ಹೊಸ ಚಿಗುರು ಮೂಡಿಸುವಲ್ಲಿ ಯಶಸ್ವಿಯಾದ ‘ಮತ್ತೆ ಮುಂಗಾರು’

ಮನುಷ್ಯ ಸಂಬಂಧಗಳು ಹಾಗೂ ಮನುಷ್ಯನ ಬದುಕಿನ ಮೌಲ್ಯಗಳನ್ನು ಪರೀಕ್ಷೆಗೊಳಪಡಿಸುವ, ಆತನ ಅಂತಃಸತ್ವವನ್ನು ಕೃತಿಯ ಮೂಲಕ ಹೊರತೆಗೆಯುವ ಯತ್ನ ಎಲ್ಲಾ ಕಲಾಪ್ರಕಾರಗಳಲ್ಲೂ ನಡೆಯುತ್ತ ಬಂದಿರುವಂಥದ್ದೇ. ಮನುಷ್ಯ ಪ್ರಕೃತಿಯ ಬಗ್ಗೆ ಕವನ ಬರೆದರೂ, ರಸ್ತೆಯ ಮಧ್ಯೆ ಬಿದ್ದ ಏಕಾಂಗಿ ಚಪ್ಪಲಿಯ ಕತೆಯನ್ನು ಬರೆದರೂ, ಬೀದಿ ನಾಯಿಯೊಂದರ ಆತ್ಮಚರಿತ್ರೆಯನ್ನು ಬರೆದರೂ ಅಲ್ಲಿ ಅನಾವರಣವಾಗುವುದು ಮನುಷ್ಯನೇ, ಆತನ ಭಾವಲೋಕವೇ…

ಕತೆ, ಕಾದಂಬರಿಗಳಲ್ಲಿ ಸಾಹಿತಿಗಳು ಮನುಷ್ಯನ ಭಾವಲೋಕವನ್ನು ಸಾಧ್ಯವಿರುವ ಆಯಾಮಗಳಲ್ಲೆಲ್ಲಾ ಪ್ರವೇಶಿಸಿ ಅನ್ವೇಷಿಸುವ ಯತ್ನವನ್ನು ಮಾಡುತ್ತಾ ಬಂದಿದ್ದಾರೆ. ಅವೇ ಪ್ರೀತಿ, ಪ್ರೇಮ, ದಯೆ, ಅನುಕಂಪ, ದೇಶಪ್ರೇಮ, ಸ್ವಾಭಿಮಾನ, ಆತ್ಮವಿಶ್ವಾಸ ಮೊದಲಾದ ಮಾನವ ಭಾವನೆಗಳನ್ನು ಸಾಧ್ಯವಾದಷ್ಟು ವಿಭಿನ್ನವಾದ ನೆಲೆಗಟ್ಟಿನಲ್ಲಿ ನಿಂತು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಕನ್ನಡವೂ ಸೇರಿದಂತೆ ಸಾಹಿತ್ಯದಲ್ಲಿ ವಿಫುಲವಾದ ಬೆಳೆಯಿದೆ ಎನ್ನಬಹುದು.

ಇದೇ ಬಗೆಯ ಪ್ರಯತ್ನಶೀಲತೆಯನ್ನು ನಾವು ಸಿನೆಮಾದಲ್ಲಿ ಹುಡುಕಲು ಹೊರಟರೆ ಕನ್ನಡದ ಚಿತ್ರರಂಗ ಭಾರಿ ನಿರಾಶೆಯನ್ನುಂಟು ಮಾಡುತ್ತದೆ. ಮೂರು ತಾಸಿನ ಸಿನೆಮಾ ಎಂದರೆ ಇಪ್ಪತ್ತರ ಆಸುಪಾಸಿನ ಮುದ್ದು ಮುಖದ ನಟಿ, ಅವಳ ಬೆನ್ನ ಹಿಂದೆ ಬೀಳುವ ಬಲಿಷ್ಠ ತೋಳುಗಳ, ಹಾಡು, ನೃತ್ಯ, ಫೈಟು, ಡೈಲಾಗ್ ಡಿಲಿವರಿ ಬಲ್ಲ ನಾಯಕ ಇಷ್ಟೇ ಆಗಿರುತ್ತದೆ. ಅವರಿಬ್ಬರ ಪ್ರೀತಿಯೇ ಸಿನೆಮಾ ಜಗತ್ತಿನ ಜೀವಾಳ. ಯಾವುದೇ ಮನುಷ್ಯನ ಬದುಕಿನಲ್ಲಿ ಹೆಣ್ಣು ಗಂಡಿನ ನಡುವಿನ ಪ್ರೀತಿ, ರೊಮ್ಯಾನ್ಸುಗಳು ಆತನ ಬದುಕಿನ ಒಂದು ಘಟ್ಟವಷ್ಟೇ ಆಗಿರುತ್ತದೆ. ಪ್ರೀತಿಯೇ ಜೀವನ ಎಂದು ಒಂದು ಕಾಲಘಟ್ಟದಲ್ಲಿ ಭಾಸವಾದರೂ ಬದುಕಿನ ಬಂಡಿ ಎಳೆಯುವುದಕ್ಕೆ ನೊಗಕ್ಕೆ ಕತ್ತು ಕೊಡಲೇಬೇಕಾಗುತ್ತದೆ. ಒಂದು ಸಮಯದ ರೊಮ್ಯಾನ್ಸಿನ ತೀವ್ರತೆಯಲ್ಲೇ ಆತನಿಗೆ ಜೀವನವಿಡೀ ಏಕಾಂಗಿತನ ಕಾಡುತ್ತಿರುತ್ತದೆ. ಪ್ರೀತಿಯನ್ನು ಪಡೆಯುವುದಕ್ಕಾಗಿ ಆತ ಇಡೀ ಜಗತ್ತನ್ನು ಎದುರು ಹಾಕಿಕೊಂಡಂತೆಯೇ ಸ್ವಾತಂತ್ರ್ಯಕ್ಕಾಗಿ, ತನ್ನ ಮೂಲಭೂತ ಹಕ್ಕುಗಳಿಗಾಗಿ, ತನ್ನ ಅಸ್ತಿತ್ವಕ್ಕಾಗಿ ಇಡೀ ಜಗತ್ತಿನೊಡನೆ ಸೆಣೆಸಬೇಕಾಗುತ್ತದೆ. ಸೋಲು ಖಚಿತ ಎಂದು ಗೊತ್ತಿದ್ದರೂ ಹೋರಾಟದ ಕಿಚ್ಚನ್ನು ಉರಿಸುತ್ತಿರಬೇಕಾಗುತ್ತದೆ. ದೈನಂದಿನ ಬದುಕಿನ ತಲ್ಲಣಗಳು, ಹೊಂದಾಣಿಕೆ ಮಾಡಿಕೊಳ್ಳಲು ಆಗದಷ್ಟು ವೇಗವಾಗಿ ಬದಲಾಯಿಸುವ ಹೊರಗಿನ ವಿಶ್ವದ ಜೀವನಪದ್ಧತಿ, ಮೌಲ್ಯ ವ್ಯವಸ್ಥೆಗಳು ಎಲ್ಲವೂ ಆತನನ್ನು ಅಲ್ಲಾಡಿಸುವ ಸಂಗತಿಗಳೇ. ಕನ್ನಡದ ಕಾದಂಬರಿ, ಕಥನ ಕ್ಷೇತ್ರಗಳಲ್ಲಿ ಈ ಮನುಷ್ಯ ತಲ್ಲಣಗಳನ್ನು ಸಮರ್ಥವಾಗಿ ನಿರೂಪಿಸುವ, ಗುರುತಿಸುವ ಕೆಲಸ ನಡೆದಿವೆಯಾದರೆ ಕನ್ನಡದ ಅತ್ಯಂತ ಪ್ರಭಾವಿ ಮಾಧ್ಯಮವಾದ ಸಿನೆಮಾ ಈ ದಿಸೆಯಲ್ಲಿ ತುಂಬಾ ಹಿಂದಿದೆ. ಹೊಸ ಪ್ರಯತ್ನಗಳು, ಹೊಸ ಬಗೆಯ ಚಿಂತನೆಗಳು ಕಾಣುತ್ತವೆಯಾದರೂ ಅವು ಐಸೋಲೆಟೆಡ್ ಉದಾಹರಣೆಗಳಾಗಿ ಉಳಿದುಕೊಂಡಿವೆ.

ಇಂತಹ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ನಾವು ಮುಂಗಾರು ಮಳೆ, ಮೊಗ್ಗಿನ ಮನಸ್ಸು ಚಿತ್ರಗಳನ್ನು ನಿರ್ಮಿಸಿದ ಇ.ಕೃಷ್ಣಪ್ಪನವರ ಮೂರನೆಯ ಚಿತ್ರ ‘ಮತ್ತೆ ಮುಂಗಾರು’ ನೋಡಿದರೆ ಈ ಪ್ರಯತ್ನವನ್ನು ಏಕೆ ಶ್ಲಾಘಿಸಬೇಕು ಎಂಬುದು ಸ್ಪಷ್ಟವಾಗುತ್ತದೆ. ಚಿತ್ರ ತಂಡದ ಬೆನ್ನು ತಟ್ಟುವ ಆವಶ್ಯಕತೆ ಏಕಿದೆ ಎನ್ನುವುದು ಅರಿವಾಗುತ್ತದೆ.

‘ಮತ್ತೆ ಮುಂಗಾರು’ ನೈಜ ಘಟನೆಯೊಂದನ್ನು ಆಧರಿಸಿದ ಚಿತ್ರ ಎನ್ನಲಾಗುತ್ತದೆ. ಇದರ ಕತೆ ತೀರಾ ಸರಳ. ಮೀನು ಹಿಡಿಯುವುದಕ್ಕೆ ಅರಬ್ಬಿ ಸಮುದ್ರಕ್ಕೆ ಹೋದ ಬೋಟು ಚಂಡಮಾರುತಕ್ಕೆ ಸಿಕ್ಕಿಕೊಂಡು ನಿಯಂತ್ರಣ ತಪ್ಪಿ ಪಾಕಿಸ್ತಾನದ ಗಡಿಯನ್ನು ಪ್ರವೇಶಿಸುತ್ತದೆ. ಸಿಕ್ಕು ಬಿದ್ದ ಮೀನುಗಾರರನ್ನು ಅವರು ಭಾರತೀಯರು ಎಂಬ ಒಂದೇ ಕಾರಣಕ್ಕೆ ಪಾಕಿಸ್ತಾನದ ನರಕ ಸದೃಶ ಕಾರಾಗೃಹದಲ್ಲಿ ಬಂಧಿಸಿಟ್ಟು ಅಮಾನವೀಯವಾಗಿ ಹಿಂಸಿಸಲಾಗುತ್ತದೆ. ಬ್ಲ್ಯಾಕ್ ಹೋಲ್ ಎಂಬ ಕಗ್ಗತ್ತಲ ಸೆಲ್ ನಲ್ಲಿ ತಿನ್ನುವುದಕ್ಕೆ ಚಪಾತಿ, ಕುಡಿಯುವುದಕ್ಕೆ ನೀರಿರಲಿ ಗಾಳಿ ಬೆಳಕೂ ಬೇಕಾದಷ್ಟು ಇರುವುದಿಲ್ಲ. ತಮ್ಮ ನೆಲವನ್ನು, ತಮ್ಮವರನ್ನು ನೆನೆಯುತ್ತ ಶತ್ರುವಿನ ನೆಲದಲ್ಲಿ ನಾಳೆಯ ಕನಸನ್ನೇ ಮರೆತು ಇಪ್ಪತ್ತೊಂದು ವರ್ಷಕಾಲ ಬದುಕಿ ನರಳುವವರ ಕತೆಯಿದು.

ಸಾಂಪ್ರದಾಯಿಕ ಸಿನೆಮಾ ಶೈಲಿಯಂತೆಯೇ ಪ್ರೇಮಕತೆಯೊಂದಿಗೆ ಪ್ರಾರಂಭವಾಗುವ ಸಿನೆಮಾ ಹುಡುಗ ಹುಡುಗಿಯ ನಡುವಿನ ಪ್ರೀತಿಯ ಪ್ರಸ್ತಾಪವೇ ಗೌಣವಾಗಿಬಿಡುವ ಗಂಭೀರ ಸನ್ನಿವೇಶಗಳನ್ನು ಕಣ್ಣಮುಂದೆ ಸೃಷ್ಟಿಸುತ್ತಾ ಹೋಗುತ್ತದೆ. ನಮ್ಮ ದೇಶದ ಸ್ವತಂತ್ರ ಬದುಕನ್ನು ಸ್ವಚ್ಛಂದವಾಗಿ ಅನುಭವಿಸುತ್ತಾ ಮಂದಿರ, ಮಸೀದಿ, ಚರ್ಚುಗಳೆನ್ನದೆ ಎಲ್ಲೆಂದರಲ್ಲಿ ಹಾರುವ ಗೇಟ್ ವೇ ಆಫ್ ಇಂಡಿಯಾದ ಬಳಿಯ ಪಾರಿವಾಳಗಳಂತಿದ್ದ ಮನುಷ್ಯರ ಬದುಕು ರಾತ್ರಿ ಕಳೆದು ಹಗಲಾಗುವುದರಲ್ಲಿ ನರಕದ ಕೂಪವಾಗಿಬಿಡುತ್ತದೆ. ಗಾಜಿನ ಲೋಟದಲ್ಲಿ ಚಾಯ್ ಕುಡಿಯುತ್ತ, ‘ಐ ಲೈಸಾ..’ ಎಂದು ಹುರುಪಿನಿಂದ ಪದ ಹಾಡುತ್ತ ಕೆಲಸದಲ್ಲಿ ತೊಡಗಿದ್ದ ಮೀನುಗಾರರು ‘ಬೆಳಗಾಯಿತು… ಬೆಳಕಾಯಿತು… ಆ ಕಲ್ಪನೆ ಭ್ರಮೆಯಾಯಿತು, ರಾಮ ಏಸು ಅಲ್ಲಾ ಇನ್ನೂ ಬರಲೇ ಇಲ್ಲ.. ಬರುತಾರೆನ್ನೋ ಆಸೆ ಇನ್ನೂ ನಮ್ಮಲಿಲ್ಲ..’ ಎಂದು ಹಾಡುವ ಮಟ್ಟಿಗಿನ ನಿರಾಶೆಯಲ್ಲಿ ಬೀಳುತ್ತಾರೆ. ಮನುಷ್ಯ ನಾಗರೀಕತೆಯ ಉನ್ಮಾದದಲ್ಲಿ ಕಟ್ಟಿಕೊಂಡ ದೇಶ, ಸರ್ಕಾರ, ಗಡಿ ಮೊದಲಾದ ವ್ಯವಸ್ಥೆಗಳು ಹೇಗೆ ವ್ಯಕ್ತಿಗಳ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಕೇಂದ್ರಗಳೂ ಆಗಿ ಬಿಡುತ್ತವೆ ಎನ್ನುವುದನ್ನು ಇಂತಹ ಕತೆಗಳಲ್ಲಿ ಕಾಣಬಹುದು.

ಈ ಸಿನೆಮಾದ ಬಹುದೊಡ್ಡ ಶಕ್ತಿಯೆಂದರೆ ಅದರ ತಾಂತ್ರಿಕತೆ. ಸಿನೆಮಾದಲ್ಲಿ ನಾವು ಹೇಳುವ ಕತೆ ಮುಖ್ಯವೇ ಆದರೂ ಅದರ ಸ್ಥಾನ ಎರಡನೆಯದು. ಮೊದಲ ಸ್ಥಾನದ ಪ್ರಾಮುಖ್ಯತೆಯನ್ನು ಪಡೆಯುವುದು ನಾವು ಕತೆಯನ್ನು ಹೇಗೆ ಹೇಳುತ್ತೇವೆ ಎಂಬುದು. ಸಿನೆಮಾದ ಮಾತು, ಭಾಷೆ ಎಂದರೆ ಕೇವಲ ಪಾತ್ರಗಳು ಆಡುವ ಮಾತುಗಳು ಅಲ್ಲ. ಮಾತೇ ಇಲ್ಲದೆ ಒಂದು ಲಯದಲ್ಲಿ ಇಲ್ಲವೇ ಲಯದ ಅನುಪಸ್ಥಿತಿಯಲ್ಲಿ ಒಂದರ ಪಕ್ಕ ಒಂದು ಹೆಣೆಯಲ್ಪಟ್ಟ ಶಾಟ್ ಗಳು ಸಹ ಸಿನೆಮಾ ಭಾಷೆಯಲ್ಲಿ ಕತೆಯನ್ನು ಹೇಳುತ್ತಿರುತ್ತವೆ. ವಿದೇಶದಿಂದ ಒಬ್ಬ ವ್ಯಕ್ತಿ ಮುಂಬೈಗೆ ಬಂದ ಎನ್ನುವುದನ್ನು ಹೇಳಬೇಕಿರುತ್ತದೆಂದುಕೊಳ್ಳಿ.. ತೆರೆಯ ಮೇಲೆ ನಮಗೆ ವಿಮಾನ ಟೇಕಾಫ್ ಆದದ್ದನ್ನು ತೋರಿಸಿ ಕಟ್ ಮಾಡುತ್ತಾರೆ, ಮುಂದಿನ ಶಾಟ್ ನಲ್ಲಿ ಅದು ಮುಂಬೈ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತದೆ.. ಕಟ್… ಲಗೇಜು, ಟಿಕೇಟ್ ವೌಚರು ಹಿಡಿದು ಟ್ಯಾಕ್ಸಿಗಾಗಿ ಹುಡುಕಾಡುವ ದೃಶ್ಯ… ಕಟ್… ಮುಂದಿನ ಸಂಭಾಷಣೆ ಟ್ಯಾಕ್ಸಿಯಲ್ಲಿ… ಹೀಗೆ ಸಿನೆಮಾ ಭಾಷೆಯಲ್ಲಿ ದೃಶ್ಯಗಳ ಜೋಡಣೆಯಿಂದಲೂ ಕತೆ ಹೇಳಲ್ಪಡುವುದು. ಇಂತಹ ಸೂಕ್ಷ್ಮವನ್ನು ಅರಿತು ಕತೆಯನ್ನು ನಿರೂಪಿಸಿರುವುದು ‘ಮತ್ತೆ ಮುಂಗಾರು’ವಿನ ಹಿರಿಮೆ. ಉದಾಹರಣೆಗೆ, ಅರಬ್ಬಿ ಸಮುದ್ರಕ್ಕೆ ಮೀನು ಹಿಡಿಯಲೆಂದು ಹೋದ ದೋಣಿಯು ಭಯಂಕರ ಚಂಡಮಾರುತಕ್ಕೆ ಸಿಲುಕಿ ನಿಯಂತ್ರಣ ತಪ್ಪಿತು ಎನ್ನುವುದನ್ನು ಫ್ಲ್ಯಾಶ್ ಬ್ಯಾಕಿನಲ್ಲಿ ಕತೆ ಹೇಳುತ್ತಿರುವ, ತೀರ್ಥಹಳ್ಳಿಯ ಮನೆಯಲ್ಲಿ ವಿಚಾರಣೆ ಎದುರಿಸುತ್ತಿರುವ ನಾಣಿಯ ಧ್ವನಿಯಲ್ಲೇ ತಿಳಿಸಿಬಿಡಬಹುದಾಗಿತ್ತು. ‘ಆ ರಾತ್ರಿ ಎಲ್ಲಿ ಬಲೆ ಬೀಸಿದರೂ ನಮಗೆ ಮೀನುಗಳೇ ಸಿಕ್ಕಲಿಲ್ಲ…’ ಎನ್ನುವಲ್ಲಿಗೆ ನಾಣಿಯ ಧ್ವನಿಯ ಮೂಲದ ನಿರೂಪಣೆ ಕೊನೆಗೊಂಡು ಸಮುದ್ರದ ನಡುವೆ ನಿಂತ ಒಬ್ಬಂಟಿ ದೋಣಿ ಕತೆ ಮುಂದುವರೆಸುತ್ತದೆ. ಸಮುದ್ರದ ನಡುವೆ ಎಂದೂ ದೋಣಿಯಲ್ಲಿ ಹೋದ, ಚಂಡ ಮಾರುತಕ್ಕೆ ಸಿಕ್ಕ, ಅಲೆಗಳ ಹೊಡೆತಕ್ಕೆ ಒಳಗಾದ ದೋಣಿಯ ಅನುಭವವಂತೂ ಪ್ರೇಕ್ಷಕರಿಗೆ ಇರಲಿಕ್ಕೆ ಸಾಧ್ಯವೇ ಇಲ್ಲ. ಇವನ್ನೆಲ್ಲಾ ಅತ್ಯಂತ ಸೂಕ್ಷ್ಮವಾಗಿ ಕಟ್ಟಿ ಕೊಡುವ ದೃಶ್ಯ ವೈಭವದಲ್ಲೇ ಈ ಸಿನೆಮಾ ಹತ್ತರ ನಡುವೆ ಮತ್ತೊಂದು ಆಗುವ ಅಪಾಯದಿಂದ ಪಾರಾಗಿದೆ.

ಇಪ್ಪತ್ತೊಂದು ವರ್ಷಗಳ ಕಾಲ ಕಗ್ಗತ್ತಲ ಕಾರಾಗೃಹದಲ್ಲಿ ಮಲಗಲು ಹಾಸಿಗೆಯಿಲ್ಲದೆ, ಹೊದೆಯಲು ಎರಡನೆಯ ಜೊತೆ ಬಟ್ಟೆಯಿಲ್ಲದೆ, ಕುಡಿಯಲು ನೀರಿಲ್ಲದೆ, ಸ್ವಚ್ಛ ಪರಿಸರವಿಲ್ಲದೆ ಬದುಕುವ ಮನುಷ್ಯ ಬದುಕನ್ನು ನೋಡುವ ದೃಷ್ಟಿ ಎಂಥದ್ದು, ಆತನ ಮೌಲ್ಯಗಳಲ್ಲಿ ನಡೆಯುವ ಪಲ್ಲಟ ಎಂಥದ್ದು ಎನ್ನುವುದನ್ನು ಸಣ್ಣ ಸಣ್ಣ ಘಟನೆಗಳ ಮೂಲಕ ನಿರೂಪಿಸಬಹುದಾಗಿದ್ದರೂ ನಿರ್ದೇಶಕರು ಆ ಕಷ್ಟ ತೆಗೆದುಕೊಂಡಂತೆ ಕಾಣುವುದಿಲ್ಲ. ಭಾವುಕತೆಯೇ ಪ್ರಧಾನವಾದರೆ ಇಂತಹ ವಸ್ತುವಿನ ನಿರೂಪಣೆಯಲ್ಲಿ ಎಡವಿದಂತೆಯೇ. ಆ ಪಾತ್ರಗಳು ಜೀವಿಸಿರುವ ಸನ್ನಿವೇಶವೇ ಅಮಾನವೀಯವಾದದ್ದು ಹಾಗೂ ಅವರ ಕ್ಷಣ ಕ್ಷಣದ ಬದುಕೇ ಅಸಹನೀಯವಾದದ್ದು. ಹೀಗಿರುವಾಗ ಅವರ ಕಷ್ಟವನ್ನು, ಅವರ ಮಾನಸಿಕ ಯಾತನೆಯನ್ನು ಕ್ಲೋಸ್ ಅಪ್ ಶಾಟುಗಳಲ್ಲಿ ತೋರಿಸುವ ಅವಶ್ಯಕತೆಯಿರುವುದಿಲ್ಲ. ಬ್ಲ್ಯಾಕ್ ಹೋಲ್ ನಂತಹ ಇಲಿಯ ಬಿಲದಲ್ಲಿ ಜೀವಂತ ಹೂತು ಹಾಕಲ್ಪಟ್ಟ ಖೈದಿಗಳ ಬಗ್ಗೆ ಅನುಕಂಪ ಬರುವಂತೆ ಪಾತ್ರಗಳನ್ನು ಅಳಿಸುವುದು, ಪಾತ್ರಗಳು ತಮ್ಮೆಲ್ಲ ವೇದನೆಯನ್ನು ಮುಖಭಾವದಲ್ಲಿ ತೋರ್ಪಡಿಸುವಂತೆ ಮಾಡುವುದು ಕೊಂಚ ನಾಟಕೀಯವೆನಿಸುತ್ತದೆ. ಇದಕ್ಕೆ ಬದಲಾಗಿ ಸಣ್ಣ ಸಣ್ಣ ಅಥೆಂಟಿಕ್ ಆದ ಘಟನೆಗಳನ್ನು ಜೋಡಿಸುತ್ತಾ ಹೋಗಿದ್ದರೆ ನಿರೂಪಣೆ ಮಧ್ಯೆ ಎಲ್ಲೂ ಬೋರ್ ಹೊಡೆಸುತ್ತಿರಲಿಲ್ಲ ಎನ್ನಿಸುತ್ತದೆ. ಈ ಅಂಶವನ್ನು ನಿರ್ದೇಶಕರು ಸಂಪೂರ್ಣ ಕಡೆಗಣಿಸಿದ್ದಾರೆ ಎಂದೇನಿಲ್ಲ. ಸೆರೆಮನೆಯಲ್ಲಿನ ಒಂದೇ ನಲ್ಲಿಗೆ ಬಾಯಿ ಹಾಕಿ ಹೀರಿದರೂ ಒಂದೇ ಒಂದು ಹನಿ ನೀರು ಸಿಕ್ಕದಿರುವಾಗ ಖೈದಿಯು ತನ್ನದೇ ಮೂತ್ರವನ್ನು ಕುಡಿಯುವ ದೃಶ್ಯ, ಅಪ್ಪಟ ಸಸ್ಯಾಹಾರಿಯಾಗಿದ್ದವ ಓಡುವ ಜಿರಲೆಯನ್ನು, ಇಲಿಯನ್ನು ಹಿಡಿದು ತಿನ್ನುವುದು, ಎಲ್ಲಿಂದಲೋ ಹಾರಿಬಂದು ಕೂತ ಪಾರಿವಾಳ ತಿನ್ನುವುದಕ್ಕೆ ಮುಂದಾಗುವುದು – ಇಂತಹ ಘಟನೆಗಳು ಹೆನ್ರಿ ಛಾರಿರಿಯ ಪ್ಯಾಪಿಲಾನ್ ನಂತಹ ಕಥನಗಳಲ್ಲಿ ಹೇರಳವಾಗಿ ದೊರೆಯುತ್ತವೆ. ಅವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿತ್ತು ಎನ್ನುವುದು ನನ್ನ ಅನಿಸಿಕೆ.

ಚಿತ್ರದ ಬಹುಪಾಲು ಭಾಗವನ್ನು ಅತ್ಯಂತ ಕಡಿಮೆ ಬೆಳಕಿನಲ್ಲಿ ಚಿತ್ರೀಕರಿಸುವುದೂ ಒಂದು ಪ್ರಮುಖ ಅಂಶ. ಸೆರೆಮನೆಯ ಒಂದೇ ಒಂದು ಕೋಣೆಯನ್ನು ಮುಕ್ಕಾಲು ಪಾಲು ಸಿನೆಮಾದಲ್ಲಿ ತೋರಿಸಿದರೂ ಅದು ಅಪರಿಚಿತವಾಗಿಯೇ ಉಳಿಯುವಂತೆ ನೋಡಿಕೊಂಡಿರುವುದು ತಂತ್ರಜ್ಞರ ಕುಶಲತೆಯನ್ನು ತೋರುತ್ತದೆ. ಸಿನೆಮಾ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತಾ ಹೋದಂತೆ ಆ ಸೆರೆ ಮನೆಯಲ್ಲಿ ಕೇವಲ ಭಾರತೀಯ ಮೀನುಗಾರರು ಬಂಧಿತವಾಗಿಲ್ಲ ನೋಡುವ ಪ್ರೇಕ್ಷಕರಾದ ನಾವೂ ಬಂಧಿಗಳೂ ಎನ್ನುವ ಅನುಭವ ಕೊಡುವುದರಲ್ಲಿ ತಕ್ಕ ಮಟ್ಟಿಗಿನ ಯಶಸ್ಸನ್ನು ಕಂಡಿದ್ದಾರೆ. ಬೆಳಗಿಗಾಗಿ, ಬೆಳಕಿಗಾಗಿ ಖೈದಿಗಳು ಹಂಬಲಿಸುವಂತೆ ಪ್ರೇಕ್ಷಕರೂ ಹಂಬಲಿಸಿದ್ದರೆ ಅದು ನಿಜಕ್ಕೂ ಚಿತ್ರ ತಂಡದ ಪ್ರಯತ್ನ ಸಾರ್ಥಕವಾದದ್ದರ ದ್ಯೋತಕ.

ಇಡೀ ಸಿನೆಮಾಗೆ ಹೊಸ ಹೊಳಪನ್ನು ಕೊಡುವುದು ಪಾತ್ರಗಳ ನೈಜತೆ. ಆ ನೈಜತೆಯನ್ನು ತರುವುದಕ್ಕಾಗಿ ನಟರು ಪಟ್ಟಿರುವ ಶ್ರಮ. ತೀರ್ಥಹಳ್ಳಿಯ ಹವ್ಯಕ ಮಾತಾಡುವ, ದಣಿದು ‘ಮಂಜುನಾಥಾ…’ ಎನ್ನುತ್ತ ಕೂರುವ ನಾಣಿಯ ತಾಯಿಯ ಪಾತ್ರದಿಂದ ಹಿಡಿದು ಮೈ ಮಾರಾಟಕ್ಕೆ ಇಳಿದ ಹುಡುಗಿಯ ಆಂಗಿಕ ಅಭಿನಯ, ಮುಖ ಭಾವ ಮೊದಲಾದವುಗಳೆಲ್ಲಾ ಚಿತ್ರವನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ.

ಬಿರಿದ ನೆಲದಿಂದ ಚಿಗುರನ್ನು ಹೊಮ್ಮಿಸುವ ಮಾಂತ್ರಿಕ ಶಕ್ತಿಯ ಮುಂಗಾರು ಮಳೆಗಾಗಿ ಕಾತರದಿಂದ ರೈತರು ಆಗಸ ನೋಡುವಂತೆ ಈ ಚಿತ್ರದ ಪಾತ್ರಗಳು ತಮ್ಮ ಬದುಕಿನಲ್ಲೆ ಮತ್ತೆ ಹಸಿರುನ ಚಿಗುರಿಗಾಗಿ ‘ಮತ್ತೆ ಮುಂಗಾರು’ ಸುರಿಯುವುದಕ್ಕಾಗಿ ಹಪಹಪಿಸುವುದು ಮನಮುಟ್ಟುವಂತಿದೆ. ಈ ‘ಮತ್ತೆ ಮುಂಗಾರು’ ಕನ್ನಡ ಚಿತ್ರರಂಗದಲ್ಲೂ ಹಸಿರನ ಹೊಸ ಚಿಗುರು ಮೂಡಿಸುವಲ್ಲಿ ಯಶಸ್ವಿಯಾಗಿದೆ.