ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ

ದೆಹಲಿಯಲ್ಲಿ ನಡೆದ ಅಮಾನುಷ ಕೃತ್ಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆಯಾಗುತ್ತಿರುವ ಎಷ್ಟೋ ಸಂಗತಿಗಳಲ್ಲಿ ಒಂದು ನನ್ನ ಗಮನವನ್ನು ಸೆಳೆಯಿತು.

ಮೂರು ನಾಲ್ಕು ವರ್ಷದ ಕಂದಮ್ಮಗಳನ್ನು ಬಿಡದೆ ಲೈಂಗಿಕ ಬ್ರಹ್ಮ ರಾಕ್ಷಸನಂತೆ ಗಂಡು ಮುಗಿಬೀಳುತ್ತಿದ್ದಾನೆ. ಆರೋಪಿಗಳು ದೆಹಲಿಯಂತಹ ನಾಗರೀಕ ಸಮಾಜದಲ್ಲಿ ಮಧ್ಯಮ ಮೇಲ್ಮಧ್ಯಮ ಆಧುನಿಕ ಹೆಣ್ಣನ್ನು, ಆಕೆಯ ಗೆಳೆಯನ ರಕ್ಷಣೆಯಲ್ಲಿರುವಾಗಲೇ ಹಿಂಸಿಸುವ ಧೈರ್ಯ ತೋರಿದರು. ಈ ಅಂಶ ಈಗ ದೇಶದೆಲ್ಲೆಡೆ ವ್ಯಕ್ತವಾಗಿರುವ ಆಕ್ರೋಶಕ್ಕೆ ಕಾರಣ ಎನ್ನುವುದಾದರೆ ಅದು ಈ ಪ್ರಕರಣಕ್ಕಿಂತ ಘೋರ ದುರಂತವಾದೀತು. ಅದು ಈಗ ಚರ್ಚೆಗೆ ಬೇಡ. ಆಧುನಿಕ ಜಗತ್ತಿನ ಕನೆಕ್ಟಿವಿಟಿಯ ದೆಸೆಯಿಂದ, ಹೆಚ್ಚಿದ ಸಾರ್ವಜನಿಕ ಅರಿವಿನಿಂದ ಎಲ್ಲೋ ಕತ್ತಲೆಯ ಮೂಲೆಯಲ್ಲಿ ಗೋಡೆಯ ಮರೆಯಲ್ಲಿ ಹೂತು ಹಾಕಲ್ಪಡುತ್ತಿದ್ದ ಪ್ರಕರಣಗಳು ಇಂದು ಬೆಳಕಿಗೆ ಬರುತ್ತಿವೆ ಎನ್ನುವ ವಿಚಾರವೂ ಈ ಚರ್ಚೆಗೆ ವರ್ಜ್ಯ. ಸೀಮಿತ, ಆದರೂ ತಮ್ಮ ಆಗ್ರಹವನ್ನು ಸೂಕ್ತ ವ್ಯಕ್ತಿಗಳ ಕಿವಿಗಳಿಗೆ ತಲುಪಿಸುವ ಪ್ರಭಾವವಿರುವ ಯುವ ಜನಸಮೂಹಕ್ಕೆ ಸಿಗುವ ಮನ್ನಣೆ ಸಮಾಜದ ಎಲ್ಲಾ ವರ್ಗದ ಶೋಷಿತರಿಗೆ ದೊರೆಯುತ್ತಿದೆಯೇ ಎನ್ನುವ ಪ್ರಶ್ನೆಯೂ ಈ ಚರ್ಚೆಗೆ ಸಂಬಂಧಿಸಿದ್ದಲ್ಲ. ಇವೆಲ್ಲಕ್ಕೂ ಆಧುನಿಕ ಸಮಾಜದಲ್ಲಿ ಧರ್ಮ, ನೈತಿಕ ಮೌಲ್ಯಗಳು ಅಧೋಗತಿಗಿಳಿದಿರುವುದೇ ಕಾರಣ ಎಂದು ಪರಿತಪಿಸಿ ಜೀನ್ಸ್ ತೊಟ್ಟು ಗೆಳತಿಯರೊಡನೆ ಪಬ್ಬಿಗೆ ಹೋಗುವ ಹುಡುಗಿಯನ್ನು ವಕ್ರ ದೃಷ್ಟಿಯಿಂದ ನೋಡುವ ಪ್ರಗತಿವಿರೋಧಿಗಳ ಪ್ರಸ್ತಾಪವೂ ಇಲ್ಲಿ ಬೇಡ.

ಸಮಾಜದಲ್ಲಿ ಈ ಬಗೆಯ ಪೈಶಾಚಿಕ ಮನಸ್ಥಿತಿಗೆ ನಮ್ಮ ಸಿನೆಮಾಗಳು ಎಷ್ಟರ ಮಟ್ಟಿಗೆ ಕಾರಣ ಎನ್ನುವ ಚರ್ಚೆ ನನ್ನ ಗಮನವನ್ನು ಸೆಳೆಯಿತು. ಡರ್ಟಿ ಪಿಕ್ಚರ್ ಎನ್ನುವ ಅಸಂಬದ್ಧ ಸಿನೆಮಾದ ನಿರ್ದೇಶಕ, “”ನಮ್ಮ ಸಿನೆಮಾಗಳು ಹಾಗೂ (ಅಸಹ್ಯಕರ ದ್ವಂದ್ವಾರ್ಥದ) ಹಾಡುಗಳು ಇಂತಹ ಪ್ರಕರಣಗಳಿಗೆ ಕಾರಣ ಎನ್ನುವುದನ್ನು ಒಪ್ಪಲಾಗದು. I take great offense” ಎಂಬ ಹೇಳಿಕೆ ನೀಡಿದ್ದಾನೆ.

ಕಲೆ ಸಮಾಜವನ್ನು ಅನುಕರಣೆ ಮಾಡುತ್ತದೋ ಸಮಾಜ ಕಲೆಯನ್ನು ಅನುಕರಣೆ ಮಾಡುತ್ತದೋ ಎನ್ನುವುದು ಪುರಾತನವಾದ ಜಿಜ್ಞಾಸೆ. ಇದು ಜಡ್ಡು ಹಿಡಿದ ನಾಲಿಗೆಯನ್ನು ನೆಟ್ಟಗೆ ಹೊರಳಿಸಲು ಬಳಸುವ ಟಂಗ್ ಟ್ವಿಸ್ಟರ್ ರೀತಿ. ಹೆಚ್ಚು ಬಾರಿ ಪುನರಾವರ್ತನೆಗೊಂಡಾಗಲೂ ನಮ್ಮ ಮೆದುಳಿಗೆ ಹೆಚ್ಚೆಚ್ಚು ಉತ್ತೇಜನ ಕೊಡುತ್ತಾ ಬಿಡಿಸಿಕೊಳ್ಳಲಾಗದ ಸುಳಿಯಲ್ಲಿ ಸಿಲುಕಿಸಿಡುತ್ತದೆ. ಅಮೇರಿಕಾದಲ್ಲಿ ಇದ್ದಕ್ಕಿದ್ದಂತೆ ತಲೆಕೆಟ್ಟು ಕಂಡವರನ್ನೆಲ್ಲ ಗುಂಡಿಕ್ಕಿ ಕೊಲ್ಲುವ ಪಾತಕಿಗಳು ನಮಗೆ ದೊಡ್ಡ ಮನೋವೈಜ್ಞಾನಿಕ ಜಿಜ್ಞಾಸೆಗೆ ಕಾರಣವಾಗುವುದಿಲ್ಲ. ನಾವು ಸರಳವಾಗಿ ಕೇಳ್ತೇವೆ ಅವ್ರಿಗೆಲ್ಲಿಂದ ಸಿಗುತ್ತೆ ಅಷ್ಟು ಸುಲಭಕ್ಕೆ ಗನ್ನು ಅಂತ. ಬಹುಶಃ ಅವರೂ ಅಷ್ಟೇ ಸುಲಭಕ್ಕೆ ಕೇಳಬಹುದು, ನಿಮ್ಮ ನೆಲದಲ್ಲಿ ಕಾನೂನು ಪೊಲೀಸು ಇಲ್ಲವೇ ಎಂದು.

ಅದಿರಲಿ ವಿಷಯಕ್ಕೆ ಬರೋಣ. ಡರ್ಟಿ ಸಿನೆಮಾದ ನಿರ್ದೇಶಕನನ್ನು ಗೇಲಿಯ ಧಾಟಿಯಲ್ಲಿ ಉಲ್ಲೇಖಿಸಿದ್ದರೂ ಆತನ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಸಿನೆಮಾ ಎಷ್ಟೇ ಅಸಹ್ಯಕರವಾಗಿರಲಿ, ಕೆಟ್ಟ ಅಭಿರುಚಿಯದಾಗಿರಲಿ ಅದೆಂದಿಗೂ ಬದುಕಿಗಿಂತ ದೊಡ್ಡದಲ್ಲ ಎನ್ನುವುದು ನನ್ನ ಅಭಿಪ್ರಾಯ. ಒಂದು ಸಿನೆಮಾವನ್ನ ನೋಡಿ ಅದು ಕೆಟ್ಟದಾಗಿದ್ದರೆ ಅದರ ನಿರ್ದೇಶನ ಕೀಳು ಅಭಿರುಚಿ, ಅದರಲ್ಲಿ ನಟಿಸಲು ಒಪ್ಪಿದ್ದ ಸ್ಟಾರುಗಳ ಮಂದ ಬುದ್ಧಿಯನ್ನು ಟೀಕಿಸಬಹುದು. ಆದರೆ ಸಮಾಜದಲ್ಲಿನ ಹೀನಾಯ ಕೃತ್ಯಗಳ ಜವಾಬ್ದಾರಿಯನ್ನು ಸಿನೆಮಾಗಳ ಮೇಲೆ ಹೊರಿಸುವುದು ಸರಿಯಲ್ಲ. ಅನುಕರಣೆ ಮಾಡುವವರಿಗೆ ಡರ್ಟಿ ಪಿಕ್ಚರ್ ಅಲ್ಲ ದ್ರೌಪದಿಯ ಮಾನಹರಣ ಹೇಗೆ ಭಿನ್ನವಾಗಿ ಕಂಡೀತು.

ಈ ಚರ್ಚೆಯ ಓಘದಲ್ಲೇ ಮತ್ತೊಂದು ಸಂಗತಿಯನ್ನು ಪ್ರಸ್ತಾಪಿಸಬೇಕು. ಟ್ಯಾಕ್ಸ್ ಹೆಚ್ಚು ಮಾಡಿದರೂ, ಪ್ಯಾಕುಗಳ ಮೇಲೆ ಚೇಳು, ಏಡಿ ಮೊದಲಾದ ಅಪಾಯಕಾರಿ ಪ್ರಾಣಿಗಳ ಚಿತ್ರ ಪ್ರಕಟಿಸಿದರೂ, ಪ್ರತಿಭಾವಂತ ಚಿತ್ರ ನಿರ್ದೇಶಕರು ತಮ್ಮ ಕ್ರಿಯಾವಂತಿಕೆಯನ್ನೆಲ್ಲ ಬಗೆದು ಸಮಾಜ ಸುಧಾರಣೆಗೆ (ಫೆಸ್ಟಿವಲ್ ನಲ್ಲಿ ಪ್ರೈಜ್ ಗೆಲ್ಲುವುದಕ್ಕೆ ಎಂದು ಓದಿಕೊಂಡರೆ ನೀವು ಬುದ್ಧಿವಂತರು)‌ ಕಿರುಚಿತ್ರಗಳ ನಿರ್ಮಾಣ ಮಾಡಿದರೂ ಜನರು ಸಿಗರೇಟು ಸೇದುವುದು ಕಡಿಮೆಯಾಗಿಲ್ಲ. ಇಂಥ ಜನರಿಗೆ ಥಿಯೇಟರಿನಲ್ಲಿ ಬುದ್ಧಿವಾದ ಹೇಳುವ ಯೋಜನೆ ಯಾವ ತಲೆಗೆ ಬಂತೋ ಗೊತ್ತಿಲ್ಲ. ಹಿಂದೆಲ್ಲ ಗಣಪತಿಯ ಸ್ತುತಿಯಿಂದ ಆರಂಭವಾಗುತ್ತಿದ್ದ ಬಯಲಾಟಗಳಿದ್ದಂತೆ ಇವತ್ತು ಯಾವ ಸಿನೆಮಾ ಆದರೂ ಶುರುವಾಗುವುದು ಬೀಡಿ, ಸಿಗರೇಟು, ಗುಟ್ಕಾ, ಜರ್ದಾಗಳ ಪ್ರಸ್ತಾಪದಿಂದ ಹಾಗೂ ಕೆಮ್ಮು, ಶ್ವಾಸಕೋಶದ ಕ್ಯಾನ್ಸರ್ ಗಳಂತಹ ಉಗ್ರ ರೋಗಗಳ ಅತ್ಯುಗ್ರ ಚಿತ್ರಣದ ಮೂಲಕ. ಇದೆಲ್ಲವನ್ನ ಕಣ್ಣು ಕಿವಿ ಮುಚ್ಚಿಕೊಂಡು ಇಲ್ಲವೇ ಮೊಬೈಲ್ ಪರದೆಗೆ ಕಣ್ಣು ತೆರೆದೋ ಸಹಿಸಬಹುದು ಆದರೆ ಅಸಹನೀಯವೆನಿಸುವ ಕಿರಿಕಿರಿ ಇನ್ನೊಂದಿದೆ. ಚಿತ್ರದಲ್ಲಿ ಸನ್ನಿವೇಶ ಯಾವುದೇ ಇರಲಿ, ಭಾವ ಯಾವುದೇ ಇರಲಿ ಪರದೆಯ ಮೇಲೆ ಪಾತ್ರದ ಕೈಲಿ ಸಿಗರೇಟು ಕಂಡೊಡನೆ “”ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ” ಎಂಬ ಅಡಿ ಟಿಪ್ಪಣಿ ಮುಖಕ್ಕೆ ರಾಚುತ್ತದೆ. ಸಣ್ಣಗೆ ಕಿರಿಕಿರಿಯುಂಟು ಮಾಡುತ್ತಿದ್ದ ಈ “ಎಚ್ಚರಿಕೆ’ ಫಲಕ ತೀವ್ರ ಉಪದ್ರವ ನೀಡಿದ್ದು ಎದೆಗಾರಿಕೆ ಸಿನೆಮಾ ನೋಡುವಾಗ. ಚಿತ್ರದಲ್ಲಿ ಸಂಯಮವಿಲ್ಲದೆ ಭೋರ್ಗರೆಯುವ ಹಿನ್ನೆಲೆ ಸಂಗೀತದಂತೆಯೇ ಪ್ರತಿ ಎರಡು ನಿಮಿಷಕ್ಕೊಂದು ಸಿಗರೇಟು ಬೂದಿಯಾಗುತ್ತದೆ. ಪ್ರತಿ ಸಿಗರೇಟಿಗೂ ನಮ್ಮ ಸೆನ್ಸಾರ್ ಮಂಡಳಿ (ಇವರೋ ಅಥವಾ ಮತ್ಯಾರು ಇದನ್ನು ನಿಯಮ ಮಾಡಿರುವರೋ ಅವರು)ಯ ಬಲವಂತದ ಒಬಿಚುವರಿ!

ಪರದೆಯ ಮೇಲಿನ ಪಾತ್ರ ಸಿಗರೇಟು ಸೇದಿದ ಅಂತ ತಾನು ಸಿಗರೇಟು ಸೇದಲು ಪ್ರೇರೇಪಿತನಾಗುವ ವ್ಯಕ್ತಿಗೆ ಆ ಸಿನೆಮಾದಲ್ಲಿ ಸಾವಿಗೆ ಸಿದ್ಧನಾಗಿ ನಿಂತ ಪಾತ್ರದ ಮನೋಭೂಮಿಕೆಯನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ಇರುತ್ತದಾ? ಅದು ಹೋಗಲಿ, ಕೀಳು ಅಭಿರುಚಿಯ “ಅಡ್ಡಾ’ಪ್ರೇಮಿಗಳ ದ್ವಂದ್ವಾರ್ಥದ ಹಾಡುಗಳನ್ನು ಕೇಳಿ ಮರೆಯುವ ಪ್ರಬುದ್ಧತೆ ಇರುತ್ತದಾ?‌

ನನ್ನ ಕೋರಿಕೆ ಇಷ್ಟೇ, ತೆರೆಯ ಮೇಲೆ ಪ್ರತಿ ಬಾರಿ ಸಿಗರೇಟು ಬಂದಾಗ ಮಹಾ ಪ್ರಭುಗಳು ಎಚ್ಚರಿಕೆಯ ಫಲಕವನ್ನು ತೋರಿದಂತೆಯೇ ಹೆಣ್ಣನ್ನು ಅವಹೇಳನಕಾರಿಯಾಗಿ ಬಿಂಬಿಸುವ ಚಿತ್ರಿಕೆ, ಸಂಭಾಷಣೆ, ಹಾಡು ಬಂದಾಗಲೂ “ಹೆಣ್ಣನ್ನು ಕೀಳಾಗಿ ಕಾಣುವುದು ಸಮಾಜದ ಆರೋಗ್ಯಕ್ಕೆ ಹಾನಿಕಾರಕ” ಎಂದು ತೋರಿಸಿಬಿಡಿ.

ಮಹಿಳೆಯರ ದಿನಕ್ಕೆ ಕನ್ನಡಪ್ರಭದ ಕೊಡುಗೆ

ವಿಜಯ ಕರ್ನಾಟಕದಿಂದ ಕನ್ನಡಪ್ರಭಕ್ಕೆ ಗುಳೆ ಹೊರಟ ಮೂರು ಪ್ಲಸ್ ಒಂದು ಮಂದಿ ಪತ್ರಕರ್ತರ ತಂಡ “ನೋಡ್ತಾ ಇರಿ, ಏನೇನ್ ಮಾಡ್ತೀವಿ!” ಎಂದು ಇಂದಿನ ಸಂಚಿಕೆಯಲ್ಲಿ  ಹೂಂಕರಿಸಿದ್ದಾರೆ. ಓದುಗರಿಗೆ ದಿನನಿತ್ಯದ ಸುದ್ದಿಯನ್ನು ತಿಳಿಯುವುದಕ್ಕಿಂತ ಇವರು ಏನು ಮಾಡುತ್ತಾರೆ ಎನ್ನುವುದೇ ಮುಖ್ಯ ಎಂದು ಭಾವಿಸಿದಂತಿದೆ.

ಅದೆಲ್ಲ ಪಕ್ಕಕ್ಕಿರಲಿ, ಇಂದು ವಿಶ್ವ ಮಹಿಳಾ ದಿನಾಚರಣೆ. ಮಹಿಳೆಯನ್ನು ಇಡೀ ಜಗತ್ತು ಗೌರವಿಸುವ, ಮಹಿಳೆಯ ಸಾಧನೆಗಳನ್ನು ಗುರುತಿಸುವ, ಮಹಿಳೆಯ ಸ್ವಾಭಿಮಾನ, ಸ್ಥೈರ್ಯಗಳನ್ನು ನೆನೆಯುವ ಸಾಂಕೇತಿಕ ದಿನ. ಈ ದಿನಕ್ಕೆ ಕನ್ನಡ ಪ್ರಭದ ಕೊಡುಗೆ : ಸ್ತ್ರೀ ಸ್ವಾತಂತ್ರ್ಯ, ಸಮಾನತೆಯ ಬಗ್ಗೆ ಅಸಹನೆ, ವ್ಯಗ್ರತೆ ಹುಟ್ಟು ಹಾಕುವ ‘ಕವಲು’ ಕಾದಂಬರಿ ಬರೆದ ಎಸ್.ಎಲ್.ಭೈರಪ್ಪನವರ ಅಂಕಣ!

ಪ್ರತಿವಾರ ಕನ್ನಡಪ್ರಭದಲ್ಲಿ ಅರ್ಧಪುಟದ ಭೈರಪ್ಪನವರ ಅಂಕಣ ಪ್ರಕಟವಾಗುತ್ತದೆ ಎಂದಾಗ ಗೆಳೆಯನೊಬ್ಬ ಹಾಗಿದ್ದರೆ ಎರಡು ಪುಟ ಆ ಅಂಕಣದ ಆಕರಗ್ರಂಥ, ರೆಫರೆನ್ಸು, ಲಿಂಕುಗಳಿಗೆ ಮೀಸಲಾಗಿರುತ್ತದೆಯಾ ಎಂದು ಕೇಳಿದ್ದ.

ಕೆಂಡಸಂಪಿಗೆಗೆ ಮೂರು ತುಂಬಿತು

ಕನ್ನಡದ ಅತ್ಯುತ್ತಮ ತಾಣಗಳಲ್ಲಿ ಒಂದು ‘ಕೆಂಡಸಂಪಿಗೆ’. ವಿದೇಶದಲ್ಲಿರುವ ಕನ್ನಡಿಗರಿಗೆ ಕನ್ನಡದ ನೆಲದೊಂದಿಗೆ ಕರುಳಬಳ್ಳಿ ಸಂಬಂಧವನ್ನು ಜೀವಂತವಾಗಿರಿಸಿಕೊಳ್ಳುವುದಕ್ಕೆ ನೆರವಾಗುವ ನ್ಯೂಸ್ ಪೋರ್ಟಲ್, ಕನ್ನಡದ ಮನಸ್ಸುಗಳು ಒಂದು ಕಡೆ ಕಲೆತು ಕನ್ನಡದ ಸಂಗತಿಗಳನ್ನು ಚರ್ಚಿಸುವ, ಮಾತುಕತೆ ನಡೆಸುವ ಸಮುದಾಯಗಳು, ಕಂಪ್ಯೂಟರ್ , ಅಂತರಜಾಲ ಸಂಪರ್ಕ ಇದ್ದ ಪ್ರತಿಯೊಬ್ಬನೂ ಬರೆಯಲು ಬ್ಲಾಗುಗಳು ಇದ್ದ ಕಾಲದಲ್ಲಿ ಕೆಂಡಸಂಪಿಗೆ ಶುರುವಾಯಿತು. ಕನ್ನಡದ ಅಂತರಜಾಲ ಜಗತ್ತಿನಲ್ಲಿ ಅಷ್ಟಾಗಿ ಪಸರಿಸಿರದ ಹೊಸ ಮಾದರಿಯೊಂದನ್ನು ಅದು ಕಟ್ಟಿ ಕೊಟ್ಟಿತು. ಅದು ವೆಬ್ಝೈನ್ (ವೆಬ್+ಮ್ಯಾಗಝೈನ್).

ಕೆಂಡಸಂಪಿಗೆ ಅನೇಕ ನೆಲೆಗಳಲ್ಲಿ ವಿಶಿಷ್ಟವಾದ ಮಾಧ್ಯಮವಾಗಿದೆ. ಕಣ್ಣುಗಳನ್ನು ಸೆಳೆದು ಜಾಹೀರಾತುಗಳನ್ನು ನುಸುಳಿಸುವ ವ್ಯಾಪಾರಿ ತಂತ್ರಗಾರಿಕೆ, ಪರದೆಯ ಮೇಲೆ ಝಗಮಗಿಸುವ, ತಕ ತಕ ಕುಣಿಯುವ, ಇದ್ದಕ್ಕಿದ್ದಂತೆ ಟ್ಯಾಬ್ ಒಂದರಲ್ಲಿ ನೆಗೆದು ಬರುವ ಜಾಹೀರಾತು ಹಾವಳಿಯಿಂದ ಓದುಗರನ್ನು ದೂರವಿಟ್ಟು ಒಂದು ಉತ್ತಮ ಓದಿನ ಸುಖವನ್ನು ಕೊಟ್ಟ ಶ್ರೇಯಸ್ಸು ಕೆಂಡಸಂಪಿಗೆಯದು. ವ್ಯಾಪಾರಿ ತಂತ್ರಗಾರಿಕೆಯನ್ನು ಮೀರಿದ ಮತ್ತೊಂದು ಹಾವಳಿಯಿಂದಲೂ ಓದುಗರನ್ನು ದೂರವಿಡುವ ನಿಯಂತ್ರಣವನ್ನು ಕೆಂಡಸಂಪಿಗೆ ಸಾಧಿಸಿದೆ. ಅದೆಂದರೆ: ಜನಪ್ರಿಯತೆಯ ಮೋಹ. ಉದ್ರೇಕಕಾರಿ, ಏಕಮುಖಿ, ಅಬ್ಬರದ ಬರಹಗಳು ಎಂದಿಗೂ ಹೆಚ್ಚು ಜನರನ್ನು ಆಕರ್ಷಿಸುತ್ತವೆ. ಗಾಸಿಪ್ಪು, ಗಾಳಿ ಸುದ್ದಿ, ಆರೋಪ ಪ್ರತ್ಯಾರೋಪ ಸರಣಿ, ಕೆಸರೆರೆಚಾಟ, ಚಾರಿತ್ರ್ಯವಧೆ, ವ್ಯಕ್ತಿ ಕೇಂದ್ರಿತ ಚರ್ಚೆ ಮೊದಲಾದವು ತತ್ ಕ್ಷಣಕ್ಕೆ ಓದುಗರನ್ನು ಸೆಳೆಯುವ ಮಾಯಾದಂಡಗಳು. ಇವುಗಳೆಡೆಗೆ ಸೆಳೆಯಲ್ಪಟ್ಟ ಓದುಗನು ತುಸು ಕಾಲ ಭ್ರಮಿತನಾಗಿ ವರ್ತಿಸಿದರೂ, ಎಚ್ಚರದ ಮನಸ್ಥಿತಿಯಲ್ಲಿ ಇರುವಾಗ ಇವನ್ನು ಕಂಡು ರೇಜಿಗೆ ಪಡುತ್ತಾನೆ. ಇಂತಹ ತಂತ್ರಗಳನ್ನು ಬಳಸುವ ಮಾಧ್ಯಮವು ಎಷ್ಟೇ ಜನಪ್ರಿಯವಾಗಿದ್ದರೂ, ಎಷ್ಟೇ ಟಿ.ಆರ್.ಪಿ ಹೊಂದಿದ್ದರೂ ಓದುಗರ, ವೀಕ್ಷಕರ ಗೌರವಕ್ಕೆ ಪಾತ್ರವಾಗುವಲ್ಲಿ ಸೋಲುತ್ತದೆ. ಕೆಂಡಸಂಪಿಗೆ ತನ್ನ ಓದುಗರಿಂದ ಗೌರವವನ್ನು ಅಪೇಕ್ಷಿಸುವ ಸ್ಥಾನಕ್ಕೆ ಬೆಳೆದು ನಿಂತಿರುವುದಕ್ಕೆ ಅದು ಈ ಬಗೆಯ ಸ್ವ-ನಿಯಂತ್ರಣ ಸಾಧಿಸಿರುವುದೇ ಕಾರಣ ಎನ್ನಿಸುತ್ತದೆ.

ಕೆಂಡಸಂಪಿಗೆಗೆ ಈ ಜನವರಿ ಒಂದಕ್ಕೆ ಮೂರುವರ್ಷಗಳು ತುಂಬಿವೆ. ಮೂರುವರ್ಷಗಳ ಪಯಣದ ಅನುಭವಗಳನ್ನು ಕುರಿತ ಬರಹಗಳು ಪ್ರಕಟವಾಗಿವೆ. ಸಂಪದ ಅಂತರಜಾಲದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವಲ್ಲಿ, ಅಂತರಜಾಲದ ಕನ್ನಡಿಗರು ಪರಸ್ಪರ ಪರಿಚಿತರಾಗುವುದರಲ್ಲಿ, ಸಮುದಾಯವೊಂದನ್ನು ಕಟ್ಟುವುದರಲ್ಲಿ ಕೆಲಸ ಮಾಡಿದ ಹಾಗೆಯೇ ಕೆಂಡಸಂಪಿಗೆ ಅಂತರಜಾಲದಲ್ಲಿ ಸಾಹಿತ್ಯಿಕ ಮಾನದಂಡವೊಂದನ್ನು ಸ್ಥಾಪಿಸುವುದಕ್ಕೆ ನೆರವಾಗಿದೆ. ಕೆಂಡಸಂಪಿಗೆಗೆ ತನ್ನ ಹುಟ್ಟಿನ ನಾಲ್ಕನೆಯ ವರ್ಷ ಕಂಪಿನಿಂದ ಕೂಡಿರಲಿ, ಕನ್ನಡದ ಅಂತರಜಾಲಕ್ಕೆ ಅದರ ಘಮ ಇನ್ನಷ್ಟು ಪಸರಿಸಲಿ ಎಂದು ಹಾರೈಸುವೆ.