ಇವನು ಇನಿಯನಲ್ಲ…

ಸೂಕ್ಷ್ಮ ಸಂಬಂಧಗಳ ಲೋಕದಲ್ಲೊಂದು ಸುತ್ತು

(ಈ ತಿಂಗಳ ಸಖಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ)

ತನಗೆ ಹೆಂಡತಿಯಾಗುವವಳು ಹೇಗಿರಬೇಕು ಎನ್ನುವ ಕುರಿತು ಪ್ರಾಚೀನ ಗಂಡು ಹೀಗೆ ಹೇಳಿದ್ದಾನೆ:

ಕಾರ್ಯೇಶು ದಾಸಿ, ಕರುಣೇಶು ಮಂತ್ರಿ.
ರೂಪೇಶು ಲಕ್ಷ್ಮಿ, ಕ್ಷಮಯಾ ಧರಿತ್ರಿ.
ಬೋಜ್ಯೇಶು ಮಾತಾ, ಶಯನೇಶು ರಂಭ,
ಷಡ್ಗುಣ್ಯ ಭಾರ್ಯ, ಕುಲಮುದ್ಧರಿತ್ರಿ.

ಹೆಂಡತಿಯಾದವಳು ಕುಟುಂಬದ ಪರಿಸ್ಥಿತಿ, ಗಂಡನ ಆವಶ್ಯಕತೆಗೆ ಅನುಗುಣವಾಗಿ ದಾಸಿ,ಮಂತ್ರಿ, ತಾಯಿ, ವೇಶ್ಯೆ ಮೊದಲಾದ ಪಾತ್ರಗಳನ್ನು ವಹಿಸಬೇಕು. ಪ್ರಾಚೀನ ಕಾಲದ ಕುಟುಂಬ ವ್ಯವಸ್ಥೆ ಹಾಗೂ ದಾಂಪತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಉಕ್ತಿಯನ್ನು ಓದಿಕೊಂಡರೆ ನಮಗೆ ಈ ಗಂಡಿನ ಬೇಡಿಕೆಗಳು ಕೊಂಚ ಆಸಕ್ತಿಕರವಾದವುಗಳೇ ಎಂದೆನ್ನಿಸುತ್ತದೆ.

ಹೆಣ್ಣನ್ನು ತೊತ್ತು, ತನ್ನ ಸಂಗ್ರಹದಲ್ಲಿರುವ ಬೆಲೆಬಾಳುವ, ಅಂತಸ್ಥನ್ನು ಪ್ರತಿಬಿಂಬಿಸುವ ವಸ್ತುಗಳಲ್ಲಿ ಒಂದು ಎಂದು ಕಾಣುವ ಅನಾಗರೀಕ ವರ್ತನೆಯಿಂದ ಈ ಗಂಡಸು ತುಂಬಾ ಮುಂದೆ ಬಂದಿದ್ದಾನೆ ಎನ್ನುವುದು ಕಾಣುತ್ತದೆ. ಈತನಿಗೆ ತಾನು ಮದುವೆಯಾದಾಕೆ ಕೇವಲ ಒಂದು ಪಶುವಿನ ಹಾಗೆ ತನ್ನ ನೆರಳನ್ನು ನೆಚ್ಚಿಕೊಂಡು ಬದುಕುವುದು ಬೇಕಿಲ್ಲ. ಹಾಗಂತ ಆಕೆಯನ್ನು ತನ್ನ ಸಮಾನಳೆಂದು ಪುರಸ್ಕರಿಸುವುದೂ ಇಲ್ಲ. ತನ್ನ ಕೆಲಸ ಕಾರ್ಯಗಳನ್ನು ದಾಸಿಯ ಹಾಗೆ ಮಾಡಬೇಕು ಎನ್ನುವುದು ಆತನ ಮೊದಲ ಬೇಡಿಕೆ. ಅನಂತರ ತನ್ನ ಬುದ್ಧಿವಂತಿಕೆಯಿಂದ ಆಕೆ ತನ್ನ ಜೀವನ ನಿರ್ವಹಣೆಗೆ ನೆರವಾಗಬೇಕು ಎಂದು ಬಯಸುತ್ತಾನೆ. ರೂಪವಿದ್ದರೆ ಯಾರಿಗೆ ತಾನೆ ಸಂತೋಷವಾಗುವುದಿಲ್ಲ? ತನ್ನ ತಪ್ಪುಗಳನ್ನೆಲ್ಲ ಕ್ಷಮಿಸಿ ಪೊರೆಯುವ ಭೂಮಿಯಾಗಿರಲಿ ಎಂದು ಅಪೇಕ್ಷಿಸುವುದರಲ್ಲಿ ಗಂಡು ಬದಲಾಗಿಯೇ ಇಲ್ಲ. ತಾಯಿಯಂತೆ ಪುಷ್ಕಳವಾಗಿ ಅಡುಗೆ ಮಾಡಿ ತನ್ನ ಹಸಿವನ್ನು ಇಂಗಿಸಬೇಕು. ದೈಹಿಕ ಕಾಮನೆಯನ್ನು ಸಹ ತೃಪ್ತಿ ಪಡಿಸಬೇಕು. ಇಷ್ಟೆಲ್ಲಾ ಗುಣಗಳು ಹೆಂಡತಿಯಲ್ಲಿದ್ದರೆ ತನ್ನ ಕುಲ ಉದ್ಧಾರವಾಗುವುದು ಎನ್ನುವುದು ಪ್ರಾಚೀನ ಗಂಡಿನ ನಂಬಿಕೆ.

ಅಧುನಿಕ ಗಂಡ

ಆಧುನಿಕ ಪುರುಷನೇನು ಬಹಳಷ್ಟು ಬದಲಾಗಿಲ್ಲ. ವಿಮೋಚನೆ, ಕ್ರಾಂತಿಗಳೇನಿದ್ದರೂ ಅಡುಗೆ ಮನೆಯಲ್ಲಿ ಬಂಧಿಯಾಗಿದ್ದ ಹೆಣ್ಣಿಗೆ ಸಂಬಂಧಿಸಿದ ಸಂಗತಿಗಳಾಗಿವೆ ಎಂದು ಭಾವಿಸಿದ್ದಾನೆ. ಗಂಡಸು ತನ್ನ ಪ್ರಾಚೀನ ವ್ಯಕ್ತಿತ್ವದ ಅಪೇಕ್ಷೆಗಳನ್ನು, ಬಯಕೆಗಳನ್ನು ತುಸು ಮಟ್ಟಿಗೆ ಸೌಜನ್ಯದ, ನಾಗರೀಕವಾದ ಭಾಷೆಯಲ್ಲಿ ಹೇಳಲು ಕಲಿತುಕೊಂಡಿದ್ದಾನೆ. ರೂಪದಲ್ಲಿ ಸಾಧಾರಣವಾಗಿದ್ದರೂ ಆಂತರಿಕ ಸೌಂದರ್ಯ ಮುಖ್ಯ ಎನ್ನುತ್ತಾನೆ. ತನ್ನ ಕನಸುಗಳನ್ನು ಹಂಚಿಕೊಳ್ಳುವ ಸಹೃದಯತೆ ಇರಬೇಕು ಎನ್ನುತ್ತಾನೆ, ತನ್ನ ಆಲೋಚನೆ, ಯೋಜನೆಗಳನ್ನು ಅರ್ಥಮಾಡಿಕೊಳ್ಳುವ ಬುದ್ಧಿವಂತಿಕೆ ಬೇಕು ಎಂದು ಅಪೇಕ್ಷಿಸುತ್ತಾನೆ. ತಾನು ತಪ್ಪು ಮಾಡಿದಾಗ, ಸೋತು ನಿಂತಾಗ ಸಂತೈಸಿ ಹುರಿದುಂಬಿಸಬೇಕು ಎಂದು ಬಯಸುತ್ತಾನೆ. ಅಡುಗೆ ಮಾಡಲು ಬರದಿದ್ದರೂ ಚಿಂತೆಯಿಲ್ಲ ಮನೆಯನ್ನು ಮ್ಯಾನೇಜ್ ಮಾಡುವ ಕೌಶಲ್ಯವಿರಬೇಕು ಎಂದು ಡಿಮ್ಯಾಂಡ್ ಮಾಡುತ್ತಾನೆ. ಮದುವೆಯಾಗಿ, ಮಕ್ಕಳು ದೊಡ್ಡವರಾದರೂ ಸಹ ಹೆಂಡತಿ ಒಳ್ಳೆಯ ಗೆಳತಿಯ ಹಾಗೆ ಇರಬೇಕು ಎಂದು ಕನಸುತ್ತಾನೆ. ಇನ್ನು ಕತೆ, ಕಾದಂಬರಿಗಳನ್ನು ಓದಿಕೊಂಡ ಗಂಡಿಗೆ ಹೆಂಡತಿ ತನ್ನ ಬಾಳಿನ ನೈತಿಕ ಪ್ರಜ್ಞೆಯಾಗಿರಬೇಕು, ಆಕೆ ತನ್ನ ಬಾಳಿನ ನಂದಾದೀಪವಾಗಬೇಕು ಎನ್ನುವ ಭಯಂಕರ ಆಸೆಗಳಿರುತ್ತವೆ. ಇವೆಲ್ಲವುಗಳ ಮುಸುಕಿನಲ್ಲಿ ಬಹಳ ಪ್ರಬಲವಾಗಿ ಗಂಡಸು ಹೆಂಡತಿಯಲ್ಲಿ ತಾಯಿಯನ್ನು ಹುಡುಕುತ್ತಿರುತ್ತಾನೆ. ಉಳಿದೆಲ್ಲವುಳಿಗೆ ಅರ್ಥ ಕೊಡಬಲ್ಲ, ಉಳಿದೆಲ್ಲ ಬಯಕೆಗಳಿಗೆ ಬೆನ್ನೆಲುಬಾಗಿ ಉಳಿಯಬಲ್ಲ ಆಸೆಯಂತೂ ಆತನಲ್ಲಿ ಸದಾ ಉರಿಯುತ್ತಿರುತ್ತದೆ. ಅದು ಕಾಮ ತೃಪ್ತಿ!

ಹೆಣ್ಣಿನ ಬಯಕೆಗಳೇನು?

ಆಧುನಿಕತೆಯ ಬಿರುಗಾಳಿ ಬೀಸುವವರೆಗೆ ಬಯಕೆ, ಆಸೆ, ಡಿಮ್ಯಾಂಡುಗಳೆಲ್ಲ ದೈವವು ಕೇವಲ ತನ್ನ ಪಾಲಿಗೆ ಕೊಡಮಾಡಿದ ಸವಲತ್ತುಗಳು ಎಂದು ಗಂಡು ಭಾವಿಸಿದ್ದ. ಈಗ ಹೆಣ್ಣಿನ ವಿಮೋಚನೆಯನ್ನು ಸಾಧಿಸಿದ ಹೆಮ್ಮೆಯಲ್ಲಿ ಉಬ್ಬಿರುವ ಯುರೋಪಿನಲ್ಲಿ ಇಪ್ಪತ್ತನೆಯ ಶತಮಾನದವರೆಗೆ ಆಕೆಗೆ ಮತದಾನದ ಹಕ್ಕನ್ನೂ ನಿರಾಕರಿಸಲಾಗಿತ್ತು. ಇಂದಿಗೂ ಕೆಲವು ಇಸ್ಲಾಮಿಕ್  ದೇಶಗಳಲ್ಲಿ ಮಹಿಳೆಯರಿಗೆ ವಾಹನ ಚಾಲನೆಯ ಪರವಾನಗಿ ದೊರೆಯುವುದಿಲ್ಲ. ಸಾಮಾನ್ಯವಾಗಿ ಅಪ್ರಾಪ್ತರಿಗೆ,ಪಶುಗಳಿಗೆ, ಬುದ್ಧಿ ಸ್ಥಿಮಿತದಲ್ಲಿಲ್ಲದವರಿಗೆ ಈ ಹಕ್ಕನ್ನು ನಿರಾಕರಿಸಲಾಗುತ್ತದೆ. ಬಹುಕಾಲದವರೆಗೆ ಗಂಡು ಹೆಣ್ಣನ್ನು ಈ ಗುಂಪಿಗಿಂತ ವಿಭಿನ್ನವಾಗಿಯೇನು ಕಂಡಿರಲಿಲ್ಲ.

ಆಧುನಿಕತೆಗೆ ತೆರೆದುಕೊಂಡ ಸಮಾಜದಲ್ಲಿ ಹೆಣ್ಣು ತನ್ನ ಮನೆಯ ಹೊರಗಿನ ಹಕ್ಕುಗಳನ್ನು ಗಳಿಸಿಕೊಳ್ಳುವ ಹೋರಾಟದಲ್ಲಿಯೇ ಬಹುಕಾಲ ಮಗ್ನಳಾಗಿರಬೇಕಾಯಿತು. ನಾಲ್ಕು ಗೊಡೆಗಳ ನಡುವಿನ ತನ್ನ ಹಕ್ಕು, ಬಯಕೆಗಳನ್ನು ವ್ಯಕ್ತ ಪಡಿಸುವ ಅವಕಾಶ ಆಕೆಗೆ ಇಂದಿಗೂ ಗಗನ ಕುಸುಮವೇ. ಆದರೂ ನಮ್ಮ ಜನ ಜೀವನದಲ್ಲಿ ನುಸುಳಿಕೊಂಡಿರುವ ಮುಕ್ತತೆಯ ನೆಪದಲ್ಲಿ ಹೆಣ್ಣಿನ ಬಯಕೆಗಳೇನು ಆಕೆ ತನ್ನ ಕೈ ಹಿಡಿಯುವ ಗಂಡನಲ್ಲಿ ಕಾಣುವ ಗುಣಗಳೇನು ಎನ್ನುವವು ಹೊರಬಂದಿವೆ.

ಹೆಣ್ಣು ಎಂದಿಗೂ ತನ್ನ ಬಯಕೆಯನ್ನು ಆದಷ್ಟು ಸಾತ್ವಿಕವಾಗಿಯೇ ಮಂಡಿಸುತ್ತಾಳೆ. ಇದಕ್ಕೆ ಬಹುಭಾಗ ನಮ್ಮ ಸಮಾಜಗಳಲ್ಲಿ ಹೆಣ್ಣನ್ನು ಚಿತ್ರಿಸಿರುವ, ಆಕೆಗೆಂದು ಕಟ್ಟಿಕೊಟ್ಟಿರುವ ಸಿದ್ಢಮಾದರಿಗಳೇ ಕಾರಣ. ಗಂಡು ತಾನು ಬಯಸುವ ಹೆಣ್ಣನ್ನು ಸುಸ್ಪಷ್ಟವಾಗಿ ವಿವರಿಸುತ್ತಾನೆ. ಸಂಪಿಗೆಯಂತೆ ನೀಳ ನಾಸಿಕ, ಕೆಂದುಟಿಗಳು, ನೀಳ ಜಡೆ ಹೀಗೆ ಶುರುವಾಗ ಪಟ್ಟಿಯಲ್ಲಿ ಹೆಣ್ಣಿನ ಎಲ್ಲಾ ಅಂಗಾಂಗಳ ಬಗೆಗಿನ ತನ್ನ ಅಪೇಕ್ಷೆಯನ್ನು ವ್ಯಕ್ತ ಪಡಿಸಬಲ್ಲ ಗಂಡು. ಆದರೆ ಹೆಣ್ಣಿನ ಮನಸ್ಸಿನಲ್ಲಿ ಹಲವು ಬಗೆಯ ಅಪೇಕ್ಷೆಗಳಿದ್ದರೂ ಆಕೆ ತೀರಾ ಸಾತ್ವಿಕವಾದ ಭಾಷೆಯಲ್ಲಿಯೇ ತನ್ನ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ.

ಹೆಣ್ಣಿನದು ಭಾವ ಪ್ರಪಂಚವಾದ್ದರಿಂದ ಗಂಡಿನಂತೆ ಆಕೆಗೆ ಬಹುಶಃ ದೇಹ ವಿನ್ಯಾಸದ, ಅಂಗಾಂಗಗಳ ಕುರಿತು ನಿರ್ದಿಷ್ಟವಾದ ಅಪೇಕ್ಷೆಗಳು ಅಷ್ಟು ಪ್ರಮುಖವಾಗುವುದಿಲ್ಲ. ಕುದುರೆಯ ಮೇಲೆ ಕೂತು ಬರುವ ರಾಜಕುಮಾರ, ತೆರಯ ಮೇಲೆ ಕ್ರಾಪಿನೊಳಕ್ಕೆ ಬೆರಳಾಡಿಸುತ್ತ ನಸುನಗುವ ಚಿತ್ರನಟ ಹೀಗೆ ಅನೇಕ ಚಿತ್ರಣಗಳನ್ನು ಕಟ್ಟಿಕೊಂಡು ತಮ್ಮ ಬಯಕೆಗಳನ್ನು ವ್ಯಕ್ತಪಡಿಸುವುದು ಸಾಮಾನ್ಯ.

ಆದರೂ ಆಧುನಿಕ ಹೆಣ್ಣು ಮದುವೆಯಾದ ಗಂಡಿನಲ್ಲಿ ನಾನಾ ಅಂಶಗಳನ್ನು ಅಪೇಕ್ಷಿಸುತ್ತಾಳೆ. ತಂದೆಯ ತೋಳುಗಳು ಕೊಟ್ಟ ಭದ್ರತೆಯ, ನೆಮ್ಮದಿಯ ಭಾವವನ್ನು ಆಕೆ ಗಂಡನ ಅಪ್ಪುಗೆಯಲ್ಲಿ ಹುಡುಕುತ್ತಿರುತ್ತಾಳೆ. ಕ್ಲಾಸ್ ರೂಮಿನಲ್ಲಿ ಎರಡು ಅಡಿ ದೂರ ಕೂತರೂ ತಣ್ಣಗೆ ಸಾಂತ್ವನ ಹೇಳುವ ನಿರ್ಮಲ ಹೃದಯದ ಗೆಳೆಯನನ್ನು ಆಕೆ ಗಂಡನಲ್ಲಿ ಕಾಣಲು ಪ್ರಯತ್ನಿಸುತ್ತಿರುತ್ತಾಳೆ. ತನ್ನ ಚಂಚಲತೆ, ಗೊಂದಲಗಳಿಗೆ ಸಹಾನುಭೂತಿಯನ್ನು ಹೊಂದಿರುವ, ಅವುಗಳನ್ನು ದುರ್ಬಳಕೆ ಮಾಡದೆ ತನ್ನ ಒಳಿತಿಗೆ ಬಳಸಲು ಸ್ವಚ್ಛ ಮನಸ್ಸಿನಿಂದ ಸಹಾಯ ಹಸ್ತ ಚಾಚುವ ಗುರುವನ್ನು ಎದುರುನೋಡುತ್ತಿರುತ್ತಾಳೆ. ತನ್ನ ಮಾನಸಿಕ ವೇದನೆಯನ್ನು ಕಡಿಮೆ ಮಾಡುವ, ಭಾವನೆಗಳಿಗೆ ಬೆಲೆ ನೀಡುವ, ದುಃಖಕ್ಕೆ ಹೆಗಲಾಗುವ ಮನೋವೈದ್ಯನಾಗಿರಬೇಕು ತನ್ನ ಗಂಡ ಎಂದು ಅಪೇಕ್ಷಿಸುತ್ತಾಳೆ. ಇವುಗಳ ಜೊತೆಗೆ, ಗಂಡ ದೊಡ್ಡ ಮನೆ ಕಟ್ಟಬೇಕು, ವಜ್ರದ ನೆಕ್ಲೆಸ್ ಮಾಡಿಸಿಕೊಡಬೇಕು, ದೂರದ ದೇಶಗಳಿಗೆ ಪ್ರವಾಸಕ್ಕೆ ಕರೆದೊಯ್ಯಬೇಕು- ಹೀಗೆ ತಾನೇ ಸಣ್ಣತನಗಳು ಎಂದು ಭಾವಿಸುವ ಅನೇಕ ಬಯಕೆಗಳೂ ಇರುತ್ತವೆ.

ವ್ಯಕ್ತಿ ಸ್ವಾತಂತ್ರ್ಯದ ಗಾಳಿ

ಬಯಕೆಗಳು ಅಪೇಕ್ಷೆಗಳು ಎಲ್ಲೆಯಿಲ್ಲದೆ ಹಬ್ಬಿಕೊಂಡಿದ್ದರೂ ಮನುಷ್ಯ ಮಾತ್ರನಾದವನು ಎಲ್ಲವನ್ನೂ ಪಡೆಯುವುದಕ್ಕೆ ಸಾಧ್ಯವಿಲ್ಲ. ಇನ್ನೊಬ್ಬ ವ್ಯಕ್ತಿಯ ಸರ್ವ ಅಪೇಕ್ಷೆಗಳನ್ನೂ ಪೂರೈಸುವುದಕ್ಕಂತೂ ಮನುಷ್ಯನಿಗಿರಲಿ ಆ ಭಗವಂತನಿಗೂ ಸಾಧ್ಯವಿಲ್ಲ. ಯಾವುದೇ ಸಮಾಜದಲ್ಲಿ ವ್ಯಕ್ತಿಗೆ ತನ್ನ ವೈಯಕ್ತಿಕ ಬಯಕೆ, ಅಪೇಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಕ್ಕೆ ಆಸ್ಪದವಾಗದಷ್ಟು ತಾಪತ್ರಯಗಳಿದ್ದಾಗ, ತನ್ನ ಸುಖಾಪೇಕ್ಷೆ ನ್ಯಾಯ ಸಮ್ಮತವಾದದ್ದು, ಸ್ವಾರ್ಥವಲ್ಲ ಎನ್ನುವ ಭಾವನೆಯು ನೆಲೆಗೊಳ್ಳದಿದ್ದಾಗ ಆತ ಸ್ವಾಭಾವಿಕವಾಗಿ ಪಾಲಿಗೆ ಬಂದದ್ದನ್ನು ಪಂಚಾಮೃತ ಎಂದು ಭಾವಿಸಿ ಸಿಕ್ಕಿದ್ದರಲ್ಲಿ ಬೇಕಿದ್ದನ್ನು ಕಂಡುಕೊಳ್ಳುತ್ತ ನೆಮ್ಮದಿಯಾಗಿದ್ದ ಎನ್ನಬಹುದು.

ಆದರೆ ಯಾವಾಗ ಆರ್ಥಿಕವಾಗಿ ಕುಟುಂಬಗಳು ಸದೃಢವಾಗಲು ಶುರುವಾದವೋ, ಯಾವಾಗ ಪಶ್ಚಿಮದಿಂದ ಬಂದ ತಂತ್ರಜ್ಞಾನ, ಯಂತ್ರೋಪಕರಣಗಳು, ಇಟಾಲಿಯನ್ ಮಾರ್ಬಲುಗಳು, ಪ್ರೆಶರ್ ಕುಕ್ಕರ್ ಗಳು, ಮೈಕ್ರೋ ಓವನ್ನುಗಳು ನೇರವಾಗಿ ಮನೆಯನ್ನು  ಪ್ರವೇಶಿಸಲು ಶುರು ಮಾಡಿದವೋ ಪರಿಸ್ಥಿತಿ ಬದಲಾಗತೊಡಗಿತು. ಜಾಗತೀಕರಣದಿಂದಾಗಿ ಆರ್ಥಿಕ ವ್ಯವಸ್ಥೆ ವ್ಯಾಪಕವಾದಷ್ಟೂ ವ್ಯಕ್ತಿಗಳು ಆರ್ಥಿಕವಾಗಿ ಸದೃಢವಾಗಲು ಅನೇಕ ದಾರಿಗಳು ತೆರೆದುಕೊಂಡವು.

ಆರ್ಥಿಕ ಸ್ವಾತಂತ್ರ್ಯದ ಜೊತೆಗೇ ಮಿತ ಸಂತಾನ ಮೊದಲಾದ ಪ್ರಗತಿಪರ ನಿಲುವುಗಳಿಂದಾಗಿ ಸಮಾಜದಲ್ಲಿ ವ್ಯಕ್ತಿಗಳಿಗೆ ತಮ್ಮ ವೈಯಕ್ತಿಕ ಬಯಕೆ, ಆಕಾಂಕ್ಷೆಗಳ ಅರಿವಾಗತೊಡಗಿತು ಎನ್ನಬಹುದು. ತನ್ನ ಕುಟುಂಬ, ತನ್ನ ಪರಿವಾರ ಸಂತೋಷವಾಗಿರಬೇಕು ನಿಜ, ಆದರೆ ಅದಕ್ಕೆಂದು ನಾನು ನನ್ನ ಸುಖ ಸಂತೋಷಗಳನ್ನು, ಬಯಕೆಗಳನ್ನು ಬಲಿಕೊಡಬಾರದು ಎನ್ನುವ ಎಚ್ಚರ ಮೆಲ್ಲಗೆ ಹೆಣ್ಣಿನಲ್ಲೂ ಬೇರೂರಲು ಶುರುವಾಯಿತು. ಇದರಿಂದಾಗಿ ಮನೆಯ ಹೊರಗೂ ಮಹಿಳೆಯರು ತಮ್ಮ ಛಾಪು ಒತ್ತುವ ಸಾಧನೆಯನ್ನು ಮಾಡಲು ಸಾಧ್ಯವಾಯಿತು ಎನ್ನಬಹುದು.

ಇವನು ಇನಿಯನಲ್ಲ…

ತಮ್ಮಲ್ಲಿನ ಸುಪ್ತವಾಗಿದ್ದ ಬಯಕೆಗಳು ಎಲ್ಲಿವರೆಗೆ ನಿಷಿದ್ಧ ಎಂಬ ಕಟ್ಟಳೆಯು ಸಮಾಜದಲ್ಲಿ ಜಾರಿಯಲ್ಲಿತ್ತೋ ಅಲ್ಲಿಯವರೆಗೆ ಗಂಡನಿಗೆ ಪರ ಸ್ತ್ರೀಯೊಂದಿಗಿನ ಸಹವಾಸ, ಹೆಣ್ಣಿಗೆ ಇನ್ನೊಬ್ಬ ಗಂಡಸಿನೊಂದಿಗಿನ ಒಡನಾಟ ಲಂಪಟತನವೆಂದೇ ಪರಿಗಣಿಸಲ್ಪಡುತ್ತಿತ್ತು. ಮದುವೆಯಾದ ಹೆಂಗಸೊಬ್ಬಳು ದೈಹಿಕ ಕಾಮನೆಯನ್ನು ಹೊರತು ಪಡಿಸಿದ ಬೇರಾವ ಆಸರೆಗಾಗಿಯಾದರೂ ಬೇರೊಬ್ಬ ಗಂಡಸಿಗೆ ಹತ್ತಿರವಾಗುವುದು ಸ್ವತಃ ಆ ಹೆಣ್ಣಿಗೇ ಅಸಹನೀಯವಾಗಿತ್ತು.

ಒಂದರ ಬಾಲ ಹಿಡಿದು ಒಂದು ಚಲಿಸುವ ಬೃಹತ್ ಸುರುಳಿಯಂತೆ ಬದಲಾವಣೆಗಳು ಶುರುವಿಟ್ಟುಕೊಂಡಾಗ ಈ ಗ್ರಹಿಕೆಯಲ್ಲಿ ಬದಲಾವಣೆಗಳು ಕಾಣಲು ಶುರುವಾದವು. ಹೆಣ್ಣು ಗಂಡುಗಳಿಬ್ಬರೂ ಸಮಾನವಾದ ಶಿಕ್ಷಣವನ್ನು ಪಡೆದು ಒಬ್ಬರನ್ನೊಬ್ಬರು ಸಮಾನ ಪಾತಳಿಯಲ್ಲಿ ಕಾಣುವ, ಗೌರವಿಸುವ, ಅವಲಂಬಿಸುವ ಪರಿಪಾಠ ಬೆಳೆದಂತೆ ಹೆಣ್ಣು ಗಂಡಿನ ನಡುವಿನ ಸಂಬಂಧಗಳ ವೈವಿಧ್ಯವೂ ಹೆಚ್ಚಾಗಲು ಶುರುವಾಯಿತು. ಹಿಂದಿನ ತಲೆಮಾರು ತನ್ನ ಅನುಮಾನದ ದೃಷ್ಟಿಗೆ ತಾನೇ ನಾಚಿಕೊಳ್ಳುವಷ್ಟು ಪರಿಶುದ್ಧವಾದ ಸ್ನೇಹದ ಒಡನಾಟ ಗಂಡು ಹೆಣ್ಣುಗಳ ನಡುವೆ ಉಂಟಾಯಿತು. ಇವೆಲ್ಲಾ ಬೆಳವಣಿಗೆಗಳಿಗೆ ವೇಗವರ್ಧಕವಾಗಿ ಕೆಲಸ ಮಾಡಿದ್ದು ಹಿಂಜರಿಕೆಯಿಲ್ಲದೆ ಎಲ್ಲಾ ಮನೆಗಳನ್ನು, ಖಾಸಗಿ ವಲಯಗಳನ್ನು ಆಕ್ರಮಿಸುತ್ತಿರುವ ತಂತ್ರಜ್ಞಾನ!

ಎಸ್ ಎಂ ಎಸ್ ಸಂಗಾತಿ

ಹಳೆಯ ಪ್ರೇಮ ಕಾವ್ಯಗಳಲ್ಲಿ ದೈಹಿಕವಾಗಿ ದೂರವಾಗಿ ವಿರಹದಲ್ಲಿ ಬೇಯುವ ಪ್ರೇಮಿಗಳು ಹಂಸ, ಪಾರಿವಾಳ ಮೊದಲಾದ ದೂತರ ಮೂಲಕ ತಮ್ಮ ಪ್ರಿಯರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದ ಪ್ರಸ್ತಾಪವಿದೆ. ಕಾಳಿದಾಸನ ಕಾವ್ಯದಲ್ಲಂತೂ ತೇಲುವ ಮೂಡಗಳೇ ಪ್ರೇಮಿಗಳ ನಡುವಿನ ಸಂದೇಶವಾಹಕಗಳಾಗಿ ಕೆಲಸ ಮಾಡಿವೆ.

ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಹಂಸ, ಪಾರಿವಾಳಗಳ ಸ್ಥಾನವನ್ನು ನಿರ್ಜೀವ ಎಲಕ್ಟ್ರಾನಿಕ್ ಚಿಪ್ಪುಗಳಿಂದಾದ ಮೊಬೈಲುಗಳು ತುಂಬಿಕೊಡುತ್ತಿವೆ. ವ್ಯತ್ಯಾಸವೆಂದರೆ, ಈ ಸಂದೇಶವಾಹಕಗಳು ಕೇವಲ ಪ್ರೇಮಿಗಳನ್ನು ಬೆಸೆಯುವುದರಲ್ಲಿ ಕೆಲಸ ಮಾಡುತ್ತಿಲ್ಲ. ಎಲ್ಲಾ ಕಾಲದಲ್ಲೂ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬಲ್ಲ ಇಬ್ಬರು ಒಳ್ಳೆಯ ಗೆಳೆಯರನ್ನು, ನೊಂದವರಿಗೆ ಆರ್ದ್ರವಾದ ಹೃದಯದಿಂದ ಸಾಂತ್ವನ ಹೇಳುವವರನ್ನು, ಒಂಟಿತನದಲ್ಲಿ ನರಳುವವರಿಗೆ ಆತ್ಮೀಯತೆಯ ಭಾವವೆರೆಯುವವರನ್ನು, ಮಹತ್ವಾಕಾಂಕ್ಷಿಗಳಿಗೆ ವಿವೇಕಿಗಳಾದ ಮಾರ್ಗದರ್ಶಿಗಳನ್ನು, ಪತಿತರಿಗೆ ಆದರ್ಶವಾಗಬಲ್ಲ ಸಾಧಕರನ್ನು ಬೆಸೆಯುವ, ಸಂಬಂಧ ಏರ್ಪಡಿಸುವ ಮಾಧ್ಯಮಗಳಾಗಿ ಕೂಡ ಕೆಲಸ ಮಾಡುತ್ತಿವೆ.

ತಾನು ಜೊತೆಯಲ್ಲಿ ತಂದ ಅಪಾಯಗಳೆಲ್ಲವನ್ನೂ ಅರಿತುಕೊಂಡು ಸೂಕ್ತವಾಗಿ ಬಳಸುವವರ ಪಾಲಿಗೆ ಮೊಬೈಲಂತೂ ಮಂತ್ರದಂಡವೇ ಆಗಿಹೋಗಿದೆ. ದೆಹಲಿಯ ಅಪರಿಚಿತ ಆಫೀಸೊಂದರಲ್ಲಿ ಕುಳಿತು ಕೆಲಸ ಮಾಡುವ ಹುಡುಗಿ ತನ್ನ ಸಹೋದ್ಯೋಗಿಗಳ ಅಸೂಯೆಯನ್ನು, ಬಾಸುಗಳ ಅಸಹಕಾರವನ್ನು, ತನ್ನ ಅಸಹಾಯಕತೆಯನ್ನು ಬೆಂಗಳೂರಿನಲ್ಲಿ ಕುಳಿತ ಸಮಾನವಯಸ್ಕ ಗೆಳೆಯನಲ್ಲಿ ಹೇಳಿಕೊಂಡು ಹಗುರಾಗಬಹುದು. ಕಾಣದ ದೇಶದಲ್ಲಿರುವ ಮಗನಿಗೆ ಅಪ್ಪ ಕುಳಿತಲ್ಲಿಂದಲೇ ಧೈರ್ಯ ಹೇಳಬಹುದು. ಒಂದು ರೀತಿಯಲ್ಲಿ ಮೊಬೈಲ್ ಫೋನುಗಳು ಭೌಗೋಳಿಕ ಅಂತರಗಳನ್ನು ಬೆಸೆಯುವಲ್ಲಿ ನೆರವಾದರೆ ಇನ್ನೊಂದು ರೀತಿಯಲ್ಲಿ ಭಾವನಾತ್ಮಕ ಕಂದರಗಳನ್ನು ಮುಚ್ಚಿಹಾಕುವಲ್ಲೂ ನೆರವಾಗುತ್ತವೆ.

ಅಂತರಜಾಲದ ಮಾಯಾಜಾಲ

ತನ್ನ ಬುದ್ಧಿವಂತಿಕೆಗೆ ಸಾಟಿಯಾಗದ ಹೆಂಡತಿ, ತನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಾಗದ ಗಂಡ ಹೀಗೆ ಸೂಕ್ಷ್ಮ ಹಾಗೂ ಅತಿ ಜಟಿಲವಾದ ವ್ಯಕ್ತಿತ್ವಗಳನ್ನು ಬೆಳೆಸಿಕೊಳ್ಳುತ್ತಿರುವ ವ್ಯಕ್ತಿಗಳಲ್ಲಿ ಸಣ್ಣದಾದರೂ ದೊಡ್ಡ ಕೊರತೆಯಾಗಿ ಕಾಡುವ ಅಂಶಗಳನ್ನು  ಮುಚ್ಚಿ ಹಾಕುವುದಕ್ಕೆ ಮೊಬೈಲ್ ಫೋನ್ ನಿಂದ ಹಿಡಿದು ಅಂತರಜಾಲದವರೆಗೆ ಇಪ್ಪತ್ತೊಂದನೆಯ ಶತಮಾನದ ಎಲ್ಲಾ ಆವಿಷ್ಕಾರಗಳು ತಮ್ಮಿಂದಾದ ನೆರವನ್ನು ನೀಡುತ್ತಿವೆ.

ಒಂದು ಮನೆಯನ್ನು ಉದಾಹರಣೆಗೆ ತೆಗೆದುಕೊಳ್ಳೋಣ:  ಹೈಸ್ಕೂಲಿನಲ್ಲಿ ಓದುತ್ತಿರುವ ಹುಡುಗನಿಗೆ ತನ್ನ ಕಾಲೇಜು ಪರಿಸರದಲ್ಲಿ ವೈಚಾರಿಕತೆಯ ಪ್ರಭಾವ ಉಂಟಾಗಿರುತ್ತದೆ. ದೇವರು, ಪೂಜೆ, ಆಚರಣೆ, ಧರ್ಮ ಮೊದಲಾದವುಗಳ ಕುರಿತು ಪ್ರಚಂಡವಾದ ವಿರೋಧವಿರುತ್ತದೆ. ವೈಚಾರಿಕವಾಗಿ ಆತನಿಗೆ ಮನೆಯ ಉಳಿದೆಲ್ಲಾ ಸದಸ್ಯರು ಶತ್ರುಗಳೇ ಆಗಿ ಪರಿಣಮಿಸಿರುತ್ತಾರೆ. ಹೆಜ್ಜೆ ಹೆಜ್ಜೆಗೂ ಆತ ತನ್ನ ವೈಚಾರಿಕತೆಯ ಮೇಲೆ ದಾಳಿಯನ್ನು ಎದುರಿಸುತ್ತಿರುತ್ತಾನೆ. ಅದೀಗ ತಾನೆ ಮೊಳಕೆಯೊಡೆದು, ಇನ್ನೂ ಪಕ್ವವಾಗಿರದ ವಿಚಾರವಾದಿಯು ವಿಪರೀತ ಆಕ್ರಮಣಕಾರಿಯೂ ಆಗಿರುತ್ತಾನೆ. ತನ್ನ ಕಣ್ಣಿಗೆ ಪ್ರತಿಗಾಮಿಯಾಗಿ ಕಾಣುವ ಮನೆಯ ವಾತಾವರಣ ಆತನಿಗೆ ಸೆರೆಮನೆಯೆಂದೇ ಭಾಸವಾಗುತ್ತಿರುತ್ತದೆ. ತನಗೆ ಹಿತವೆನಿಸುವ ವಿಚಾರವಾದ, ವೈಜ್ಞಾನಿಕತೆಯ ಗಾಳಿಯಿಲ್ಲದ ಮನೆಯ ಪರಿಸರ ಆತನಿಗೆ ಉರಿಸುಗಟ್ಟಿಸುತ್ತಿರುತ್ತದೆ. ಥಟ್ಟನೆ ಬೆಳಕಿನ ಕಿರಣವೊಂದು ಕಾಣಿಸಿಕೊಳ್ಳುತ್ತದೆ. ಕಂಪ್ಯೂಟರೆಂಬ ಮಾಯಾಕಿಟಕಿಯ ಎದುರು ಕುಳಿತು ಆತ ತನ್ನಂಥ ಎಳೆ ವಿಚಾರವಾದಿಗಳನ್ನು ಸಂಧಿಸುತ್ತಾನೆ. ಈ ಬಗೆಯ ಬೇಗುದಿಯನ್ನು ಅನುಭವಿಸುತ್ತಿರುವುದು ತಾನೊಬ್ಬನೇ ಅಲ್ಲ ಎನ್ನುವ ಸಾಂತ್ವನವೇ ಆತನಲ್ಲಿನ ತಳಮಳವನ್ನು ಶಮನ ಮಾಡುತ್ತದೆ. ಹಸಿ ಕ್ರಾಂತಿಕಾರಿ ತುಸು ನೆಮ್ಮದಿಯನ್ನು ಕಾಣುತ್ತಾನೆ.

ಆಕೆ ವಿಪರೀತ ಸಂಕೋಚ ಹಿಂಜರಿಕೆ ಕೀಳರಿಮೆ ಇರುವ ಹುಡುಗಿ. ಅಪ್ಪ ಅಮ್ಮ ಅದೆಷ್ಟೇ ತೆರೆದ ಮನಸ್ಸಿನವರು, ಒಳ್ಳೆಯವರಾದರೂ ಅವರಿಗೆ ತನ್ನ ಬೇಸರ, ಸಂಕಟಗಳು ಅರ್ಥವಾಗುವುದೇ ಇಲ್ಲ ಎನ್ನುವ ಆರೋಪ ಆಕೆಯದು. ವಾಸ್ತವದ ಬದುಕಿನ ನಿರ್ದಯತೆ, ನಾಳಿನ ಬದುಕಿನ ಅನಿಶ್ಚಿತತೆ  ಆಕೆಯಲ್ಲಿ ಹುಟ್ಟು ಹಾಕುವ ಗೊಂದಲಗಳಿಗೆ ತಾಯಿಯ ಆರೈಕೆ, ತಂದೆಯ ಬೆಂಬಲ, ಸಹೋದರನ ಕಾಳಜಿ ಯಾವುದೂ ಪರಿಹಾರವಾಗುವುದಿಲ್ಲ. ತಾನು ದಿನನಿತ್ಯ ಕಾಲೇಜಿನಲ್ಲಿ ನೋಡುವ, ಆತ್ಮವಿಶ್ವಾಸದ ಕಣ್ಣುಗಳ, ದಿಟ್ಟ ನಡೆಯ ಹುಡುಗನ ಮಾತುಗಳೇ ಬೇಕು ಅನ್ನಿಸಿರುತ್ತದೆ. ಹಾಗಂತ ಆತನ ಮೇಲೆ ಆಕೆಗೆ ಒಲವು ಮೂಡಿದೆ ಎಂದಲ್ಲ. ಪ್ರೀತಿ, ಪ್ರೇಮಗಳಿಗೆ ಒಡ್ಡಿಕೊಳ್ಳುವುದಕ್ಕೆ ಪ್ರತ್ಯೇಕ ಏರ್ಪಾಡೇ ಇರುತ್ತದೆ. ಆದರೆ ಜಟಿಲವಾದ ಆಕೆಯ ಭಾವ ಲೋಕಕ್ಕೆ ವೈವಿಧ್ಯಮಯವಾದ ಆವಶ್ಯಕತೆಗಳಿರುತ್ತವೆ. ಒಬ್ಬನೇ ವ್ಯಕ್ತಿಯ ಒಲವು ಅವೆಲ್ಲಾ ಆವಶ್ಯಕತೆಗಳನ್ನು ತುಂಬುವಷ್ಟು ಶಕ್ತವಲ್ಲ ಎನ್ನುವುದು ಆಕೆಗೆ ಅರಿವಿರುತ್ತದೆ. ಆಕೆಗೆ ಆ ಕುರಿತು ತಕರಾರೇನೂ ಇರುವುದಿಲ್ಲ, ಪ್ರೇಮಿಯೇ ತನ್ನೆಲ್ಲಾ ಭಾವನಾತ್ಮಕ, ಭೌದ್ಧಿಕವಾದ  ಆವಶ್ಯಕತೆಯನ್ನು ಪೂರೈಸಬೇಕೆಂಬ ಒತ್ತಾಸೆಯೂ ಆಕೆಯದಲ್ಲ. ಆ ಮಹತ್ವಾಕಾಂಕ್ಷಿ, ಆತ್ಮವಿಶ್ವಾಸದ ಸಹಪಾಠಿಯ ಒಂದೆರಡು ಎಸ್ ಎಂ ಎಸ್ ಸಂದೇಶಗಳಲ್ಲಿ ಆಕೆಗೆ ಬೇಕಾದ ಸಾಂತ್ವನ, ಧೈರ್ಯ ಸಿಕ್ಕಿರೆ ಬೇಡ ಎನ್ನುವವರು ಯಾರು?

ಅಪಾಯದ ಎಚ್ಚರ

ಎಂಥದ್ದೇ ಸಂಬಂಧಗಳು ಗಟ್ಟಿಯಾಗಬೇಕಾದರೂ ಇಬ್ಬರೂ ವ್ಯಕ್ತಿಗಳ ನಡುವೆ ಹದವಾದ ಬಾಂಧವ್ಯ ಏರ್ಪಡಬೇಕು. ಸಂಬಂಧಕ್ಕೆ ಇಂಥದ್ದು ಎಂದು ಹೆಸರೊಂದನ್ನು ನಾಮಕರಣ ಮಾಡದಿದ್ದರೂ ತಮ್ಮ ಒಡನಾಟದ, ಉದ್ದೇಶದ  ಕುರಿತು ಸ್ಪಷ್ಟತೆ ಇರಬೇಕು. ಈ ಬಗೆಯ ಸ್ಪಷ್ಟತೆ ಸಿದ್ಧಿಸುವುದು ಸುಲಭದ ಮಾತಲ್ಲ. ಎಲ್ಲಾ ಸಂಬಂಧಗಳು ಮಾರ್ದವವಾಗಿ ಅರಳುವುದಿಲ್ಲ, ಹಿತವಾಗಿ ಹೆಪ್ಪುಗಟ್ಟುವುದಿಲ್ಲ. ಒಬ್ಬರ ಆವಶ್ಯಕತೆಗಳನ್ನು ಇನ್ನೊಬ್ಬರು ಎಲ್ಲಾ ಸಂಬಂಧಗಳಲ್ಲಿ ಸರಿಯಾಗಿ ಗ್ರಹಿಸಿ ಪ್ರತಿಸ್ಪಂದಿಸುತ್ತಾರೆ ಎಂಬ ಖಾತರಿಯಿರುವುದಿಲ್ಲ.

ಒಂಟಿತನದಿಂದಲೋ, ತನ್ನ ನಿಜ ವ್ಯಕ್ತಿತ್ವದ ಸತ್ವವನ್ನು ಗಂಡ ಅರ್ಥ ಮಾಡಿಕೊಳ್ಳುತ್ತಿಲ್ಲ, ತಾನಿರುವ ಜಾಗದಲ್ಲಿ ತನ್ನತನಕ್ಕೆ ಮನ್ನಣೆ ದೊರಕುತ್ತಿಲ್ಲ ಎಂದು ಪರಿತಪಿಸುವ ಹೆಣ್ಣು ತಾನು ಕಳೆದುಕೊಂಡದ್ದನ್ನು ಹುಡುಕುತ್ತಾ ಈ ತಂತ್ರಜ್ಞಾನದ ಶಾಖೆಗಳ ಮೂಲಕ ಹೊರಜಗತ್ತಿಗೆ ಕೈಚಾಚುತ್ತಾಳೆ. ಹೀಗೆ ಚಾಚಿದ ಕೈಗೆ ತಗುಲುವ ಕೈಗಳೆಲ್ಲಾ ಸಹಾಯ ಹಸ್ತಗಳೇ ಆಗಬೇಕಿಲ್ಲ. ತನ್ನ ಕೌಟುಂಬಿಕ ನೆಮ್ಮದಿಯನ್ನು, ದಾಂಪತ್ಯದ ಸವಿಯನ್ನು ಹಾಳುಗೆಡವಬಹುದಾದ ಸಂಬಂಧ ತಗುಲಿಕೊಳ್ಳಬಹುದು. ನಿರಪಾಯಕಾರಿ ಸ್ನೇಹವೆಂದು ಶುರುವಾದ ಸಂಬಂಧ ವಿವಾಹ ಬಾಹಿರ ದೈಹಿಕ ಸಂಬಂಧಕ್ಕೆ ಎಡೆ ಮಾಡಿಕೊಡಬಹುದು. ದಾಂಪತ್ಯ ಜೀವನದಲ್ಲಿ ನೆಮ್ಮದಿಯಿಂದಿರುವ, ಯಾವ ಕೊರತೆಯನ್ನೂ ಅನುಭವಿಸಿದ ಹೆಣ್ಣು ಸಹ ತನ್ನ ಇನ್ಯಾವುದೋ ಸೂಕ್ಷ್ಮ ಭಾವನಾತ್ಮಕ ಆವಶ್ಯಕತೆಯನ್ನು ಪೂರೈಸಿಕೊಳ್ಳುವ ಭರದಲ್ಲಿ ಎಚ್ಚರ ತಪ್ಪಿದರೆ ಬಹುಮುಖ್ಯವಾದ ದಾಂಪತ್ಯ ಬದುಕನ್ನೇ ನಾಶಪಡಿಸಿಕೊಳ್ಳಬಹುದು.

ಹೆಣ್ಣಿನ ಕೋಮಲ, ಮೃದಲ ಮನೋ ಪ್ರಪಂಚದ ಆಕರ್ಷಣೆಗೆ ಒಳಗಾದ ಗಂಡಸು ತುಸು ಸಂಯಮ ಕಳೆದುಕೊಂಡರೂ ತಾನು ಆರಾಧಿಸಿದ, ಆಸ್ಥೆಯಿಂದ ಹುಡುಕಿಕೊಂಡ ಸೂಕ್ಷ್ಮವಾದ, ನಿರ್ಮಲವಾದ ಸಂಬಂಧವನ್ನು ತಿಪ್ಪೆಗುಂಡಿಯಾಗಿಸಿಕೊಂಡುಬಿಡಬಹುದು.  ವ್ಯಕ್ತಿತ್ವ ಜಟಿಲವೂ, ಸೂಕ್ಷ್ಮವೂ ಆದಷ್ಟೂ ಹರಿತವೂ ಆಗಲು ಶುರುವಾಗುತ್ತದೆ ಎನ್ನುವ ಕಲ್ಪನೆ ಅನೇಕರಲ್ಲಿ ಇರುವುದೇ ಇಲ್ಲ. ನೇರವಾಗಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ ವ್ಯಕ್ತಿಯ ಕುರಿತಾಗಿ ಮನಸ್ಸಿನಲ್ಲಿ ಮೂಡುವ ಪ್ರತಿಕ್ರಿಯೆಗಿಂತ ಸ್ನೇಹದ ಹೆಸರಿನಲ್ಲಿಖಾಸಗಿ ಗುಟ್ಟು, ದೌರ್ಬಲ್ಯಗಳನ್ನೆಲ್ಲಾ ಅರಿತು ಅಸಭ್ಯವಾಗಿ ವರ್ತಿಸಲು ಅವನ್ನು ಬಳಸುವ ವ್ಯಕ್ತಿಯ ಕುರಿತ ಕ್ರೋಧ ತೀವ್ರವಾಗಿರುತ್ತದೆ. ಮನುಷ್ಯ ಹೆಚ್ಚು ಬುದ್ಧಿವಂತನಾದಷ್ಟೂ ಮೋಸ ಹೋಗುವ ಭಯ ಆತನಲ್ಲಿ ಹೆಚ್ಚು ಆಳಕ್ಕೆ ಇಳಿಯುತ್ತದೆ. ನೇರಾನೇರವಾದ ಆಕ್ರಮಣವನ್ನು ಅರಗಿಸಿಕೊಳ್ಳುವ, ದಾಳಿಯ ನೋವನ್ನು ಮರೆಯುವ ಸಾಮರ್ಥ್ಯಕ್ಕೆ ಇಂದಿನ ಮನಸ್ಸುಗಳಲ್ಲಿ ಕೊರತೆಯಿಲ್ಲ. ಆದರೆ ಮೋಸ ಹೋದೆನೆಂಬ ಆಘಾತವನ್ನು ಸಹಿಸುವುದು ಕಷ್ಟ.

ತಂತ್ರಜ್ಞಾನದ ಅಗೋಚರ ಸೇತುವೆ ಕಟ್ಟಿಕೊಂಡುಸೂಕ್ಷ್ಮವಾದ  ಸಂಬಂಧಗಳನ್ನು ಬೆಸಯಲು ಹೊರಡುವ  ಆಧುನಿಕರು ಎಚ್ಚರವಾಗಿರಬೇಕಾದ್ದು ತುಂಬಾ ಆವಶ್ಯಕ. ಸಮುದ್ರ ಮಂಥನದಲ್ಲಿ ಹೆಚ್ಚು ಆಳಕ್ಕೆ ಸಮುದ್ರವನ್ನು ಮಥಿಸಿದಷ್ಟೂ ಹೆಚ್ಚು ಸೂಕ್ಷ್ಮವಾದ, ಆದರೆ ಹೆಚ್ಚು ತೀಕ್ಷ್ಣವಾದ ವಸ್ತುಗಳು ಹೊರಬರಲು ಶುರುವಾದವು. ಆಳಕ್ಕೆ ಕಡೆಯದಿದ್ದರೆ ಅಮೃತ ದೊರೆಯದು. ಆದರೆ ಅಮೃತದ ಅನ್ವೇಷಣೆಯಲ್ಲಿರುವವರಿಗೆ ಹಾಲಾಹಲ ಎದುರಾಗದು ಎನ್ನುವ ಖಾತರಿಯೂ ಇರದು. ಹಾಲಾಹಲವನ್ನು ಗಂಟಲಲ್ಲೇ ಇರಿಸಿಕೊಳ್ಳುವ ವಿಷಕಂಠನ ಸತ್ವ ನಮ್ಮ ವ್ಯಕ್ತಿತ್ವದಲ್ಲಿ ಅಡಕವಾಗಿದ್ದರೆ ಅಮೃತದ ಬೆನ್ನು ಹತ್ತಲು ಯಾವ ಅಡ್ಡಿಯೂ ಇಲ್ಲ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s