ತಂತು ನಿಸ್ತಂತು ಜಂತುಗಳು!

(ಪತ್ರಿಕೆಯೊಂದಕ್ಕೆ ಬರೆದಿದ್ದ ಬರಹ, ಇದು ತುಸುಗಂಭೀರ ಪ್ರಬಂಧವಾಯಿತು ಎಂದದ್ದಕ್ಕೆ ಬೇರೆ ಬರೆಯಬೇಕಾಯಿತು)

ಪ್ರಸ್ತುತ ಕಾಲಮಾನವನ್ನು ಮಾಹಿತಿ ತಂತ್ರಜ್ಞಾನದ ಸಂಕ್ರಮಣ ಕಾಲವೆಂದೇ ಹೇಳಬಹುದು. ಇಡೀ ಜಗತ್ತು ಇಂದ್ರಜಾಲ ಪ್ರದರ್ಶನದ ವೇದಿಕೆಯೇ ಆಗಿಹೋಗಿದೆ. ಜಗತ್ತಿನ ಇಂಜಿನಿಯರುಗಳು, ಕಾರ್ಖಾನೆಗಳು, ದೊಡ್ಡ ದೊಡ್ಡ ಕಂಪೆನಿಗಳು ಒಟ್ಟಾಗಿ  ಪ್ರೇಕ್ಷಕರು ಉಸಿರು ಹೊರಳಿಸಿಕೊಳ್ಳಲು ಅವಕಾಶವಾಗದಷ್ಟು ಕ್ಷಿಪ್ರವಾಗಿ ತಾಂತ್ರಿಕತೆಯ ನಾನಾ ಎತ್ತರಗಳಿಗೆ ನೆಗೆಯುತ್ತಲೇ ಇದ್ದಾರೆ. ಕ್ಷಣ ಕ್ಷಣಕ್ಕೆ ತಮ್ಮ ಮಾಯಾ ಟೋಪಿಯಿಂದ ವಿಸ್ಮಯಕಾರಿ ಪದಾರ್ಥಗಳನ್ನು ಹೊರಗೆಳೆಯುತ್ತಲೇ ಇದ್ದಾರೆ. ದಿನ ದಿನಕ್ಕೆ ತಂತ್ರಜ್ಞಾನದ ಜೊತೆಗೆ ತಂತ್ರಜ್ಞಾನವನ್ನು ಬಳಸುವ ಜನತೆಯೂ ಔಟ್ ಡೇಟೆಡ್ ಆಗುತ್ತಿದ್ದಾರೆ. ಏಕ ಕಾಲಕ್ಕೆ ನಾವು wired (ತಂತು) ಹಾಗೂ wireless (ನಿಸ್ತಂತು) ತಲೆಮಾರು ಎನ್ನಿಸಿಕೊಂಡಿದ್ದೇವೆ. ಈ ನಾಗಾಲೋಟದಲ್ಲಿ ಎಲ್ಲರಿಗೂ ವೇಗವೇ ಮುಖ್ಯವಾಗಿದೆ. ಈ ಮಿಂಚಿನ ಓಟದಲ್ಲಿ ನಾವು ಪಡೆಯುತ್ತಿರುವುದೇನು ಕಳೆದುಕೊಳ್ಳುತ್ತಿರುವುದೇನು? ಜತೆಗೆ ನಾವು ಏನಾಗಿ ರೂಪುಗೊಳ್ಳುತ್ತಿದ್ದೇವೆ ಎನ್ನುವುದು ಕುತೂಹಲಕರವಾದ ಜಿಜ್ಞಾಸೆಗೆ ಎಡೆ ಮಾಡಿಕೊಡುತ್ತದೆ.

ಕಣ್ಮುಚ್ಚಿ ಸ್ವೀಕರಿಸು

ಮನುಷ್ಯನ ದೇಹ, ಮನಸ್ಸುಗಳು ಹೊಸತನ್ನು ಅಷ್ಟು ಸುಲಭಕ್ಕೆ ಸ್ವೀಕರಿಸುವುದಿಲ್ಲ. ಹೊಸತಾಗಿ ಹಾಕಿಕೊಂಡ ಕನ್ನಡಕಕ್ಕೆ ಕಣ್ಣು, ಕಿವಿಯಿಂದ ಹಿಡಿದು ಮೂಗಿನವರೆಗೆ ಬದಲಾವಣೆಗೆ ಒಗ್ಗಿಕೊಳ್ಳಬೇಕಾದ ಪ್ರತಿ ಅಂಗವೂ ಪ್ರತಿರೋಧ ಒಡ್ಡುತ್ತವೆ. ಎಚ್ಚರದ ಸ್ಥಿತಿಯಲ್ಲಿನ ಮಾತು ಪಕ್ಕಕ್ಕಿರಲಿ, ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿಯೂ ದೇಹ ಹೊರಗಿನ ಯಾವುದೇ ಪದಾರ್ಥವನ್ನು ಒಳಬಿಟ್ಟುಕೊಳ್ಳಲು ನಿರಾಕರಿಸುತ್ತದೆ. ಹೊಸ ಪರಿಸರ, ಹೊಸ ಮನೆ, ಹೊಸ ಕಾಲೇಜು, ಹೊಸ ಜ್ಞಾನ ಶಾಖೆ ಯಾವುದಕ್ಕೆ ಒಡ್ಡಿಕೊಳ್ಳುವಾಗಲೂ ಮನಸ್ಸು ರಚ್ಚೆ ಹಿಡಿದು ರಂಪ ಮಾಡುತ್ತದೆ. ಏನನ್ನಾದರೂ ಒಪ್ಪಿಕೊಳ್ಳುವುದಕ್ಕೆ ತುಸು ಸಮಯ ಬೇಕಾಗುತ್ತದೆ.

ವೈಯಕ್ತಿಕವಾಗಿ ಮನಸ್ಸು ದೇಹಗಳು ಹೊಸತನಕ್ಕೆ ಪ್ರತಿರೋಧ ಒಡ್ಡಿದರೆ ಒಂದು ಸಮಾಜ ಹೊರಗಿನ ಪ್ರಭಾವ ಹಾಗೂ ಹೊಸತನಗಳಿಗೆ ಪ್ರತಿರೋಧ ಒಡ್ಡದೆ ಏನನ್ನೂ ಸ್ವೀಕರಿಸುವುದಿಲ್ಲ. ಸಂಸ್ಕೃತಿ, ಭಾಷೆ, ವಸ್ತ್ರ ಸಂಹಿತೆ, ಅಡುಗೆ, ಜೀವನ ಪದ್ಧತಿ ಹೀಗೆ ಯಾವುದರಲ್ಲಾದರೂ ಹೊಸತನ್ನು ಒಪ್ಪಿಕೊಳುವುದು ಎಂದರೆ ಹಳೆಯದನ್ನು ಕಡಿದುಕೊಂಡಂತೆಯೇ. ಹೀಗಾಗಿ ರೂಪಾಂತರಕ್ಕೆ ಸಮಯ ಬೇಕಾಗುವುದು.

ಆದರೆ ಜಾಗತೀಕರಣ ಎಂಬ ಮಾಯಾ ಮಂತ್ರದಂಡ ಅದ್ಯಾವ ಹುಚ್ಚು ಉನ್ಮಾದದಲ್ಲಿ ಮುಟ್ಟಿದ್ದೆಲವನ್ನೂ ಬದಲಿಸುತ್ತಾ ಸಾಗುತ್ತಿದೆಯೆಂದರೆ ನಾವು ಬಾಳೆ ಸಿಪ್ಪೆ ಸುಲಿದ ಸಲೀಸಿನಲ್ಲಿ ನಮ್ಮತನವನ್ನು ತೊರೆದು ಬದಲಾವಣೆಗೆ ಒಗ್ಗಿಕೊಳ್ಳುವಷ್ಟು ತತ್ಪರರಾಗಿದ್ದೇವೆ. ಟೈಪ್ ರೈಟರುಗಳಿಂದ ಕಂಪ್ಯೂಟರುಗಳಿಗೆ, ಲ್ಯಾಂಡ್ ಲೈನ್ ಫೋನುಗಳಿಂದ ಮೊಬೈಲುಗಳಿಗೆ ಬೆಳೆದು ಬರಲು ನಾವುಗಳು ತೆಗೆದುಕೊಂಡ ಸಮಯವನ್ನು ಗಮನಿಸಿದರೆ ಇತ್ತೀಚಿನ ಬದಲಾವಣೆಯ ವೇಗ ದಿಗ್ಭ್ರಮೆ ಮೂಡಿಸುತ್ತದೆ. “ಹೊಸತೆಂಬುದು ದೈವವಾಣಿ ಕಣ್ಮುಚ್ಚಿ ಸ್ವೀಕರಿಸು” ಎನ್ನುವುದೇ ಈ ಕಾಲದ ಮಂತ್ರವಾಗಿದೆ.

ನೀವು ಫೇಸ್ ಬುಕ್ಕಿನಲ್ಲಿ ಇಲ್ಲವಾ?

ಅತಿ ವೇಗದ ಬದಲಾವಣೆಯ ಯುಗದಲ್ಲಿ ಅಪ್ ಡೇಟ್ ಆಗುತ್ತಿರಲೇ ಬೇಕು. ಇಲ್ಲವಾದಲ್ಲಿ ನೋಡನೋಡುತ್ತಲೇ ಅಪ್ರಸ್ತುತರಾಗಿ ಹೋಗುವ ಅಪಾಯವಿರುತ್ತದೆ. ಇಂಜಿನಿಯರಿಂಗಿಗೆ ಕಾಲಿಟ್ಟ ಹೊಸತರಲ್ಲಿ ಕಂಪ್ಯೂಟರ್ ಆಗಲೇ ನನಗೆ ಪಳಗಿತ್ತು. ಆಗಿನ್ನೂ ಹೊಸತೇ ಎನ್ನಿಸುವ ಇಂಟರ್ನೆಟ್ಟಿನ ಸಖ್ಯ ಮಾಡಿ ನನ್ನ ಹೆಸರಿನಲ್ಲೊಂದು ಇ-ಮೇಲ್ ಐಡಿ ಗಳಿಸಿ ಅಂತರಜಾಲದ ಬ್ರಹ್ಮಾಂಡ ಬ್ಯಾಂಕಿನಲ್ಲಿ ನನ್ನದೊಂದು ಖಾತೆ ತೆರೆದು ಕೂತಿರುವಾಗಲೇ ಆರ್ಕುಟ್ ಉದ್ಭವಿಸಿತು. ಗೆಳೆತನ, ಹರಟೆ, ಚರ್ಚೆ, ಮಾಹಿತಿ ವಿನಿಮಯ, ಮನರಂಜನೆ, ಕಿತ್ತಾಟ ಹೀಗೆ ಯಾವ ಉದ್ದೇಶಕ್ಕೆ  ಎಂದೂ ಸ್ಪಷ್ಟವಿಲ್ಲದೆ ಅದಕ್ಕೆ ತೆರೆದುಕೊಂಡದ್ದಾಯಿತು. ಹಲ್ಲು ಶುಭ್ರವಾಗಿಸುವ ಯಕಶ್ಚಿತ್ ಪೇಸ್ಟು, ಟೂಥ್ ಬ್ರಶ್ಯುಗಳ ಕ್ಷೇತ್ರದಲ್ಲಿಯೇ ದಿನಕ್ಕೊಂದು ಕ್ರಾಂತಿಕಾರಿ ಸಂಶೋಧನೆಗಳಾಗುತ್ತ, ಒಂದು ದಿನ ಬೆಳಿಗ್ಗೆ ಏಳುತ್ತಲೇ ನಿಮ್ಮ ಬಚ್ಚಲು ಮನೆಯ ಬಾಗಿಲು ದಢಾರನೆ ಒದ್ದುಕೊಂಡು ಬಂದು “ನಿಮ್ಮ ಟೂಥ್ ಪೇಸ್ಟಿನಲ್ಲಿ ಉಪ್ಪು ಇದೆಯಾ?'” ಎಂದು ಕೇಳಿ ದಿಗ್ಭ್ರಮೆ ಮೂಡಿಸುವ ಈ ಕಾಲದಲ್ಲಿ ಇಪ್ಪತ್ತೊಂದನೆಯ ಶತಮಾನದ ನವಜಾತ ಅಂತರಜಾಲ ನಿಂತ ನೀರಾಗುವುದೇ?

ಆರ್ಕುಟ್ ಗೆಳೆಯರ ಬಳಗದ ರೀತಿ ರಿವಾಜು, ಸಂಸ್ಕಾರ – ಸಂಸ್ಕೃತಿಗಳನ್ನು ಅರಿಯುವಷ್ಟರಲ್ಲಿ ಬ್ಲಾಗುಗಳ ದಾಳಿ ಶುರುವಾಯಿತು. ತಂತ್ರಜ್ಞಾನದ ಕ್ಷಿಪ್ರ ಕ್ರಾಂತಿಯ ಒತ್ತಾಯಕ್ಕೆ ಹಲವರು ದಿಢೀರ್ ಸಾಹಿತಿಗಳಾದರು. ಬರವಣಿಗೆ ಎನ್ನುವುದು ಎಲ್ಲರ ‘ಕಪ್ ಆಫ್ ಟೀ’ ಆಗಿಹೋಯಿತು. ಕಂಪ್ಯೂಟರಿನ ಕೀಬೋರ್ಡು, ಸರಸವಾಡುವ ಮೌಸು ಪರ್ಯಾಯ ಹಲ್ಲು, ನಾಲಿಗೆಗಳಾಗಿ ಮಾತು ಮರೆತಿದ್ದ ಯುವ ಭಾರತ ಅಂತರಜಾಲವಿಡೀ ಕಟಕಟಕಟನೆ ಮಾತಿಗೆ ತೊಡಗಿತು. ಹತ್ತಾರು ವೈರುಗಳ ಸಂತೆಯ ನಡುವೆ ಕಂಪ್ಯೂಟರಿಗೆ ಬಿ.ಎಸ್.ಎನ್.ಎಲ್ ನವರ ಇಂಟರ್ನೆಟ್ ವೈರನ್ನೂ ಸಿಕ್ಕಿಸಿ ಟೇಬಲಿನ ಮೇಲೆ  ಕೂತ ಡೆಸ್ಕ್ ಟಾಪು, ತೊಡೆಯ ಮೇಲೆ ಮಲಗಿದ ಲ್ಯಾಪ್ ಟಾಪುಗಳಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿ, ಪದ್ಮಾಸನ ಹಾಕಿ ಕೂತು, ಕೈಬೆರಳುಗಳ  ನೆಟಿಗೆ ಮುರಿದು ಕೇಳು ಜನಮೇಜಯನೇ ಎಂದು ಪುಟಗಟ್ಟಲೆ ಬ್ಲಾಗು ಪುರಾಣ ಕುಟ್ಟುವುದಕ್ಕೆ ಪುರುಸೊತ್ತು ಇಲ್ಲ ಟ್ವಿಟರ್ ಎಂಬ ನೂರ್ ನಲ್ವತ್ ಅಕ್ಷರದ ಮೈಕ್ರೋ ಬ್ಲಾಗು ಶುರುವಾಯ್ತು. ಹತ್ತಿಪ್ಪತ್ತು ಜನರು ತಮ್ಮನ್ನು ‘ಫಾಲೋ’ ಮಾಡೋದನ್ನು ನೆನೆದು ಜನನಾಯಕನ ಗತ್ತಿನಲ್ಲಿ ಸೂರ್ಯನ ಅಡಿಯಿರುವ ಪ್ರತಿಯೊಂದು ವಿದ್ಯಮಾನದ ಕುರಿತು ಟ್ವೀಟ್ ಛಂದಸ್ಸಿನಲ್ಲಿ ಭಾಷ್ಯ ಬರೆಯುವ ಪರಿಪಾಟ ಶುರುವಾಯ್ತು.

ಅಷ್ಟರಲ್ಲಿ ಫೇಸ್ ಬುಕ್ ಬಿರುಗಾಳಿ ಎದ್ದಿತು.ರಮಾನಂದ ಸಾಗರ್ ಮಹಾಭಾರತದಲ್ಲಿ ರೊಯ್ಯನೆ ತೂರಿ ಬಂದು ಕಸಕ್ಕೆಂದು ಸಿಗಿದು ಸಿಗಿದು ಹಾಕುವ ಅಸಂಖ್ಯಾತ ಬಾಣಗಳ ಮಳೆಯಂತೆ ಫ್ರೆಂಡ್ ರಿಕ್ವೆಸ್ಟುಗಳು ಧಾವಿಸಿ ಬಂದು ತಮಗಿಷ್ಟು ಮಂದಿ ಗೆಳೆಯರಿರುವರೇ ಎಂದು ಹಿಗ್ಗಿ ಹೀರೇಕಾಯಿಯಾಗುತ್ತ, ಈ ಹೊಸ ಸೀಮೆ ಗೆಳೆತನದ ಜವಾಬ್ದಾರಿಗಳನ್ನು ನಿಭಾಯಿಸಲು ಹೆಣಗುತ್ತ ಫೇಸ್ ಬುಕ್ಕಿಗರಾದೆವು. ಕ್ಷಣಾರ್ಧದಲ್ಲಿ ಛಾಯಾ (ವರ್ಚ್ಯುಯಲ್) ಜಗತ್ತೊಂದು ಸೃಷ್ಟಿಯಾಗಿ ವಾಸ್ತವ ಜಗತ್ತಿನ ಮಿತಿ, ನಿಯಮಗಳನ್ನು ಮೀರುವ ಭರವಸೆ ಒದಗಿಸಿತು. ನಿಮಗೆ ಕಂಪ್ಯೂಟರ್ ಗೊತ್ತಿಲ್ಲವಾ ಎನ್ನುವ ಪ್ರಶ್ನೆ ನೀನು ಹೆಬ್ಬೆಟ್ಟಾ  ಎನ್ನುವಷ್ಟೆ  ಅವಮಾನಕಾರಿಯಾಗಿ ಕೇಳುತ್ತಿದ್ದ ದಿನಗಳಿನ್ನೂ ನೆನಪಿನಲ್ಲಿ ಹಸಿಯಾಗಿರುವಾಗಲೇ ನೀವು ಫೇಸ್ ಬುಕ್ಕಿನಲ್ಲಿ ಇಲ್ಲವಾ ಎನ್ನುವ ವಿಚಾರಣೆ ನಮ್ಮನ್ನು ಓಬಿರಾಯನ ಕಾಲದವರಾಗಿಸಿಬಿಡುವ ಈ ಕಾಲದ ವಿಸ್ಮಯವೇ ಅನನ್ಯ!

ತಂತು ನಿಸ್ತಂತು ಜಂತುಗಳು

ವಿಪರೀತ ವೈಜ್ಞಾನಿಕ, ಔದ್ಯೋಗಿಕ ಪ್ರಗತಿಯ ಈ ಕಾಲದಲ್ಲಿ ಅಂತರಜಾಲ ಕಂಪ್ಯೂಟರ್ ನಿನ್ನೆ ಮೊನ್ನೆ ಮೈನೆರೆದ ಕನ್ಯೆಯರಂತೆ ಕಾಣುತ್ತಿರುವಾಗಲೇ ವೈರು, ತಂತಿ, ಕೇಬಲುಗಳ ಬಂಧ ಕಡಿದುಕೊಂಡ ನಿಸ್ತಂತು ಯುಗ ಶುರುವಾಯಿತು. ಮೊಬೈಲ್, ಲ್ಯಾಪ್ ಟಾಪ್, ನೆಟ್ ಬುಕ್, ಐಫೋನ್, ಐ ಪಾಡ್ , ಐ ಪ್ಯಾಡ್ , ಕಿಂಡಲ್ ಮೊದಲಾದ ಅತ್ಯಾಧುನಿಕ ಇಂದ್ರನಗರಿಯ ಪರಿಕರಗಳು ತಂತ್ರಜ್ಞಾನವನ್ನು ಬಳಸುವುದಕ್ಕೆ ಒಂದು ಕಡೆ ಕೂರಬೇಕು, ಮೀಸಲಿರಿಸಿದ ಸಮಯ ವಿನಿಯೋಗಿಸಬೇಕು ಎನ್ನುವ ಕಟ್ಟಳೆಗಳನ್ನು ಮುರಿದವು. ಹೋದಲ್ಲಿ ಕೊಂಡೊಯ್ಯಬಹುದಾದ, ಕೊಂಡೊಯ್ದಲ್ಲಿ ಬಳಸಬಹುದಾದ ಈ ಯಂತ್ರಗಳಿಂದ ಇಂದಿನ ಯುವ ಜನತೆ ನಿಸ್ತಂತು ಜಂತುಗಳಾಗಿರುವುದು ಸತ್ಯ!

ಹಾಗೆ ನೋಡಿದರೆ ಯುವಕ ಯುವತಿಯರು, ನಗರವಾಸಿಗಳ ದೈನಂದಿನ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಮಾಹಿತಿ, ಮನೋರಂಜನೆ, ದೂರ ಸಂಪರ್ಕ ಸಂವಹನ ಗ್ಯಾಜೆಟ್ ಗಳು ಮಾತ್ರ ಆಧುನಿಕ ತಂತ್ರಜ್ಞಾನದ ಶಿಶುಗಳಲ್ಲ. ಅತ್ಯಾಧುನಿಕ ತಂತ್ರಜ್ಞಾನವಿರುವ ವೋಲ್ವೋ ಬಸ್ಸುಗಳು, ಜಿಪಿಎಸ್ ನೆಚ್ಚಿ ಓಡಾಡುವ ಸಿಟಿ ಟ್ಯಾಕ್ಸಿಗಳು , ಬಗೆ ಬಗೆಯ ಮೈಕ್ರೋ ಕಂಟ್ರೋಲರುಗಳನ್ನು ಹುದುಗಿಸಿಕೊಂಡ ಬೈಕು, ಕಾರುಗಳು ನಮ್ಮ ರಸ್ತೆಗಳ ಮೇಲಿವೆ. ನಾವು ದಿನನಿತ್ಯ ಬಳಸುವ ಹಾಲು, ತುಪ್ಪ, ಶ್ಯಾಂಪು, ಸಾಬೂನುಗಳ ತಯಾರಿಕೆಯಿಂದ ಹಿಡಿದು ಜೀವ ಉಳಿಸುವ ಸೂಕ್ಷ್ಮ ಶಸ್ತ್ರ ಚಿಕಿತ್ಸೆಗಳವರೆಗೆ ಎಲ್ಲೆಡೆ ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳು ಬಳಕೆಯಾಗುತ್ತಿವೆ. ಆದರೆ ಉಳಿದ ತಂತ್ರಜ್ಞಾನ, ಯಂತ್ರಗಳಿಗಿಂತ ಕಂಪ್ಯೂಟರ್, ಮೊಬೈಲು, ಐಪಾಡುಗಳು ಹೈಲೈಟ್ ಆಗುವುದಕ್ಕೆ ಕಾರಣವಿದೆ.

ಬಹುತೇಕ ಆವಿಷ್ಕಾರಗಳು ಒಂದು ನಿರ್ದಿಷ್ಟ ಕ್ಷೇತ್ರದಲ್ಲಿನ ನಿರ್ದಿಷ್ಟ ಕೆಲಸಕ್ಕಾಗಿ ಅತಿ ಸಮರ್ಥವಾದ ಯಂತ್ರಗಳನ್ನು ನಿರ್ಮಿಸುವಲ್ಲಿ ಶ್ರಮಿಸುತ್ತಿವೆಯದರೆ ಆಧುನಿಕ ಯುಗದ ತಂತ್ರಜ್ಞಾನದ ಕೂಸುಗಳು ವ್ಯಕ್ತಿಯೊಬ್ಬನ ಖಾಸಗಿ ಬದುಕಿನ ಅವಿಭಾಜ್ಯ ಅಂಗಗಳಾಗಲು ಹಾತೊರೆಯುತ್ತಿವೆ. ಒಬ್ಬ ವ್ಯಕ್ತಿ ಬಳಸುವ ಲ್ಯಾಪ್ ಟಾಪ್, ಮೊಬೈಲ್, ಐಫೋನ್, ಐ ಪ್ಯಾಡ್ ಆತನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಭರವಸೆ ಕೊಡುತ್ತವೆ. ದೂರದ ವ್ಯಕ್ತಿಗಳಿಗೆ ಕರೆ ಮಾಡುವುದಕ್ಕೆ, ಇ-ಮೇಲ್ ನೋಡುವುದಕ್ಕೆ, ಕಛೇರಿ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ, ಬೋರಾದರೆ ಹಾಡು ಕೇಳುವುದಕ್ಕೆ, ಸಿನೆಮಾ ನೋಡುವುದಕ್ಕೆ, ಕೂತಲ್ಲೇ ಶಾಪಿಂಗ್ ಮಾಡುವುದಕ್ಕೆ, ನೆನಪಾದುದನ್ನು ಟಿಪ್ಪಣಿ ಮಾಡಿಕೊಳ್ಳುವುದಕ್ಕೆ, ಮುಂಜಾನೆ ಅಲಾರಂ ಬಾರಿಸಿ ಎಬ್ಬಿಸುವುದಕ್ಕೆ ಹೀಗೆ ಎಲ್ಲವನ್ನೂ ಮಾಡಬಲ್ಲ ಸೇವಕನಾಗಿ ಇರುತ್ತೇನೆನ್ನುತ್ತವೆ. ನನ್ನನ್ನೂ ಸೇರಿದಂತೆ ಹಲವು ಗೆಳೆಯರು ವಾಚ್ ಕಟ್ಟುವುದೇ ಇಲ್ಲ, ಮೊಬೈಲಿನಲ್ಲೇ ಸಮಯ ನೋಡುವುದು. ಹೀಗೆ ನಮ್ಮ ದೈನಂದಿನೊಂದಿಗೆ ಬೆರೆತು ಹೋಗುತ್ತಿರುವ ಯಂತ್ರಗಳು ನಮ್ಮ ದೇಹದ ವಿಸ್ತರಣೆಯಾಗಿಯೇ ಭಾಸವಾಗುವುದಿದೆ!

ಮೊಬೈಲ್ ಜೇಬಲ್ಲಿ, ಮೆದುಳು ತಲೆಯಲ್ಲಿ

ತಂತ್ರಜ್ಞಾನ ತಾನಾಗಿ ಯಾವ ಗುಣವನ್ನೂ ಹೊಂದಿರುವುದಿಲ್ಲ. ಅದನ್ನು ಯಾವುದಕ್ಕೆ ಬಳಸುತ್ತೇವೆ ಎನ್ನುವುದರ ಮೂಲಕ ಅದರ ಧನಾತ್ಮಕ ಇಲ್ಲವೆ ಋಣಾತ್ಮಕ ಪರಿಣಾಮಗಳು ಜಾಹೀರಾಗುತ್ತವೆ ಎನ್ನುವುದೆಲ್ಲ ಕ್ಲೀಷೆಯ ಮಾತು. ವ್ಯಕ್ತಿಯೊಬ್ಬ ಎಷ್ಟೇ ಸ್ವತಂತ್ರ ಎಂದೆನಿಸಿದರೂ ಎಲ್ಲವೂ ಆತನ ಆಯ್ಕೆಯಾಗಿ ಉಳಿದಿಲ್ಲ. ನಿಮ್ಮ ಮನೆಯ ಮೇಲೆ ಮೊಬೈಲ್ ಟವರ್ ಹಾಕಲು ಅನುಮತಿಸುವ ಆಯ್ಕೆ ನಿಮಗಿರಬಹುದು ಆದರೆ ನಿಸ್ತಂತು ತರಂಗಾಂತರಗಳಿಗೆ ದೇಹವನ್ನೊಡ್ಡಿಕೊಳ್ಳದೆ ಇರುವ ಆಯ್ಕೆ ನಿಮ್ಮ ಕೈಲಿಲ್ಲ.

ಎತ್ತ ಹೋಗುತ್ತಿದ್ದೇವೆ ಎನ್ನುವ ಆತ್ಮಾವಲೋಕನಕ್ಕೆ ಆಸ್ಪದ ಕೊಡದಷ್ಟು  ದುಡಿಮೆ- ಕೊಳ್ಳುವಿಕೆ- ಮನರಂಜನೆಯ ವರ್ತುಲದಲ್ಲಿ ಬ್ಯುಸಿಯಾಗಿರುವ ನಾವು ಯಂತ್ರ ಜೇಬಲ್ಲಿ, ಮೆದುಳು ತಲೆಯಲ್ಲಿ ಇಟ್ಟುಕೊಂಡಿರುವಷ್ಟು ಕಾಲ ಮನುಷ್ಯರಾಗಿರಬಹುದು!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s