ಮೊಬೈಲನ್ನು ಮಂತ್ರದಂಡವಾಗಿಸುವ ಗೂಗಲ್ ವ್ಯಾಲೆಟ್

ಶಾಪಿಂಗ್ ಮಾಲುಗಳಿಗೆ, ರೆಸ್ಟೋರೆಂಟ್ ಗಳಿಗೆ, ಆಸ್ಪತ್ರೆ – ಪುಸ್ತಕದಂಗಡಿಗಳಿಗೆ ನಿಮ್ಮ ಜೇಬಿನಲ್ಲಿರುವ ಕ್ರೆಡಿಟ್ ಕಾರ್ಡ್ ಎಂಬ ಪ್ಲಾಸ್ಟಿಕ್ ಬಿಲ್ಲೆಯೊಂದರ ಬಲದಲ್ಲಿ ಕೈ ಬೀಸಿ ಕೊಂಡು ಹೋಗಿ ಬೇಕಾದ್ದು ಕೊಳ್ಳಬಹುದಾದ ಸೌಲಭ್ಯವನ್ನು ಅನುಭವಿಸುತ್ತ ಆಧುನಿಕ ತಂತ್ರಜ್ಞಾನದ ಕಾರ್ಯಕ್ಷಮತೆಯ ಬಗ್ಗೆ ಪ್ರಶಂಸೆಯ ಮಾತನ್ನು ಗಟ್ಟಿಯಾಗಿ ಹೇಳುವ ಮುನ್ನ ಈ ಲೇಖನ ಓದಿಕೊಳ್ಳಿ. ಪ್ಲಾಸ್ಟಿಕ್ ಕಾರ್ಡುಗಳ ಕ್ರಾಂತಿಯನ್ನು ಬಾಯಿ ತುಂಬ ಹೊಗಳಲು ಬಾಯಿ ತೆರೆದರೆ ಗೂಗಲ್ ಹೊರತರುತ್ತಿರುವ ಗೂಗಲ್ ವ್ಯಾಲೆಟ್ ಸೇವೆ ನಿಮ್ಮನ್ನು ‘ಹಳೇ ಕಾಲ’ದವರಾಗಿಸಿಬಿಡುತ್ತದೆ.

 ಇಂದು ನಾವು ಕಂಡು ಕೇಳರಿಯದ ಕೆಲಸಗಳಿಗೆ ಬಳಸಲ್ಪಡುತ್ತಿರುವ ಮೊಬೈಲ್ ಮೂಲಭೂತವಾಗಿ ಬಳಕೆಗೆ ಬಂದಿದ್ದು ದೂರ ಸಂಪರ್ಕ ಸಾಧಿಸುವುದಕ್ಕಾಗಿ. ಭೌತಿಕವಾಗಿ, ಭೌಗೋಳಿಕವಾಗಿ ದೂರವಿರುವ ಇಬ್ಬರು ವ್ಯಕ್ತಿಗಳ ನಡುವೆ ಸಂಪರ್ಕ ಕಲ್ಪಿಸುವುದಕ್ಕೆ ಮೊಬೈಲ್ ಕಾಲಿಟ್ಟಿತು. ಗೂಗಲ್ ಪರಿಚಯಿಸುತ್ತಿರುವ ಗೂಗಲ್ ವ್ಯಾಲೆಟ್ ಸೇವೆ ಈ ದೂರ ಸಂಪರ್ಕ ಸಾಧನವನ್ನು ಸನಿಹ ಸಂಪರ್ಕ ಸಾಧನವನ್ನಾಗಿಯೂ ಬಳಸುವ ಸಾಧ್ಯತೆಯನ್ನು ತೆರೆದಿರಿಸುತ್ತಿದೆ!
Near Field Communication ಎಂದು ಕರೆಯಲಾಗುವ ತಂತ್ರಜ್ಞಾನವನ್ನು ಬಳಸಿ ಮೊಬೈಲನ್ನು ಕ್ರೆಡಿಟ್ ಕಾರ್ಡಿಗೆ ಪರ್ಯಾಯವಾಗಿಸುವ ಪ್ರಯತ್ನ ಗೂಗಲ್ ವ್ಯಾಲೆಟ್ ನದು.ನಿಸ್ತಂತು (wireless) ಇಯರ್ ಫೋನ್  ಬಳಸುವುದಕ್ಕೆ, ಹಾಡುಗಳನ್ನು, ಫೈಲುಗಳನ್ನು , ಮೊಬೈಲ್ ನಲ್ಲಿನ ಕಾಂಟಾಕ್ಟ್ ಗಳನ್ನು ವರ್ಗಾಯಿಸುವುದಕ್ಕೆ ನಾವು ಮೊಬೈಲಿನಲ್ಲಿ ಬಳಸುವ ಚಿರಪರಿಚಿತ ಬ್ಲೂಟೂತ್ ತಂತ್ರಜ್ಞಾನಕ್ಕೆ ಸಮಾನವಾದ ತಂತ್ರಜ್ಞಾನ – Near Field Communication (NFC)- ಸನಿಹ (ಕ್ಷೇತ್ರ) ಸಂಪರ್ಕ.
NFC ತಂತ್ರಜ್ಞಾನದ ಬಳಕೆ ಮಾಡುವುದಕ್ಕೆ ಮೊಬೈಲ್ ಫೋನಿನಲ್ಲಿ NFC ಚಿಪ್ ಅಳವಡಿಸಿರಬೇಕು. ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ ಫೋನ್ ಗಳು ಈಗಾಗಲೇ ಈ ಚಿಪ್ ಹೊಂದಿವೆ. ಈ ಚಿಪ್ ಅಳವಡಿಸಿರುವ ಎರಡು ಯಂತ್ರಗಳು ಸಂಪರ್ಕ ಸಾಧಿಸುವುದಕ್ಕೆ ತೀರಾ ಸನಿಹದಲ್ಲಿರಬೇಕು. ಅಂದರೆ ನಾಲ್ಕು ಐದು ಸೆಂಟಿ ಮೀಟರುಗಳಷ್ಟು ಸಮೀಪ. ಬ್ಲೂ ಟೂತ್ ನ ಹಾಗೆ ಸಂಪರ್ಕ ಸಾಧಿಸಲು ಎರಡು ಯಂತ್ರಗಳನ್ನು ‘ಪೇರ್’ ಮಾಡಬೇಕಿಲ್ಲ. ಸಂಪರ್ಕದ ವ್ಯಾಪ್ತಿಗೆ ಬಂದೊಡನೆ ಸೆಕೆಂಡಿನ ಹತ್ತನೆ ಒಂದರಷ್ಟು ಕ್ಷಿಪ್ರ ಸಮಯದಲ್ಲಿ ಯಂತ್ರಗಳು ಒಂದಕ್ಕೊಂದು ‘ಪೇರ್’ ಆಗಿ ಬಿಡುತ್ತವೆ. ಇದು ಬ್ಲೂಟೂತ್ ಹಾಗೂ NFCಗೆ ಇರುವ ವ್ಯತ್ಯಾಸ. ಅಲ್ಲದೆ NFC ಬ್ಯೂಟೂತ್ ಗಿಂತ ಅತಿ ಕಡಿಮೆ  ಬ್ಯಾಟರಿ ಶಕ್ತಿಯನ್ನು ಬಳಸುತ್ತದೆ.
NFC ಚಿಪ್ ಹೊಂದಿರುವ ಮೊಬೈಲ್ ಫೋನುಗಳನ್ನು ಕ್ರೆಡಿಟ್ ಕಾರ್ಡ್, ಗುರುತಿನ ಚೀಟಿ, ಪ್ರಯಾಣದ ಪಾಸುಗಳಾಗಿ ಬಳಸಲು ಸಾಧ್ಯವೇ ಎನ್ನುವ ಕುತೂಹಲ ಸಂಶೋಧಕರಿಗೆ ಬಹಳ ಹಿಂದಿನಿಂದಲೇ ಶುರುವಾಗಿತ್ತು. ಗೂಗಲ್ ಅಲ್ಲದೆ ಅನೇಕ ಕಂಪೆನಿಗಳು NFC ಚಿಪ್ ಅಳವಡಿಸಿರುವ ಮೊಬೈಲನ್ನು  ಕ್ರೆಡಿಟ್ ಕಾರ್ಡ್ ನಂತೆ ಬಳಸುವ ತಂತ್ರಜ್ಞಾನದ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದ್ದವು. ಗೂಗಲ್ ತನ್ನ ‘ಗೂಗಲ್ ವ್ಯಾಲೆಟ್’ ಸೇವೆಯನ್ನು ಅಮೇರಿಕಾದ ಸ್ಪ್ರಿಂಟ್ ಸೇವೆಯಿರುವ ನೆಕ್ಸಸ್ ಎಸ್, ೪ಜಿ ಮೊಬೈಲುಗಳಲ್ಲಿ ಪ್ರಾರಂಭಿಸಿದೆ. ವೀಸ, ಸಿಟಿ ಗ್ರೂಪ್, ಮಾಸ್ಟರ್ ಕಾರ್ಡ್ ನಂತಹ ಹಣಕಾಸು ಸೇವಾ ಸಂಸ್ಥೆಗಳು ಗೂಗಲ್ ಜತೆ ಕೈಜೋಡಿಸಿವೆ.
ವ್ಯಾಲೆಟ್ ಕೆಲಸ ಮಾಡುವುದು ಹೇಗೆ?
ಶಾಪಿಂಗ್ ಎನ್ನುವ ಪರಿಕಲ್ಪನೆಯ ಅತ್ಯಾಧುನಿಕ ಮಾದರಿಯೆಂದರೆ: ವೀಸ, ಮಾಸ್ಟರ್ ಕಾರ್ಡ್ ಮೊದಲಾದ ಸೇವೆಗಳಿರುವ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿ ಇರುತ್ತದೆ.  ಕಾರ್ಡ್ ‘ಓದುವ’ ಯಂತ್ರದಲ್ಲಿ ಕಾರ್ಡನ್ನು ಉಜ್ಜಿದಾಗ (ಸ್ವೈಪ್) ಟೇಪ್ ರೆಕಾರ್ಡರಿನೊಳಗೆ ಹಾಕಿದ ಟೇಪಿನಿಂದ ಹಾಡು ಹೊಮ್ಮಿದ ಹಾಗೆ ಕಾರ್ಡಿನಿಂದ ಖಾತೆಯ ಮಾಹಿತಿ ವರ್ಗಾವಣೆಯಾಗಿ ನಿಮ್ಮ ಖಾತೆಯಿಂದ ಅಂಗಡಿಯ ಮಾಲೀಕಕನ ಖಾತೆಗೆ ಹಣ ಸಂದಾಯವಾಗುತ್ತದೆ. ಗೂಗಲ್ ವ್ಯಾಲೆಟ್ ಈ ಮಾದರಿಯಲ್ಲಿನ ಕ್ರೆಡಿಟ್ ಕಾರ್ಡಿನ ಜಾಗವನ್ನು ಆಕ್ರಮಿಸಲು ಹೊರಟಿದೆ. ಬಿಲ್ಲಿಂಗ್ ಕೌಂಟರಿಗೆ ತಲುಪಿ ಅಲ್ಲಿರುವ ‘ರೀಡಿಂಗ್ ಮಶೀನಿ’ಗೆ ನಿಮ್ಮ ಮೊಬೈಲ್ ಸ್ಪರ್ಶಿಸಿದರೆ ಇಲ್ಲವೇ ಮಂತ್ರದಂಡದ ಹಾಗೆ ಮುಂದೆ ಮಾಡಿ ತೋರಿಸಿದರೆ ಸಾಕು, ಮೊಬೈಲ್ ನಲ್ಲಿ ಕಾರ್ಯ ತತ್ಪರವಾಗಿರುವ ಗೂಗಲ್ ವ್ಯಾಲೆಟ್ ಸೇವೆ NFC ಚಿಪ್ ನಲ್ಲಿ ರಕ್ಷಿಸಿಟ್ಟ ಬ್ಯಾಂಕ್ ಖಾತೆಯನ್ನು  ಬಳಸಿ ಹಣ ಸಂದಾಯ ಮಾಡುತ್ತದೆ!
ಜೇಬಿನಲ್ಲಿ ನಾನಾ ಬ್ಯಾಂಕುಗಳ ಕಾರ್ಡುಗಳನ್ನು ಹೊತ್ತು ತಿರುಗುವುದನ್ನು ತಪ್ಪಿಸುವುದು ಗೂಗಲ್ ವ್ಯಾಲೆಟ್ ನ ಉದ್ದೇಶ. ಈ ಬಗೆಯ ವಹಿವಾಟು ನಿರ್ವಹಿಸಲು ಅಂಗಡಿಯ ಮಾಲೀಕರು ಬ್ಯಾಂಕುಗಳಿಗೆ ಸೇವಾ ಶುಲ್ಕ ಕಟ್ಟಬೇಕು. ಈ ಸೇವಾ ಶುಲ್ಕದಲ್ಲಿ ತಾನು ಪಾಲು ಕೇಳುವುದಿಲ್ಲ ಎಂದು ಗೂಗಲ್ ಹೇಳಿಕೊಂಡಿದೆ. ಅಲ್ಲದೆ ವ್ಯಾಲೆಟ್ ನಲ್ಲಿ ಗೂಗಲ್ ಪ್ರೀ ಪೇ ಕಾರ್ಡ್  ಸೇವೆ ಬಳಸುವ ಗ್ರಾಹಕರ ಖಾತೆಗೆ ವರ್ಷದ ಕೊನೆಗೆ ಹತ್ತು ಡಾಲರ್ ಉಡುಗೊರೆಯಾಗಿ ಸೇರಿಸುವುದಾಗಿಯೂ  ಪ್ರಕಟಿಸಿದೆ.
ಜನ ಜೀವನದಲ್ಲಿ ಮೆಲ್ಲಗೆ ತನ್ನ ಕಾಲನ್ನು ಆಳಕ್ಕೆ ಊರುತ್ತ ಇರುವ ಮೊಬೈಲ್ ಇಂದು ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಜೇಬಿನಲ್ಲಿ ಸದಾ ಕಾಲ ಇಟ್ಟುಕೊಳ್ಳುವ ಪರ್ಸು, ನೋಟ್ ಪುಸ್ತಕ, ಪೆನ್ನಿನಷ್ಟೇ ಅವಶ್ಯಕ ವಸ್ತುವಾಗಿ ಮಾರ್ಪಾಡಾಗಿದೆ. ಹೀಗೆ ಎಲ್ಲರ ಬಳಿಯಲ್ಲೂ ಇರುವ ಎಲೆಕ್ಟ್ರಾನಿಕ್ ಉಪಕರಣವಾದ ಮೊಬೈಲಿಗೆ ಒಂದೊಂದೇ ದಿವ್ಯ ಶಕ್ತಿಗಳನ್ನು ತುಂಬಿ ಅದನ್ನು ಸರ್ವಶಕ್ತವಾಗಿರುವ ಪ್ರಯತ್ನದಲ್ಲಿ ಸಂಶೋಧಕರು ತೊಡಗಿಕೊಂಡಿದ್ದಾರೆ. ದೂರವಾಣಿ ಕರೆ ಮಾಡುವ, ಮೆಸೇಜ್ ಕಳಿಸುವ ಕ್ಯಾಲಂಡರ್ , ಕ್ಯಾಲ್ಕುಲೇಟರ್ ಆಗಿ ಬಳಸುವ, ಆಟದ ಯಂತ್ರ, ನೋಟ್ ಪುಸ್ತಕ, ಹಾಡು ಕೇಳುವ, ಸಿನೆಮ ನೋಡುವ, ಫೋಟೊ ತೆಗೆಯುವ, ಧ್ವನಿ – ವಿಡಿಯೋ ಮುದ್ರಿಸುವ, ಅಂತರಜಾಲ ಜಾಲಾಡುವ, ಪುಸ್ತಕ ಓದುವ ಯಂತ್ರವಾಗಿ ದಿನ ದಿನಕ್ಕೆ ರೂಪಾಂತರ ಹೊಂದುತ್ತಿರುವ ಮೊಬೈಲ್ ಹಿಂದೆ ಮಂತ್ರವಾದಿಗಳ ಕೈಲಿ ಇರುತ್ತಿದ್ದ ದಿವ್ಯ ಶಕ್ತಿಯ ಮಂತ್ರದಂಡದಂತೆ ಗೋಚರವಾಗುತ್ತಿರುವುದು ಅತಿಶಯೋಕ್ತಿಯಲ್ಲ.
ಚಿತ್ರ ಕೃಪೆ: http://thisismynext.com
Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s