ದೇಹ ಮನಸ್ಸುಗಳ ನಡುವೆ ಒಬ್ಬ ಓಶೋ ರಜನೀಶ್!

ಮನಸ್ಸಿನ ಕುರಿತು ಮಾತನಾಡಲು ಶುರುಮಾಡಿದರೆ ಸಣ್ಣಗೆ ಭಯವಾಗಲು ಶುರುವಾಗುತ್ತದೆ. ತೀರಾ sublime, ಹಕ್ಕಿಯ ಗರಿಯಂತೆ ಓಲಾಡುತ್ತ ಗಾಳಿಗೆ ತೂರಿಕೊಂಡಂತೆ ಇರುವ ಸಂಗತಿಯನ್ನು  ಹಿಡಿಯಲು ಹೊರಟು ತೀರಾ ಒರಟೊರಟು, ಬಾಲಿಶವಾದ ವ್ಯಕ್ತಿತ್ವ ವಿಕಸನ ತತ್ವ ಸಿದ್ಧಾಂತಗಳೆಡೆಗೆ ಹೊರಳಿಬಿಡುತ್ತದೆ ಚಿಂತನೆ.

ಓಶೋ ರಜನೀಶ್ ಎಂಬ ಅಂದಕಾಲತ್ತಿಲ್ ಪ್ರಭಾವದ ಅರಿವು ಮೊನ್ನೆ ಒಂದು ದಿನ ಅಚಾನಕ್ಕಾಗಿ ಆದುದರ ಬಗ್ಗೆ ಬರೆಯಬೇಕು.

ರಜನೀಶ್ ಕುರಿತು ನಿಮಗೆ ತಿಳಿದಿರದಿದ್ದರೆ ವಿಕಿಪೀಡಿಯಾದ ಈ ಪುಟವನ್ನು ಓದಿ . ಆತನ ಪ್ರವಚನಗಳನ್ನು ಪುಸ್ತಕಗಳನ್ನು ಓದುವ ಮೊದಲು ಒಂದಂಶ ಸ್ಪಷ್ಟ ಮಾಡಿಕೊಳ್ಳಿ : ಓಶೋನ ಮಾತುಗಳು ತುಂಬಾ ಪ್ರಭಾವಶಾಲಿ. ಆತನನ್ನು ದೂರದಲ್ಲಿಟ್ಟು ಅರ್ಥ ಮಾಡಿಕೊಳ್ಳಲು ಇಲ್ಲವೆ ವಿಮರ್ಶಿಸಲು ಪ್ರಯತ್ನಿಸದಿದ್ದರೆ, ಅಥವಾ ಹಾಗೆ ದೂರ ಕಾಯ್ದಿರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಆತನ ಧ್ವನಿಯ ಗತಿ, ಕೈಗಳು ಮುಖದ ಚಲನೆಯ ಓಘಕ್ಕೆ ಮೈಮರೆತು ಅನುಯಾಯಿಯಾಗಿ ಬಿಡುತ್ತೀರಿ. ಓಶೋ ಸತ್ತು ಇಷ್ಟು ವರ್ಷಗಳ ತರುವಾಯ ನೀವು ಆತನ ಅನುಯಾಯಿಯಾಗುವುದು ನಿಜಕ್ಕೂ ಹಾಸ್ಯಾಸ್ಪದ.

ನನ್ನ ಇಂಗ್ಲೀಷ್ ಬ್ಲಾಗಿನಲ್ಲಿ ಇತ್ತೀಚೆಗಷ್ಟೇ ಒಂದು ಪೋಸ್ಟ್ ಹಾಕಿದ್ದೆ. ಕಾಲೇಜು ಮುಗಿಸಿಕೊಂಡು ವೃತ್ತಿ ಜೀವನಕ್ಕೆ ಕಾಲಿಡುವುದು ಒಂದು ಬಗೆಯ ರೂಪಾಂತರವೇ ಎಂದು. ಸ್ವಚ್ಛಂದ ಓಡಾಡಿಕೊಂಡಿದ್ದವರೆಲ್ಲ ಬೇರು ಬಿಟ್ಟು  ನೆಲೆ ನಿಲ್ಲುವ ತಯಾರಿಗೆ ತೊಡಗುತ್ತಾರೆ ಎಂದು ಬರೆದಿದ್ದೆ. ಈಗ ಅದರ ವಿನೋದಮಯ ಆಯಾಮ ಕಂಡು ಬರುತ್ತಿದೆ.  ಆಫೀಸಿನ ಕ್ಯಾಬಿನ್ ಗಳಲ್ಲಿ ಕೂತಲ್ಲೇ ಕೂತು ಕೂತು ಕೂತು ಬಾಳಿನಲ್ಲಿ ಬೇರು ಬಿಡುವೆವೋ ಇಲ್ಲವೋ ಕಾಣೆ ಆದರೆ ಕಾಂಡವಂತೂ ದಶದಿಕ್ಕುಗಳಲ್ಲಿ ಮಹತ್ವಾಕಾಂಕ್ಷೆಯಿಂದ ಸಾಮ್ರಾಜ್ಯ ವಿಸ್ತರಣೆ ಕೈಗೊಳ್ಳುವುದು ಸತ್ಯ! ಅದುವರೆಗೆ ಕಣ್ಣಿಗೆ ಕಂಡು ಕೈಗೆ ಸಿಕ್ಕದ ಹಾಗಿದ್ದ ಸೊಂಟ, ಅಬ್ ಡೋಮೆನ್, ತೊಡೆಗಳು ತ್ವರಿತಗತಿಯಲ್ಲಿ ವಸಾಹತುಗಳನ್ನು ಸ್ಥಾಪಿಸಲು ಶುರುಮಾಡಿರುತ್ತವೆ.

ಈ ವಸಾಹತುಶಾಹಿ ಮಹತ್ವಾಕಾಂಕ್ಷೆಗೆ ಅಂಕುಶ ಹಾಕಲು ಎಲ್ಲಾ ನಗರವಾಸಿ ಆರೋಗ್ಯಾಕಾಂಕ್ಷಿ ಕಂಪ್ಯುಟರೋದ್ಯೋಗಿಗಳಂತೆ ನಾನೂ ಜಿಮ್ ಸೇರಿದೆ. ಜಾಗಿಂಗ್ ಮಶೀನಿನ ಮೇಲೆ ಹತ್ತು ನಿಮಿಷ ಬೆವರು ಸುರಿಸುವಷ್ಟರಲ್ಲಿ ಹತ್ತನೆಯ ತರಗತಿಯವರೆಗೆ ಮೂಗು ಮುಚ್ಚಿಕೊಂಡು ನುಂಗಿದ ಇತಿಹಾಸದ ಪುಸ್ತಕಗಳು ಕಲಿಸದ ಪಾಠ ಥಟ್ಟನೆ ಅರಿವಿಗೆ ಬಂತು. ಮೂರೇ ತಿಂಗಳಲ್ಲಿ ನೆಲಕಂಡುಕೊಂಡ ನವ-ವಸಾಹತುಗಳ ಪ್ರಭಾವ ಅದೆಷ್ಟೆಂದರೆ ಮೂರು ಮೂರು ಬಾರಿ ನೀರು ಕುಡಿದು ಸುಧಾರಿಸಿಕೊಂಡರೂ ಕಣ್ಣು ಕತ್ತಲೆ ಬಂದು ತಲೆ ಗಿರ್ರನೆ ಸುತ್ತುವುದು ನಿಲ್ಲಲಿಲ್ಲ! ಇನ್ನು ಮೇಲೆ ನವ-ವಸಾಹತು, ವಸಾಹತೋತ್ತರ ಎಂಬೆಲ್ಲ ಪದಗಳು ಕಿವಿಗೆ ಬಿದ್ದರೆ ತತ್ತರಿಸಿ ಓಡದೆ ಅನುಕಂಪದಲ್ಲಿ ಒಂದೆರಡು ಬಾರಿ ಲೊಚಗುಟ್ಟಬೇಕು ಅನ್ನಿಸಿಬಿಟ್ಟಿತು.

ಹೀಗೆ ಸಿಂಗಲ್ ಫೇಸ್ ಕರೆಂಟಿನಲ್ಲಿ ನೀರಿನ ಮೋಟರ್ ಓಡುವಾಗ ಕಣ್ಣು ತೇಲಿಸುವ ಲೈಟ್ ಬಲ್ಬಿನ ಹಾಗೆ ನನ್ನ ಪ್ರಜ್ಞೆ ಓಲಾಡುವಾಗ ಓಶೋ ಮನಸ್ಸಿನ ಬಗ್ಗೆ ಅದನ್ನು ಕೈಬಿಡುವ ಬಗ್ಗೆ ಹೇಳಿದ್ದು ನೆನಪಾಯ್ತು. ಆತನ ಹಲವು ಧ್ಯಾನದ ಪದ್ಧತಿಗಳಲ್ಲಿ ಗಿರ ಗಿರನೆ ಬುಗುರಿಯ ಹಾಗೆ ತಿರುಗಿ ಧೇನಿಸುವ whirling meditation ಸಹ ಒಂದು. ಹೀಗೆ ದೇಹವನ್ನು, ಕೆಲವು ತಂತ್ರಗಳಿಂದ ಮನಸ್ಸನ್ನು ದಣಿಸಿದಾಗ ಅವುಗಳ ಹಿಡಿತ ಕುಂದಿದಾಗ ನಮಗೆ mindless state ಪ್ರಾಪ್ತವಾಗುತ್ತೆ. ಅದು ಕ್ಷಣಾರ್ಧದ ಅನುಭೂತಿ ಮಾತ್ರ. ಲೈಂಗಿಕ ಕ್ರಿಯೆಯ ಉತ್ತುಂಗದಲ್ಲಿಯೂ ಮನುಷ್ಯ ಅನುಭವಿಸುವುದು ಈ ಅನುಭೂತಿಯನ್ನೇ. ಇಂತಹ ಕ್ಷಣಾರ್ಧದ ಅನುಭವವನ್ನು ನಿತ್ಯ ಸತ್ಯ ಸಂಗತಿಯಾಗಿಸಿಕೊಳ್ಳುವುದೇ ಧ್ಯಾನ ಎಂದು ಸಕ್ಕರೆಯ ಮಾತುಗಳಲ್ಲಿ ಹೇಳಲ್ಪಡುವ mindless state ಅನುಭವಿಸಲು ಪ್ರಯತ್ನಿಸಿದೆ.

ನಿಂತವನೆದುರು ನೆಲವೆಲ್ಲ ಗೋಡೆಯಾಗಿ, ಗೋಡೆ ತೇಲುವ ದೋಣಿಯಾಗಿ, ಬಿಳಿಯೆಲ್ಲ ಕಪ್ಪು ಬಣ್ಣವಾಗಿ, ಬೆಳಕು ಪ್ರವಾಹದಂತೆ ಕಣ್ಣೊಳಗೆ ಹರಿದ ಹಾಗಾಗಿ ಇನ್ನೇನು ಎರಡು ಸೆಕೆಂಡುಗಳಲ್ಲಿ ಜಿಮ್ಮಿನ ಆ ಲೋಹದ ಜಂತುವಿನ ಅಡಿಯಲ್ಲೇ ಜ್ಞಾನೋದಯವಾಗಿಬಿಡುತ್ತದೆ ಅನ್ನಿಸಿತು. ಒಡನೆಯೇ ಹೊಟ್ಟೆ ಮಂಡಿ ಮಡಚಿಕೊಂಡಂತಿದ್ದ ತನ್ನ ಕಾಲುಗಳನ್ನು ಬಿಡಿಸಿ ತಮಾಶೆ ನೋಡುತ್ತ ನಿಂತಿದ್ದ ಮೆದುಳಿಗೆ  ಜಾಡಿಸಿ ಒದ್ದಂತೆ ಭಾಸವಾಗಿ ಹುಸಿ ವಾಂತಿಯ ಕ್ರಿಯೆಯಲ್ಲಿ ನನ್ನ ಆಧ್ಯಾತ್ಮಿಕ ಕನ್ಯತ್ವವನ್ನು ಕಾಪಾಡಿತು.

ವಾಸ್ತವ, ವಸ್ತುಸ್ಥಿತಿಗಳನ್ನೆಲ್ಲ ಮರೆತು elusive ಆದಂತಹ ಆದರ್ಶವಾದದ್ದೋ, ಆಧ್ಯಾತ್ಮದ್ದೋ ನಿಶೆ ತಲೆಗೆ ಏರಿದಾಗಲೆಲ್ಲಾ ಹೀಗೆ ದೇಹ ಜಾಡಿಸಿ ಒದ್ದು ನೆಲಕ್ಕೆ ಇಳಿಸುವಂತಿದ್ದರೆ ಎಷ್ಟು ಚೆನ್ನ ಅಲ್ಲವೇ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s