ಹೆಣ್ಣಿಲ್ಲದ ಪರಮಾತ್ಮನ ಪಾಡು ಯಾವನಿಗೊತ್ತು?

ಪರಮಾತ್ಮ ಕನ್ನಡ ಸಿನೆಮ, paramatma kannada movie ಪರಮಾತ್ಮ ನೋಡಿದ ತರುವಾಯ ಸಿನೆಮಾ ಹೇಗಿತ್ತು ಎಂದರೆ ಸಿನೆಮಾದ ಪ್ರಭಾವದಲ್ಲಿಯೇ “ಯಾವನಿಗೊತ್ತು…” ಎಂದು ಉಡಾಫೆಯಲ್ಲಿ ಹೇಳಿಬಿಡಬಹುದಿತ್ತು. ಇಲ್ಲವೇ ಭಟ್ಟರು ತಮ್ಮ ಸಿನೆಮಾದ ಪ್ರಮೋಶನ್ ಗಾಗಿ ಟಿವಿ ಚಾನೆಲ್ಲುಗಳ ಕೆಮರಾದೆದುರು “ಒಂದು ದಿನ ಬೆಳಿಗ್ಗೆ ಎದ್ದಾಗ ನಮ್ಮ ಸಿನೆಮಾ ಹಾಡುಗಳು ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬಳಕೆಯಲ್ಲಿರುವ ಕಾಲರ್ ಟ್ಯೂನ್ ಆಗಿದೆ ಎಂಬುದನ್ನು ಕೇಳಿ ಆಶ್ಚರ್ಯವಾಯ್ತು” ಎಂದಂತೆ ಸಿನಿಮಾದ ಪೋಸ್ಟರುಗಳಲ್ಲಿ ಚಾಕೊಲೆಟ್ ಕಲರ್ ಬಳಸಿರುವುದೇ ಸಿನೆಮಾ ಯಶಸ್ಸಿಗೆ ಕಾರಣ ಎನ್ನುವಂತಹ ಅನಲಿಸಿಸ್ ಶಿಷ್ಟಾಚಾರಕ್ಕೆ ಇಳಿದುಬಿಡಬಹುದಿತ್ತು.

ಸಿನೆಮಾ ವಿಮರ್ಶೆ ಎಂದರೆ ಏನೆಂಬ ಗೊಂದಲದಲ್ಲಿ ಸಣ್ಣ ಹೆಜ್ಜೆಗಳನ್ನು ಇಟ್ಟು ನಡೆಯುತ್ತಿರುವ ನಾನು ಸಿನೆಮಾ ವಿಮರ್ಶೆಯ ಕುರಿತು ಆಸಕ್ತಿ ಬೆಳೆಸಿದ ಶೇಖರ್ ಪೂರ್ಣ ನನ್ನಲ್ಲಿ ಮೂಡಿಸಿದ ಕೆಲವು ದೃಷ್ಟಿಕೋನಗಳನ್ನಿಟ್ಟುಕೊಂಡು ಈ ಸಿನೆಮಾದ ಕುರಿತು ಚಿಂತಿಸಲು ಇಷ್ಟ ಪಡುತ್ತೇನೆ.

ಪರಮಾತ್ಮ ನಾನಾ ಕಾರಣಗಳಿಗೆ ಹೆಣ್ಣಿನ ಸಾಂಗತ್ಯವಿಲ್ಲದೆ ಬದುಕುವ ಗಂಡುಗಳ  ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತದೆ. ಚಿತ್ರದ ಪ್ರಾರಂಭದಲ್ಲಿ ಪರಮ್ ಹಿಮಾಲಯವನ್ನು ಏರುವುದು, ಹಣವನ್ನು ಕಾಲ ಕೆಳಗೆ ಹಾಕಿಕೊಳ್ಳುವುದು, ದೇಹ, ಮನಸ್ಸುಗಳನ್ನು ನಿಗ್ರಹಿಸಿ ಕುಂಗು ಫೂ ಚತುರನಾಗುವುದು, ಬಾಕ್ಸಿಂಗ್ ನಲ್ಲಿ ಎದುರಾಳಿಯನ್ನೂ, ಕಾರನ್ನೂ ಚಿಂದಿ ಉಡಾಯಿಸುವುದು ಎಲ್ಲ ಕೇವಲ ಪುನೀತ್ ಅಭಿಮಾನಿಗಳ ಅಡ್ರಿನಾಲಿನ್ ಉಕ್ಕಿಸುವ ಉದ್ದೇಶದಿಂದ ಸೇರಿಸಲ್ಪಟ್ಟ ಅಂಶಗಳಂತೆಯೂ ನೋಡಲಿಕ್ಕೆ ಸಾಧ್ಯವಿದೆ. ಇಲ್ಲವಾದರೆ ಇಡೀ ಚಿತ್ರದಲ್ಲಿ ಕಟ್ಟಿಕೊಡಲು ಯತ್ನಿಸಿರುವ ಆದರೆ ಪರಿಣಾಮಕಾರಿಯಾಗಿ ಕಟ್ಟಿಕೊಡುವಲ್ಲಿ ಸೋತಿರುವ ಹೆಣ್ಣು ಇಲ್ಲದ ಗಂಡಿನ ಬದುಕಿನ ತಲ್ಲಣ, ಶೂನ್ಯತೆ, ಏಕತಾನತೆ, ಅಭದ್ರತೆ, ನಿರರ್ಥಕತೆಗೆ ಹಿನ್ನೆಲೆಯ ಅಂಶವಾಗಿಯೂ ನೋಡಲಿಕ್ಕೆ ಸಾಧ್ಯವಿದೆ.

ಏನೇನೆಲ್ಲ ಸಾಧನೆಗಳನ್ನು ಮಾಡಿದ ಪರಮ್ ಒಂದು ಹೆಣ್ಣಿನ ಹಿಂದೆ ಬೀಳುತ್ತಾನೆ. ಪರಮ್ ನನ್ನು ಎಲ್ಲಾ ವಿಧದಲ್ಲಿ ಪರಿಶುದ್ಧ, ಪರಿಪೂರ್ಣ, ಒಂದು ಅರ್ಥದಲ್ಲಿ ಶ್ರೀರಾಮಚಂದ್ರ ಎಂದು ಬಿಂಬಿಸಲು ಪ್ರಯತ್ನಿಸುವ ಭಟ್ಟರಿಗೆ ಜೊತೆಯಾಗಲು ಆತನ ಆತ್ಮದ ಪರಿಶುದ್ಧತೆಯನ್ನು ಪರೀಕ್ಷಿಸುವ ಹೃದಯ ತಜ್ಞ ಪರಮ್ ತಂದೆ ವಿಧುರ. ಆತನಿಗೆ ಹೆಂಡತಿಯಿಲ್ಲ. ಪರಮ್ ನಿಗೆ ತಾಯಿ ಇಲ್ಲ.  ಪರಮ್ ಹಿಂಬಾಲಿಸುವ ಹೆಣ್ಣಿನ ಸಿಡುಕು ತಂದೆ ಕೂಡ ವಿಧುರ. ಆತನಿಗೆ ಹೆಂಡತಿಯಿಲ್ಲ. ತಂದೆ ಇದ್ದಾನೆ, ತಮ್ಮನಿದ್ದಾನೆ ತಾಯಿಯಿಲ್ಲ, ಅಕ್ಕ ತಂಗಿಯರಿಲ್ಲ.

ಹಿಂದೆ ಬಿದ್ದ ಪರಮ್ ನನ್ನು ಕೊಡವಿಕೊಳ್ಳಲು ತಾತನ ಊರಿಗೆ ನಾಯಕಿ ಹೊರಡುತ್ತಾಳೆ.  ಅಲ್ಲಿ ಒಂದು ಕಾಲದಲ್ಲಿ ರಾಜರ ಅರಮನೆಯಲ್ಲಿದ್ದ ಕಂಬಗಳು ಬೀದಿಯಲ್ಲಿ ಬಿಕರಿಗೆ ಬಿದ್ದಿವೆ. ಅವುಗಳ ಮಾರಾಟಕ್ಕೆ ನಿಂತ ಮಗ, ಮಾರಿದರೆ ಸುಟ್ಟು ಬಿಡುತ್ತೇನೆಂದು ಕೋವಿ ಗುರಿ ಮಾಡುವ ಅಪ್ಪ. ಬಿಕರಿಗಿರುವ ಅರಮನೆಯ ಕಂಬಗಳ ಸುತ್ತ ಸುಳಿವ ಬಿಳಿಯ ಹೆಂಗಸು.  ವಯಸ್ಸು ಮೀರುತ್ತಿದ್ದರೂ ಮಗನಿಗೆ ಮದುವೆಯಿಲ್ಲ. ಏನಕ್ಕೋ ಕೈಚಾಚಿ ಬಿಳಿಯ ಹೆಂಗಸಿನಿಂದ ಏನನ್ನೋ ಪಡೆದು ಮತ್ತೇನಕ್ಕೋ ಕೊರಗು.

ಈ ಗಂಡಸರ ಲೋಕದಲ್ಲಿ ತುಸು ಲವಲವಿಕೆ ಜೀವಂತಿಕೆ ಸುಳಿದಾಡಿದಂತೆ ಕಾಣುವುದು ಪರಮ್ ಹಿಂದೆ ಬಿದ್ದಿರುವ ಹುಡುಗಿ, ಪರಮ್ ನ ಹಿಂದಿ ಬಿದ್ದಿರುವ ಹುಡುಗಿಯರು ತೆರೆಯ ಮೇಲೆ ಕಂಡಾಗ.

ಚಿತ್ರದಲ್ಲಿನ ಉಳಿದೆಲ್ಲ ಗಂಡು ಪಾತ್ರಗಳು ಪರಿಣಾಮಕಾರಿಯಾಗಿಲ್ಲದಿದ್ದರೂ ಹೊಮ್ಮಿಸಲು ಯತ್ನಿಸಿರುವ ಜೀವ ವಿಹೀನ ಪರಿಸರದ ಮಧ್ಯೆದಲ್ಲಿಯೇ ಪರಮ್ ಹೆಣ್ಣನ್ನೂ, ಹೆಣ್ಣಿನ ಮನೆಯಿಂದ ಆರ್ಷ್ರೇಯವಾದ ಅರಮನೆ ಕಂಬಗಳನ್ನು ತಂದು ಸ್ವಚ್ಛಂದ ಆಗಸವನ್ನು ಎದುರು ನೋಡುವಂತೆ ಬಂಗಲೆ ಕಟ್ಟಿಕೊಂಡು ಇರಲಾರಂಭಿಸುತ್ತಾನೆ. ಆದರೆ ಆತ ಕುಂಗ್ ಫೂ ಕಲಿತಿದ್ದರೂ, ಹಿಮಾಲಯ ಏರಿ ಇಳಿದಿದ್ದರೂ (ಕೆಟ್ಟ ಗ್ರಾಫಿಕ್ಸ್, ಹಿಮಾಲಯದ ತುದಿಯಲ್ಲಿ ಆಕ್ಸಿಜನ್ ಮಾಸ್ಕ್ ತೆಗೆದು ಸೋಪಿನ ಗುಳ್ಳೆಗಳನ್ನು ಊದುವ ಹಾಸ್ಯಾಸ್ಪದ ವಿವರಗಳನ್ನ ತುಸು ಬದಿಗಿಡೋಣ), ಶೇರು ಮಾರುಕಟ್ಟೆ ಸೂರೆ ಹೊಡೆದಿದ್ದರೂ, ಆತನ ಸ್ನೇಹಿತೆಯರೆಲ್ಲರೂ ಆತನ ಹಿಂದೆ ಬಿದ್ದಿದ್ದರೂ ಆತ ಚಿತ್ರದ ಕಡೆಗೆ ವಿಧುರನಾಗುತ್ತಾನೆ.  ಆತನ  ‘ಗಂಡು’ ಮಗ ತಾಯಿ ಇಲ್ಲದ ಹುಡುಗ. ಪರಮ್ ನ ಅಪ್ಪ, ಮಾವಂದಿರ ಮನೆಯ ಗೋಡೆಯ ಮೇಲಿನ ಚೌಕಟ್ಟಿನೊಳಗಿನ ಚಿತ್ರವಾದ ಸಂಗಾತಿಯು ಪರಮ್ ಪಾಲಿಗಿನ್ನೂ ಪರದೆ ಸರಿಸಿಕೊಂಡು ಮನೆಯಲ್ಲಿ ನಡೆದಾಡುವ ಹಸಿರು ನೆನಪಾಗಿರುತ್ತಾಳೆ. ಸಿನೆಮಾ ನೋಡುವಾಗ ಮದುವೆಗೆ ಹೆಣ್ಣಿಲ್ಲದೆ ದಿನ ತಳ್ಳುತ್ತಿರುವ ಹವ್ಯಕ ಹುಡುಗರ ನೆನಪಾಗಿದ್ದು ಆಕಸ್ಮಿಕವೇನಲ್ಲ ಅನ್ನಿಸುತ್ತದೆ!

ಹೆಣ್ಣಿಲ್ಲದ ಗಂಡು ಲೋಕದ ಜೀವನವನ್ನು ಕಟ್ಟಿಕೊಡಲು ಹೊರಟಿರಬಹುದಾದ ಯೋಗರಾಜ್ ಭಟ್ಟರು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾದ ರಾಜಿಗಳಿಂದಲೋ ಅಥವಾ ಅವರ ಪ್ರಜ್ಞಾಪೂರ್ವಕ ಉಡಾಫೆಯಿಂದಲೋ ಚಿತ್ರಕ್ಕೆ ಜೀವ ತುಂಬುವಲ್ಲಿ ಸೋತಿದ್ದಾರೆ. ನಾಯಕ ಪುನೀತ್ ಹೊಡೆದಾಟವನ್ನು, ಹಿರೋಯಿಸಂ ಅನ್ನು ಕೆಡವುವಲ್ಲಿ ನಿರ್ದೇಶಕ ಯೋಗರಾಜ್ ಭಟ್ ಪ್ರಯತ್ನಿಸುವುದಕ್ಕಿಂತ, ಸಂಭಾಷಣೆಕಾರ ಯೋಗರಾಜ್ ಭಟ್ಟರನ್ನು ಮಣ್ಣು ಮುಕ್ಕಿಸಿರುವ ನಾಯಕ ಪುನೀತ್ ಹಾಗೂ ಪರಮಾತ್ಮ ಚಿತ್ರಕತೆ ಆಸಕ್ತಿ ಹುಟ್ಟಿಸುತ್ತವೆ.

ನಾನು ಚಿತ್ರವನ್ನು ಓದಿಕೊಂಡಿರುವುದು ತೀರಾ far fetched ಆಗಿಯೇನು ಇಲ್ಲ ಎನ್ನುವ ಸಮಾಧಾನ ಮೂಡಿದ್ದು ಚಿತ್ರದ ಈ ಚರಮವಾಕ್ಯವನ್ನು ತೆರೆಯ ಮೇಲೆ ಕಂಡಾಗ: “ದೂರಾದ ಜೀವ ಎಂದೆಂದಿಗೂ ಜೀವಂತ”.

ಯೋಗರಾಜ್ ಭಟ್ಟರು ಇಷ್ಟು ಜನಪ್ರಿಯ ಚಿತ್ರಗಳನ್ನು ನೀಡಿದಾಗ್ಯೂ ಈ ಮಾಧ್ಯಮ ಅವರ ಹಿಡಿತಕ್ಕಿನ್ನೂ ಸಿಕ್ಕಿಲ್ಲ ಎನ್ನುವ ಸೂಚನೆ ಪರಮಾತ್ಮದಲ್ಲಿ ಕಂಡಿರುವುದು ಭಟ್ಟರು ವಾಚಾಳಿ ಸಿನೆಮಾದಿಂದ ಸೂಚ್ಯ, ಸಾಂಕೇತಿಕ ಸಿನೆಮಾ ಭಾಷೆಗೆ ಹೊರಳುತ್ತಿರುವ ಸಾಧ್ಯತೆಯೂ ಆಗಿ ಕಾಣಲು ಸಾಧ್ಯವಿದೆ.

Advertisements

7 thoughts on “ಹೆಣ್ಣಿಲ್ಲದ ಪರಮಾತ್ಮನ ಪಾಡು ಯಾವನಿಗೊತ್ತು?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s