ನಾನ್ ಸ್ಟಾಪ್ ಇಂಡಿಯಾ: ಮಾರ್ಕ್ ಟುಲಿಯ ಭಾರತ ದರ್ಶನ

(ಈ ಬರಹ ವಿಜಯ ನೆಕ್ಸ್ಟ್ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು)

ಕಲಕತ್ತೆಯಲ್ಲಿ ಹುಟ್ಟಿ ಮುವತ್ತು ವರ್ಷಗಳ ಕಾಲ ಬಿಬಿಸಿ ಸುದ್ದಿ ಸಂಸ್ಥೆಯ ವರದಿಗಾರನಾಗಿ ಕೆಲಸ ಮಾಡಿದ ಮಾರ್ಕ್ ಟುಲ್ಲಿಗೆ ಭಾರತದ ಮೇಲಿನ ಅದಮ್ಯ ಪ್ರೀತಿ, ಕಾಳಜಿಗೆ ಅವರು ಭಾರತವನ್ನು ಕುರಿತು ಬರೆದಿರುವ ಪುಸ್ತಕಗಳು ಸಾಕ್ಷಿ. ‘ನೋ ಫುಲ್ ಸ್ಟಾಪ್ಸ್ ಇನ್ ಇಂಡಿಯ’ ಅವರ ಮೊದಲ ಕೃತಿ.

ತೀರಾ ಇತ್ತೀಚಿನ ಪ್ರಕಟಣೆ ‘ನಾನ್ ಸ್ಟಾಪ್ ಇಂಡಿಯ’ ಮಾರ್ಕ್ ತಮ್ಮ ಎಪ್ಪತ್ತಾರರ ವಯಸ್ಸಿನಲ್ಲೂ ಕಾಯ್ದಿರಿಕೊಂಡಿರುವ ಮಗುವಿನ ಮುಗ್ಧತೆ, ವರದಿಗಾರಿಕೆಯಲ್ಲಿನ ಅಚ್ಚುಕಟ್ಟು, ತಿಳಿಯಾದ ಚಿಂತನೆಗಳು ‘ನಾನ್ ಸ್ಟಾಪ್ ಇಂಡಿಯ’ ದಲ್ಲಿನ ಹತ್ತೂ ಪ್ರಬಂಧಗಳಲ್ಲಿ ಪ್ರಮುಖವಾಗಿ ಕಾಣುತ್ತವೆ. ಟೀಕೆಗಳನ್ನು ಪ್ರತಿರೋಧವಿಲ್ಲದೆ ಸ್ವೀಕರಿಸುವಂತೆ ಮಾಡುವ ಅವರ ವರದಿಗಾರಿಕೆಯಲ್ಲಿನ ನಂಜಿಲ್ಲದ ಕಾಳಜಿ ಹಾಗೂ ಮಾರ್ದವ ಒಂದು ಸಾಹಿತ್ಯ ಕೃತಿಯಾಗಿಯೂ ನಾವು ಅವರ ವರದಿಗಾರಿಕೆಯನ್ನು ಓದುವಂತೆ ಪ್ರೇರೇಪಿಸುತ್ತವೆ.

ಭಾರತದ ಪ್ರೇಕ್ಷಣೀಯ ಇಲ್ಲವೇ ತೀರ್ಥ ಕ್ಷೇತ್ರಗಳ ಇತಿಹಾಸ, ಪೌರಾಣಿಕ ಹಿನ್ನೆಲೆ ತಿಳಿಸುತ್ತ ಭಾರತ ದರ್ಶನ ಮಾಡಿಸುವುದನ್ನು ನಾವು ಕಂಡಿದ್ದೇವೆ. ಮಾರ್ಕ್ ರದ್ದು ಸಹ ಇಂಥದ್ದೇ ಭಾರತ ದರ್ಶನ. ಆದರಿಲ್ಲಿ ಅನಾವರಣಗೊಳ್ಳುವ ಭಾರತ ವಾಸ್ತವದ್ದು. ತನ್ನ ಶಕ್ತಿ, ಉತ್ಸಾಹ, ಕನಸು, ಆಕಾಂಕ್ಷೆಗಳ ಜೊತೆ ಜೊತೆಗೆ ತನ್ನ ದೌರ್ಬಲ್ಯ, ಆಲಸ್ಯ, ಕ್ರೌರ್ಯಗಳನ್ನು ಭಾರತವೆಂಬ ಸಹಸ್ರ ಮುಖಗಳ ದೇಶ ಪ್ರಕಟಿಸುತ್ತಾ ಹೋಗುತ್ತದೆ.

೨೦೧೧ರಲ್ಲಿ ಪ್ರಕಟವಾದ `ನಾನ್ ಸ್ಟಾಪ್ ಇಂಡಿಯ’  ಭಾರತದವನ್ನು ಒಂದು ದೇಶವಾಗಿ ಅದರ ಎಲ್ಲಾ ಸಮಸ್ಯೆಗಳು ಹಾಗೂ ಅವಕಾಶಗಳೊಂದಿಗೆ ಅರ್ಥ ಮಾಡಿಕೊಳ್ಳುವುದಕ್ಕೆ ಹೊರ ದೇಶದ ಓದುಗರಿಗೆ ಅತ್ಯುತ್ತಮವಾದ ಕೈಪಿಡಿ. ಮಾರ್ಕ್ ಸಹ ಭಾರತದ ಕೆಲವು ಕ್ಲಿಷ್ಟ ಸಂಗತಿಗಳನ್ನು  ಭಿನ್ನ ಸಂಸ್ಕೃತಿಯ, ಭಿನ್ನ ನಾಗರೀಕತೆಯ ಓದುಗ ಅರ್ಥ ಮಾಡಿಕೊಳ್ಳುವಂತೆ ಕೆಲವೆಡೆ ಸರಳಗೊಳಿಸಿದ್ದಾರೆ. ಆದರೆ ಭಾರತೀಯರಿಗೆ ಇದು ಹೊರಗಿನವನೊಬ್ಬನ (ಮಾರ್ಕ್ ಭಾರತದಲ್ಲೇ ಹುಟ್ಟಿ ವಾಸಿಸಿದ್ದರೂ) ಪೂರ್ವಗ್ರಹ ಪೀಡಿತ ಅಭಿಪ್ರಾಯಗಳ ಮೂಟೆ ಅನ್ನಿಸುವುದಿಲ್ಲ. ಏಕೆಂದರೆ ಮಾರ್ಕ್ ತಮ್ಮ ಅಭಿಪ್ರಾಯ, ಮಾತುಗಳನ್ನು ತೀರಾ ಕ್ಲುಪ್ತವಾಗಿಸಿ, ಭಾರತೀಯರನ್ನೇ ಮಾತಿಗೆ ಹಚ್ಚುತ್ತಾರೆ. ಸಮಸ್ಯೆಯ ನಾನಾ ಆಯಾಮಗಳನ್ನು ತೆರೆದಿರಿಸುತ್ತಾ ಬಾಧ್ಯಸ್ಥರ ಅಭಿಪ್ರಾಯಗಳನ್ನೆಲ್ಲ ಸಂಗ್ರಹಿಸಿ ನೇರವಾಗಿ ಕ್ಷೇತ್ರ ಅಧ್ಯಯನದಿಂದ ಗ್ರಹಿಸಿದ ಸಂಗತಿಗಳನ್ನು ನಿರ್ಮೋಹದಿಂದ ದಾಖಲಿಸುತ್ತಾರೆ. ಅವರ ಅಭಿಪ್ರಾಯವೇನಿದ್ದರೂ ಪ್ರಬಂಧಕ್ಕೆ ಒಂದು ಕಟ್ಟು ಒದಗಿಸುವುದಕ್ಕೆ ಮಾತ್ರ ಸೀಮಿತ. ಇದು ಸ್ಥಳೀಯ ಭಾಷೆಗಳು ಹಿಂದಿ ಹಾಗೂ ಇಂಗ್ಲೀಷ್ ಪ್ರಭಾವದಲ್ಲಿ ಎದುರಿಸುತ್ತಿರುವ ಸವಾಲನ್ನು ಕುರಿತ ಪ್ರಬಂಧ ‘ಇಂಗ್ಲೀಷ್ ರಾಜ್’ ನಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ.

ಭಾರತವನ್ನು ಕಾಡುತ್ತಿರುವ, ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಪ್ರಮುಖವಾಗಿ ಚರ್ಚೆಗೆ ಒಳಗಾಗಿರುವ ನಕ್ಸಲ್ ಸಮಸ್ಯೆ, ಕೋಮುವಾದ, ವೋಟ್ ಬ್ಯಾಂಕ್ ರಾಜಕೀಯ, ರಾಮನ ಹೆಸರಿನಲ್ಲಿನ ರಾಜಕಾರಣ ಇವುಗಳ ಚರ್ಚೆಯಿಂದ ಪುಸ್ತಕ ಪ್ರಾರಂಭವಾಗುತ್ತದೆ. ಈ ಸಂಗತಿಗಳನ್ನು ಭಾರತೀಯರಾದ ನಮಗೆ ಚರ್ವಿತ ಚರ್ವಣವೆನಿಸಿದ್ದರೂ ಮಾರ್ಕ್ ಸುದ್ದಿ ಗ್ರಹಿಸುವ ಮೂಲಗಳ ಹೊಸತನ ಹಾಗೂ ನಿರೂಪಣೆ ಕೊಡುವ ಹೊಸ ಹೊಳವುಗಳಿಂದ ಈ ಪ್ರಬಂಧಗಳು ನಮ್ಮನ್ನು ಹಿಡಿದಿಡುತ್ತವೆ. ‘ದಿ ರಾಮಾಯಣ ರೀವಿಸಿಟೆಡ್’ ಪ್ರಬಂಧದಲ್ಲಿ ಕೇಂದ್ರ ಸರಕಾರದ ಒಡೆತನದಲ್ಲಿದ್ದ ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿ ಪ್ರಸಾರವಾಗಲು ತೊಡಗಿದಾಗ ಅದು ಭಾರತದ ಸೆಕ್ಯುಲರ್ ಮನಸ್ಥಿತಿಗೆ ಘಾತುಕವಾದ ವಿದ್ಯಮಾನ ಎಂದು ಚಿಂತಕರು ವಿರೋಧಿಸಿದ್ದು, ಆ ರಾಮಾಯಣ ಹುಟ್ಟಿಸಿರಬಹುದಾದ ರಾಷ್ಟ್ರೀಯತೆಯ ಅಸ್ಮಿತೆಯ ಅಲೆಯಲ್ಲಿ ರಕ್ತದ ಹೊಳೆ ಹರಿಸಿದ ಅಯೋಧ್ಯಾ ಚಳುವಳಿಗಳ ಹಿನ್ನೆಲೆಯನ್ನು ವಿವರಿಸುತ್ತ ಇಂದು ದಿನದ ಇಪ್ಪತ್ನಾಲ್ಕು ಗಂಟೆ ಧರ್ಮವನ್ನು ನಿರ್ಲಜ್ಜವಾಗಿ ಟಿವಿ ಚಾನಲುಗಳಲ್ಲಿ ಬಿತ್ತರಿಸುತ್ತಿರುವ ಕುರಿತು ಯಾರೂ ಧ್ವನಿಯೆತ್ತದಿರುವುದನ್ನು ಗುರುತಿಸುತ್ತಾರೆ.

ಬಿಸಿ ಬಿಸಿ ಚರ್ಚೆಗಳಿಗೆ ಎಂದಿಗೂ ಅವಕಾಶ ಕಲ್ಪಿಸಿಕೊಡುವ ವಿವಾದಾಸ್ಪದ ಸಂಗತಿಗಳನ್ನು ತಟ್ಟುತ್ತಾ ಹೋಗಿ ಮಾರ್ಕ್ ಭಾರತವನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆಗಳನ್ನು ಮುಟ್ಟುತ್ತಾರೆ. ಮೂಲಭೂತವಾಗಿ ವೈವಿಧ್ಯಮಯವಾದ ಭಾರತದಲ್ಲಿ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಒಡ್ಡುತ್ತಿರುವ ಸಮಸ್ಯೆಗಳನ್ನು ಚರ್ಚಿಸುತ್ತಾ ಸಣ್ಣ ಸಣ್ಣ ಸಮುದಾಯಗಳ ಜವಾಬ್ದಾರಿಗಳನ್ನು, ಅವಕಾಶಗಳನ್ನು ವಿವರಿಸುತ್ತಾರೆ. ಸರಕಾರದ NREGA ಯೋಜನೆಯ ಫಲಶ್ರುತಿ, ಅದರ ಲೋಪಗಳು, ಸೇವಾ ಮಂದಿರದಂತಹ ಸರಕಾರೇತರ ಸಂಸ್ಥೆಗಳ ಕೊಡುಗೆ , ಪಂಜಾಬಿನಲ್ಲಿ ಪೆಪ್ಸಿಕೋ ಕಂಪೆನಿ ಕೈಗೊಂಡಿರುವ ಒಪ್ಪಂದದ ವ್ಯವಸಾಯ, ಆಂಧ್ರಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಸುದ್ದಿ  ಮಾಡಿದ ಮೈಕ್ರೋ ಫೈನಾನ್ಸ್ ಖಾಸಗಿ ಉದ್ದಿಮೆಯ ಹಗರಣ ಮುಂತಾದ ವರದಿಗಳ ಮೂಲಕ ಭಾರತದ ಅಭಿವೃದ್ಧಿಯಲ್ಲಿ ಸರಕಾರ, ಖಾಸಗಿ ಹಾಗೂ ಎನ್ ಜಿ ಓಗಳ ಪಾತ್ರಗಳೇನು ಅವುಗಳ ಮಿತಿಗಳೇನು ಎಂಬುದನ್ನು ಚರ್ಚಿಸುತ್ತಾರೆ.

ಭಾರತದ ಆರ್ಥಿಕ ಪ್ರಗತಿಗೆ, ಸೂಪರ್ ಪವರ್ ಆಗುವ ಅದರ ಕನಸಿಗೆ ಚೈತನ್ಯ ಕೇಂದ್ರ ಖಾಸಗಿ ಉದ್ದಿಮೆಗಳು. ೧೯೯೧ರ ಮುಕ್ತ ಆರ್ಥಿಕ ನೀತಿಯಿಂದ ಪಡೆದ ಪ್ರೋತ್ಸಾಹನ್ನು , ಆ ಮುಂಚಿನ ಲೈಸೆನ್ಸ್ ಪರ್ಮಿಟ್ ರಾಜ್ ಯುಗದಲ್ಲಿ ತನ್ನ ಸಾಮರ್ಥ್ಯವನ್ನು ಸಂಪೂರ್ಣ ಬಳಸಿಕೊಳ್ಳಲಾಗದೆ ನರಳಿ ಹೊಸ ಸ್ವಾತಂತ್ರ್ಯದಲ್ಲಿ ಐವತ್ತಕ್ಕೂ ಹೆಚ್ಚು ದೇಶಗಳಿಗೆ ವಹಿವಾಟು ವಿಸ್ತರಿಸಿಕೊಂಡು ಅರಳಿದ ಟಾಟಾ ಸ್ಟೀಲ್ ಸಂಸ್ಥೆಯ ಹಿನ್ನೆಲೆಯಲ್ಲಿ ವಿವರಿಸುತ್ತಾರೆ. ೨ಜಿ ತರಂಗಾಂತರ ಹಂಚಿಕೆಯ ಹಗರಣದಲ್ಲಿ ಸುದ್ದಿಗೆ ಬಂದ ರತನ್ ಟಾಟಾ ರಾಡಿಯಾ ಟೇಪ್ ಕುರಿತು ಅವರು ಟಾಟಾ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತನಾಡುವುದರ ಮೂಲಕ ಆ ಪ್ರಬಂಧ ಪಿ. ಆರ್ ಆಗುವುದನ್ನು ತಪ್ಪಿಸಿದ್ದಾರೆ.  ಅವಸಾನದ ಅಂಚಿನಲ್ಲಿರುವ ಹುಲಿಗಳ ರಕ್ಷಣೆ ಹಾಗೂ ಸ್ವಾತಂತ್ರಾನಂತರದ ದಿನಗಳಿಂದಲೂ ಅವಗಣನೆಗೆ ಒಳಗಾಗಿರುವ ಪೂರ್ವೋತ್ತರ ರಾಜ್ಯಗಳ ಪರಿಸ್ಥಿತಿಯ ಕುರಿತ ಪ್ರಬಂಧಗಳೊಂದಿಗೆ ಪುಸ್ತಕ ಮುಗಿಯುತ್ತದೆ.

ಮಾರ್ಕ್ ಬರಹದಲ್ಲಿ ಹರಿತವಾದ ಚಿಂತನೆಗಳಿಗಿಂತ ವಿಶಾಲವಾದ ತಳಹದಿಯ ಅಧ್ಯಯನ, ವರದಿಗಾರಿಕೆ ಇರುತ್ತವೆ. ಬರವಣಿಗೆಯಲ್ಲಿನ ಮಾರ್ದವ, ಸಹಜವಾದ ಹಾಸ್ಯ, ಊಹಿಸಲಸಾಧ್ಯವಾದ ದಿಕ್ಕುಗಳಿಂದ ಒದಗಿ ಬರುವ ರೆಫರೆನ್ಸುಗಳು ಅವರ ಪುಸ್ತಕದ ಓದನ್ನು ಅರ್ಥಪೂರ್ಣವಾಗಿಸುತ್ತವೆ. ಮಾಗಿದ ಪತ್ರಕರ್ತನ ಪ್ರಬುದ್ಧ ವರದಿಗಾರಿಕೆಯಲ್ಲಿ ಭಾರತವನ್ನು ಕಾಣುವುದು ನಿಜಕ್ಕೂ ಉಲ್ಲಾಸದಾಯಕ!

(ಚಿತ್ರ ಕೃಪೆ: http://ibnlive.in.co… )

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s