ಗ್ಯಾಜೆಟುಗಳ ಗಲಾಟೆಯಲ್ಲಿ…

(ವಿಜಯ ನೆಕ್ಸ್ಟ್ ವಾರಪತ್ರಿಕೆಯಲ್ಲಿ ಪ್ರಕಟವಾದ ಬರಹ) (ಚಿತ್ರ ಕೃಪೆಃ http://www.digitalne… )

ಮೈತುಂಬ ಒಡವೆಗಳನ್ನು ಹಾಕಿಕೊಂಡು ಓಡಾಡುವ ಮಹಿಳೆಯರನ್ನು ನಡೆದಾಡುವ ಆಭರಣದ ಅಂಗಡಿಎಂದು ಲೇವಡಿ ಮಾಡುತ್ತಿದ್ದುದು ಚಿಕ್ಕಂದಿನಲ್ಲಿ ಕೇಳಿಬರುತ್ತಿತ್ತು. ಅರ್ಧ ಕೇಜಿ, ಒಂದು ಕೇಜಿ ಹೆಚ್ಚುವರಿ ತೂಕವನ್ನು ಹೊತ್ತು ತಿರುಗಾಡುವ ಈ ಪ್ರಯಾಸವನ್ನು ಐಶಾರಾಮ ಎನ್ನುವುದೇ ಎಂದು ಉದ್ಗಾರ ತೆಗೆಯುತ್ತಿದ್ದ ದಾರ್ಶನಿಕಯುವಕರು ಬುದ್ಧಿವಂತರೆನಿಸಿಕೊಳ್ಳುತ್ತಿದ್ದರು

. ಇದೇ ಬುದ್ಧಿವಂತಿಕೆಯ ವಿಚಾರ ಚಕ್ಷುಗಳನ್ನು ಸುತ್ತಮುತ್ತ ಓಡಾಡಿಕೊಂಡಿರುವ ನವ ಯುವಕರೆಡೆಗೆ ತಿರುಗಿಸಿ

ಬನ್ನಿ ಕಿವಿಯಿಂದ ಪ್ರಾರಂಭಿಸೋಣ. ತನಗೆ ಬೇಕಾದನ್ನು ಮಾತ್ರ ಕೇಳುವೆ, ಅನವಶ್ಯಕವಾದ ಸದ್ದೇ ಬೇಕಿಲ್ಲ ಎನ್ನುವ ಗತ್ತಿನಲ್ಲಿ ಕಿವಿಗಳೆರಡನ್ನೂ ಹೊಕ್ಕು ಕೂತ ಇಯರ್ ಪ್ಲಗ್ ಗಳು, ಕಿವಿಯ ಮೇಲೆ ಕನ್ನಡಕದ ಫ್ರೇಮು, ಇಯರ್ ಫೋನ್ ವೈರಿನ ಗುಂಟ ಸಾಗಿದರೆ ಜೀನ್ಸ್ ಜೇಬಿನಲ್ಲೋ, ಶರ್ಟ್ ಪಾಕೀಟಿನಲ್ಲೋ ಬಾಲ ಬಿಟ್ಟು ಕೂತಂತಿರುವ ಮೊಬೈಲ್, ಐಪಾಡು, ಎಂಪಿಥ್ರೀ ಪ್ಲೇಯರುಗಳು. ಇದು ವೇಷವಾಯಿತು ಇನ್ನು ಭೂಷಣಕ್ಕೆ ಬನ್ನಿ. ಬಾಗಿದಂತಿರಬಹುದಾದ ಬೆನ್ನ ಹಿಂದಿನ ಬ್ಯಾಗನ್ನು ಗಮನಿಸಿ. ಅದರೊಳಗೆ ಕನಿಷ್ಟ ಎರಡು ಮೂರು ಡಿಜಿಟಲ್ ಜೀವಿಗಳು ನಿದ್ರಾವಸ್ಥೆಯಲ್ಲಿರದಿದ್ದರೆ ಕೇಳಿ. ಕಂಡಲ್ಲಿ ಗುಂಡಿ ಒತ್ತಿ ಫೋಟೊ ತೆಗೆಯುವುದಕ್ಕೆಂದು ಇಟ್ಟುಕೊಂಡ ಡಿಜಿಟಲ್ ಕೆಮರಾ ಆಗಿರಬಹುದು, ವಿಶ್ವದ ಮಾಹಿತಿಯನ್ನೇ ಹೆಡೆ ಮುರಿ ಕಟ್ಟಿ ಕಿಬ್ಬೊಟ್ಟೆಗೆ ಸೇರಿಸಿಕೊಳ್ಳುವ ಥಂಬ್ ಡ್ರೈವ್ ಎನ್ನುವ ದತ್ತ ಕೋಶಗಳಾಗಿರಬಹುದು, ನಡೆದಾಡುವ ಆಫೀಸು, ಸಿನೆಮಾ ಥಿಯೇಟರು, ಸೈಬರ್ ಕೆಫೆ, ಗ್ರಂಥಾಲಯ ಯಾವುದೂ ಆಗಬಹುದಾದ ಲ್ಯಾಪ್ ಟಾಪ್ ಇಲ್ಲವೆ ನೆಟ್ ಬುಕ್ ಗಳಿರಬಹುದು, ತುಸು ಶ್ರೀಮಂತಿಕೆಯಿರುವಲ್ಲಿ ಸ್ಸ್ಲೇಟಿನ ಹಾಗೆ ಸಪಾಟಾಗಿರುವ ಐಪ್ಯಾಡ್, ಟ್ಯಾಬ್ಲೆಟ್‌ ಗಳು ಸಿಕ್ಕಬಹುದು, ಇವುಗಳ ಎಲಕ್ಟ್ರಾನಿಕ್ ಹೊಟ್ಟೆ ತುಂಬಿಸುವುದಕ್ಕೆ ಚಾರ್ಜರ್, ಬ್ಯಾಟರಿ ಬುತ್ತಿಗಳು ಹೀಗೆ ಪುಟ್ಟದೊಂದು ಎಲೆಕ್ಟ್ರಾನಿಕ್ ಅಂಗಡಿಯೇ ಅವಿತಿರುತ್ತದೆ! ಹೀಗೆ ಹೆಚ್ಚುವರಿ ಭಾರವನ್ನು ಹೊತ್ತು ತಿರುಗಾಡುವ ಇಂದಿನ ಯುವ ಜನತೆಯನ್ನು ಹಗುರವಾಗಿ ಪರಿಗಣಿಸಲು ಸಾಧ್ಯವೇ?

ಬಾಯ್ಬಿಟ್ಟು ಕೇಳೋದಲ್ವ

ಇದು ಸಿಟಿ ಬಸ್ಸಿನಲ್ಲಿ ನಡೆದ ಘಟನೆ. ಇತ್ತೀಚೆಗೆ ಬೆಂಗಳೂರಿನ ಸಿಟಿ ಬಸ್ಸುಗಳಲ್ಲಿ ಸದ್ದು ಗದ್ದಲ ಅನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಕಟ್ಟ ಕಡೆಯ ಸೀಟಿನಲ್ಲಿ ಕುಳಿತು ಮಾತನಾಡುತ್ತಿರುವ ವ್ಯಕ್ತಿಗೆ ಫೋನೇ ಇಲ್ಲದೆ ಪ್ರತ್ಯಕ್ಷವಾಗಿ ಕೇಳಬಹುದಾದಷ್ಟು ದೊಡ್ಡ ದನಿಯಲ್ಲಿ ಮಾತಾಡುವ ಅಂಕಲ್ಲುಗಳು, ಫೋನ್ ಕಿವಿಗಿಟ್ಟು ಕೊಂಡರೆ ಬಸ್ಸು ಕಡೆಯ ಸ್ಟಾಪ್ ತಲುಪುವವರೆಗೂ ಕೆಳಗಿರಿಸದೆ ಮಾತಾಡುವ ಆಂಟಿಯರು ಕಡಿಮೆಯಿರುವ, ಕಾಲೇಜು ಹುಡುಗ ಹುಡುಗೀರು ಇರುವ ಬಸ್ಸು ಹೊಕ್ಕು ನೋಡಿ. ಸದ್ದು ಗದ್ದಲವಿಲ್ಲದೆ ಯುವಕರು ತಲೆ ತಗ್ಗಿಸಿ ಕೂತಿರುತ್ತಾರೆ. ರಸ್ತೆಗಳಲ್ಲೂ ಈ ವಿನಯವಂತಿಕೆ ಆಗಾಗ ನಿಮ್ಮ ಕಣ್ಣಿಗೆ ಬೀಳಬಹುದು, ಮನೆ ಹೊಸ್ತಿಲು ದಾಟಿ ಕಾಲೇಜು ಗೇಟ್ ತಲುಪುವವರೆಗೂ ತಗ್ಗಿಸಿದ ತಲೆ ಎತ್ತದೆ ನಡೆಯುವ ಯುವತಿಯರು, ಎದುರಲ್ಲಿ ಸುರ ಸುಂದರಿಯರ ದಂಡೇ ಸಾಗುತ್ತಿದ್ದರೂ ತೆಲೆ ಎತ್ತಿ ನೋಡದ ಸಭ್ಯ ಯುವಕರನ್ನು ಕಂಡಿರಬಹುದು. ಇದಿಷ್ಟನ್ನೇ ನೋಡಿ ವಯಸ್ಸಾದವರು ಯುವಕರನ್ನು ಬೈಯ್ಯುವ ಸುಯೋಗ ತಪ್ಪಿ ಹೋದದ್ದಕ್ಕೆ ಪರಿತಪಿಸಬೇಕಿಲ್ಲ. ಒಮ್ಮೆ ತಗ್ಗಿದ ತಲೆಯಲ್ಲಿನ ದೃಷ್ಟಿ ನೆಟ್ಟಿರುವುದೆಲ್ಲಿ ನೋಡಿ, ಕೈಲಿರುವ ಮೊಬೈಲು ಬಲಿಷ್ಟ ಹೆಬ್ಬೆರಳುಗಳಿಂದ ತದುಕಿಸಿಕೊಳ್ಳುತ್ತಿರುವ ದಾರುಣ ಚಿತ್ರಣ ಕಣ್ಣಿಗೆ ಬೀಳುತ್ತದೆ. ಇದನ್ನು ಇವರು ಎಸ್.ಎಂ.ಎಸ್ ಎಂದು ಕರೆಯುತ್ತಾರಂತೆ.

ಹೀಗೆ ತನ್ನ ಎರಡು ಕೈಬೆರಳುಗಳ ಹೆಬ್ಬರಳುಗಳನ್ನು ತುಂಡಾದ ಹಲ್ಲಿಯ ಬಾಲದಂತೆ ಮೊಬೈಲ್ ಟಚ್ ಪರದೆಯ ಮೇಲೆ ಬಡಿಯುತ್ತಿದ್ದ ಹುಡುಗನೊಬ್ಬ ಬಸ್ಸಿನಲ್ಲಿ ಎದುರು ಸೀಟಿನಲ್ಲಿ ಕೂತಿದ್ದ. ವ್ಯಾಸರು ವಾಚಿಸಿದ ಮಹಾಭಾರತವನ್ನು ಬರೆದುಕೊಳ್ಳುತ್ತಿದ್ದ ಗಣೇಶನ ಭಂಗಿಯಲ್ಲಿ ಮೆಸೇಜು ಮಾಡುತ್ತಿದ್ದ ಯುವಕನ ಏಕಲವ್ಯ ಮಾದರಿಯ ಏಕಾಗ್ರತೆಗೆ ನಾನು ಮಾರು ಹೋಗಿದ್ದೆ. ಇದು ಪುರಾಣ ಕಾಲವೇನಾದರೂ ಆಗಿದ್ದು, ಈತನಿಗೆ ದ್ರೋಣರೇನಾದರೂ ಗುರುವಾಗಿದ್ದರೆ ಎರಡೂ ಕೈಗಳ ಹೆಬ್ಬೆರಳು ಗುರುದಕ್ಷಿಣೆ ಪಡೆಯದೆ ಬಿಡುತ್ತಿರಲಿಲ್ಲ ಎಂದು ಮಂತ್ರಾಲೋಚಿಸುತ್ತಿರುವಾಗ ಹುಡುಗ ವಿಚಲಿತನಾಗಿ ಬಸ್ಸಿನ ಹೊರಗೆ ದೃಷ್ಟಿ ಹಾಯಿಸುತ್ತಿದ್ದುದು ಕಂಡಿತು. ಕನ್ನಡಕದ ಹಿಂದಿನ ಕಣ್ಣುಗಳನ್ನು ಬಸ್ಸಿನ ಕಿಟಕಿಯಿಂದ ಹೊರಗೊಮ್ಮೆ., ಮೊಬೈಲ್ ಕಿಟಕಿಯ ಒಳಗೊಮ್ಮೆ ತೂರಿಸುತ್ತಿದ್ದ ಆತ ಗೊಂದಲದಲ್ಲಿ ಇದ್ದಂತಿದ್ದ. ತುಸು ಕತ್ತು ಕೊಂಕಿಸಿ ಮೊಬೈಲ್ ಪರದೆಯನ್ನು ಇಣುಕಿದಾಗ ಆತ ಮ್ಯಾಪಿನಲ್ಲಿ ಏನನ್ನೋ ಹುಡುಕುತ್ತಿರುವುದು ಕಂಡಿತು. ಹೀಗೇ ಸುಮಾರು ಹತ್ತು ನಿಮಿಷ ಕಳೆದಿರಬಹುದು. ಚಡಪಡಿಸಿ, ಮೊಬೈಲನ್ನು ಎರಡು ಬಾರಿ ಊದುಬತ್ತಿ ಬೆಳಗಿದಂತೆ ಮುಖದ ಮುಂದೆ ಅತ್ತಲೂ ಇತ್ತಲೂ ಮಾಡಿ ಸಿಗ್ನಲ್ ಹಿಡಿಯಲು ಪ್ರಯತ್ನಿಸುತ್ತಿದ್ದ. ಆತನ ಕಷ್ಟ ನೋಡಲಾಗದೆ ಪಕ್ಕದಲ್ಲಿದ್ದ ಯಜಮಾನರು ಏನಪ್ಪಾ ಸಮಸ್ಯೆ ಎಂದು ವಿಚಾರಿಸಿದರು. ನಾನು ವಿಜಯನಗರದಲ್ಲಿ ಇಳಿಯಬೇಕು,ಮ್ಯಾಪಲ್ಲಿ ನ್ಯಾವಿಗೇಟ್ ಮಾಡ್ತಿದ್ದೆ, ಸಿಗಲ್ ಬ್ರೇಕ್ ಆಯ್ತು ಎಂದು ಹೇಳಿ ಮುನಿಸಿಕೊಂಡ ಮೊಬೈಲ್ ಪ್ರೇಯಸಿಯನ್ನು ರಮಿಸುತ್ತಿದ್ದ. ವಿಜಯನಗರ ಎರಡು ಸ್ಟಾಪ್ ಹಿಂದೇ ಹೋಯ್ತು, ಬಾಯ್ಬಿಟ್ಟು ಕೇಳೋದಲ್ವ ಇಂತಲ್ಲಿ ಇಳೀಬೇಕು ಅಂತ ಎಂದು ಯಜಮಾನರು ಹೇಳಿ ಮುಗಿಸುವಷ್ಟರಲ್ಲಿ ಹುಡುಗ ಸೀಟಿಂದ ಹಾರಿ ಬಸ್ಸು ಇಳಿದಿದ್ದ!

ಫೋಟೊ ಟೆರರಿಸಂ

ಟ್ರಾಫಿಕ್ ಸಿಗಲಿನಲ್ಲಿ ನಿಂತಿರುತ್ತೀರಿ, ವಿರಾಮವಾಗಿ ಬೆರಳು ನೆಟಿಗೆ ಮುರಿಯುವಷ್ಟರಲ್ಲಿ ಮೂಗು ತುರಿಸಿದಂತಾಗುತ್ತದೆ. ನಿಧಾನಕ್ಕೆ ಮೂಗಲ್ಲಿ ಬೆರಳು ತೂರಿಸಿ ಫೋರ್ಕಿನಲ್ಲಿ ನೂಡಲ್ಸ್ ಸುತ್ತಿದ ಹಾಗೆ ಬೆರಳು ತಿರುಗಿಸಿ ಹೊರಗೆ ತೆಗೆಯುತ್ತೀರಿ, ಸಿಕ್ಕಿ ಬಿದ್ದ ಮಾಲು ಏನು ಎನ್ನುವ ಅನುಮಾನ ಹುಟ್ಟಿ ಮೆಲ್ಲಗೆ ಮೇಲ್ ತುಟಿಯ ಬಳಿ ಒಯ್ದು ಮೂಸಿ ನೋಡಲು ಹವಣಿಸುತ್ತೀರಿ. ಕೂಡಲೆ ಪಕ್ಕದ ಆಕ್ಟೀವ್ ಹೊಂಡಾದ ಮೇಲೆ ಕೂತ ಲಲನೆಯರು ಕಿಸಕ್ಕನೆ ನಕ್ಕಂತೆ ಕೇಳಿ ನಲುಗಿ ಹೋಗುತ್ತೀರಿ. ಅವರು ತಮ್ಮ ಮೊಬೈಲ್ ನೋಡುತ್ತ ಮತ್ತೊಮ್ಮೆ ಕಿಲಕಿಲನೆ ನಕ್ಕು ನಿಮ್ಮೆಡೆ ನೋಡಿದಾಗ ತಾನು ಇದೀಗ ತಾನೆ ಕೈಗೊಂಡ ಟ್ರೆಶರ್ ಹಂಟ್ ಮೊಬೈಲಿನಲ್ಲೇನಾದರೂ ರೆಕಾರ್ಡ್ ಮಾಡಿದರಾ ಈ ಪೀಡೆಗಳು ಎಂದು ಗಾಬರಿಯಾಗುವಿರಿ. ಮರುಕ್ಷಣವೇ, ಏನೋ ಹೊಳೆದು, “ಇಲ್ಲ, ನೀವಂದು ಕೊಂಡ ಹಾಗಲ್ಲ ಅದು, ನಾನು ಮೂಗಿನ ಬಳಿ ಅಷ್ಟೇ ಅದನ್ನು ಕೊಂಡಿಯ್ದದ್ದು, ಬಾಯಿಗಲ್ಲ…” ಎಂದು ಚೀರಿ ಹೇಳಬೇಕೆನಿಸುವಷ್ಟರಲ್ಲಿ ಸಿಗ್ನಲ್ ದೀಪ ಹಸಿರಾಗಿರುತ್ತದೆ

ಅಂದು ನಿಮ್ಮ ಆಫೀಸಿನಲ್ಲಿ ದೊಡ್ಡ ಸಮಾರಂಭ. ಟ್ರೇನಿಂಗ್ ಮುಗಿಸಿಕೊಂಡು ಪ್ರಾಜೆಕ್ಟ್ ಲಭ್ಯವಿರುವ ಊರು, ಶಾಖೆಗಳಿಗೆ ಅಭ್ಯರ್ಥಿಗಳು ವಿಲೇವಾರಿಯಾಗುವ ಸಮಯ. ಅಷ್ಟು ಕಾಲ ಒಟ್ಟಾಗಿದ್ದ ಗೆಳೆಯ, ಗೆಳತಿಯರ ನೆನಪುಗಳನ್ನು ಹಸಿರಾಗಿರಿಸಿಕೊಳ್ಳುವ ಹಂಬಲ. ಬ್ಯಾಗಿನಿಂದ ಡಿಜಿಟಲ್ ಕೆಮರಾ ಹಿರಿದು ಸಿಕ್ಕ ಷ್ಟು ಮಂದಿಯನ್ನು ಶೂಟಿಂಗ್ ಸ್ಕ್ವಾಡ್ ಎದುರು ನಿಂತ ಅಪರಾಧಿಯಂತೆ ನಿಲ್ಲಿಸಿ ಕಚ ಕಚನೆ ಫೋಟೊ ಕ್ಲಿಕ್ಕಿಸಲು ಆರಂಭಿಸುತ್ತೀರಿ. ಮೆಲ್ಲಗೆ ಎದುರುಗಿದ್ದ ಗುಂಪು ಕರಗಲು ಶುರುವಾಗಿ ನಿಮ್ಮ ಅಕ್ಕ ಪಕ್ಕದಲ್ಲಿ ಗುಂಪು ನೆರೆಯಲಾರಂಭಿಸುತ್ತದೆ. ಎಲ್ಲರ ಕೈಲೂ ಕೆಮರಾ! “ಹೇ, ನನಗೊಂದು ಫೋಟೊಎನ್ನುತ್ತ ಎಲ್ಲರೂ ಶೂಟ್ ಮಾಡುವವರೇ. ಸಡನ್ನಾಗಿ ನಿಮಗೆ ಹೊಳೆಯುತ್ತದೆ, ಅಯ್ಯೋ ನಾನೇ ಫೋಟೊದಲ್ಲಿಲ್ಲ! ಕೂಡಲೆ ಗುಂಪು ಬದಲಿಸಿ ಪೋಸು ಕೊಡಲು ತೊಡಗುತ್ತೀರಿ. ಕೆಮರಾ ಫ್ಲಾಶಿನ ನೂರಾರು ಕೋಲ್ಮಿಂಚುಗಳು ವೇದಿಕೆಯನ್ನೆಲ್ಲ ಹರಿದಾಡಿ, ಸಮಾರಂಭ ಮುಗಿದ ಮೇಲೆ ನಿಮಗೆ ಫ್ಲಾಶ್ ಆಗುತ್ತದೆ: ನಿಮ್ಮ ಕೆಮರಾದಲ್ಲಿ ನೀವು ಇದ್ದ ಗುಂಪಿನ ಫೊಟೋವೇ ಇಲ್ಲ!

ಸ್ಟೇಟಸ್ ದೈವವಾಣಿ

ದೇಹವನ್ನು ಇರುವಲ್ಲೇ ಬಿಟ್ಟು ಲೋಕಾಂತರಗಳಿಗೆ ತೆರಳಿ, ನೂರಾರು ಜನರನ್ನು ಮಾತಾಡಿಸಿ, ಹತ್ತಾರು ಅನುಭವಗಳಿಗೆ ಸಾಕ್ಷಿಯಾಗಿ, ಕಂಡರಿಯದ ಜಾಗಗಳನ್ನು ನೋಡಿಕೊಂಡು ಬರುವ ದಿವ್ಯ ಶಕ್ತಿಗಾಗಿ ಹಗಲಿರುಳೆನ್ನದೆ ಹಠಯೋಗವನ್ನಾಚರಿಸುತ್ತಿದ್ದ ಯೋಗಿಗಳು ಮುಂದೊಂದು ದಿನ ಲ್ಯಾರಿ ಪೇಜ್, ಮಾರ್ಕ್ ಜುಕರ್ ಬರ್ಗ್, ಜಿಮ್ಮಿ ವೇಲ್ಸ್ ರಂತಹ ಯಕಶ್ಚಿತ್ ಮಾನವರು ಗೂಗಲ್, ಫೇಸ್ ಬುಕ್, ವಿಕಿಪೀಡಿಯಗಳನ್ನು ಹುಟ್ಟು ಹಾಕಿ ಹುಲುಮಾನವರೂ ಈ ಮಾಯಾವಿ ಶಕ್ತಿ ಪಡೆಯುವಂತೆ ಮಾಡುವರು ಎಂದು ತಿಳಿದಿದ್ದರೆ ಪ್ರಾಪಂಚಿಕರಾಗಿ ದುಡಿದು ಸ್ಟೀವ್ ಜಾಬ್ಸ್ ನ ಕೈಯಿಂದ ಐ ಪ್ಯಾಡ್೨ ಪಡೆಯುವುದಕ್ಕೆ ಹಣ ಕೂಡಿಡುತ್ತಿದ್ದರು ಎನ್ನಿಸುತ್ತದೆ!

ನಾನು ದೋಸೆ ಮಾಡಿದ್ದೇನೆ, ಚಟ್ನಿ ಹೇಗೆ ಮಾಡುವುದು?” ಫೇಸ್ ಬುಕ್ಕಿನಲ್ಲಿ ಹೀಗೊಂದು ಆರ್ತನಾದದ ಪ್ರಾರ್ಥನೆ ಕೇಳಿಬರುತ್ತದೆ. ಹಿಂದಾಗಿದ್ದರೆ ಮುಕ್ಕೋಟಿ ದೇವರುಗಳಲ್ಲಿ ಬ್ಯುಸಿಯಾಗಿರದ ಒಬ್ಬ ದೇವತೆ ಪ್ರತ್ಯಕ್ಷನಾಗಿ ವರವೀಯುತ್ತಿದ್ದನೇನೋ ಆದರೆ ಈಗ ಕ್ಷಣಾರ್ಧದಲ್ಲಿ ದಶ ದಿಕ್ಕುಗಳಿಂದ ಅಶರೀರ ವಾಣಿಗಳು ಪ್ರತ್ಯಕ್ಷವಾಗಿ ಬಿಡುತ್ತವೆ. ಥಟ್ಟನೆ ಚಟ್ನಿಯ ರೆಸಿಪಿ ಸಿಕ್ಕಿಬಿಡುತ್ತದೆ. ಮಾಹಿತಿ ತಂತ್ರಜ್ಞಾನದ ವೇಗವನ್ನು ಪ್ರಶಂಶಿಸುತ್ತ ಅದೇ ವೇಗದಲ್ಲಿ ಚಟ್ನಿ ಮಾಡಿ ದೋಸೆ ತಿಂದು ಕೈ ತೊಳೆದು ಬಂದು ಮಾನಿಟರ್ ಎದುರು ಕೂರುತ್ತೀರಿ. “ಅಯ್ಯೋ ಅದನ್ನು ಟ್ರೈ ಮಾಡಬೇಡ, ಹಾಗೆ ಚಟ್ನಿ ಮಾಡಿದರೆ ಹೊಟ್ಟೆ ಕೆಟ್ಟು ಬೇಧಿ ಶುರುವಾದೀತು ಜೋಕೆ!” ಎಂದು ಮತ್ತೊಂದು ಆಪ್ತವಾಣಿ ಎಚ್ಚರಿಕೆ ನೀಡಿರುತ್ತದೆ. ಅದಕ್ಕೆ ಐದಾರು ಸಹ ಧ್ವನಿಗಳ ಲೈಕ್ಮುದ್ರೆಯೂ ಬಿದ್ದಿರುತ್ತದೆ. ದೈವವಾಣಿಗೆ ತಲೆಬಾಗಿದಂತೆ ಹೊಟ್ಟೆ ತೊಳಲಿಸಲಾರಂಭಿಸುತ್ತದೆ, “ಹೊಟ್ಟೆ ನೋವು :-(” ಎಂದು ದುಃಖ ತೋಡಿಕೊಳ್ಳುತ್ತೀರಿ. ಜಿಪಿಆರ್ ಎಸ್ ತಗುಲಿಸಿದ ಸ್ಮಾರ್ಟ್ ಫೋನ್ ಸಂಗಡ ಟಾಯ್ಲೆಟಿಗೆ ಓಡುತ್ತೀರಿ. “ಬೆಚ್ಚಗಿನ ನೀರಿಗೆ ನಿಂಬೆ ಹಣ್ಣು ಹಿಂಡಿ…” ಮತ್ತೊಂದು ದೈವವಾಣಿ ನಿಮ್ಮ ಸೇವೆಗೆ ಸಿದ್ಧವಾಗಿರುತ್ತದೆ. ಕೈ ತೊಳೆದು ಹೊರ ಬರುವಷ್ಟರಲ್ಲಿ ಫೇಸ್ ಬುಕ್ ಚಿತ್ರ ಗುಪ್ತ ಸೈಡ್ ವಿಂಗಿನಲ್ಲಿ ಹೊಟ್ಟೆ ನೋವಿನ ಚಿಕಿತ್ಸೆಗೆ ಅತ್ಯುತ್ತಮ ಆಸ್ಪತ್ರೆಗಳ ಜಾಹೀರಾತನ್ನೇ ಕೊಡಮಾಡಿರುತ್ತಾನೆ. ಮಾಹಿತಿ ಯುಗದ ಈ ಪವಾಡ ಸದೃಶ ಕ್ರಿಯಾವಿಧಿಗಳನ್ನು ಪ್ರಶಂಸಿಸುತ್ತ ಆಸ್ಪತ್ರೆಗೆ ತೆರಳುವುದಕ್ಕೆ ಟ್ಯಾಕ್ಸಿ ಆನ್ ಲೈನ್ ಬುಕ್ ಮಾಡುವಿರಿ, ಆಗ ಬೆರಳಿಗೆ ತಗುಲಿದ ಲಿಂಕಿನಲ್ಲಿ ನೀವು ಚಟ್ನಿ ಮಾಡಿದ ವಿಧಾನ ಸರಿಯೆಂದು ಅಧಿಕೃತ ಮಾಹಿತಿ ದೊರೆಯುತ್ತದೆ. ಕೂಡಲೇ ಯಥಾಸ್ಥಿತಿಗೆ ಬಂದ ಹೊಟ್ಟೆಯನ್ನು ಗಮನಿಸಿ ಮಾಹಿತಿಯ ಶಕ್ತಿಯ ಬಗ್ಗೆ ಚಿಂತಿಸಿ ನಾಲೆಜ್ ಈಸ್ ಪವರ್ ಎಂದು ನಿಮ್ಮದೊಂದು ಸ್ಟೇಟಸ್ ದೈವವಾಣಿಯನ್ನು ಅಂತರಿಕ್ಷಕ್ಕೆ ಚಿಮ್ಮಿಸುತ್ತೀರಿ.

ಮೂಲವ್ಯಾವುದಯ್ಯ?

ಟ್ವಿಟರಿನಲ್ಲಿ ಪೈರೇಟ್ಸ್ ಆಫ್ ಕೆರಿಬಿಯನ್ ಸಿನೆಮ ಮತ್ತೊಮ್ಮೆ ನೋಡಿದೆ ಎಂಬ ಗೆಳೆಯನ ಟ್ವೀಟ್ ಓದುತ್ತೀರಿ. ಕೂಡಲೇ ಟೊರೆಂಟ್ ಭಂಡಾರದಿಂದ ಹುಡುಕಿ ಸಿನೆಮಾ ಡೌನ್ ಲೋಡ್ ಮಾಡಿ ಮೂರು ವರ್ಷಗಳ ಹಿಂದೆ ನೋಡಿದಾಗ ಹೊಳೆದಿದ್ದ ವಿಚಾರಗಳನ್ನು ನೆನಪಿಸಿಕೊಳ್ಳುತ್ತೀರಿ. ಗೂಗಲ್ ಬ್ರಹ್ಮ ಜ್ಞಾನಿಯ ಕೈಗೆ ವಿಚಾರಣೆಯ ಚೀಟಿ ದಾಟಿಸುತ್ತೀರಿ ಕ್ಷಣಾರ್ಧದಲ್ಲಿ ಕೋಟಿ ಪುಟಗಳ ಲೆಕ್ಕದಲ್ಲಿ ಲಿಂಕುಗಳು ಸುರಿದು ನಿಮ್ಮ ಕಂಪ್ಯೂಟರ್ ಮಾಹಿತಿ ಹೊಂಡವಾಗುತ್ತದೆ.

ಒಂದು ಲೇಖನ ತೆರೆದು ಓದುತ್ತಿದ್ದ ಹಾಗೆ ನಿಮಗೆ ಅಚ್ಚರಿ. ಮೂರು ವರ್ಷ ಹಿಂದಿನ ನಿಮ್ಮ ಆಲೋಚನೆಗಳನ್ನೇ ಹೋಲುವ ಒಳನೋಟಗಳಿರುವ ಲೇಖನ ಸಿಕ್ಕಿಬಿಡುತ್ತದೆ. ಮಧ್ಯದವರೆಗೆ ಓದುವಷ್ಟರಲ್ಲಿ ಅಚ್ಚರಿ ತಡೆಯಲಾರದೆ ಲೇಖಕನ ಹೆಸರನ್ನು ಮೂರ್ನಾಲ್ಕು ಬಾರಿ ಓದಿ ಮನದಟ್ಟು ಮಾಡಿಕೊಳ್ಳುತ್ತೀರಿ. ಮುಕ್ಕಾಲು ಭಾಗ ಓದುವಷ್ಟರಲ್ಲಿ ಪ್ರತಿ ವಾಕ್ಯ

, ಉದಾಹರಣೆಯೂ ಪರಿಚಿತ ಎನ್ನಿಸಿ ಬಿಡುತ್ತದೆ. ಯಾಕೋ ಸಂಶಯವಾಗಿ ನಿಮ್ಮ ಬ್ಲಾಗು ತೆರೆದು ಹುಡುಕ್ತೀರಿ.. ಥತ್ತೇರಿ! ಆ ಲೇಖನ ಹೂಬೇ ಹೂಬ್ ನಿಮ್ಮ ಬ್ಲಾಗ್ ಬರಹದ ನಕಲು. ಕೋಪದಿಂದ ಫೇಸ್ ಬುಕ್ ನ್ಯಾಯದೇವತೆ ಬಳಿಗೆ ದೂರನ್ನೊಯ್ಯಲು ಹೊರಡುವಿರಿ. ಯಾವುದಕ್ಕಿರಲಿ ಎಂದು ನಕಲಿ ಲೇಖನ ಪ್ರಕಟಿತವಾದ ದಿನಾಂಕ ನೋಡಿ ನಿಮ್ಮ ಬ್ಲಾಗ್ ಬರಹ

ಅದಕ್ಕಿಂತ ಹಳೆಯದು ಹೌದು ಎಂದು ಪಕ್ಕಾ ಮಾಡಿಕೊಳ್ಳುತ್ತೀರಿ!

***

ಇಲ್ಲ, ಮೇಲಿನಂಥವೆಲ್ಲ ನಮ್ಮ ಅನುಭವಕ್ಕೆ ಬಂದೇ ಇಲ್ಲ ಎಂದು ಭುಜ ಕುಣಿಸೀರಿ ಜೋಕೆ! ನಿಮಗೆ ಕಂಪ್ಯೂಟರ್ ಗೊತ್ತಿಲ್ಲವಾ ಎನ್ನುವ ಪ್ರಶ್ನೆ ನೀನು ಹೆಬ್ಬೆಟ್ಟಾ ಎನ್ನುವಷ್ಟೆ ಅವಮಾನಕಾರಿಯಾಗಿ ಕೇಳುತ್ತಿದ್ದ ದಿನಗಳಿನ್ನೂ ನೆನಪಿನಲ್ಲಿ ಹಸಿಯಾಗಿರುವಾಗಲೇ ನೀವು ಫೇಸ್ ಬುಕ್ಕಿನಲ್ಲಿ ಇಲ್ಲವಾ ಎನ್ನುವಂತಹ ವಿಚಾರಣೆ ನಮ್ಮನ್ನು ಓಬಿರಾಯನ ಕಾಲದವರಾಗಿಸಿಬಿಡುವ ಸಾಧ್ಯತೆಯಿದೆ. ಹಲ್ಲು ಶುಭ್ರವಾಗಿಸುವ ಯಕಶ್ಚಿತ್ ಪೇಸ್ಟು, ಟೂಥ್ ಬ್ರಶ್ಯುಗಳ ಕ್ಷೇತ್ರದಲ್ಲಿಯೇ ದಿನಕ್ಕೊಂದು ಕ್ರಾಂತಿಕಾರಿ ಸಂಶೋಧನೆಗಳಾಗುತ್ತ, ಒಂದು ದಿನ ಬೆಳಿಗ್ಗೆ ಏಳುತ್ತಲೇ ನಿಮ್ಮ ಬಚ್ಚಲು ಮನೆಯ ಬಾಗಿಲು ದಢಾರನೆ ಒದ್ದುಕೊಂಡು ಬಂದು ನಿಮ್ಮ ಟೂಥ್ ಪೇಸ್ಟಿನಲ್ಲಿ ಉಪ್ಪು ಇದೆಯಾ?'” ಎಂದು ಕೇಳಿ ದಿಗ್ಭ್ರಮೆ ಮೂಡಿಸುವ ಈ ಕಾಲದಲ್ಲಿ ಹೊಸ ತಂತ್ರಜ್ಞಾನ ಸುತ್ತ ಬೆಳೆ ಬೆಳೆಯುತ್ತ ಜೊತೆಗೆ ಬೆಳೆಯದವರನ್ನೇ ಮ್ಯೂಸಿಯಂ ಆಗಿಸಿಬಿಡುತ್ತದೆ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s