ಭೈರಪ್ಪನವರ ಆತ್ಮಕತೆ ಭಿತ್ತಿ ಓದುತ್ತ…

ಭೈರಪ್ಪನವರ ಆತ್ಮಕತೆ “ಭಿತ್ತಿ”ಯನ್ನು ಓದುತ್ತಿರುವೆ. ದಿನವಿಡೀ ಕಂಪ್ಯೂಟರ್ ಪರದೆಯನ್ನು ದಿಟ್ಟಿಸಿ ಕಣ್ಣು ದಣಿದಿದ್ದರೂ ಕೈಗಳನ್ನು ತುಂಬುವಂತೆ ಕೂರುವ ಪುಸ್ತಕವನ್ನು ಹಿಡಿದು ಪುಟಗಳೊಡನೆ ಸರಸವಾಡ್ತಾ, ಒಂದು ಬೆರಳಿನಲ್ಲಿ, ಮೂರ್ನಾಲ್ಕು ಬೆರಳುಗಳನ್ನು ಒತ್ತಿ ಪುಟಗಳನ್ನು ಸರಿಸುತ್ತಾ, ನೀಟಾಗಿ ಕೂರದ ಪುಟಗಳನ್ನು ಅಂಗೈಯಲ್ಲಿ ಇಸ್ತ್ರಿ ಮಾಡುತ್ತಾ ಓದುತ್ತಿದ್ದರೆ ಕಣ್ಣುಗಳ ದಣಿವು ಇಳಿದಂತೆ ಭಾಸವಾಗುತ್ತದೆ.

ಆತ್ಮಕತೆ ಎನ್ನುವುದು ವಿಶಿಷ್ಟವಾದ ಸಾಹಿತ್ಯ ಪ್ರಕಾರ. ಅಷ್ಟೇ ವಿಲಕ್ಷಣವಾದದ್ದೂ ಕೂಡ. ಜೀವನದಷ್ಟು ನೀರಸವಾದ, ತರ್ಕರಹಿತವಾದ, ತಾತ್ವಿಕ ಅಂತ್ಯಗಳು ಕಾಣದ ಅಸಂಖ್ಯ ದಿಕ್ಕೆಟ್ಟ ವಿದ್ಯಮಾನಗಳನ್ನು ಸಾಹಿತ್ಯದ ರಸೋತ್ಪತ್ತಿಯ ಶೈಲಿಗೆ ಒಗ್ಗಿಸುವುದು, ಅದಕ್ಕೊಂದು ಸ್ವರೂಪ ಕೊಡುವುದು – ಈ ಪ್ರಕ್ರಿಯೆಗಳಲ್ಲಿ ನುಸುಳುವ ಸುಳ್ಳುಗಳು, ಸುಳ್ಳು ಎಂದು ಹೇಳಲಾಗದಿದ್ದರೂ ಬರೆಯುವ ಮುನ್ನ ಇದ್ದ ನೆನಪಿನ ಅರ್ಥೈಸುವಿಕೆಯನ್ನೇ ಬದಲಿಸುವಂತಹ ಉತ್ಪ್ರೇಕ್ಷೆಗಳು, ಕಲ್ಪನೆ, ಆಶಯ, ಆದರ್ಶಗಳು ಸೇರಿದ ಕೃತಿಗಳು ನಿಜಕ್ಕೂ ಆಸಕ್ತಿಕರ.

ಅಮೇರಿಕಾದ ಪ್ರಸಿದ್ಧ ಕಮಿಡಿಯನ್ ಜೆರ್ರಿ ಸೈನ್ ಫೆಲ್ಡ್ ಹಾಗೂ ಲ್ಯಾರಿ ಡೇವಿಡ್ ಸೇರಿ ನಿರ್ಮಿಸಿದ ‘ಸೈನ್ ಫೆಲ್ಡ್’ ಹೆಸರಿನ ಸಿಟ್ ಕಾಮ್ ನ ಒಂದು ಎಪಿಸೋಡ್ ನಲ್ಲಿ ಒಂದು ಸನ್ನಿವೇಶವಿದೆ. ಪಾತ್ರಗಳೇನು ಮುಖ್ಯವಲ್ಲ. ಒಂದು ಪಾತ್ರ ಬಂದು “ಜೆರ್ರಿ ನಿನಗೆ ಗೊತ್ತಾ, ನಿನ್ನ ಅಂಕಲ್ ಆತ್ಮಕತೆ ಬರೆಯುತ್ತಿದ್ದಾರೆ” ಎಂದು ಹೇಳುತ್ತಾಳೆ. ಗಂಡ, “ಅದು ಪೂರ್ತಿ ನನ್ನ ಜೀವನದ ಘಟನೆಗಳನ್ನು ಆಧರಿಸಿರುವಂಥದ್ದು” ಎನ್ನುತ್ತಾನೆ.

ಆತ್ಮಕತೆಗಳನ್ನು ಓದುವಾಗೆಲ್ಲ ನನಗೆ ಸೋಜಿಗವೆಂದು ತೋರುವ ಸಂಗತಿಯೊಂದಿದೆ. ತಮ್ಮ ಐವತ್ತು, ಅರವತ್ತನೆಯ ವಯಸ್ಸಿನಲ್ಲಿ ಆತ್ಮಕತೆಯನ್ನು ಬರೆಯಲು ತೊಡಗುವವರು ಬಾಲ್ಯದ ಘಟನೆಗಳನ್ನು ನೆನಪಿಸಿಕೊಳ್ಳುವುದು, ನೆನಪುಗಳಿಗೆ ರೂಪ ಕೊಡುವಾಗ ಅಕ್ಷರಗಳಲ್ಲಿ ಅವನ್ನು ಕರಾರುವಾಕ್ಕು ಎನ್ನುವಂತೆ ಪುನರ್ ಸೃಷ್ಟಿ ಮಾಡುವುದು ಹೇಗೆ ಸಾಧ್ಯ ? ಭೈರಪ್ಪ ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುವಾಗ ಕಲ್ಲೇಗೌಡರು ಊರಿನಲ್ಲಿ ಚಂದಾ ಎತ್ತಿಸಿ ಇಪ್ಪತ್ತೆರಡು ರುಪಾಯಿ ಕೊಡಿಸಿದರು. ಮನೆಯ ಬಾಡಿಗೆ ಮೂರು ರುಪಾಯಿ ಇತ್ತು… ಮೊಡವೆಯನ್ನು ಹಿಸುಕಿಕೊಂಡು ಅದು ಕೀವು ತುಂಬಿದ ಗುಳ್ಳೆಯಾಗಿ ಜ್ವರ ಹಿಡಿದು ಮಲಗಿದ್ದಾಗ ನೆರೆಮನೆಯ ಚೆಲುವಮ್ಮ ಏನು ಅಡುಗೆ ಮಾಡಿ ಹಾಕಿದ್ದರು- ಎಂದೆಲ್ಲ ಬರೆಯುವುದಕ್ಕೆ ಹೇಗೆ ಸಾಧ್ಯವಾಗುತ್ತದೆ? ಒಂದು ತಿಂಗಳ ಹಿಂದಿನ ಘಟನೆಗಳನ್ನು ನೆನೆಯುವಾಗಲೇ ನನಗೆ ಎಲ್ಲವೂ ಕಲಸು ಮೇಲೋಗರವಾಗಿ ಸ್ಪಷ್ಟತೆ ಸಿಕ್ಕದೆ ಹೋಗುತ್ತದೆ.

ವಿವರಗಳಿಗಿಂತ ಹೆಚ್ಚಿನ ಸೋಜಿಗ ಇರುವುದು, ಈ ಆತ್ಮಕತೆಗಳಲ್ಲಿನ ಪಾತ್ರಗಳ ಸಂಭಾಷಣೆಯಲ್ಲಿ. ಭೈರಪ್ಪ ಮೈಸೂರಿನಲ್ಲಿ ಹೈಸ್ಕೂಲು ಓದುವಾಗ ಗೆಳೆಯ ಚಂದ್ರುವಿನ ಜೊತೆ ಗರಡಿಗೆ ಹೋಗಿ ಕಾಚ ಕಟ್ಟಿ ದಂಡ ಬಸಿಗೆ ತೆಗೆಯುತ್ತಿದ್ದುದನ್ನು ಗರಡಿಯ ಉಸ್ತಾದರು ಒಮ್ಮೆ ನೋಡುತ್ತಾರೆ. ಭೈರಪ್ಪನವರ ಬಗ್ಗೆ ವಿಚಾರಿಸಿದಾಗ ಚಿಕ್ಕಣ್ಣ ಈತ ಶಾಲೆಯಲ್ಲಿ ಒಳ್ಳೆ ಡಿಬೇಟರ್ ಎಂದು ಹೊಗಳುತ್ತಾನೆ ಅದಕ್ಕೆ ಪೈಲ್ವಾನರು ಮುಖ ಹುಳ್ಳಗೆ ಮಾಡಿಕೊಂಡು “ಖುರಾಕ್ ಏನು ಮದಲು ಹೇಳು” ಎಂದು ಕೇಳುತ್ತಾರೆ.

“ವಾರಾನ್ನ. ಎಲ್ಡು ದಿನ ಅನಾಥಾಲಯ, ನಾಕುದಿನ ಕರ್ನಾಟಕ ಹಾಸ್ಟಲು, ಬೆಳಗ್ಗೆ ಸಂಜೆ. ಬಡ ಉಡುಗ” ಎಂದು ಚಂದ್ರು ಹೇಳುತ್ತಾನೆ.

“ಪುಳಚಾರು.”

“ಹೌದು, ಬ್ರಾಹ್ಮಣರು”

“ನಿನ್ನ ದೋಸ್ತೀನ ಸಾಯಿಸಬೇಕು ಅಂತ ಮಾಡಿದೀಯ? ಸರಿಯಾಗಿ ಖುರಾಕ್ ಇಲ್ದೆ ಸಾಮು ಮಾಡಿದರೆ ಕ್ಷಯಾ ತಗಲಿಕತ್ತದೆ, ಟಿಬಿ, ಸಾನಿಟೋರಿಯಂ ಖಾಯಲಾ. ದಿನಾ ಎಲ್ಡು ಸೇರು ಆಲಿ, ಅರ್ದ ಸೇರು ತುಪ್ಪ, ಒಂದೊಂದು ಬೊಗಸೆ ಬಾದಾಮಿ, ದ್ರಾಕ್ಷಿ ಪಿಸ್ತಾ, ಕಲ್ಲು ಸಕ್ಕರೆ ಗೋಧಿ ರೊಟ್ಟಿ, ತಿಳೀತಾ, ತಿನ್ನೂ ಜಾತಿಯಾದರೆ ಕೋಳಿ, ತಿಳೀತಾ?” ಎನ್ನುತ್ತಾರೆ.

ಹೀಗೆ ನಡೆದ ಸಂಭಾಷಣೆಯನ್ನು ನೆನಪಿನಿಂದ ನಿಖರವಾಗಿ ಬರೆಯುವುದಕ್ಕೆ ಸಾಧ್ಯವೇ ಇಲ್ಲ. ಹಾಗಾದರೆ ಇವನ್ನು ಹೇಗೆ ಬರೆಯುತ್ತಾರೆ? ನೆನಪಿನಲ್ಲಿರುವ ಸನ್ನಿವೇಶವನ್ನು ಅಸ್ಥಿಯಾಗಿರಿಸಿಕೊಂಡು ಕಲ್ಪನೆಯಲ್ಲಿ ಮಾಂಸ ಮಜ್ಜೆ ತುಂಬುತ್ತಾ ಹೋಗುತ್ತಾರೆಯೇ? ಡೈರಿಗಳಲ್ಲಿ ವಿಸ್ತೃತವಾಗಿ ದಾಖಲಾಗದೆ ಇರುವ ವಿದ್ಯಮಾನಗಳನ್ನು ನಿರೂಪಿಸುವಾಗ ಅವುಗಳಲ್ಲಿ ವಾಸ್ತವದ ಅಸ್ಥಿ ಎಷ್ಟು , ಕಲ್ಪನೆಯ ಮಾಂಸ ಮಜ್ಜೆ ಎಷ್ಟು ಎಂದು ಹೇಗೆ ತಿಳಿಯಲು ಬರುತ್ತೆ?

ಭೈರಪ್ಪನವರ ಸ್ಕೂಲು ದಿನಗಳ ನೆನಪಿನಲ್ಲೇ ನಿಂತಿದೆ ನನ್ನ ಓದು. ಶಾಲೆಯಲ್ಲಿ ಅತ್ಯುತ್ತಮ ಡಿಬೇಟರ್ ಎಂದು ಅವರು ಕೀರ್ತಿ ಗಳಿಸಿದ್ದು, ನಗರ ಹಾಗೂ ಜಿಲ್ಲಾ ಮಟ್ಟದಲ್ಲಿ ಚರ್ಚಾ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತಿದ್ದುದನ್ನು ಓದುವಾಗ ಅಪ್ರಯತ್ನಪೂರ್ವಕವಾಗಿ “ಭೈರಪ್ಪ ಒಬ್ಬ ಒಳ್ಳೆಯ ಡಿಬೇಟರ್” ಎಂದು ಹೇಳಿದ್ದ ಅನಂತಮೂರ್ತಿಯರ ಮಾತು ನೆನಪಾಗಿ ನಗೆಯುಕ್ಕಿತು.

Advertisements

2 thoughts on “ಭೈರಪ್ಪನವರ ಆತ್ಮಕತೆ ಭಿತ್ತಿ ಓದುತ್ತ…

  1. ನಿಮ್ಮ ಪ್ರಶ್ನೆ ಸರಿಯೇ ಇರ ಬಹುದು,ಆದರೆ ನನ್ನ ಕುಟುಂಬದಲ್ಲೇ ಕೆಲವರಿದ್ದಾರೆ
    ಅವರು ೨ ವರ್ಷದ ಮಗುವಾಗಿದ್ದಾಗ ನಡೆದ ಘಟನೆಯನ್ನ ಕರಾರುವಕ್ಕಾಗಿ ಹೇಳುತ್ತಾರೆ.
    ಈಗ ಅವರಿಗೆ ಸುಮಾರು ೩೫-೪೦ ವರ್ಷ.
    ನಿಮ್ಮ ಬರಹದ ಶೈಲಿ ಇಷ್ಟವಾಯಿತು.
    ಸ್ವರ್ಣಾ

  2. ಭೈರಪ್ಪನವರು ಬರೆದದ್ದನ್ನು ಅದರಲ್ಲೂ ಅವರ ಬದುಕಿನ ಕಥಾನಕವನ್ನು ಸುಳ್ಳು ಎಂದು ಅನುಮಾನಿಸಬಹುದೆ… ಬರಹವನ್ನು ನೋಡಿದರೆ ಅವರ ಕೃತಿಗಳನ್ನು ಓದಿದಂತೆ ತೋರುತ್ತದೆ. ಆದ್ರೂ ಇಂತಾ ಅನುಮಾನ ಬಂದ್ರೆ ನೀವು ಮತ್ತೆನನ್ನು ನಂಬಲಾರಿರಿ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s