರೆಲ್ಲ ನಿರ್ಮಾಣ ಕ್ರಿಯೆಗಳಂತೆಯೇ. ತೀರಾ ಸುಲಭದ ಹೇಳಿಕೆಗಳಾಗಿ ಕಾಣುವ ಪ್ರಬಂಧವೇ ಬೇರೆ ಸ್ಥರದಲ್ಲಿ ಸೂಕ್ಷ್ಮವಾಗಿ ಅವಲೋಕಿಸುವ ಬರಹಕ್ಕೆ ಆಸ್ಪದ ಒದಗಿಸಬಹುದು.

ಆದರೆ ಬರವಣಿಗೆಯಂತಹ ಸೃಜನಶೀಲ ಕೆಲಸದಲ್ಲಿ ಫಲಿತಾಂಶ ಲಭಿಸಿತೇ ಇಲ್ಲವೇ ಎಂದು ನಾವು ವಸ್ತುನಿಷ್ಠವಾಗಿ ಒಂದು ಹಂತದವರೆಗೆ ಮಾತ್ರ ಗುರುತಿಸುವುದಕ್ಕೆ ಸಾಧ್ಯ. ನಾವು ಲ್ಯಾಬಿನಲ್ಲಿ ತೋರಿಸುವ ನಿರ್ದಿಷ್ಟ ರಿಸಲ್ಟ್ ನಂತೆ ಅದು ಇರುವುದಕ್ಕೆ ಸಾಧ್ಯವೇ ಇಲ್ಲ.

Advertisements

4 thoughts on “ಬರವಣಿಗೆಯೆಂಬ ಯಾಂತ್ರಿಕ ಕ್ರಿಯೆ

  1. ಸರ್, ಬರವಣಿಗೆ ಯಾಂತ್ರಿಕ ಅಂತ ಅನ್ನಿಸುತ್ತದಷ್ಟೇ… ಐದು ಹತ್ತು ನಿಮಿಷ ಗಾಢವಾಗಿ ಕುಳಿತು ಬರೆದಿದ್ದಿರಬಹುದು, ಆದರೆ ಅದಕ್ಕೆ ನಿಮ್ಮ ಹಳೆಯ ಓದು, ಇಷ್ಟು ದಿನ ಪಡೆದ (ಬರವಣಿಗೆಯದ್ದೋ, ಅಥವ ಬದುಕಿನದ್ದೋ) ಅನುಭವ, ಬರೆದ ವಿಷಯದ ಕುರಿತು ಹಿಂದೆಂದೋ ಮಾಡಿದ್ದ ಆಲೋಚನೆ, ಓದಿದ್ದ ಲೇಖನ ಎಲ್ಲವೂ ಎಲ್ಲೋ ಎಡೆಯಲ್ಲು ಕುಳಿತು ಸಹಾಯ ಮಾಡದೇ ಹೋಗಿದ್ದರೆ ಅದು ಬರವಣಿಗೆ ಸಾಧ್ಯವಾಗ್ತಿರ್ಲಿಲ್ಲ ಅಂತ ನನ್ನ ನಂಬಿಕೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s