ಒಳಗಿಳಿದ ಬೆಂಗಳೂರು ಹಾಗೂ ನೈಪಾಲ್

 

“ಇದು ನನ್ನ ಊರಲ್ಲ. ನಾನು ಇಲ್ಲಿ ಸೇರಿದವನಲ್ಲ. ಇದು ಸರಿಹೋಗುತ್ತಿಲ್ಲ” ಮೆಜೆಸ್ಟಿಕ್ ನಿಂದ ಆಟೋ ಹಿಡಿದು ಕೆ.ಆರ್ ವೃತ್ತದ ಬಳಿಯಿರುವ ನನ್ನ ಕಾಲೇಜಿಗೆ ತಲುಪುವುದಕ್ಕೆ ರಸ್ತೆಗಳನ್ನು ಹಾದು ಹೋಗುವಾಗ ನನಗೆ ಅನ್ನಿಸುತ್ತಿದ್ದದ್ದು ಹೀಗೆ. ನಾನು ಹೊಸ ಊರಿನ ಚಹರೆಯ ಅಪರಿಚಿತತೆಯನ್ನು ಎದುರುಗೊಂಡಿದ್ದು ಈ ಭಾವನೆಯಲ್ಲೇ. ದೇಶದ ಮೂಲೆ ಮೂಲೆಗಳಿಂದ ದಿನವೊಂದಕ್ಕೆ ಸಾವಿರಾರು ಮಂದಿ ಬೆಂಗಳೂರು ಸೇರುತ್ತಾರೆ. ಬೆಂಗಳೂರು ಸಹ ಕೊಸರದೆ ಕೆಮ್ಮದೆ ಎಲ್ಲರನ್ನು ಒಳಕ್ಕೆ ಬಿಟ್ಟುಕೊಳ್ಳುತ್ತದೆ. ಆದರೆ ಪ್ರವಾಸಿಯಾಗಿಯಲ್ಲದೆ ಸ್ಥಾವರ ಸ್ಥಾಪಿಸಿಕೊಳ್ಳಲು ಬಂದಿದ್ದ ನನ್ನನ್ನು ಒಳಕ್ಕೆ ಬಿಟ್ಟುಕೊಳ್ಳಲು ಬೆಂಗಳೂರು ಬಿಗುಮಾನ ತೋರಿದ ಹಾಗೇ ನನಗೆ ಭಾಸವಾಗಿತ್ತು. ಅತ್ತಿಂದಿತ್ತ ಓಡಾಡುವ ಅಷ್ಟು ಜನರಲ್ಲಿ ಯಾರಿಗೂ ನಾನು ಬಂದುದದರ ಕುರಿತು ಸಂಭ್ರಮವಿಲ್ಲ. ಅಸಲಿಗೆ ಟಾರು ಕವಿದ ರಸ್ತೆಯ ಮೇಲೆ ನಾನೊಬ್ಬ ಮಾಂಸ ಮಜ್ಜೆಗಳ ಮನುಷ್ಯ ನಡೆದು ಹೋಗುತ್ತಿರುವುದೂ, ನಾನು ಇಲ್ಲಿಯವನಾಗಲಿಕ್ಕೆ ಸಾಧ್ಯವಾಗದೆ ಒದ್ದಾಡುತ್ತಿರುವುದು ಯಾರ ಕಣ್ಣಿಗೂ ಮುಖ್ಯವಾಗಿಯೇ ಇರಲಿಲ್ಲ. ಓಡಾಡುವ ಜನರ ಕಣ್ಣಿಗೆ ಯಾವುದೂ ಮುಖ್ಯವಾಗಿದ್ದಂತೆ ಕಾಣುತ್ತಿರಲಿಲ್ಲ.

ವರ್ಷಗಳು ಕಳೆದಿವೆ. ಅಂದು ಕೆ.ಆರ್.ವೃತ್ತದಿಂದ, ಮೈಸೂರು ಬ್ಯಾಂಕ್ ವೃತ್ತದ ನಡುವೆ ಇರುವ ಗೊಂದಲಕಾರಿ ಒಮ್ಮಾರ್ಗಗಳ ಚಕ್ರವ್ಯೂಹದಲ್ಲಿ ಸಿಲುಕಿಕೊಂಡು, ಮರಳುಗಾಡಿನಲ್ಲಿ ದಿಕ್ಕು ತಪ್ಪಿದವನಂತೆ ಓಡಾಡುತ್ತಿದ್ದೆ. ರಾತ್ರಿ ಎಂಟುಗಂಟೆ ದಾಟಿತ್ತು. ಕತ್ತಲು ಗಾಢವಾದಷ್ಟು, ವಾಹನಗಳ ಸಂಖ್ಯೆ ವಿರಳವಾದಷ್ಟೂ ಎದೆ ಬಡಿತ ಜೋರಾಗುತ್ತಿತ್ತು. ದಾರಿಹೋಕರೊಂದಿಗೆ ಮಾತನಾಡಲೂ ಸಂಕೋಚ. ಯಾರಲ್ಲಾದರೂ ದಾರಿ ಕೇಳಬೇಕೆ ಬೇಡವೇ ಎನ್ನುವುದಕ್ಕೆ ನೂರು ಮಾರು ದೂರದಿಂದ ನಡೆದು ಬರುವ ವ್ಯಕ್ತಿಯನ್ನು ಅವಲೋಕಿಸುವುದು. ಆತನ ಚರ್ಯೆಯಲ್ಲಿ, ವರ್ತನೆಯಲ್ಲಿ, ಬಾಡಿ ಲ್ಯಾಂಗ್ವೇಜಿನಲ್ಲಿ ತುಸುವೇ ಆಕ್ರಮಣ ಕಂಡೊಡನೆ ಅವನಿಂದ ಕಣ್ಣು ಕೀಲಿಸಿ ಇನ್ನೊಬ್ಬನಿಗಾಗಿ ಕಾಯುವುದು. ಯಾರೋ ತೋರಿದ ದಿಕ್ಕಿನಲ್ಲಿ ನಿಂತು ಎಂದೂ ಬರದಿರುವ ಬಿ.ಎಂ.ಟಿ.ಸಿ ಬಸ್ಸಿಗಾಗಿ ಕಾಯುವುದು. ಕಾಲು ನಡಿಗೆಯ ದೂರದಲ್ಲಿದ್ದ ಮೆಜೆಸ್ಟಿಕ್ ಗೆ ದಾರಿ ಯಾವುದೆಂದು ಕೇಳುತ್ತ ಅಲೆಯುವುದು. ಬೆಂಗಳೂರೆಂಬ ಮರಳುಗಾಡಿನ ಓಯಸಿಸ್ ಆಗಿ ಕಂಡಿತ್ತು ಅಂದು ಮೆಜೆಸ್ಟಿಕ್. ಕಣ್ಣೆದುರು ಸರ್ರೆಂದು ಸಾಗುವ ಅಷ್ಟು ಬಸ್ಸುಗಳಲ್ಲಿ ಒಂದೂ ಮೆಜೆಸ್ಟಿಕ್ ಹೋಗುವುದಿಲ್ಲ ಎನ್ನುವುದನ್ನು ನಂಬುವುದಕ್ಕೇ ಸಾಧ್ಯವಾಗಿರಲಿಲ್ಲ. ಬೆಂಗಳೂರಿನ ಪಾಲಿಗೆ ರಕ್ತವನ್ನು ಪಂಪ್ ಮಾಡುವ ಹೃದಯ ಮೆಜೆಸ್ಟಿಕ್, ಅಲ್ಲಿಗೆ ಬಸ್ಸುಗಳು ಹೋಗುತ್ತಿಲ್ಲ ಎಂದರೆ ಏನರ್ಥ?

ದಿಕ್ಕು ತೋಚದೆ, ಕೈಚೆಲ್ಲಿ ಕೂತಿದ್ದವನನ್ನು ಕಂಡು ವಿಪರೀತ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಬೆಂಗಳೂರು ನಕ್ಕಂತೆ ತೋರಿತು. ಹೊರಗಿನ ವ್ಯಕ್ತಿ, ವಸ್ತು, ಕಟ್ಟಡ, ಘಟನೆಗಳಿಗಿಂತ ಒಳಮನಸ್ಸಿನಲ್ಲಿನ ಪ್ರತಿಕ್ರಿಯೆ, ಪ್ರತಿಬಿಂಬಗಳೊಂದಿಗೇ ವ್ಯವಹರಿಸುವ ಅಂತರ್ಮುಖಿ ನಾನಾದ್ದರಿಂದ ಸರಳವಾದ ಸಂಗತಿಗಳು ಕ್ಲಿಷ್ಟಕರವೆಂಬಂತೆ ತೋರುತ್ತವೆ. ಕ್ರಿಯೆಯ ಮೊದಲಿನ ಕಲ್ಪನೆ, ಯೋಜನೆ, ಆಲೋಚನೆ, ಊಹೆಗಳೆಲ್ಲ ಸೇರಿಕೊಂಡು ಸೃಷ್ಟಿಸುವ ಚಕಮಕಿ ಕ್ರಿಯೆ ಘಟಿಸುವುದಕ್ಕೂ ಮೊದಲೇ ನನ್ನನ್ನು ನಿಶ್ಯಕ್ತನನ್ನಾಗಿಸಿಬಿಡುತ್ತವೆ. ಸರಳವಾದ ಕ್ರಿಯೆಯ ಘಟಿಸುವಿಕೆಯ ಸಮಯ ಬಂದಾಗ ನಾನು ನಿಷ್ಕ್ರಿಯನಾಗಿ ಹೋಗುವುದು ಸಾಮಾನ್ಯ. ಇಂತಹ ನನ್ನ ಒಳಮನಸ್ಸಿನಲ್ಲಿ ಅಂದು ಬೆಂಗಳೂರು ನನ್ನೊಂದಿಗೆ ಕದನಕ್ಕೆ ಬಿದ್ದಂತೆ, ನನಗೆ ಸವಾಲೆಸೆದಂತೆ ಕಂಡಿತ್ತು. ನಾನು ಈ ನಗರಿಯ ಅಹಂಕಾರವನ್ನು ಮುರಿದು ಇದನ್ನು ಮೆಟ್ಟಿ ನಿಲ್ಲಬೇಕು ಎಂಬ ಬಾಲಿಶ ಯೋಚನೆಗಳು ಕೆಲಕಾಲ ದಿಕ್ಕೆಟ್ಟವನ ತಲ್ಲಣವನ್ನು ಮರೆಮಾಡಿದ್ದವು.

ವರ್ಷಗಳು ಉರುಳಿ ಬೆಂಗಳೂರಿನ, ಇದುವರೆಗು ನೋಡಿರದ ಭಾಗಗಳೂ ಸಹ ಮನೆಯ ಹಿತ್ತಿಲು ಎಂಬಷ್ಟು ಪರಿಚಿತತೆ ಮೂಡಿರುವಾಗ ಅಂದು ಬೆಂಗಳೂರಲ್ಲಿ ದಿಕ್ಕು ಕಾಣದೆ ನಿಂತ ರಾತ್ರಿ ನನ್ನ ಮನಸ್ಸಿನಲ್ಲಿ ಮೂಡಿದ ಆಲೋಚನೆಗಳು ಕ್ಷುಲ್ಲಕ ಎನ್ನಿಸುತ್ತವೆ. ಆದರೆ ಇತರೆ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಆ ಸನ್ನಿವೇಶವನ್ನು ಇಟ್ಟು ನೋಡಿದಾಗ, ನಾನು ಹೊಸತನ್ನು ಅಂತರ್ಗತಗೊಳಿಸಿಕೊಳ್ಳುವುದಕ್ಕೆ, ಅಪರಿಚಿತವಾದದ್ದನ್ನು ಒಪ್ಪಿಕೊಳ್ಳುವುದಕ್ಕೆ ಒಡ್ಡುವ ಆಂತರಿಕ ಪ್ರತಿಭಟನೆ ಅದರಲ್ಲಿ ಕಾಣುತ್ತದೆ. ಅದು ಇಂದಿಗೂ ಬದಲಾಗಿಲ್ಲ.

ಅನೇಕ ಭಾರತೀಯರು ಹೆಸರು ಕೇಳಿಯಷ್ಟೇ ತಿಳಿದಿರುವ ವಿ.ಎಸ್.ನೈಪಾಲ್ ರ India a wounded civilization ಪುಸ್ತಕದಲ್ಲಿ ಒಂದು ಅಧ್ಯಾಯವಿದೆ. Defect of vision ಎಂದು. ಇದರಲ್ಲಿ ಜಗತ್ತನ್ನು ಕಾಣುವ ನಮ್ಮ ದೃಷ್ಟಿಕೋನ ಮುಂತಾಗಿ ಮಾತಾಡುತ್ತ ನೈಪಾಲ್ ಗಾಂಧೀಜಿ ಆತ್ಮಚರಿತ್ರೆಯಲ್ಲಿ ತಮ್ಮ ಜೀವಮಾನದಲ್ಲೇ ಮೊಟ್ಟ ಮೊದಲಬಾರಿಗೆ, ಹಡಗಿನಲ್ಲಿ ಪ್ರಯಾಣ ಮಾಡುವಾಗಿನ ಅನುಭವ ಕುರಿತು ಏನೂ ಬರೆದಿಲ್ಲದಿರುವುದನ್ನು ಉಲ್ಲೇಖಿಸುತ್ತಾರೆ. ಅದಕ್ಕೆ ಕಾರಣ ಏನು ಎಂದು ವಿಶ್ಲೇಷಿಸುತ್ತಾರೆ. ಆ ಅಧ್ಯಾಯವನ್ನು ಓದು ಎಂದು ಹಿರಿಯರೊಬ್ಬರು ಹೇಳಿದಾಗ ನಾನು ಆ ಪುಸ್ತಕದ ಹಿಂದೆ ಬಿದ್ದೆ. ಕಳೆದ ವಾರ ರಾಜಾಜಿನಗರದ ಆಕೃತಿ ಪುಸ್ತಕದಂಗಡಿಯಲ್ಲಿ ಅದನ್ನು ಕಂಡು, ಕೊಂಡು ತಂದಿಟ್ಟು ಓದಲು ತೊಡಗುವ ಮುನ್ನ ನನ್ನ ಬೆಂಗಳೂರಿನ ಮೊದಲ ದಿನಗಳ ಅನುಭವ ಅಸ್ಪಷ್ಟವಾಗಿ ನೆನಪಾಯಿತು. ಅದನ್ನು ಇಲ್ಲಿ ದಾಖಲಿಸಿರುವೆ.

ಪುಸ್ತಕ ಓದಿದ ತರುವಾಯ ವಿವರವಾಗಿ ಈ ಅನುಭವದ ಕುರಿತು ಬರೆಯುವೆ.

(photo courtesy: http://www.digital-p… )

Advertisements

5 thoughts on “ಒಳಗಿಳಿದ ಬೆಂಗಳೂರು ಹಾಗೂ ನೈಪಾಲ್

  1. ತುಂಬಾ ಚೆನ್ನಾಗಿ ಬರೆದಿದ್ದೀರಿ. ನಾನು ಹಲವು ವರ್ಷಗಳ ಹಿಂದೆ ಇಲ್ಲಿಗೆ ಬಂದಾಗಲಿಂದಲೂ ಇದು ಎಂದಿಗೂ ನನ್ನ ಊರು ಆಗಲು ಸಾಧ್ಯವೇ ಅನ್ನಿಸುತ್ತಲೇ ಹುಟ್ಟೂರಿಗಿಂತಲೂ ಜಾಸ್ತಿಯೇ ಎನ್ನುವಷ್ಟು ಪರಿಚಿತವಾಗಿ ಹೋಗಿದೆ !

  2. ಬೆಂಗಳೂರಿನ ಯಾಂತ್ರಿಕತೆ ಒಂದು ರೀತಿಯಲ್ಲಿ ವರವೂ ಹೌದು, ಶಾಪವೂ ಹೌದು. ಬಂದವರನ್ನೆಲ್ಲ ತನ್ನೊಳಗೆ ಸೇರಿಸಿಕೊಂಡು ಅವರ ವೈಯಕ್ತಿಕತೆಯನ್ನು ಕಾಪಾಡಿಕೊಂಡಿರಲು ನೆರವಾಗುತ್ತಿರುವಂತೆ, ಪಕ್ಕದ ಮನೆಗೆ ಬೆಂಕಿ ಬಿದ್ದರೆ ಮೈ ಕಾಯಿಸಿಕೊಳ್ಳುವ ಗುಣವೂ ಇದಕ್ಕಿದೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ಬದುಕುತ್ತಿದ್ದೇನೆ ಆದರೂ ಈ ಊರು ಪ್ರತಿದಿನ ಹೊಸತರಂತೆ, ಅಪರಿಚಿತನಂತೆ ನನಗೆ ಕಾಣುತ್ತಿರುತ್ತದೆ. ವಿ.ಎಸ್. ನೈಪಾಲ್ ಅವರ ಪುಸ್ತಕದ ಬಗ್ಗೆ ಬರೆದಿದ್ದೀರಿ, ಇನ್ನೊಂದಿಷ್ಟು ಅದರ ಬಗ್ಗೆ ಬರೆದಿದ್ದರೆ ಚೆನ್ನಾಗಿತ್ತು, ವಿವರವಾಗಿ ಪುಸ್ತಕದ ಬಗ್ಗೆ ಬರೆಯುವೆನೆಂದಿರುವಿರಿ, awaited 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s