ಕಲರ್ ಫುಲ್ ಕಾಲೇಜು

(ವಿಜಯ ನೆಕ್ಸ್ಟ್ ವಾರ ಪತ್ರಿಕೆಯಲ್ಲಿ ಪ್ರಕಟವಾದ ಬರಹ)

ಕಾಲೇಜು ಬೆಂಚಿನಿಂದ ಬದುಕಿನ ಹಾದಿಗೆ ಒಂದೇ ನೆಗೆತ! ಅನೇಕರ ಪಾಲಿಗಿದು ಉಲ್ಲಾಸಮಯ ರೂಪಾಂತರ. ಕೆಲವರಿಗೆ ದಿಗ್ಭ್ರಮೆ ದಿಕ್ಕು ಕಾಣದ ಪರಿಸ್ಥಿತಿ. ಎಲ್ಲೋ ಒಂದಷ್ಟು ಮಂದಿಗೆ ಅತಿ ಘೋರ ದುರಂತ. ಏನೇ ಆಗಲಿ ಎಲ್ಲರ ಬದುಕಲ್ಲೂ ಈ ಹಂತ ಮಾತ್ರ ಗಣನೀಯ.

ಕಲರ್ ಫುಲ್ ಕಾಲೇಜು

ತಮ್ಮ ಇಡೀ ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ದಿನಗಳನ್ನು ಅತ್ಯಂತ ಸಂಭ್ರಮದಲ್ಲಿ ಅನೇಕರು ನೆನೆಯುತ್ತಾರೆ. ಏಕೆಂದರೆ ನೌಕರಿ, ದುಡಿಮೆ, ಖರ್ಚು-ವೆಚ್ಚ, ಮನೆ, ಸಂಸಾರ,ಮಕ್ಕಳು, ಟ್ಯಾಕ್ಸು – ಸೇವಿಂಗ್ಸು ಎನ್ನುವ ತಲೆ ಬಿಸಿಯಿನ್ನೂ  ಶುರುವಾಗಿರದ, ಬೆತ್ತ ಹಿಡಿದು ನಿಂತ ಟೀಚರು, ಒಪ್ಪವಾದ ಬಿಳಿ ಸಾಕ್ಸು, ಶೂ, ಮಡಿಕೆಗಳಿಲ್ಲದ ಯೂನಿಫಾರಂ, ಗೂನು ಬೆನ್ನು ಏರಿ ಕುಳಿತ ಹೋಂ ವರ್ಕು, ಅಪರೂಪದ ಪಾಕೆಟ್ ಮನಿಗಳ ಕಟ್ಟಳೆಗಳಿಲ್ಲದ ಕಾಲ ಕಾಲೇಜು ಜೀವನ. ಹೊಸತಾಗಿ ದೊರೆತ ಸ್ವಾತಂತ್ರ್ಯ, ಜವಾಬ್ದಾರಿಗಳಿಲ್ಲದ ಬದುಕು ಯಾರಿಗೆ ತಾನೆ ಹಿತವೆನಿಸುವಿದಿಲ್ಲ ಹೇಳಿ?‌

ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎನ್ನುವ ಗಾದೆಗೆ ಕೈ ಕಾಲುಗಳು ಮೊಳೆಯಲು ಪ್ರಾರಂಭವಾಗುವುದೇ ಕಾಲೇಜಿನಲ್ಲಿ. ಅಲ್ಲಿಯವರೆಗೆ ಮಾರ್ಕ್ಸ್ ಗಳಿಸಿದವನೇ ಮಹಾಶೂರ. ಹೈಸ್ಕೂಲು, ಪಿಯುಸಿವರೆಗೆ ಉರುಹೊಡೆದ ಉತ್ತರಗಳೇ ಬದುಕಿನ ಸಮಸ್ತ ಸವಾಲುಗಳ ಬೀಗಗಳಿಗೂ ಕೀಲಿಕೈ. ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಗಳಿಸಿದವನದಷ್ಟೇ ಬುದ್ಧಿವಂತ. ಹಿರಿಯರಿಗೆ ವಿಧೇಯ, ಯಾವುದಕ್ಕೂ ತಿರುಗಿ ಬೀಳದ, ಯಾರನ್ನೂ ಪ್ರತಿಭಟಿಸದ ಯುವರ್ಸ್ ಫೇಯಿತ್ ಫುಲ್ಲಿ ಹುಡುಗರಷ್ಟೇ ಸಮಾಜದ ಸತ್ಪ್ರಜೆಗಳು. ಮೇಷ್ಟ್ರು ಮೆಚ್ಚಿದವನೇ ಬಂಗಾರದ ಮನುಷ್ಯ.  ಪುಸ್ತಕದ ಹುಳುವೇ ಭಾರತ ಭಾಗ್ಯ ವಿಧಾತ!

ಆದರೆ ಕಾಲೇಜು ಮೆಟ್ಟಿಲೇರುತ್ತಿದ್ದಂತೆ ಮೆಲ್ಲಗೆ ಬದಲಾವಣೆಗಳಾಗಲು ಶುರುವಾಗ್ತವೆ. ಅದುವರೆಗೆ ಕ್ಲಾಸಿನಲ್ಲಿ ನೋಟ್ಸು ಬರೆಯದೆ ಕವಿತೆ ಗೀಚುತ್ತ ಪರೀಕ್ಷೆಯಲ್ಲಿ ಡುಮ್ಕಿ ಹೊಡೆದವನ ಫೋಟೊ ಪೇಪರಿನಲ್ಲಿ ಬರಲು ತೊಡಗುತ್ತೆ. ಮುಖಕ್ಕೆ ಪೌಡರು ಮೆತ್ತುವ ಸಮಯದ ಅರ್ಧದಲ್ಲಿ ಕೆಮಿಸ್ಟ್ರಿ ಫಾರ್ಮುಲ ಉರುಹೊಡೆದಿದ್ದರೆ ಪಾಸಾಗಿ ಮುಂದಕ್ಕೆ ಹೋಗಿರುತ್ತಿದ್ದೆ ಎಂದು ಮಂಗಳಾರತಿ ಎತ್ತಿಸಿಕೊಂಡ ಲಲನೆಯರು ರ್ಯಾಂಪಿನಲ್ಲಿ  ನಡೆದು ಟಿವಿ ಸೇರಿರುತ್ತಾರೆ. ಪ್ರತಿ ಪೇಪರಿನಲ್ಲೂ ಪಕ್ಕದವನ ಅಕ್ಷರಗಳನ್ನು ಭಟ್ಟಿ ಇಳಿಸಿ ಪರೀಕ್ಷೆಯೆಂಬ ತೂಗು ಕತ್ತಿಯಿಂದ ಪಾರಾಗಿ ಕಾಲೇಜು ಹೊಸ್ತಿಲಲ್ಲಿ ಸುಸ್ತಾಗಿ ಬಂದವನು ರಿಮೋಟ್ ಹಿಡಿದು ರೋಬಾಟ್ ಮಾನವನನ್ನು ಮಾತನಾಡಿಸುತ್ತಿರುತ್ತಾನೆ. ಕ್ಲಾಸಿನಲ್ಲಿ ಮಾತನಾಡಿದ್ದಕ್ಕೆ ಕುಕ್ಕುರುಗಾಲಲ್ಲಿ ಕೂತಿದ್ದ ಹುಡುಗ ರೇಡಿಯೋ ಜಾಕಿಯಾಗಿ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಿರುತ್ತಾನೆ. ಟೀಚರ್ ಕೊಟ್ಟ ಸರ್ಟಿಫಿಕೇಟ್ ಪಕ್ಕಕ್ಕೆ ಬಿಸುಟಿ  ತಮ್ಮ ಬಾಳಿನ ಕ್ಯಾನ್ವಾಸಿಗೆ ಬೇಕಾದ ಬಣ್ಣ ತುಂಬಿಕೊಳ್ಳಲು ಶುರು ಮಾಡುವುದೇ ಕಾಲೇಜಿನಲ್ಲಿ!

ಬೇಧವಿಲ್ಲದ ಬಾಂಧವ್ಯ

ಮುಂದಿನ ಬಾಳುವೆಯ ನವಜಾತ ಕನಸುಗಳು ಗರಿಗೆದರುತ್ತಿದ್ದರೂ ಬಾಳು ಅನಂತರದಲ್ಲಿ ಒಡ್ಡುವ ರೂಕ್ಷ ಸವಾಲುಗಳು, ಅಸಮಾನತೆ ಅನ್ಯಾಯಗಳ ನೆರಳೂ ಇಲ್ಲದ ಕಾಲ – ಕಾಲೇಜು. ಯಾವ ಅಪ್ಪನ ಮಗನೇ ಆಗಿರಲಿ, ಎಷ್ಟು ಜನ್ಮಗಳ ಪುಣ್ಯ ಸಂಚಯವೇ ಇರಲಿ, ಜಗತ್ತನ್ನು ಬೆಳಗುವ ಪ್ರಭೆಯ ಸುಂದರಿಯೇ ಆಗಲಿ ಎಲ್ಲರೂ ಕ್ಲಾಸ್ ರೂಮಿನ ಬೆಂಚುಗಳ ಸಾಲಿನಲ್ಲಿ ಸಾಲಾಗಿಯೇ ಕೂರಬೇಕು. ಬುದ್ಧಿವಂತನೇ ಇರಲಿ, ಅದೃಷ್ಟ ಹೀನನೇ ಇರಲಿ, ರೀಬಾಕ್ ಶೂನವನಾಗಲಿ, ಹವಾಯಿ ಚಪ್ಪಲಿಯವನಾಗಲಿ ಒಂದೇ ಸಿಲಬಸ್ ಓದಬೇಕು. ಒಂದೇ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯಬೇಕು. ಸರಸ್ವತಿಯ ದೇಗುಲದಲ್ಲಿ ಬೇಧ ಭಾವಕ್ಕೆ ಆಸ್ಪದವೇ ಇಲ್ಲ.

ಭಿನ್ನತೆಯಲ್ಲೂ ಏಕತೆಯನ್ನು ಸೃಷ್ಟಿಸಿಕೊಳ್ಳುವ, ವೈವಿಧ್ಯತೆಯಲ್ಲೂ ಒಗ್ಗಟ್ಟನ್ನು ಗುರುತಿಸುವ ಅಂಶಗಳು ಕಾಲೇಜಿನಲ್ಲಿ ಅನೇಕ. ಕಾಲೇಜು ಕಾಂಪೌಂಡಿನ ಹೊರಗೆ ನಾಲಿಗೆ ಚಾಚಿ, ಮೈ ಮುರಿಯುತ್ತ, ತನ್ನ ಆಕ್ಟೋಪಸ್ ಬಳ್ಳಿ ಕೈಗಳನ್ನ ಆಡಿಸುತ್ತ ನಿಂತ ಜಾತಿ ಬೇಧ, ಆರ್ಥಿಕ ಅಂತಸ್ತು, ಭಾಷೆ- ಸಂಸ್ಕೃತಿ ವ್ಯತ್ಯಾಸ, ಕೋಮು ವೈಷಮ್ಯಗಳ ಸೋಂಕು ಇಲ್ಲದೆ ಕನಸುಗಳನ್ನು ಬಿತ್ತಿ ಮಹತ್ವಾಕಾಂಕ್ಷೆಯನ್ನು  ಗೇಯುವ ಪರಿಸರ. ಬೇಧವಿಲ್ಲದ ಬಾಂಧವ್ಯದಲ್ಲಿ ಜೀವಗಳು ಅರಳಿಕೊಳ್ಳುವ ಕಾಲ.

ಚಿಮ್ಮು ಹಲಗೆ ಜೀವನಕ್ಕೆ

ಒಡನೆಯೇ ಬದುಕೆಂಬ ಮೈದಾನಕ್ಕೆ ಜಿಗಿತ. ಈ ಬದುಕು ಅಸಲಿಗೆ ಸಾಪಾಟಾದ ಮೈದಾನವೇ ಅಲ್ಲ. ಎಲ್ಲೆಲ್ಲೂ ಎತ್ತರ ತಗ್ಗುಗಳಿರುವ, ಅಸಮಾನತೆ, ತಾರತಮ್ಯಗಳೇ ನಿಯಮಗಳಾಗಿರುವ ಪ್ರದೇಶ. ಒಮ್ಮೆ ಈ ವಾಸ್ತವದ ಜೀವನಕ್ಕೆ ಜಿಗಿದೊಡನೆ ಮೈ ಮನಸ್ಸುಗಳು ಘಾಸಿಗೊಳಗಾಗುವುದು ಸಹಜ. ಕಾಲೇಜಿನಲ್ಲಿ ಕಂಡಿದ್ದ ಕನಸುಗಳೆಲ್ಲ ಬಣ್ಣ ಕಳೆದುಕೊಂಡು ವಾಸ್ತವದಲ್ಲಿ ಕರಗಿ ಹೋಗುವುದನ್ನು, ಲೋಕ ನೀತಿಯ ಎದುರು, ಬದುಕುವ ಚಾಣಾಕ್ಷ ಕಲೆಗಳ ಎದುರು ಆದರ್ಶಗಳೆಲ್ಲ ಒಣಗಿ, ಹಾಸ್ಯಾಸ್ಪದವಾಗಿ ಉದುರುವುದನ್ನು, ಮುಗ್ಧತೆ ಒಳ್ಳೆಯತನಗಳ ಸುತ್ತ ಸ್ವಾರ್ಥ, ಲೋಕಜ್ಞಾನದ ತರಹೇವಾರಿ ಸಮರ್ಥನೆಗಳ ಹುತ್ತ ಬೆಳೆಯುವುದನ್ನು ಮೂಕವಾಗಿ ಗಮನಿಸುತ್ತ ಬಾಳೆಂಬ ವೇಗದ ತಡೆರಹಿತ ರೈಲಿನಲ್ಲಿ ಸೀಟು ಹುಡುಕಿಕೊಳ್ಳುವ ಧಾವಂತ.

ಅಧ್ಯಯನ, ಶ್ರದ್ಧೆ, ಶಿಸ್ತು, ಕಲಿಕೆ, ಕಾವ್ಯ, ಮಾತುಗಾರಿಕೆ, ಬರವಣಿಗೆ, ಸೌಂದರ್ಯ ಎಲ್ಲವೂ ತಮ್ಮ ತಮ್ಮ ಎತ್ತರ- ದಪ್ಪ ಆಕಾರಗಳನ್ನು ತ್ಯಜಿಸಿ ಹಣವೆಂಬ ಹೂಜಿಯ ಮೈಮಾಟಕ್ಕೆ ಒಗ್ಗಿಕೊಳ್ಳುವ ಅನಿವಾರ್ಯ. ಜವಾಬ್ದಾರಿಯ ನೊಗಕ್ಕೆ ಕತ್ತು ನೀಡಿ, ವಹಿಸಿಕೊಂಡ ಪಾತ್ರದ ಲಗೇಜು ಬೆನ್ನ ಮೇಲೆ ಹೇರಿಕೊಂಡು ಸಾಗುವ ತುರ್ತು.

ಕಾಲೇಜಿನಲ್ಲಿ ಹಸನ್ಮುಖಿ ಅರಳು ಮಲ್ಲಿಗೆಗಳನ್ನು ಚಿಮ್ಮುತ್ತ  ನಡೆದಾಡುತ್ತಿದ್ದ ಯುವತಿಯರೆಲ್ಲ ಹೆಜ್ಜೆಯಿಟ್ಟಲ್ಲಿ ಆಪತ್ತು ಎಂಬಂತೆ ಅನುಮಾನಗ್ರಸ್ತರಾಗುತ್ತ ಹೋಗುತ್ತಾರೆ. ದಿಕ್ಕುಗಳು ಥರಗುಡುವಂತೆ ಅಟ್ಟಹಾಸ ಗೈಯ್ಯುತ್ತ, ಉಬ್ಬಿದ ಎದೆ, ಬಂಡೆಯನ್ನಾದರು ಪುಡಿ ಮಾಡುವೆವೆನ್ನುವ ಉತ್ಸಾಹದ ಚಿಲುಮೆಗಳಾದ ಯುವಕರು ಗಾಂಭೀರ್ಯದಲ್ಲಿ ಜೋತು ಬಿದ್ದ ಮುಖಗಳನ್ನು ಹೊತ್ತು ತಿಂಗಳೊಪ್ಪತ್ತು ಏರುವ ಸಾಲದ ಬಡ್ಡಿಗೆ ಹೆದರಿ ಮುದುರಿ ಬಾಳಲು ತೊಡಗುತ್ತಾರೆ.

ಬಾಳೆಂಬ ಬಿರುಗಾಳಿಗೆ ಘಾಸಿಗೊಳ್ಳದೆ ಉಳಿದುಕೊಳ್ಳುವ ಯೌವನಿಗರು ತೀರಾ ವಿರಳ. ಕಾಲೇಜು ಜೀವನದ ಲಹರಿಯನ್ನು, ಉಲ್ಲಾಸಮಯತೆಯನ್ನು ಬಾಳಿನಿದ್ದಕ್ಕೂ ವಿಸ್ತರಿಸಿಕೊಳ್ಳುವವರು ಲಕ್ಷಕ್ಕೊಬ್ಬರು. ಕೋಮಲ ಹಸ್ತಗಳು ಬಿರುಸಾಗುತ್ತ, ಕೆನ್ನೆ, ರೆಪ್ಪೆಗಳು ಜೋತು ಬೀಳುತ್ತ, ಬಡಕಲು ಹೊಟ್ಟೆ ಸೊಂಟಗಳು ಜಾಗ ಸಿಕ್ಕಲ್ಲಿ ಆನುತ್ತಾ ಹೋದರೂ ಸಹ ಒಳಮನಸ್ಸಿನ ಅಂಗಳವನ್ನು ಹಸಿರಾಗಿ, ಹೊಸ ಕನಸುಗಳು ಚಿಗುರಬಹುದಾದ ಫಲವತ್ತು ನೆಲವಾಗಿ, ಆದರ್ಶಗಳನ್ನು ನೆಚ್ಚಿ ಒಬ್ಬಂಟಿಯಾಗಿ ನಡೆಯಬಹುದಾದ ಕೆಚ್ಚಾಗಿ ಕಾಪಾಡಿಕೊಂಡರೆ ಜಗತ್ತೇ ಕಾಲೇಜ್ ಕ್ಯಾಂಪಸ್ ಆಗುತ್ತದೆ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s