ತಮಸ್ಸು

(ಮೂಲ: ಆಂಟನ್ ಚೆಕಾಫ್)

ಚಿಕ್ಕ ವಯಸ್ಸಿನ, ಬಿಳಿ ಹುಬ್ಬು, ಬಿಳಿ ರೆಪ್ಪೆಗಳ, ಅಗಲವಾದ ಕೆನ್ನೆಯ, ಗಂಡು ಕುರಿಯ ತುಪ್ಪಟವನ್ನು ಹೊದ್ದು  ಕರಿಯ ಸಡಿಲ ಬೂಟುಗಳನ್ನು ತೊಟ್ಟ ರೈತನೊಬ್ಬ ಜೆಮಸ್ತೋ* ವೈದ್ಯ ತನ್ನ ರೋಗಿಗಳನ್ನೆಲ್ಲಾ ಪರೀಕ್ಷಿಸಿ ಆಸ್ಪತ್ರೆಯಿಂದ ಮನೆಗೆ ಹೊರಡುವವರೆಗೆ ಕಾದಿದ್ದು ಅನಂತರ ಸಂಕೋಚದಿಂದ ಆತನ ಬಳಿ ಹೋದ.

“ದಯವಿಟ್ಟು, ಮಹಾಸ್ವಾಮಿ” ರೈತ ಹೇಳಿದ.

“ಏನಾಗಬೇಕು?”

ಆ ಯುವಕ ತನ್ನ ಹಸ್ತವನ್ನು ಮೇಲಕ್ಕೆ ಎತ್ತಿ, ಮೂಗಿನೆದುರು ಹಿಡಿದು ಆಕಾಶವನ್ನು ನೋಡುತ್ತ ಉತ್ತರಿಸಿದ:

“ದಯವಿಟ್ಟು, ಮಹಾಸ್ವಾಮಿ… ವರ್ವರಿನೊದಲ್ಲಿ ಕಮ್ಮಾರನಾಗಿದ್ದ ನನ್ನ ಅಣ್ಣ ವಾಸ್ಕ ನಿಮ್ಮ ಆಸ್ಪತ್ರೆಯ ಅಪರಾಧಿಗಳ ವಾರ್ಡಿನಲ್ಲಿದ್ದಾನೆ, ಮಹಾಸ್ವಾಮಿ…”

“ಹೌದು, ಅದಕ್ಕೇನು?”

“ನಾನು ವಾಸ್ಕನ ತಮ್ಮ, ಮಹಾಸ್ವಾಮಿ… ತಂದೆಗೆ ನಾವಿಬ್ಬರೇ: ಅವನು, ವಾಸ್ಕ, ಮತ್ತೆ ನಾನು, ಕಿರಿಲ; ನಾವಲ್ಲದೆ ಮೂರು ಜನ ಸಹೋದರಿಯರಿದ್ದಾರೆ, ಮತ್ತು ವಾಸ್ಕ ಮದುವೆಯಾಗಿದ್ದಾನೆ, ಆತನಿಗೆ ಚಿಕ್ಕ ಮಗುವೊಂದಿದೆ… ಜನರು ಹೆಚ್ಚು ಆದರೆ ದುಡಿಯುವವರು ಇಲ್ಲ… ಕುಲುಮೆಯಲ್ಲಿ ಹೊಗೆಯಾಡಿ ಹತ್ತಿರ ಎರಡು ವರ್ಷವಾಯಿತು. ನಾನು ಹತ್ತಿ ಗಿರಣಿಯಲ್ಲಿದ್ದೇನೆ, ಕಮ್ಮಾರಿಕೆ ಮಾಡಲಾಗುವುದಿಲ್ಲ. ತಂದೆಯೊಬ್ಬನೇ ಹೇಗೆ ಕೆಲಸ ಮಾಡಬಲ್ಲ? ಕೆಲಸ ಅತ್ತ ಇರಲಿ, ಆತ ಸರಿಯಾಗಿ ಊಟವನ್ನೂ ಮಾಡುತ್ತಿಲ್ಲ, ಚಮಚವನ್ನು ಬಾಯಿಯವರೆಗೆ ಎತ್ತಲೂ ಸಾಧ್ಯವಾಗದಷ್ಟು ನಿತ್ರಾಣನಾಗಿದ್ದಾನೆ.”

“ಸರಿ,ನನ್ನಿಂದೇನಾಗಬೇಕು?”

“ದಯೆತೋರಿ! ವಾಸ್ಕನನ್ನು ಬಿಟ್ಟುಬಿಡಿ!”

ಆಶ್ಚರ್ಯದಿಂದ ಕಿರಿಲನನ್ನು ನೋಡಿದ ವೈದ್ಯ ಒಂದು ಮಾತೂ ಆಡದೆ ಮುನ್ನಡೆದ. ಯುವ ರೈತ ವೈದ್ಯನ ಮುಂದಕ್ಕೆ ಓಡಿ ಆತನ ಕಾಲಿಗೆರಗಿದ.

“ಕರುಣಾಳುವೇ!” ದೀನನಾಗಿ ವೈದ್ಯನನ್ನು ನೋಡುತ್ತಾ, ಮತ್ತೆ ತನ್ನ ತೆರೆದ ಹಸ್ತವನ್ನು ಮೂಗಿನೆದುರು ಇಟ್ಟುಕೊಂಡು ಅಂಗಲಾಚಿದ, “ನಮ್ಮ ಮೇಲೆ ಅನುಗ್ರಹ ತೋರಿ, ವಾಸ್ಕನನ್ನು ಮನೆಗೆ ಹೋಗಲು ಬಿಡಿ! ನಿಮ್ಮ ಋಣವನ್ನೆಂದಿಗೂ ನಾವು ಮರೆಯುವುದಿಲ್ಲ. ಮಹಾಸ್ವಾಮಿ, ಅವನನ್ನು ಬಿಟ್ಟು ಬಿಡಿ! ಎಲ್ಲರೂ ಹಸಿದಿದ್ದಾರೆ.. ತಾಯಿ ದಿನವಿಡೀ ಗೋಳಾಡುವುದು, ವಾಸ್ಕನ ಹೆಂಡತಿ ಗೋಳಾಡುವುದು… ಸಾವಿಗಿಂತ ಘೋರವಾಗಿದೆ! ದೊಡ್ಡ ಮನಸ್ಸು ಮಾಡಿ, ಅವನನ್ನು ಬಿಟ್ಟು ಬಿಡಿ, ಮಹಾಸ್ವಾಮಿ!”

“ನಿನಗೇನು ತಲೆ ಕೆಟ್ಟಿದೆಯಾ?” ವೈದ್ಯ ಸಿಟ್ಟಿನಿಂದ ಹೇಳಿದ. “ನಾನು ಹೇಗೆ ಬಿಡಬಲ್ಲೆ ಅವನನ್ನ? ಅವನು ಅಪರಾಧಿ”

ಕಿರಿಲ ಅಳಲು ಶುರು ಮಾಡಿದ, “ಅವನನ್ನು ಬಿಟ್ಟು ಬಿಡಿ!”

“ದಡ್ಡ ಕಣಯ್ಯ ನೀನು, ನನಗೇನು ಅಧಿಕಾರ ಇದೆ? ನಾನೇನು ಜೇಲರ್ ಅಂದುಕೊಂಡೆಯಾ? ಚಿಕಿತ್ಸೆಗಾಗಿ ಆತನನ್ನು ಇಲ್ಲಿ ಕರೆತಂದಿದ್ದಾರೆ. ನಿನ್ನನ್ನು ಜೈಲಿಗೆ ಹಾಕುವುದಕ್ಕೆ ನನಗೆ ಹೇಗೆ ಅಧಿಕಾರವಿಲ್ಲವೋ ಹಾಗೆಯೇ ಅವನನ್ನು ಬಿಡುವುದಕ್ಕೆ ಅಧಿಕಾರವಿಲ್ಲ, ತಿಳಿಯಿತೇನಯ್ಯಾ?”

“ಆದರೆ ಅವರು ಯಾವ ಕಾರಣವೂ ಇಲ್ಲದೆ ಅವನನ್ನು ಬಂಧಿಸಿದ್ದಾರೆ! ವಿಚಾರಣೆಯಾಗುವುದಕ್ಕೆ ಮೊದಲು ಒಂದು ವರ್ಷ ಆತ ಜೈಲಿನಲ್ಲಿದ್ದ, ಈಗ ಆತ ಜೈಲಿನಲ್ಲಿ ಇರುವುದು ಯಾಕೆ ಎಂದು ಯಾರೂ ಹೇಳುತ್ತಿಲ್ಲ. ಅವನು ಯಾರನ್ನಾದರೂ ಕೊಲೆ ಮಾಡಿದ್ದರೆ, ಅಥವಾ ಕುದುರೆಗಳನ್ನು ಕದ್ದಿದ್ದರೆ ಜೈಲಿನಲ್ಲಿರಲಿ ಅನ್ನಬಹುದಿತ್ತು. ಆದರೆ ಇದೆಲ್ಲಾ ಏನು?”

“ಇರಬಹುದು, ಆದರೆ ನನ್ನ ಬಳಿ ಯಾಕೆ ಬಂದೆ?”

“ಅವರು ಒಬ್ಬನನ್ನು ಬಂಧಿಸಿಟ್ಟಿದ್ದಾರೆ, ಯಾಕೆ ಅಂತ ಅವರಿಗೇ ತಿಳಿದಿಲ್ಲ. ಅವನು ಕುಡಿದಿದ್ದ ಮಹಾಸ್ವಾಮಿ, ಅಮಲಿನಲ್ಲಿ ಅವನೇನು ಮಾಡುತ್ತಿದ್ದ ಅನ್ನೋದು ತಿಳಿದಿರಲಿಲ್ಲ, ತಂದೆಯ ಕಿವಿಗೆ ಹೊಡೆದಿದ್ದ, ಟೊಂಗೆಯಿಂದ ತನ್ನ ಕೆನ್ನೆ ಕೆರೆದುಕೊಂಡ. ನಮ್ಮ ಜೊತೆ ಇಬ್ಬರು ಇದ್ದರು ಮಹಾಸ್ವಾಮಿ, ಅವರಿಗೆ ಟರ್ಕಿ ತಂಬಾಕು ಬೇಕಿತ್ತು.ಆ ರಾತ್ರಿ ಅರ್ಮೇನಿಯಾದವನ ಅಂಗಡಿ ಒಡೆದು ತಂಬಾಕು ಕದಿಯೋಣ ಬಾ ಎಂದು ಇವನನ್ನು ಕರೆದರು. ಕುಡುಕ, ಅವರ ಹಿಂದೇ ಹೊರಟ.. ಅವರು ಬೀಗ ಒಡೆದು ಅಂಗಡಿಯನ್ನು ಹೊಕ್ಕರು. ಒಳಗೆ ದಾಂಧಲೆಯೆಬ್ಬಿಸಿದರು, ಕಿಟಕಿ ಗಾಜುಗಳನ್ನು ಒಡೆದರು, ಹಿಟ್ಟನ್ನೆಲ್ಲಾ ನೆಲದ ಮೇಲೆ ಚೆಲ್ಲಿದರು. ಎಲ್ಲರೂ ಕುಡಿದಿದ್ದರು.. ಸರಿ, ಪೊಲೀಸ್ ಪೇದೆ ಅಲ್ಲಿಗೆ ಬಂದ… ಅವರನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಬಳಿಗೆ ಕರೆದೊಯ್ದ. ಒಂದು ವರ್ಷದವರೆಗೆ ಅವರೆಲ್ಲರೂ ಜೈಲಿನಲ್ಲಿದ್ದರು. ವಾರದ ಹಿಂದೆ, ಬುಧವಾರದಂದು ನಗರದಲ್ಲಿ ಅವರ ವಿಚಾರಣೆ ನಡೆಸಲಾಯ್ತು. ಸೈನಿಕನೊಬ್ಬ ಅವರ ಹಿಂದೆ ಬಂದೂಕು ಹಿಡಿದು ನಿಂತಿದ್ದ… ಅವರಿಗೆ ಪ್ರಮಾಣ ಮಾಡಿಸಲಾಯ್ತು. ವಾಸ್ಕನ ತಪ್ಪು ಏನೂ ಇರಲಿಲ್ಲ, ಆದರೆ ದೊಡ್ಡವರು ಅವನೇ ಕೂಟದ ನಾಯಕ ಎಂದು ತೀರ್ಮಾನಿಸಿದರು. ಉಳಿದಿಬ್ಬರನ್ನು ಸೆರೆಮನೆಗೆ ತಳ್ಳಿದರು ಆದರೆ ವಾಸ್ಕನನ್ನು ಸೇನೆಯ ಸೆರೆಮನೆಗೆ ಮೂರು ವರ್ಷಕ್ಕೆ ನೂಕಿದರು. ಯಾಕಾಗಿ? ನ್ಯಾಯ ಕೊಡುವವನು ಕ್ರೈಸ್ತನ ಹಾಗಿರಬೇಕು!”

“ಇನ್ನೊಮ್ಮೆ ಹೇಳ್ತಿದೀನಿ, ನನಗೆ ಇದೆಲ್ಲ ತಿಳಿದಿಲ್ಲ. ನೀನು ಅಧಿಕಾರಿಗಳನ್ನ ಕಾಣಬೇಕು.”

“ನಾನಾಗಲೇ ಕಂಡಾಯಿತು! ನಾನು ನ್ಯಾಯಾಲಯಕ್ಕೆ ಹೋಗಿದ್ದೆ; ಮನವಿಯೊಂದನ್ನು ಕೊಡಲು ಪ್ರಯತ್ನಿಸಿದೆ. ಅವರು ಮನವಿಗಳನ್ನು ಸ್ವೀಕರಿಸಲಿಲ್ಲ; ನಾನು ಪೊಲೀಸ್ ಅಧಿಕಾರಿಯನ್ನು ಕಂಡೆ, ಮ್ಯಾಜಿಸ್ಟ್ರೇಟ್ ಹತ್ತಿರವೂ ಹೋಗಿದ್ದೆ. ಎಲ್ಲರೂ ಹೇಳುತ್ತಾರೆ, ‘ಇದು ನನ್ನ ಕೆಲಸವಲ್ಲ, ನಾನೇನೂ ಮಾಡಲು ಸಾಧ್ಯವಿಲ್ಲ.’ ಹಾಗಾದರೆ ಯಾರ ಕೆಲಸ ಇದು? ಆದರೆ ಇಲ್ಲಿ ಆಸ್ಪತ್ರೆಯಲ್ಲಿ ನಿಮಗಿಂತ ದೊಡ್ಡವರು ಯಾರೂ ಇಲ್ಲ, ನೀವು ಮಾಡಿದ್ದೇ ನ್ಯಾಯ… ಮಹಾಸ್ವಾಮಿ.”

“ಅಯ್ಯೋ ಬೆಪ್ಪನೇ” ನಿಟ್ಟುಸಿರು ಬಿಟ್ಟ ವೈದ್ಯ “ನ್ಯಾಯದರ್ಶಿಗಳು ಒಮ್ಮೆ ಅವನನ್ನು ಅಪರಾಧಿ ಎಂದು ಘೋಷಿಸಿದರೆ ಪೊಲೀಸ್ ಅಧಿಕಾರಿ ಇರಲಿ, ಗವರ್ನರ್ , ಯಾವ ಮಂತ್ರಿಗಳೂ ಏನೂ ಮಾಡಲಾಗದು. ನೀನು ಪ್ರಯತ್ನಿಸುವುದರಿಂದ ಏನೂ ಸಾಧ್ಯವಾಗದು.”

“ಹಾಗಾದರೆ ನ್ಯಾಯ ತೀರ್ಮಾನ ಮಾಡಿದವರು ಯಾರು?”

“ನ್ಯಾಯಮಂಡಳಿಯ ಸಭ್ಯರು…”

“ಅವರು ಸಭ್ಯರಲ್ಲ, ಅವರು ನಮ್ಮ ರೈತರೇ! ಆಂಡ್ರೆ ಗರ್ವೆ ಒಬ್ಬನು, ಮತ್ತೊಬ್ಬ ಅಲೋಷ್ಕ”

“ಸರಿ, ನಿನ್ನೊಡನೆ ಮಾತಾಡಲಿಕ್ಕೆ ನನಗೆ ಸಮಯವಿಲ್ಲ…”

ವೈದ್ಯನು ಕೈಯಾಡಿಸಿ ತನ್ನ ಬಾಗಿಲಿನೆಡೆಗೆ ವೇಗವಾಗಿ ಧಾವಿಸಿದ. ಕಿರಿಲ ಅವನನ್ನು ಹಿಂಬಾಲಿಸಲು ಯೋಚಿಸಿದ, ಆದರೆ ವೈದ್ಯ ಬಾಗಿಲನ್ನು ಗಟ್ಟಿಯಾಗಿ ಹಾಕಿಕೊಂಡದ್ದು ಕಂಡು ಸುಮ್ಮನಾದ.

ಹತ್ತು ನಿಮಿಷಗಳವರೆಗೆ ಆಸ್ಪತ್ರೆಯ ಅಂಗಳದ ನಡುವಿನಲ್ಲಿ ಟೋಪಿಯನ್ನೂ ಧರಿಸದೆ ವೈದ್ಯನ ಮನೆಯನ್ನೇ ದಿಟ್ಟಿಸುತ್ತ ಕಿರಿಲ ನಿಂತಿದ್ದ, ಅನಂತರ ದೊಡ್ಡದಾಗಿ ಉಸಿರೆಳೆದುಕೊಂಡು ನಿಧಾನವಾಗಿ ತುರಿಸಿಕೊಂಡು ಗೇಟಿನೆಡೆಗೆ ನಡೆದ.

“ಯಾರ ಬಳಿ ಹೋಗಬೇಕು ನಾನು?” ರಸ್ತೆಗಿಳಿದಾಗ ತನ್ನಲ್ಲೇ ಗೊಣಗಿಕೊಂಡ. “ಒಬ್ಬನು, ಇದು ನನ್ನ ಕೆಲಸವಲ್ಲ ಅನ್ನುತ್ತಾನೆ. ಇನ್ನೊಬ್ಬ ಇದು ನನಗೆ ಸಂಬಂಧಿಸಿದ್ದಲ್ಲ ಅನ್ನುತ್ತಾನೆ. ಹಾಗಾದರೆ ಇದು ಯಾರಿಗೆ ಸಂಬಂಧಿಸಿದ್ದು? ಇಲ್ಲ, ಅವರ ಕೈ ಬೆಚ್ಚಗೆ ಮಾಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ. ವೈದ್ಯ ಹಾಗಂತ ಹೇಳುತ್ತಾನೆ, ಆದರೆ ಆತ ಯಾವಾಗಲೂ ನನ್ನ ಮುಷ್ಟಿಯನ್ನೇ ನೋಡುತ್ತಿರುತ್ತಾನೆ, ನೀಲಿ ನೋಟಿಗಾಗಿ ಎದುರು ನೋಡುತ್ತಾ… ಹೌದಣ್ಣ, ನಾನು ಹೋಗ್ತೀನಿ, ಗವರ್ನರ್ ವರೆಗೆ ಬೇಕಾದರೂ ಹೋಗ್ತೀನಿ.”

ಒಂದು ಕಾಲಿನಿಂದ ಇನ್ನೊಂದಕ್ಕೆ ಭಾರವನ್ನು ಜರುಗಿಸುತ್ತಾ ಶೂನ್ಯ ದೃಷ್ಟಿಯಿಂದ ಸುತ್ತಲೂ ನೂಡುತ್ತ, ಕಿರಿಲ ಆಲಸ್ಯದಿಂದ ಹೆಜ್ಜೆ ಹಾಕುತ್ತಾ ಎಲ್ಲಿಗೆ ಹೋಗಬೇಕೆಂದು ಯೋಚಿಸುತ್ತಾ ರಸ್ತೆಯಲ್ಲಿ ನಡೆದಿದ್ದ… ಅಷ್ಟೇನೂ ಚಳಿಯಿರಲಿಲ್ಲ, ಆತನ ಕಾಲಡಿಯಲ್ಲಿದ್ದ ಹಿಮ ಮೆಲ್ಲಗೆ ಪುಡಿಯಾಗುತ್ತಿತ್ತು. ತನ್ನ ಅಣ್ಣನನ್ನು ವಿಚಾರಣೆಗೊಳಪಡಿಸಿದ ದರಿದ್ರ ಊರು ಇಲ್ಲಿಂದ ಅರ್ಧ ಮೈಲಿಯೂ ದೂರವಿರದ ಬೆಟ್ಟದ ಮೇಲೆ ಚಾಚಿಕೊಂಡಿದೆ. ಬಲಕ್ಕೆ ಕೆಂಪು ಮೇಲ್ಛಾವಣಿಯ ಕತ್ತಲ ಸೆರೆಮನೆಯಿದೆ. ಮೂಲೆಗಳಲ್ಲಿ ಪಹರೆಯ ಕಿಂಡಿಗಳು. ಎಡಕ್ಕೆ ದೊಡ್ಡ ಪೊದೆ. ಈಗ ಅದರ ಮೇಲೆ ಹಿಮ ಒರಟಾಗಿ ಹರಡಿಕೊಂಡಿದೆ. ಎಲ್ಲಾ ಸ್ಥಬ್ಧವಾಗಿತ್ತು; ಹೆಂಗಸರ ಜಾಕೆಟ್, ದೊಗಲೆ ಟೋಪಿ ತೊಟ್ಟ ಮುದುಕನೊಬ್ಬನೇ ಮುಂದೆ ಹೋಗುತ್ತಿದ್ದಾನೆ. ಕೆಮ್ಮುತ್ತಾ, ತನ್ನ ಹಸುವನ್ನು ಗದರುತ್ತಾ ನಗರದೆಡೆಗೆ ಸಾಗುತ್ತಿದ್ದಾನೆ.

“ಶುಭ ದಿನ, ಅಜ್ಜ..” ಅವನ ಮುಂದಕ್ಕೆ ಸಾಗುತ್ತಾ ಕಿರಿಲ ಹೇಳಿದ.

“ಶುಭ ದಿನ…”

“ಇದನ್ನ ಮಾರುಕಟ್ಟೆಗೆ ತೆಗೆದುಕೊಂಡು ಹೊರಟಿದ್ದೀಯ?”

“ಇಲ್ಲ”, ಮುದುಕ ನಿಧಾನವಾಗಿ ಹೇಳಿದ.

“ನೀನು ನಗರದವನಾ?”

ಮಾತುಕತೆ ಪ್ರಾರಂಭವಾಯಿತು. ತಾನೇಕೆ ಆಸ್ಪತ್ರೆಗೆ ಬಂದಿದ್ದೆ ಹಾಗೂ ವೈದ್ಯ ಏನು ಹೇಳಿದ ಎನ್ನುವುದನ್ನು ಕಿರಿಲ ಮುದುಕನಿಗೆ ಹೇಳಿದ.

“ಈ ಸಂಗತಿಗಳ ಬಗ್ಗೆ ವೈದ್ಯನಿಗೆ ಏನೂ ತಿಳಿದಿಲ್ಲ ಅನ್ನೋದು ನಿಜ.” ಇಬ್ಬರೂ ನಗರವನ್ನು ಪ್ರವೇಶಿಸುವಾಗ ಮುದುಕ ಹೇಳಿದ, “ಅವನು ಒಳ್ಳೆಯ ಮನುಷ್ಯನೇ. ಆದರೆ ಅವನಿಗೆ ಚಿಕಿತ್ಸೆ ನೀಡುವುದಷ್ಟೇ ಗೊತ್ತಿರುವುದು,  ನಿನಗೆ ಒಳ್ಳೆಯ ಸಲಹೆ ಕೊಡುವುದಕ್ಕೆ ಅಥವಾ ನಿನ್ನ ಪರವಾಗಿ ಒಂದು ಮನವಿ ಪತ್ರ ಬರೆಯುವುದಕ್ಕೆ ಅವನಿಗೆ ಗೊತ್ತಿಲ್ಲ. ಅದನ್ನು ಮಾಡುವುದಕ್ಕೆಂದೇ ವಿಶೇಷವಾದ ಅಧಿಕಾರಿಗಳಿದ್ದಾರೆ. ನೀನು ನ್ಯಾಯಾಧೀಶ ಹಾಗೂ ಪೊಲೀಸ್ ಅಧಿಕಾರಿಗಳ ಬಳಿಗೆ ಹೋಗಿದ್ದೀನಿ ಅಂದೆಯಲ್ಲ, ಅವರೂ ಇದನ್ನೆಲ್ಲಾ ಮಾಡಲು ಸಾಧ್ಯವಿಲ್ಲ.”

“ಹಾಗಾದರೆ ಎಲ್ಲಿಗೆ ಹೋಗಬೇಕು ನಾನು?”

“ಶ್ರೀಯುತ ಸಿನೇಕೊವ್ ಎನ್ನುವವರಿದ್ದಾರೆ. ಹಳ್ಳಿಯ ಬೋರ್ಡಿನ ಖಾಯಂ ಸದಸ್ಯರು ಅವರು. ರೈತರಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವರದೇ ಕಡೇ ಮಾತು.”

“ಯಾರು, ಜೊಲೊತೋವೊನಲ್ಲಿರುವವರಾ?”

“ಯಾಕೆ, ಹೌದು, ಜೊಲೊತೊವೊವಲ್ಲಿರುವವರು. ಅವರೇ ಅತಿಮುಖ್ಯ ಮನುಷ್ಯ. ರೈತರಿಗೆ ಸಂಬಂಧಿಸಿದ ಯಾವುದೇ ಪ್ರಕರಣವನ್ನು ಅವರು ತೀರ್ಮಾನಿಸಿದ ಮೇಲೆ ಪೊಲೀಸ್ ಅಧಿಕಾರಿಯೂ ಏನೂ ಮಾಡಲಾರ.”

“ಅದು ತುಂಬಾ ದೂರವಿದೆ ಅಜ್ಜ… ಹನ್ನೆರಡು ಮೈಲಿಗಳಿಗಿಂತ ಹೆಚ್ಚು..”

“ ಕೆಲಸವಾಗಬೇಕಾದವನು ಎಪ್ಪತ್ತು ಬೇಕಾದರೂ ನಡೆದಾನು…”

“ಅದು ಹೌದು… ನಾನವರಿಗೆ ಮನವಿ ಪತ್ರ ಕಳಿಸಬೇಕೋ ಅಥವಾ ಏನು..?”

“ಅಲ್ಲಿಗೆ ಹೋದರೆ ನಿನಗೆ ತಿಳಿಯುತ್ತೆ. ಮನವಿ ಪತ್ರ ಬೇಕೆಂದರೆ ಗುಮಾಸ್ತ ಕೂಡಲೇ ಬರೆದುಕೊಡುತ್ತಾನೆ. ಖಾಯಂ ಸದಸ್ಯರಿಗೆ ಒಬ್ಬ ಗುಮಾಸ್ತನಿರುತ್ತಾನೆ.”

ಮುದುಕನನ್ನು ಬೀಳ್ಕೊಟ್ಟು ಕಿರಿಲ ಚೌಕದ ಮಧ್ಯೆ ನಿಂತ, ತುಸು ಯೋಚಿಸಿ ನಗರದ ವಿರುದ್ಧ ದಿಕ್ಕಿನಲ್ಲಿ ನಡೆದ. ಜೊಲೊತೊವೊಗೆ ಹೋಗಲು ಆತ ತೀರ್ಮಾನಿಸಿದ್ದ.

ಐದು ದಿನಗಳ ನಂತರ, ತನ್ನ ರೋಗಿಗಳನ್ನು ಪರೀಕ್ಷಿಸಿದ ತರುವಾಯ ವೈದ್ಯ ಮನೆಯೆಡೆಗೆ ಹೋಗುತ್ತಿದ್ದಾಗ, ಮತ್ತೆ ಅಂಗಳದಲ್ಲಿ ಕಿರಿಲ ಅವನ ಕಣ್ಣಿಗೆ ಬಿದ್ದ. ಈ ಬಾರಿ ಆ ರೈತ ಯುವಕ  ಒಬ್ಬನೇ ಇರಲಿಲ್ಲ, ಜೊತೆಗೆ ಎಲುಬುಗಳೆದ್ದ, ತೆಳ್ಳನೆಯ ದೇಹದ ವೃದ್ಧನೊಬ್ಬಇದ್ದ. ಅಂತ್ಯವೇ ಇಲ್ಲದೆ ಆತ ಗಡಿಯಾರದ ಪೆಂಡ್ಯುಲಮಿನ ಹಾಗೆ ಗೋಣು ಹಾಕುತ್ತಿದ್ದ, ಏನನ್ನೋ ತೊದಲುತ್ತಿದ್ದ.

“ಮಹಾಸ್ವಾಮಿ, ತಮ್ಮ ಅನುಗ್ರಹವನ್ನು ಪಡೆಯುವುದಕ್ಕೆಂದು ನಾನು ಮತ್ತೆ ಬಂದೆ.” ಕಿರಿಲ ಮಾತಾಡತೊಡಗಿದ, “ನಾನು ನನ್ನ ತಂದೆಯನ್ನು ಕರೆತಂದಿದ್ದೇನೆ. ದಯವಿಟ್ಟು ವಾಸ್ಕನನ್ನು ಬಿಟ್ಟು ಬಿಡಿ! ಖಾಯಂ ಸದಸ್ಯ ನನ್ನೊಂದಿಗೆ ಮಾತನಾಡಲಿಲ್ಲ. ‘ಹೊರಟು ಹೋಗು!’ ಎಂದು ಹೇಳಿದ.”

“ಮಹಾಸ್ವಾಮಿ” ಮುದುಕ ಹಿಸ್ಸೆಂದು ಸದ್ದು ಹೊರಡಿಸುತ್ತಾ, ಹುಬ್ಬು ಗಂಟಿಕ್ಕಿ ಹೇಳಿದ, “ ದೊಡ್ಡ ಮನಸ್ಸು ಮಾಡಿ! ನಾವು ಬಡವರು, ನಿಮ್ಮ ಋಣಕ್ಕೆ ಬೆಲೆ ಕಟ್ಟಲಿಕ್ಕೆ ಆಗದು. ನೀವು ಮನಸ್ಸು ಮಾಡಿದರೆ, ಕಿರಿಲ ಅಥವಾ ವಾಸ್ಕ ನಿಮ್ಮ ಜೀತ ಮಾಡಿ ಋಣ ತೀರಿಸುತ್ತಾರೆ.”

“ಕೆಲಸ ಮಾಡಿ ನಾವು ಋಣ ತೀರಿಸ್ತೇವೆ” ಕಿರಿಲ ಹೇಳಿದ, ಪ್ರಮಾಣ ಮಾಡುವವನ ಹಾಗೆ ತನ್ನ ತಲೆಯ ಮೇಲೆ ಕೈ ಇಟ್ಟು ಹೇಳಿದ, “ಅವನನ್ನು ಬಿಟ್ಟು ಬಿಡಿ! ಅವರು ಊಟ ಬಿಟ್ಟು ಕೂತಿದ್ದಾರೆ, ಗೋಳಾಡುತ್ತಿದ್ದಾರೆ… ಮಹಾಸ್ವಾಮಿ!”

ಕಿರಿಲ ತನ್ನ ತಂದೆ ಕಡೆಗೆ ಬಿರುಸಾಗಿ ಕಣ್ಣು ಹಾಯಿಸಿದ, ಆತನ ತೋಳನ್ನು ಹಡಿದು ಮುಂದಕ್ಕೆಳೆದ. ಇಬ್ಬರೂ ಆಜ್ಞೆಯಾದವರಂತೆ ಒಟ್ಟಿಗೇ ವೈದ್ಯನ ಕಾಲಿಗೆರಗಿದರು. ವೈದ್ಯ ಸಿಡಿಮಿಡಿಯಿಂದ ಕೈಯಾಡಿಸಿ ಹಿಂದಿರುಗಿಯೂ ನೋಡದೆ ಬಾಗಿಲಿನೆಡೆಗೆ ರಭಸವಾಗಿ ನಡೆದ.

* ಜೆಮಸ್ತೋ ವೈದ್ಯ: ಚುನಾಯಿತ ಪ್ರತಿನಿಧಿಗಳಿರುವ ಜಿಲ್ಲಾಡಳಿತ ಮಂಡಳಿ ನೇಮಕ ಮಾಡಿದ ವೈದ್ಯ; ಶವಪರೀಕ್ಷೆ ಮುಖ್ಯ ಕೆಲಸವಾದರೂ ಇತರ ಕೆಲಸಗಳನ್ನೂ ಆತ ನಿರ್ವಹಿಸುತ್ತಾನೆ.